ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಭಾರತ ಅಂಧಕಾರ

Last Updated 31 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವದಲ್ಲಿಯೇ ಇದುವರೆಗೆ ಕಂಡರಿಯದಂಥ ತೀವ್ರ ಸ್ವರೂಪದ ವಿದ್ಯುತ್ ಸ್ಥಗಿತದಿಂದ ದೇಶದ ಅರ್ಧಕ್ಕೂ ಹೆಚ್ಚು ಭೂಪ್ರದೇಶದಲ್ಲಿನ ಜನಜೀವನವು ಮಂಗಳವಾರ ಅಸ್ತವ್ಯಸ್ತಗೊಂಡಿತು.

ಮೂರು ಪ್ರಮುಖ ವಿದ್ಯುತ್ ಸರಬರಾಜು ಜಾಲಗಳ (ಪವರ್ ಗ್ರಿಡ್) ವೈಫಲ್ಯದಿಂದಾಗಿ  22 ರಾಜ್ಯಗಳ ಜನರು ತೀವ್ರ ಸಂಕಷ್ಟ ಎದುರಿಸಿದರು. ವಿದ್ಯುತ್ ವ್ಯತ್ಯಯದಿಂದ ರೈಲ್ವೆ, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ  ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಒಟ್ಟಾರೆ 60 ಕೋಟಿಯಷ್ಟು ಜನರು ಪರದಾಡುವಂತಾಯಿತು.  ಇತ್ತೀಚೆಗೆ ಅಮೆರಿಕ ಕೂಡ ವಿದ್ಯುತ್ ವ್ಯತ್ಯಯದಿಂದ ನಲುಗಿತ್ತು. ಆದರೆ ಇಷ್ಟೊಂದು ತೀಕ್ಷ್ಣ ಸ್ವರೂಪದ ಪರಿಣಾಮ ಎದುರಿಸಿರಲಿಲ್ಲ.
 

ಗ್ರಿಡ್ ವ್ಯಾಪ್ತಿಯ ರಾಜ್ಯಗಳು
ಉತ್ತರ ಗ್ರಿಡ್: ಪಂಜಾಬ್, ಹರಿಯಾಣ, ರಾಜಸ್ತಾನ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಚಂಡೀಗಡ.
ಪೂರ್ವ ಗ್ರಿಡ್: ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್, ಒಡಿಶಾ ಹಾಗೂ ಸಿಕ್ಕಿಂ.
ಈಶಾನ್ಯ ಗ್ರಿಡ್: ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೊರಾಂ ಹಾಗೂ ತ್ರಿಪುರಾ
300 ರೈಲು ಸಂಚಾರಕ್ಕೆ ಅಡ್ಡಿ
ವಿವಿಧ ಕಡೆ ಸುಮಾರು 300 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರಿಂದಾಗಿ 3 ಲಕ್ಷ ಪ್ರಯಾಣಿಕರು ಪರದಾಡಿದರು.

ಉತ್ತರ, ಉತ್ತರ ಮಧ್ಯ, ಪಶ್ಚಿಮ ಮಧ್ಯ, ಪೂರ್ವ ಮಧ್ಯ, ಪೂರ್ವ ಹಾಗೂ ಆಗ್ನೇಯ ರೈಲ್ವೆ ವಲಯಗಳು ಸಮಸ್ಯೆ ಎದುರಿಸಬೇಕಾಯಿತು.

ಪ್ರಯಾಣಿಕರ ರೈಲು ಸಂಚಾರಕ್ಕೆ ಆದ್ಯತೆ ನೀಡಿದ್ದರಿಂದ ಸರಕು ಸಾಗಣೆ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಿಕ್ಕಟ್ಟು: ಪ್ರಧಾನಿ ಉತ್ತರ ಕೊಡಬೇಕು- ಬಿಜೆಪಿ
ನವದೆಹಲಿ (ಐಎಎನ್‌ಎಸ್): ಇಂಧನ ವಲಯದ ಅಸಮರ್ಪಕ ನಿರ್ವಹಣೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಇದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಉತ್ತರ ಕೊಡಬೇಕು ಎಂದು ಹೇಳಿದೆ.
`ಹಿಂದೆಂದೂ ಕಂಡರಿಯದಂಥ ವಿದ್ಯಮಾನಗಳು ಘಟಿಸುತ್ತಿವೆ. ಪ್ರಧಾನಿ, ಇಂಧನ ಸಚಿವರು ಇದಕ್ಕೆಲ್ಲ ಉತ್ತರ ನೀಡಬೇಕು~ ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕೊರತೆಗೆ ರಾಜ್ಯಗಳೇ ಕಾರಣ- ಶಿಂಧೆ
ನವದೆಹಲಿ (ಪಿಟಿಐ): ಕೆಲ ರಾಜ್ಯಗಳು ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಪದೇ ಪದೇ ಗ್ರಿಡ್ ವೈಫಲ್ಯವಾಗುತ್ತಿದೆ ಎಂದು ಆರೋಪಿಸಿರುವ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ, ವಿದ್ಯುತ್ ಬಿಕ್ಕಟ್ಟು ನಿವಾರಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಮಂಗಳವಾರ ತಿಳಿಸಿದ್ದಾರೆ. ಪೂರ್ವ ಗ್ರಿಡ್‌ನಿಂದ 3,000 ಮೆಗಾ ವಾಟ್ ಹೆಚ್ಚಿನ ವಿದ್ಯುತ್ ಅನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವುದನ್ನು ನಿಲ್ಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ.


ರೈಲುಗಳು ಸಂಚರಿಸಲಿಲ್ಲ. ಕೆಲ ರೈಲುಗಳು ಸುರಂಗ ಮಧ್ಯೆದಲ್ಲಿಯೇ ನಿಂತು ಬಿಟ್ಟವು. ಹಲವಾರು ನಗರಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿಯಂತ್ರಣ ತಪ್ಪಿತು. ಎಟಿಎಂ ಯಂತ್ರಗಳು ಹಣ ವಿತರಿಸಲಿಲ್ಲ, ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಯಿತು. ಶಾಖೋತ್ಪನ್ನ, ನೈಸರ್ಗಿಕ ಅನಿಲ ಮತ್ತು ಜಲ ವಿದ್ಯುತ್ ಉತ್ಪಾದನಾ ಸ್ಥಾವರಗಳೂ ಸ್ಥಗಿತಗೊಂಡವು.

ಉತ್ತರ ಗ್ರಿಡ್ ವೈಫಲ್ಯದಿಂದ ಉತ್ತರ ಭಾರತದ ಸುಮಾರು 8 ರಾಜ್ಯಗಳಲ್ಲಿ ಸೋಮವಾರ 15 ತಾಸುಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪರಿಸ್ಥಿತಿ ಸುಧಾರಿಸಿತು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಸೋಮವಾರ ಮಧ್ಯರಾತ್ರಿ ನಂತರ ಒಂದು ಗಂಟೆಯ ಹೊತ್ತಿಗೆ ಪೂರ್ವ ಹಾಗೂ ಈಶಾನ್ಯ ಗ್ರಿಡ್‌ಗಳೂ ಸ್ಥಗಿತಗೊಂಡವು. ಹೀಗಾಗಿ ದೇಶದ ಅರ್ಧಕ್ಕಿಂತ ಹೆಚ್ಚು ಭಾಗದ ಜನರು ಕತ್ತಲೆಯಲ್ಲಿಯೇ ಕಾಲ ಕಳೆದರು. ರಾಜಧಾನಿಯ ಜನರ ಜೀವನ ನಾಡಿಯಾದ ಮೆಟ್ರೊ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಪ್ರಯಾಣಿಕರು ಹಿಡಿ ಶಾಪ ಹಾಕಿದರು.

ವಿಮಾನ ನಿಲ್ದಾಣಕ್ಕೆ ತಟ್ಟದ ಬಾಧೆ: `ವಿದ್ಯುತ್ ಕೈಕೊಟ್ಟ ತಕ್ಷಣವೇ ಡೀಸೆಲ್ ಚಾಲಿತ ಇಂಧನ ವ್ಯವಸ್ಥೆ ಕಾರ್ಯನಿರ್ವಹಿಸಲು ಆರಂಭಿಸಿತು. ಹಾಗಾಗಿ ಏನೂ ತೊಂದರೆ ಆಗಲಿಲ್ಲ~ ಎಂದು ದೆಹಲಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಗಣಿ ಕಾರ್ಮಿಕರ ರಕ್ಷಣೆ:  ವಿದ್ಯುತ್ ವ್ಯತ್ಯಯದಿಂದ ಪಶ್ಚಿಮ ಬಂಗಾಳದ ಬುರ್ದ್ವಾನಾ ಜಿಲ್ಲೆಯ ಪೂರ್ವ ಕಲ್ಲಿದ್ದಲು ಗಣಿಯಲ್ಲಿ 200 ಕಾರ್ಮಿಕರು ಸಿಕ್ಕಿಕೊಂಡಿದ್ದರು. ಆದರೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದಾಗಿ ಇವರೆಲ್ಲರನ್ನು ಪ್ರಾಣಾಪಾಯದಿಂದ ರಕ್ಷಿಸಲಾಯಿತು. 2ಜಿ ತರಂಗಾಂತರ ಹಗರಣದ ವಿಚಾರಣೆಯ ಮೇಲೂ ವಿದ್ಯುತ್ ಬಿಕ್ಕಟ್ಟಿನ ಕರಿ ನೆರಳು ಬಿದ್ದಿತ್ತು.

ದೇಶದ ಐದು ವಿದ್ಯುತ್ ಗ್ರಿಡ್‌ಗಳು
ಉತ್ತರ, ಪೂರ್ವ, ಈಶಾನ್ಯ, ದಕ್ಷಿಣ ಹಾಗೂ ಪಶ್ಚಿಮ. ದಕ್ಷಿಣದ ಗ್ರಿಡ್ ಬಿಟ್ಟು, ಉಳಿದೆಲ್ಲ ಗ್ರಿಡ್‌ಗಳು ಪರಸ್ಪರ ಸಂಪರ್ಕ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT