ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲರ್ಜಿ ಆಗದಿರಲಿ ಕಿರಿಕಿರಿ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

  ಕಸಬರಿಕೆ ಹಿಡಿದ ತಕ್ಷಣ ಆ........ಕ್ಷಿ ಎಂದು ಸೋರುವ ಮೂಗನ್ನು ಉಜ್ಜುತ್ತಾ `ನನಗೆ ದೂಳೆಂದರೆ ಅಲರ್ಜಿ ಕಣೋ~ ಎಂದರು ಸುಬ್ಬಮ್ಮ. ವರ್ಷ ಪೂರ್ತಿ ಆರಾಮಾಗಿಯೇ ಇರುವ ರಾಮರಾಯರಿಗೆ ಮೇ ತಿಂಗಳಲ್ಲಿ ಅದ್ಯಾವುದೋ ಗಿಡ ಬೀಜ ಬಿಡುವ ಸಮಯದಲ್ಲಿ ಮಾತ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಟೀನಾಗೆ ಕುರಿಮಾಂಸ ತಿನ್ನುವುದು ಹಾಗಿರಲಿ ಅದರ ವಾಸನೆ ಸೋಕಿದರೂ ಮೈಯೆಲ್ಲ ತುರಿಕೆ...

ಅವೆುರಿಕದಲ್ಲಿ ಐವರಲ್ಲಿ ಒಬ್ಬರಿಗೆ ಇರುತ್ತದೆ ಎನ್ನಲಾಗುವ ಅಲರ್ಜಿ ನಮ್ಮಲ್ಲೂ ಅತ್ಯಂತ ಸಾಮಾನ್ಯ ಎನ್ನಬಹುದಾದಂತಹ ಸಮಸ್ಯೆ. ಅಲರ್ಜಿಗೆ ಕಾರಣವೇನು? ಹಲವರಿಗೆ ನಿರುಪದ್ರವಿಗಳಾದ ವಸ್ತುಗಳು ಕೆಲವರಿಗೆ ಮಾತ್ರ ತೊಂದರೆ ನೀಡಲು ಹೇಗೆ ಸಾಧ್ಯ? ಅಲರ್ಜಿ ಆನುವಂಶೀಯವಾಗಿ ಬರುವ ತೊಂದರೆಯೇ? ಇದಕ್ಕೇನಾದರೂ ಪರಿಹಾರವಿದೆಯೇ? ಇವೆಲ್ಲ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳು.

ಅಲರ್ಜಿಗೆ ಅತ್ಯಂತ ಸರಳವಾದ ಕಾರಣ ಕೊಡಬಹುದಾದರೆ, ದೇಶದ ಗಡಿ ಕಾಯಲು ಸೈನ್ಯವಿದ್ದಂತೆ ನಮ್ಮ ದೇಹವನ್ನು ಸಂರಕ್ಷಿಸಲು ರೋಗನಿರೋಧಕ ವ್ಯವಸ್ಥೆ ಇದೆ. ಇದೊಂದು ಸಂಕೀರ್ಣವಾದ, ಅಷ್ಟೇ ಕ್ರಮಬದ್ಧವಾದ ವ್ಯವಸ್ಥೆ. ಇದರ ಕೆಲಸ ರೋಗಕಾರಕ ಸೂಕ್ಷ್ಮಾಣುಗಳಂತಹ ಅಪಾಯಕಾರಿ ಪರಕೀಯರನ್ನು ಗುರುತಿಸಿ ಅವರನ್ನು ಧ್ವಂಸ ಮಾಡುವುದು. ಕೆಲವೊಮ್ಮೆ ಇವು ವಿಪರೀತ ಕರ್ತವ್ಯ ಪ್ರಜ್ಞೆಯನ್ನು ಮೆರೆದುಬಿಡುತ್ತವೆ.

ಒಂದು ಚಿಕ್ಕ ದೂಳಿನ ಕಣವನ್ನೋ, ಹಾಲು, ಶೇಂಗಾದಂತಹ ಆಹಾರ ಪದಾರ್ಥವನ್ನೋ ಅಥವಾ ಇಂತಹುದೇ ಇನ್ಯಾವುದೋ ಬಡಪಾಯಿಯನ್ನು, ಅದೊಂದು ಪ್ರಾಣಾಂತಿಕ ವಸ್ತು ಎಂಬಂತೆ ಬಿಂಬಿಸಿ ಅದರ ನಾಶಕ್ಕಾಗಿ ಹೊರಟುಬಿಡುತ್ತವೆ. ಈ ಅನಗತ್ಯವಾದ ಕಾರ್ಯಾಚರಣೆ ದೇಹದ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರುತ್ತದೆ.
 
ಇದೇ `ಅಲರ್ಜಿ~. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ `ಹಿಸ್ಟಮೈನ್~ ಎಂಬ ರಾಸಾಯನಿಕ ವಸ್ತು ಅಲರ್ಜಿಯಲ್ಲಿ ಕಂಡುಬರುವ ಮೂಗಿನ ಸೋರಿಕೆ, ಚರ್ಮದ ತುರಿಕೆ ಹಾಗೂ ರಕ್ತನಾಳಗಳ ಹಿಗ್ಗುವಿಕೆಯಂತಹ ತೊಂದರೆಗಳಿಗೆ ಕಾರಣ ಎನ್ನಲಾಗುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಅಲರ್ಜಿಯ ಪರಿಣಾಮ ಸೀನು, ಮೂಗಿನ ಸೋರುವಿಕೆ, ತುರಿಕೆಯಂತಹ ಕಿರಿಕಿರಿಗಳಾಗಿದ್ದು, ಅಲರ್ಜಿಕಾರಕಗಳನ್ನು ದೂರ ಇರಿಸಿದೊಡನೆಯೇ ಅವುಗಳಿಂದ ಮುಕ್ತಿ ದೊರಕುತ್ತದೆ. ಕೆಲ ಸಂದರ್ಭಗಳಲ್ಲಿ ಆಸ್ತಮಾ, ವಾಂತಿ ಭೇದಿಯಂತಹ ಸಮಸ್ಯೆಗಳು ತಲೆದೋರಿ ವೈದ್ಯರ ಸಹಾಯದಿಂದ ಉಪಶಮನಗೊಳ್ಳುತ್ತವೆ. ಆದರೆ ಅಲರ್ಜಿ ತಂದೊಡ್ಡುವ `ಅನಫಿಲಾಕ್ಸಿಸ್~ ಮಾತ್ರ ತುರ್ತು ಚಿಕಿತ್ಸೆಯನ್ನು ಬೇಡುವ ಪ್ರಾಣಾಂತಿಕವಾದ ಕಾಯಿಲೆ.
 
ಸೇವಿಸಿದ ಆಹಾರದಿಂದಲೋ ಅಥವಾ ಕೀಟದ ಕಡಿತದಿಂದಲೋ ಉಂಟಾಗುವ ಅಲರ್ಜಿ ನೇರವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಇಡೀ ದೇಹದ ವ್ಯವಸ್ಥೆಯೇ ಹದಗೆಡುತ್ತದೆ. ಇಂತಹ ಸಂದರ್ಭದಲ್ಲಿ ಇದನ್ನು ಗುರುತಿಸಿ ಶೀಘ್ರವಾಗಿ ಚಿಕಿತ್ಸೆ ನೀಡುವುದು ಅತ್ಯಗತ್ಯ.

ಇತ್ತೀಚಿನ ದಿನಗಳಲ್ಲಿ ಅಲರ್ಜಿಯನ್ನು ಗುರುತಿಸಲು ಚರ್ಮ ಪರೀಕ್ಷೆ, ರಕ್ತ ಪರೀಕ್ಷೆಯಂತಹ ವಿಧಾನಗಳಿವೆ. ಅದನ್ನು ಪರಿಹರಿಸಲು ಆ್ಯಂಟಿ ಹಿಸ್ಟಮೈನ್, ಎಪಿನೆಫ್ರಿನ್ ಇಂಜೆಕ್ಷನ್‌ನಂತಹ ಪರಿಣಾಮಕಾರಿ ಮಾರ್ಗಗಳೂ ಇವೆ. ಈಗ ಬಳಕೆಯಲ್ಲಿರುವ ಆ್ಯಂಟಿ ಹಿಸ್ಟಮೈನ್, ಅಲರ್ಜಿಯಿಂದ ಉತ್ಪತ್ತಿಯಾಗುವ ಹಿಸ್ಟಮೈನ್ ರಾಸಾಯನಿಕವನ್ನು ಬಲಹೀನಗೊಳಿಸಲು ಬಳಕೆಯಾಗುತ್ತಿದೆ.

ಈ ರಾಸಾಯನಿಕ ಔಷಧಿಗಳು ಅಡ್ಡಪರಿಣಾಮ ಬೀರುತ್ತಿವೆ ಎನ್ನುವಾಗಲೇ ವಿಜ್ಞಾನಿಗಳು ನೈಸರ್ಗಿಕ ಉತ್ಪನ್ನಗಳಿಗಾಗಿ ಹುಡುಕಾಟ ಆರಂಭಿಸಿದರು. ಆಗ ಸಿಕ್ಕಿದ್ದೇ ಗ್ಸಾಂಥೋನ್ ಎಂಬ ಸಸ್ಯಜನ್ಯ ಉತ್ಪನ್ನ. ಈ ಗ್ಸಾಂಥೋನ್‌ನಲ್ಲೇ ಹಲವಾರು ವಿಧಗಳಿದ್ದು ಲೋಳೆಸರದಲ್ಲಿಯೂ (ಆಲೊವೆರಾ) ಒಂದು ವಿಧದ ಗ್ಸಾಂಥೋನ್ ಇದೆ ಎನ್ನಲಾಗುತ್ತದೆ.

ಸುಮಾರು 40 ವಿಧದ ಗ್ಸಾಂಥೋನ್‌ಗಳನ್ನು ಒಳಗೊಂಡು ಎಲ್ಲ ಅಲರ್ಜಿಗಳಿಗೂ ಸಂಜೀವಿನಿ ಎನಿಸುವ ಹಣ್ಣೊಂದು 2002ರಲ್ಲಿ ಪತ್ತೆಯಾಯಿತು, ಅದೇ ಮ್ಯೋಂಗೋಸ್ಟೀನ್. ಇದಕ್ಕೂ ನಮ್ಮ ಮಾವಿನ ಹಣ್ಣಿಗೂ ಯಾವುದೇ ಸಂಬಂಧವಿಲ್ಲ.

ಹೀಗೆ ಪರಿಹಾರ ಮಾರ್ಗಗಳು ಎಷ್ಟೇ ಇದ್ದರೂ ಅಲರ್ಜಿಕಾರಕಗಳಿಂದ ಆದಷ್ಟೂ ದೂರವಿರುವುದು, ಹಠಾತ್ತನೆ ಎದುರಾಗುವ ಅಲರ್ಜಿಯ ವೈಪರೀತ್ಯಗಳಿಂದ ಪಾರಾಗಲು ಸೂಕ್ತ ಔಷಧೋಪಕರಣಗಳನ್ನು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಳ್ಳುವುದು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ತಮ್ಮ ಸಮಸ್ಯೆಯ ಬಗ್ಗೆ ಮೊದಲೇ ತಿಳಿಸುವುದು ಅತ್ಯಗತ್ಯ. 

ಕಾರಣವೇನು?
ರೋಗನಿರೋಧಕ ವ್ಯವಸ್ಥೆ ಎಲ್ಲರಲ್ಲಿಯೂ ಇದ್ದರೂ ಅಲರ್ಜಿ ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಆನುವಂಶೀಯತೆ, ಸುತ್ತಲಿನ ಪರಿಸರ, ಮಾಲಿನ್ಯಗಳು, ಸಿಗರೇಟ್ ಸೇವನೆ, ಹಾರ್ಮೋನ್ ವ್ಯತ್ಯಯ ಇವೆಲ್ಲವೂ ಅಲರ್ಜಿಗೆ ಕಾರಣಗಳಾಗಿದ್ದರೂ ಆನುವಂಶೀಯತೆ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ.

ತಂದೆ ತಾಯಿ ಇಬ್ಬರಲ್ಲೂ ಅಲರ್ಜಿಯ ಸಮಸ್ಯೆ ಇಲ್ಲದಿದ್ದರೆ ಮಗು ಅಲರ್ಜಿಗೆ ಒಳಗಾಗುವ ಸಾಧ್ಯತೆ ಶೇಕಡಾ ಹದಿನೈದರಷ್ಟು, ಇಬ್ಬರಲ್ಲಿ ಒಬ್ಬರಿಗೆ ಈ ಸಮಸ್ಯೆಯಿದ್ದರೆ ಶೇಕಡಾ ಮೂವತ್ತರಷ್ಟು, ಇಬ್ಬರೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ಶೇಕಡಾ ಅರವತ್ತರಷ್ಟು ಸಂದರ್ಭಗಳಲ್ಲಿ ಮಗು ಅಲರ್ಜಿಯನ್ನು ಎದುರಿಸಬೇಕಾಗುತ್ತದೆ.

ಆದರೆ ತಂದೆ ತಾಯಿಗೆ ಯಾವ ವಸ್ತು ಅಲರ್ಜಿಕಾರಕವಾಗಿತ್ತೋ ಅದೇ ವಸ್ತು ಮಗುವಿಗೂ ತೊಂದರೆ ನೀಡಬೇಕು ಎಂದೇನೂ ಇಲ್ಲ. ಉದಾಹರಣೆಗೆ ತಾಯಿಗೆ ಹಾಲಿನಿಂದ ಅಲರ್ಜಿಯ ಸಮಸ್ಯೆಯಿದ್ದರೆ ಮಗುವಿನ ಸಮಸ್ಯೆ ಪ್ರಾಣಿಗಳ ರೋಮ ಆಗಿರಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT