ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ಅಮೋಘನ ಹತ್ತು ಮುಖಗಳು

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಕಲಿತ ಯುವಕ ಅಮೋಘವರ್ಷ ರಾಕ್ ಸಂಗೀತದ ಒಲವು ಇಟ್ಟುಕೊಂಡಿದ್ದಾರೆ. ಅದರ ಜೊತೆಯಲ್ಲಿಯೇ ವನ್ಯಜೀವಿ ಛಾಯಾಗ್ರಹಣದ ಹುಚ್ಚು ಹಚ್ಚಿಸಿಕೊಂಡು ಅದಕ್ಕಾಗಿ ಭಾರತ ಮಾತ್ರವಲ್ಲ ಕೀನ್ಯಾದ ದಟ್ಟ ಕಾಡುಗಳಲ್ಲಿ ಅಲೆದಾಡಿದ್ದಾರೆ. ರಾಕ್ ಸಂಗೀತ, ಎಂಜಿನಿಯರಿಂಗ್, ವೆಬ್‌ಸೈಟ್ ಡಿಸೈನಿಂಗ್, ಪರಿಸರ ಪ್ರೀತಿ, ವನ್ಯಜೀವಿ ಛಾಯಾಗ್ರಹಣ ಹೀಗೆ ಹಲವು ರೀತಿಯಲ್ಲಿ ಹವ್ಯಾಸ ಆಸಕ್ತಿ ಹರಡಿಕೊಂಡಿದ್ದರೂ ಅಲ್ಲೆಲ್ಲ ತಮ್ಮದೇ ಛಾಪು ಮೂಡಿಸಿದ್ದಾರೆ.

ವರ್ಷಕ್ಕೊಮ್ಮೆ ನೆರೆಮನೆಗೆ ಹೋಗಿ ಬಂದ ಹಾಗೆ ಸ್ನೇಹಿತರೊಡನೆ ಕೀನ್ಯಾದ ಮಸೈ ಮಾರಕ್ಕೆ ಹೋಗಿ ಬರುವ `ಅಮೋಘವರ್ಷ~ ಪರಿಸರದ ಬಗ್ಗೆ ಪ್ರೀತಿ-ಕಾಳಜಿ- ಕುತೂಹಲ ಇಟ್ಟುಕೊಂಡ ಯುವಕ. ಇವರ ಪರಿಸರ ಪ್ರೀತಿಯು ಛಾಯಾಗ್ರಹಣದ ಜೊತೆಗೂಡಿ ಹೊಸ ಆಯಾಮ ಕಲ್ಪಿಸುವುದಕ್ಕೆ ಕಾರಣವಾಗಿದೆ.
 
ವನ್ಯಜೀವಿ ಛಾಯಾಗ್ರಹಣದಲ್ಲಿ ತನ್ನದೇ ಸ್ಥಾನ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವ ಅಮೋಘ ತಮ್ಮಂತೆ ಆಸಕ್ತಿ ಇಟ್ಟುಕೊಂಡಿರುವ ಯುವಕರಿಗೆ, ಆಸಕ್ತರಿಗೆ ಛಾಯಾಗ್ರಹಣದ ಪಾಠ ಹೇಳಿಕೊಡುತ್ತಾರೆ. ಅಮೋಘ ಅವರ ಬಳಿ ಎಂಟರಿಂದ 80 ವರ್ಷ ವಯಸ್ಸಿನವರೆಗಿನ ಆಸಕ್ತರು ಛಾಯಾಗ್ರಹಣ ಕಲಿಯಲು ಬರುತ್ತಾರೆ.

ಬೆಂಗಳೂರಿನಲ್ಲಿ ಆರಂಭವಾಗುವ ಕ್ಯಾಮರಾ -ಫೋಟೋಗ್ರಫಿಯ ಪಾಠ ನಂತರ ಪಶ್ಚಿಮ ಘಟ್ಟಗಳ ಮಲೆಗಳಲ್ಲಿ ಮುಂದುವರೆಯುತ್ತದೆ. ಮತ್ತೂ ಆಸಕ್ತಿ ತೋರಿಸುವ ಪರಿಣಿತರು ಈಶಾನ್ಯ ರಾಜ್ಯಗಳ ಕಾಡುಗಳು ಹಾಗೂ ಕೀನ್ಯಾದ ಹುಲ್ಲುಗಾವಲುಗಳವರೆಗೂ ತಲುಪುತ್ತಾರೆ.

ಅರುಣಾಚಲ ಪ್ರದೇಶದ ನಿತ್ಯಹರಿದ್ವರ್ಣ ಕಾಡುಗಳಿಂದ ಹಿಡಿದು ಲಡಾಕ್‌ನ ಒಣಭೂದೃಶ್ಯಗಳವರೆಗೆ ಹಾಗೆಯೇ ಪಶ್ಚಿಮ ಘಟ್ಟಗಳು ಸೇರಿದಂತೆ ಭಾರತದ ಜೀವವೈವಿಧ್ಯವನ್ನು ಕ್ಯಾಮರಾ ಬಳಸಿ ದಾಖಲಿಸಿಟ್ಟಿದ್ದಾರೆ. ಕಾಡಿನ ಬಗ್ಗೆ ಅಲ್ಲಿನ ಪ್ರಾಣಿಗಳ ಬಗ್ಗೆ ಸೊಗಸಾಗಿ ವಿವರಿಸುವ ಅಮೋಘ ಕಟ್ಟಿಕೊಡುವ ಕಥೆಗಳು ಕೇಳುಗರನ್ನು ಬೆರಗುಗೊಳಿಸದೇ ಇರಲಾರವು.

ಅರಣ್ಯದ ಜೊತೆಗಿನ ಅಮೋಘನ ಅನುಭವ ಅಷ್ಟೊಂದು ವೈವಿಧ್ಯಮಯ -ವಿಭಿನ್ನವಾಗಿದೆ. ತನ್ನ ಕಥೆಗಳು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರಗಳ ಮೂಲಕ ಪರಿಸರ ಸಂರಕ್ಷಣೆಯ ಹೊಸದಾರಿ ಕಂಡುಕೊಂಡಿರುವ ಅಮೋಘ `ಅರಿವು~ ಮೂಡಿಸುವ ಶಿಕ್ಷಣದಿಂದ ಮಾತ್ರ ಪರಿಸರ ಕಾಪಾಡಲು ಸಾಧ್ಯ ಎನ್ನುತ್ತಾರೆ.

 1994ರಲ್ಲಿ `ದ ಲಯನ್ ಕಿಂಗ್~ ಸಿನಿಮಾ ನೋಡಿದಾಗಲೇ `ಮಸೈ ಮಾರ~ಕ್ಕೆ ಹೋಗಬೇಕು ಅಂತ ಕನಸು ಕಂಡೆ. 2011ರಲ್ಲಿ ಮೊದಲ ಬಾರಿಗೆ ಮಸೈ ಮಾರ ನೋಡುತ್ತಿದ್ದಾಗ ಸಿನಿಮಾ ಟೈಟಲ್ ಸಾಂಗ್ ಕಿವಿಯಲ್ಲಿ ಕೇಳಿಸುತ್ತಿತ್ತು. ನಾನು ಅಂದುಕೊಂಡದ್ದಕ್ಕಿಂತ ನೂರಾರು ಪಟ್ಟು ಸೊಗಸಾಗಿತ್ತು. ಅದ್ಭುತವಾದ ಭೂದೃಶ್ಯ ಅರೆಕ್ಷಣ ಬೆರಗುಗೊಳಿಸುವಂತಿತ್ತು. ಕಣ್ಣು ಹರಿಸಿದಲ್ಲೆಲ್ಲ ಸೂರ್ಯನ ಹೊನ್ನಕಿರಣ ಹರಡಿದ ಸಮೃದ್ಧ ಹುಲ್ಲುಗಾವಲು. ನೋಡನೋಡುತ್ತಿದ್ದಂತೆಯೇ `ವಾವ್~ ಎಂಬ ಉದ್ಘಾರ ಹೊರಟಿತು. ಮಾತಿಗೆ-ಪದಕ್ಕೆ ಮೀರಿದ ಅನುಭವ ಅದು. ವನ್ಯಜೀವಿ ಛಾಯಾಗ್ರಾಹಕರ ಪಾಲಿನ ಸ್ವರ್ಗ. ಈ ತಿಂಗಳು ತಮ್ಮ ಛಾಯಾಗ್ರಾಹಕ ಸ್ನೇಹಿತರೊಂದಿಗೆ ಮಸೈ ಮಾರಕ್ಕೆ ಹೋಗಲಿದ್ದಾರೆ.

ಅಮೋಘವರ್ಷ ಓದುತ್ತ ಬೆಳೆದವರು. ಪುಸ್ತಕಗಳ ನಡುವೆ ಬಾಲ್ಯ ಕಳೆದವರು. ಅಪ್ಪ-ಅಮ್ಮ ಇಬ್ಬರೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಮ್ಮ ಪದವಿ ಕಾಲೇಜಿನಲ್ಲಿ ಕನ್ನಡ ಕಲಿಸುವ ಮೇಷ್ಟ್ರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅಪ್ಪ ಸ್ವಯಂನಿವೃತ್ತಿ ಪಡೆದಿದ್ದಾರೆ. ಸಹಜವಾಗಿಯೇ ಮನೆಯಲ್ಲಿ ಓದುವ ಸಂಸ್ಕೃತಿ ಇತ್ತು. ಮನೆತುಂಬ ಪುಸ್ತಕಗಳ ಸಾಲು-ಸಾಲು.

ಅವುಗಳಲ್ಲಿ ಮೊದಲು ಅಮೋಘನ ಕೈಗೆ ಸಿಕ್ಕದ್ದು ಶಿವರಾಮ ಕಾರಂತರ `ಅದ್ಭುತ ಜಗತ್ತು~ ಅದನ್ನು ಇಡೀಯಾಗಿ ಓದಿ ಮುಗಿಸಿದ. ನಂತರ ಜಿಮ್‌ಕಾರ್ಬೆಟ್, ಕೆನೆತ್ ಆ್ಯಂಡರ್‌ಸನ್‌ರ ಪುಸ್ತಕಗಳು ಜೊತೆಯಾದವು. ಹೆಸರಾಂತ ಪರಿಸರವಾದಿ ಡೇವಿಡ್ ಅಟೆನ್‌ಬರೋ ಪುಸ್ತಕಗಳಿಂದ ಪ್ರಭಾವಿತರಾದರು.

ಅಮೋಘ ಅವರ ಆಸಕ್ತಿಗಳು ಅವರನ್ನು ಬಹಳ ದೂರದವರೆಗೆ ಕರೆದುಕೊಂಡು ಹೋಗಿವೆ. ಅವು ಕೇವಲ ವೃತ್ತಿ ಮತ್ತು ಪ್ರವೃತ್ತಿ ಎಂಬ ವಿದಳನಕ್ಕೆ ಸೀಮಿತವಾಗಿಲ್ಲ. ಬಹಳಷ್ಟು ಸಲ ಅವೆರಡೂ ಒಂದರೊಳಗೊಂದು ಬೆರೆತು ಒಂದೇ ಆಗಿಬಿಟ್ಟಿವೆ. ಒಂದು ಮತ್ತೊಂದು ಎಂಬ ವಿಭಜನೆಯೇ ಸಾಧ್ಯವಿಲ್ಲದಷ್ಟು ಒಂದಾಗಿವೆ. ಎಎಂಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವಾಗಲೇ (2004) ವೆಬ್ ಡಿಸೈನಿಂಗ್‌ನಲ್ಲಿ ತೊಡಗಿಕೊಂಡಿದ್ದ ಅಮೋಘ ಅವರಿಗೆ ಆಗಲೇ ರಾಕ್ ಸಂಗೀತದ ಪ್ರೀತಿ ಆರಂಭವಾಗಿತ್ತು.
ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ದಕ್ಷಿಣ ಭಾರತದಲ್ಲಿಯೇ ಮೊದಲ ರಾಕ್ ಮ್ಯೂಸಿಕ್ ವೆಬ್‌ಸೈಟ್ ಆರಂಭಿಸಿದ್ದ. ನಾಲ್ವರು ಸಂಗೀತಾಸಕ್ತ ಗೆಳೆಯರ ಪಾಕೆಟ್ ಮನಿಯಿಂದ ಆರಂಭವಾಗಿದ್ದ `ರಾಕ್ ಹೆರಾಲ್ಡ್ ಡಾಟ್ ಕಾಮ್~ ರಾಕ್ ಸಂಗೀತಕ್ಕೆ ಸಂಬಂಧಿಸಿದ ವಿನೂತನ ಪ್ರಯೋಗ ಆಗಿತ್ತು. ರಾಕ್ ಕಲಾವಿದರು ಮತ್ತು ಬ್ಯಾಂಡ್‌ಗಳ ನಡುವಿನ ಕೊಂಡಿಯಾಗಿದ್ದ ಈ ವೆಬ್‌ಸೈಟ್‌ನಲ್ಲಿ ಬ್ಯಾಂಡ್‌ಗಳ ವಿಶೇಷ ಪರಿಚಯ ಲೇಖನ, ಕಲಾವಿದರ ಸಂದರ್ಶನ ಪರಸ್ಪರ ವಿಚಾರ ವಿನಿಮಯದ ಚರ್ಚಾ ವೇದಿಕೆಯೂ ಅಲ್ಲಿತ್ತು. ರಾಕ್ ಜೊತೆಗಿನ ಒಡನಾಟವನ್ನು ಅಲ್ಲಿಗೇ ಬಿಡಲಿಲ್ಲ.

ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ ನಂತರ ಕೆಲಸ ಅಂತ `ಅಮೆಜಾನ್ ಡಾಟ್‌ಕಾಮ್~ ಸೇರಿದ ಮೇಲೆ ಓಡಾಟಕ್ಕೊಂದು ದಿಕ್ಕು-ದೆಸೆ ರೂಪುಗೊಂಡಿತು. ಆದರೆ, ಯಾಕೋ ಅವರಿಗೆ `ಕುದಿಯುತ್ತಿದ್ದೇನೆ~ ಅನ್ನಿಸತೊಡಗಿತು. ಆಗಲೇ ಅದನ್ನು ತಮ್ಮ ತಂದೆಯವರ ಹತ್ತಿರ ಹೇಳಿದ ಅಮೋಘ ಕೆಲಸ ಬಿಟ್ಟು ಕ್ಯಾಮರಾ ಕೈಗೆತ್ತಿಕೊಂಡರು. ಹಾಗೆ ನೋಡಿದರೆ ಕ್ಯಾಮರಾ ಕೈಗೆತ್ತಿಕೊಂಡದ್ದು ಅದೇ ಮೊದಲೇನಾಗಿರಲಿಲ್ಲ.
 
ಶಾಲಾ ದಿನಗಳಲ್ಲಿಯೇ ಅವರ ತಂದೆಯ ಕ್ಲಿಕ್ -4 ಕ್ಯಾಮರಾ ಬಳಸುವ `ಹವ್ಯಾಸ~ ಇಟ್ಟುಕೊಂಡಿದ್ದರು. ಕಾಲೇಜಿನಲ್ಲಿ ಅವರ ಸ್ನೇಹಿತನ ನಿಕಾನ್ ಕೂಲ್‌ಪಿಕ್ಸ್ ಕ್ಯಾಮರಾ ಜೊತೆಗೂಡಿತು. ಆಗ ಫೋಟೊ ತೆಗೆಯುವ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿರಲಿಲ್ಲ. ಸಾಫ್ಟ್‌ವೇರ್ ಕಂಪೆನಿಯಲ್ಲಿನ ಕೆಲಸ ತಂದ ಹಣದಿಂದ ಡಿಜಿಟಲ್ ಎಸ್‌ಎಲ್‌ಆರ್ (ಕ್ಯಾನನ್ 350ಡಿ) ಕ್ಯಾಮರಾ ಖರೀದಿಸಿದರು.

ಸಾಧ್ಯವಿದ್ದಾಗಲೆಲ್ಲ ಕಾಡಿಗೆ ಹೋಗಿ ಫೋಟೊ ಕ್ಲಿಕ್ಕಿಸಲು ಆರಂಭಿಸಿದರು. ಅದು ಗೀಳಾಗಿ, ಹುಚ್ಚಾಗಿ ಪರಿವರ್ತನೆ ಆಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅರಣ್ಯದ ಬಗೆಗಿನ ಪ್ರೀತಿ ಅವರನ್ನು ಕಾಡಿಗೆ ಕರೆದುಕೊಂಡು ಹೋಯಿತು. ಕರ್ನಾಟಕ ಸರ್ಕಾರ ನಡೆಸುವ ಜಂಗಲ್ ಲಾಡ್ಜಸ್ ಒಂದರಲ್ಲಿ ಪರಿಸರದ ಬಗ್ಗೆ ಮಾಹಿತಿ ನೀಡುವವರಾಗಿ ಅರೆಕಾಲಿಕ ಕೆಲಸ ಆರಂಭಿಸಿದರು.

ಅದು ಪರಿಸರದ ಬಗ್ಗೆ ಕಾಡಿನ ಬಗ್ಗೆ ಮತ್ತಷ್ಟು ವಿವರವಾಗಿ ಅರಿಯುವ ಅವಕಾಶ ಕಲ್ಪಿಸಿತು. ಸುತ್ತ ನೆರೆದ ಪರಿಸರ ಪ್ರೇಮಿ ಸ್ನೇಹಿತರು, ಛಾಯಾಗ್ರಾಹಕರ ಒಡನಾಟದಿಂದ ಹೆಚ್ಚಿದ ಆಸಕ್ತಿಯು ಅವರನ್ನು ದೇಶದಾದ್ಯಂತ ಸುತ್ತಾಡುವಂತೆ ಮಾಡಿತು. ಭಾರತದ ಜೀವವೈವಿಧ್ಯವನ್ನು ಕ್ಯಾಮರಾ ಮೂಲಕ ದಾಖಲಿಸುವ ಕಾರ್ಯ ಕೈಗೆತ್ತಿಕೊಂಡರು.

`ಮಾನ್ಸೂನ್ ಹಂಟಿಂಗ್~ ಅಮೋಘರ ಪ್ರಿಯ ಹವ್ಯಾಸಗಳಲ್ಲಿ ಒಂದು. ಮಳೆಗಾಲದಲ್ಲಿ ಕೇರಳದ ತೇಕ್ಕಡಿ, ಮುನ್ನಾರ್‌ಗಳಲ್ಲಿ ಮಳೆಯ ಬೆನ್ನತ್ತಿ ಹೋದ ಅನುಭವವನ್ನು ಸೊಗಸಾಗಿ ವಿವರಿಸುತ್ತಾರೆ. ಕೇವಲ ನಿಸರ್ಗ ಚಿತ್ರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಂಸ್ಕೃತಿಕ- ಸಾಮಾಜಿಕ ಛಾಯಾಚಿತ್ರಣ ಮಾಡುವುದರಲ್ಲಿಯೂ ಅವರಿಗೆ ಆಸಕ್ತಿ.

ಮುಂಬೈ ನಗರದ ಜೀವನವನ್ನು ಸೆರೆ ಹಿಡಿದ ರೀತಿ ಅನನ್ಯ. `ಪರಿಸರ ಶಿಕ್ಷಣ ಕೇಂದ್ರ~ (ಸಿಇಇ= ಸೆಂಟರ್ ಫಾರ್ ಎನ್‌ವಿರಾನ್‌ಮೆಂಟ್ ಎಜ್ಯುಕೇಷನ್)ದ ಜೊತೆಗೆ ಗುರುತಿಸಿಕೊಂಡಿರುವ ಅಮೋಘ ತಮ್ಮ ಬಹುತೇಕ ಸಮಯವನ್ನು ಛಾಯಾಗ್ರಹಣ- ಅದರಲ್ಲೂ ವಿಶೇಷವಾಗಿ ವನ್ಯಜೀವಿ ಛಾಯಾಗ್ರಹಣದ ತರಬೇತಿ ನೀಡುವುದಕ್ಕಾಗಿ ವಿನಿಯೋಗಿಸುತ್ತಾರೆ.
 
ಈವರೆಗೆ ಅವರು 50ಕ್ಕೂ ಹೆಚ್ಚು ಛಾಯಾಗ್ರಹಣ ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನ `ಸಿಕ್ರೆಟ್ಸ್ ಆಫ್ ಕಿಂಗ್ ಕೊಬ್ರಾ~ ಸರಣಿ ಸಿದ್ಧಪಡಿಸಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿನ ಕರಿನಾಗರ ಹಾವುಗಳ ಜೀವನ ವಿಧಾನವನ್ನು ದಾಖಲಿಸಿದ ಕ್ಷಣಗಳನ್ನು ಮೆಲುಕು ಹಾಕಲು ಮರೆಯುವುದಿಲ್ಲ.
 
ಕರ್ನಾಟಕ ಸರ್ಕಾರ ಪ್ರಕಟಿಸಿದ `ವೈಲ್ಡ್ ವಿಸ್ಟಾಸ್~ ಕಾಫಿಟೇಬಲ್ ಬುಕ್‌ನಲ್ಲಿ ಅಮೋಘ ಕ್ಲಿಕ್ಕಿಸಿದ ಚಿತ್ರಗಳಿವೆ. ವನ್ಯಜೀವಿ ಛಾಯಾಗ್ರಹಣ ಅಂದರೆ ಅಲ್ಲಿ ರೋಚಕ ಕಥೆಗಳು, ಅನುಭವಗಳಿಗೇನೂ ಕೊರತೆ ಇರುವುದಿಲ್ಲ. ಅಮೋಘರ ಅನುಭವ ಕೂಡ ಅದಕ್ಕೆ ಹೊರತಲ್ಲ.

ಹಂಪಿ ಸಮೀಪದ ದರೋಜಿಗೆ ಕರಡಿಗಳ ಚಿತ್ರ ಕ್ಲಿಕ್ಕಿಸಲು ಅಮೋಘ ತನ್ನ ಸ್ನೇಹಿತನೊಡನೆ ಹೋಗಿದ್ದರು. `ಅಲ್ಲಿ ಚಿರತೆ ಎಂದು ಜನ ಆಡಿಕೊಳ್ಳುತ್ತಿದ್ದರೇ ಹೊರತು ಯಾರೂ ನೋಡಿರಲಿಲ್ಲ. ಸುಮಾರು 20 ವರ್ಷಗಳಿಂದ ಆ ಚಿರತೆಯ ಚಿತ್ರ ಕ್ಲಿಕ್ಕಿಸುವುದು ಯಾರಿಗೂ ಸಾಧ್ಯವಾಗಿರಲಿಲ್ಲ.
 
ಅಂತಹದ್ದೊಂದು ಅಪರೂಪದ ಗಳಿಗೆ ಎದುರಾದರೆ ಹೇಗೆ ಎಂದು ಸ್ನೇಹಿತನ ಜೊತೆ ಮಾತನಾಡುತ್ತ ಕಾರಿನ ಕಿಟಕಿಯಿಂದ ನೋಡಿದರೆ ಸ್ವಲ್ಪ ದೂರದಲ್ಲಿಯೇ ಚಿರತೆ ನಿಂತಿತ್ತು. ಅರೆಕ್ಷಣವೂ ತಡಮಾಡದೆ ಚಿತ್ರ ಕ್ಲಿಕ್ಕಿಸಿದೆ. ನನಗೆ ಪೋಸ್ ಕೊಡಲಿಕ್ಕೆನೋ ಎಂಬಂತೆ ಕೆಲಕಾಲ ನಿಂತ ಚಿರತೆ ಅಲ್ಲಿಂದ ಹೊರಟು ಹೋಯಿತು~ ಎಂದು ಸ್ಮರಿಸುತ್ತಾರೆ.

ಮತ್ತೊಮ್ಮೆ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಕರಡಿಯೊಂದು ಇರುವೆ, ಹುಳುಗಳನ್ನು ಹುಡುಕುತ್ತಿತ್ತು. ಕೈಯಲ್ಲಿ ಕ್ಯಾಮರಾ ಇರುವಾಗ ಕಾಡಪ್ರಾಣಿಯೊಂದು ಎದುರಾದರೆ ಅದಕ್ಕಿಂತ ಪ್ರಿಯವಾದ ಕ್ಷಣ ವನ್ಯಜೀವಿ ಛಾಯಾಗ್ರಾಹಕನಿಗೆ ಮತ್ತೊಂದಿಲ್ಲ. ಆದರೆ, ಅಷ್ಟೇ ಮುನ್ನೆಚ್ಚರಿಕೆ ವಹಿಸದಿದ್ದರೆ ಪ್ರಾಣಕ್ಕೂ ಎರವಾಗಬೇಕಾಗುತ್ತದೆ.

ಆ ದಿನವೂ ಹಾಗೆಯೇ ಆಯಿತು. ಕರಡಿಯ ಚಿತ್ರಗಳನ್ನು ಕ್ಲಿಕ್ಕಿಸ ತೊಡಗಿದೆ. ಹಾಗೆ ಮಾಡುವಾಗ ಅದು ಕೋಪದಿಂದ ನನ್ನೆಡೆಗೆ ಬರುತ್ತಿದೆ ಎನ್ನುವುದರ ಕಡೆಗೆ ಲಕ್ಷ್ಯ ಹೋಗಲಿಲ್ಲ. ಇನ್ನೇನು ಕೆಲವೇ ಅಡಿಗಳು ಇರುವಾಗ ನನಗೆ ಮಾರ್ಗದರ್ಶಕನಾಗಿದ್ದ ಸ್ನೇಹಿತ ಚಪ್ಪಾಳೆ ತಟ್ಟಿದ. ಅದರಿಂದ ಗಾಬರಿಗೊಂಡ ಕರಡಿ ಅಲ್ಲಿಂದ ಪಲಾಯನ ಮಾಡಿತು. ಕಾಡಿನಲ್ಲಿ ಮನುಷ್ಯನಿಗೆ ಎದುರಾಗುವ ಕರಡಿ ಹುಲಿ ಮತ್ತು ಚಿರತೆಗಳಿಗಿಂತಲೂ ಅಪಾಯಕಾರಿ. ಅರೆಕ್ಷಣದಲ್ಲಿ ಏನೇನೆಲ್ಲ ಸಂಭವಿಸಿಬಿಟ್ಟಿತ್ತು.

`ಮತ್ತೊಂದು ಬಾರಿ ಕೇರಳದಲ್ಲಿ ಸುತ್ತಾಡಿ ರಾತ್ರಿ ಅರಣ್ಯಾಧಿಕಾರಿಯನ್ನು ಮನೆಗೆ ಬಿಟ್ಟು ರೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ದೂರದಲ್ಲಿ ಪ್ರಾಣಿಯೊಂದು ಹಾದು ಹೋದದ್ದು ಕಾಣಿಸಿತು. ನನ್ನ ಜೊತೆಗಿದ್ದ ಸ್ನೇಹಿತ `ಅದು ಹುಲಿ~ ಎಂದ. ಇರಲಿಕ್ಕಿಲ್ಲ, `ನಿನಗೆಲ್ಲೋ ಭ್ರಮೆ~ ಎಂದೆ. ಇಬ್ಬರು ಸ್ವಲ್ಪ ದೂರದ ವರೆಗೂ ಅದರ ಬೆನ್ನ ಹಿಂದೆ ಹೋದೆವು. ಅದು ಹುಲಿ ಎಂದು ಧೃಡಪಡಲು ಹೆಚ್ಚು ಕಾಲಬೇಕಾಗಲಿಲ್ಲ. ಅಪಾಯ ಉಂಟಾಗಬಹುದು ಎಂದುಕೊಂಡು ಮರಳಿದೆವು. ಆಗ ಮಧ್ಯರಾತ್ರಿ ಕಳೆದಿತ್ತು. ಕಾಡಿನಲ್ಲಿ ಹೇಗೆ ಇರಬೇಕು, ವರ್ತಿಸಬೇಕು ಎಂಬ ಅರಿವು ಇರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ~ ಎಂದು ಹೇಳುತ್ತಾರೆ.

ಕ್ಯಾಮರಾ ಸಿದ್ಧವಾಗಿಟ್ಟುಕೊಂಡು ಕಾಡು-ಮೇಡು ಅಲೆಯುವ ಅಮೋಘವರ್ಷ ಸದಾಕಾಲ ಕಾಡನ್ನು ಧ್ಯಾನಿಸುತ್ತಿರುತ್ತಾರೆ. `ಕಾಡಿನಲ್ಲಿ ಇದ್ದಾಗ ಸಹಜವಾಗಿಯೇ ಇರುತ್ತೇನೆ. ನಾಡಿಗೆ ಬಂದಾಗ ಮಾತ್ರ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸಬೇಕಾಗುತ್ತದೆ. ಹೀಗಾಗಿ ಕಾಡಿಗಿಂತ ನಾಡು ಹೆಚ್ಚು ಅಪಾಯಕಾರಿ~ ಎನ್ನುವುದು ಅವರ ಅನಿಸಿಕೆ. (ಅಮೋಘವರ್ಷ ಅವರನ್ನು mail@amoghavarsha.comನಲ್ಲಿ ಸಂಪರ್ಕಿಸಬಹುದು). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT