ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ದಿನ ಉಪವಾಸ ನಡೆಸಿದ ಮಾಜಿ ಪ್ರಧಾನಿ ದೇವೇಗೌಡ

Last Updated 27 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡದಂತೆ ಆಗ್ರಹಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಪಾದಚಾರಿ ಮಾರ್ಗದಲ್ಲಿ ಸೋಮವಾರ ಅರ್ಧದಿನ ಉಪವಾಸ ಸತ್ಯಾಗ್ರಹ ನಡೆಸಿದರು.

ಹಾಸನ ಜಿಲ್ಲೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿಯವರು ತಮ್ಮ ಕಚೇರಿಯ ಅಧಿಕಾರಿಗಳ ಮೂಲಕ ಲಿಖಿತ ಭರವಸೆ ನೀಡಿದ ಬಳಿಕ ದೇವೇಗೌಡರು ಉಪವಾಸ ಕೈಬಿಟ್ಟರು. ಆದರೆ, ಜುಲೈ 3ರ ಒಳಗೆ ಸಭೆ ನಡೆಸುವಂತೆ ಅವರು ಗಡುವು ವಿಧಿಸಿದ್ದಾರೆ.

ಬೆಳಿಗ್ಗೆ 10.30ಕ್ಕೆ ಆರಂಭವಾದ ಉಪವಾಸ ಸತ್ಯಾಗ್ರಹ ಮಧ್ಯಾಹ್ನ 2 ಗಂಟೆಯವರೆಗೂ ಮುಂದುವರೆಯಿತು. ಶಾಸಕ ಸಿ.ಎಸ್.ಪುಟ್ಟೇಗೌಡ, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ ಮತ್ತು ಎ.ಟಿ.ರಾಮಸ್ವಾಮಿ ಅವರೊಂದಿಗೆ ಪಾದಚಾರಿ ಮಾರ್ಗದಲ್ಲಿಯೇ ಕುಳಿತ ಗೌಡರು, ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಒಮ್ಮೆ ನಡೆಸಿದ ಮಾತುಕತೆ ವಿಫಲವಾಯಿತು. ಅಂತಿಮವಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಬಳಿಕ ನಿರಶನ ಹಿಂದಕ್ಕೆ ಪಡೆದರು.

ಬೆಳಿಗ್ಗೆ 10.30ಕ್ಕೆ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗೌಡರು, ಅಲ್ಲಿಂದ ಮುಖ್ಯಮಂತ್ರಿ ನಿವಾಸಕ್ಕೆ ತೆರಳಲು ಪ್ರಯತ್ನಿಸಿದರು. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಎದುರು ಅವರ ವಾಹನವನ್ನು ತಡೆದ ಪೊಲೀಸರು ಮುಂದಕ್ಕೆ ತೆರಳಲು ಅನುಮತಿ ನಿರಾಕರಿಸಿದರು. ಸುಮಾರು ಅರ್ಧ ಗಂಟೆ ಕಾಲ ಪೊಲೀಸರು ಮತ್ತು ಗೌಡರ ನಡುವೆ ವಾದ-ಪ್ರತಿವಾದ ನಡೆಯಿತು.

`ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆಗೆ ಅವಕಾಶ ಇಲ್ಲ~ ಎಂದು ಡಿಸಿಪಿ ಡಾ.ಜಿ.ರಮೇಶ್ ತಿಳಿಸಿದರು. ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗೌಡರು ಡಿಸಿಪಿ ಮಾತಿಗೆ ಮಣಿಯಲಿಲ್ಲ. ಕಾನೂನು ಉಲ್ಲಂಘಿಸಿದರೆ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದರು.

ನಿಷೇಧಾಜ್ಞೆಯ ಬಗ್ಗೆ ಮೊದಲೇ ತಿಳಿದಿದ್ದ ಅವರು ತಲಾ ನಾಲ್ಕು ಮಂದಿಯಂತೆ ಸ್ಥಳಕ್ಕೆ ತೆರಳುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಲು ತಂತ್ರ ರೂಪಿಸಿದ್ದರು. ಅದರಂತೆ ನಾಲ್ಕು ಜನರಿಗೆ ಮುಖ್ಯಮಂತ್ರಿ ನಿವಾಸದ ಎದುರು ಹೋಗಲು ಅವಕಾಶ ನೀಡುವಂತೆ ಕೋರಿದರು. ಆಗ ಎಲ್ಲ ರೀತಿಯಿಂದಲೂ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಕೊನೆಗೂ ಗೌಡರ ಒತ್ತಡಕ್ಕೆ ಮಣಿದ ಪೊಲೀಸರು ಮುಖ್ಯಮಂತ್ರಿ ನಿವಾಸದತ್ತ ತೆರಳಲು ಅವಕಾಶ ನೀಡಲು ಮುಂದಾದರು. ಅಲ್ಲಿಂದ ಹೊರಟ ಪ್ರತಿಭಟನಾಕಾರರನ್ನು ರೇಸ್‌ಕೋರ್ಸ್ ಎದುರಿನ ಪಾದಚಾರಿ ಸುರಂಗ ಮಾರ್ಗದ ಬಳಿ ತಡೆಯಲಾಯಿತು.

ಅಲ್ಲಿನ ವಾಹನ ನಿಲುಗಡೆ ತಾಣದ ಬಳಿಯ ಪಾದಚಾರಿ ಮಾರ್ಗದಲ್ಲೇ ಕುಳಿತ ದೇವೇಗೌಡ, ಪುಟ್ಟೇಗೌಡ, ಜವರೇಗೌಡ ಮತ್ತು ರಾಮಸ್ವಾಮಿ ಧರಣಿ ಆರಂಭಿಸಿದರು.

ಅಷ್ಟರಲ್ಲಿ ಮತ್ತೊಂದು ವಾಹನದಲ್ಲಿ ತೆರಳಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ರೇವಣ್ಣ, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಂ.ಕೆ.ಶಿವಲಿಂಗೇಗೌಡ, ಎಚ್.ಎಸ್.ಪ್ರಕಾಶ್, ಮಾಜಿ ಶಾಸಕ ವಿಶ್ವನಾಥ್ ಮತ್ತಿತರರು ಮುಖ್ಯಮಂತ್ರಿ ನಿವಾಸದ ಪ್ರವೇಶದ್ವಾರದ ಬಳಿ ತಲುಪಿದ್ದರು. ಅಲ್ಲಿ ಅವರನ್ನು ವಶಕ್ಕೆ ಪಡೆದ ಪೊಲೀಸರು ಅಶೋಕನಗರ ಪೊಲೀಸ್ ಠಾಣೆಗೆ ಕರೆದೊಯ್ದರು.

ಲಿಖಿತ ಭರವಸೆಗೆ ಪಟ್ಟು: ಮಧ್ಯಾಹ್ನ 12.30ಕ್ಕೆ ದೇವೇಗೌಡರನ್ನು ಭೇಟಿಮಾಡಿದ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಮತ್ತು ಆಪ್ತ ಕಾರ್ಯದರ್ಶಿ ಎಸ್.ದಯಾಶಂಕರ್ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಆದರೆ, `ಹಾಸನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನಪ್ರತಿನಿಧಿಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿಯವರಿಂದ ಲಿಖಿತ ಭರವಸೆ ಬರುವವರೆಗೂ ಧರಣಿ ನಿಲ್ಲಿಸುವುದಿಲ್ಲ~ ಎಂದು ಸ್ಪಷ್ಟವಾಗಿ ಹೇಳಿದರು. ಮಧ್ಯಾಹ್ನ 2 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಪ್ರಸಾದ್, ಹಾಸನದಲ್ಲೇ ಸಭೆ ನಡೆಸುವ ಭರವಸೆಯುಳ್ಳ ಪತ್ರವನ್ನು ಹಸ್ತಾಂತರಿಸಿದರು. ಆಗ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಗೌಡರು, ಮುಖ್ಯಮಂತ್ರಿಯವರ ಸಚಿವಾಲಯದ ಪತ್ರವನ್ನು ಗೌರವಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ವಾರದ ಗಡುವು: ನಿರಶನ ಕೈಬಿಟ್ಟ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ವಾರದ ಒಳಗಾಗಿ ಸಭೆ ನಡೆಸಬೇಕು. ಹಾಸನ ಜಿಲ್ಲೆಯ ಜನರ ಒಳಿತಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರು ಸಭೆಯಲ್ಲಿ ವಿವರ ನೀಡಲಿ. ಜೂನ್ 3ರ ಒಳಗೆ ಸಭೆ ನಡೆಸದಿದ್ದರೆ ನಂತರ ಆಮರಣ ಉಪವಾಸ ಕೈಗೊಳ್ಳುತ್ತೇನೆ~ ಎಂದು ಪ್ರಕಟಿಸಿದರು.

ಬಿಗಿ ಭದ್ರತೆ: ಪ್ರತಿಭಟನಾ ಸ್ಥಳದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಡಿಸಿಪಿಗಳಾದ ಜಿ.ರಮೇಶ್, ಬಿ.ಆರ್.ರವಿಕಾಂತೇಗೌಡ, ಎಚ್.ಎಸ್.ರೇವಣ್ಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ನೂರಾರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT