ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ ಖೈದಾದಿಂದ ದೊಡ್ಡ ದಾಳಿ ಅಸಾಧ್ಯ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್, (ಪಿಟಿಐ): ಅಲ್ ಖೈದಾ ಸಂಘಟನೆಯ ಬಹುತೇಕ ಪ್ರಮುಖ ಮುಖಂಡರ ಹತ್ಯೆಯಾಗಿರುವುದರಿಂದ 9/11ರ ಮಾದರಿಯ ದೊಡ್ಡ ಪ್ರಮಾಣದ ದಾಳಿ ಮಾಡಲು ಈ ಸಂಘಟನೆಯಿಂದ ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ತಿಳಿಸಿದ್ದಾರೆ.

ಅಲ್ ಖೈದಾದ ಎಲ್ಲಾ ಹಂತದ ಮುಖಂಡರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿರುವುದರಿಂದ ಮತ್ತು ತರಬೇತಿ ಹೊಂದಿದ ಸದಸ್ಯರ ಕೊರತೆಯಿಂದ ದಾಳಿ ಮಾಡುವ ಸಾಮರ್ಥ್ಯ ಕುಂದಿದೆ ಎಂದು ಅವರು ಎಬಿಸಿ ಸುದ್ದಿ ಸಂಸ್ಥೆ ಮತ್ತು ಯಾಹೂ ಡಾಟ್ ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

10 ವರ್ಷಗಳ ಅವಧಿಯ ಹೋರಾಟದಲ್ಲಿ ಕಳೆದ ಎರಡು ವರ್ಷಗಳು ಬಹಳ ಮಹತ್ವದ್ದಾಗಿದ್ದು, ಈ ಅವಧಿಯಲ್ಲಿ ಬಿನ್ ಲಾಡೆನ್ ಸೇರಿದಂತೆ ಪ್ರಮುಖ ನಾಯಕರನ್ನು ಹತ್ಯೆ ಮಾಡಲಾಗಿದೆ. ಆದರೂ ಅಮೆರಿಕಕ್ಕೆ ಭಯೋತ್ಪಾದಕರ ದಾಳಿಯ ಬೆದರಿಕೆ ತಪ್ಪಿಲ್ಲ ಎಂದು ಒಬಾಮ ಒಪ್ಪಿಕೊಂಡಿದ್ದಾರೆ.ದೊಡ್ಡ ಪ್ರಮಾಣದ ದಾಳಿಗೆ ಅಗತ್ಯವಾದ ಹಣಕಾಸು ವ್ಯವಸ್ಥೆ ಮತ್ತು ತರಬೇತಿ ಹೊಂದಿದ ಸದಸ್ಯರು ಇಲ್ಲದಿದ್ದರೂ ಅಲ್ ಖೈದಾ ಸಂಘಟನೆಯು ಭಾರಿ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಘಟನೆಯು ನಮ್ಮ ಪ್ರಥಮ ವೈರಿಯಾಗಿದ್ದು, ಸಂಪೂರ್ಣ ದಮನ ಮಾಡುವವರೆಗೂ ನಾವು ವಿಶ್ರಮಿಸುವುದಿಲ್ಲ. ಈಗ ನಾವು ಅವರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯನ್ನು ಇನ್ನೂ ಒಂದೆರಡು ವರ್ಷಗಳ ಕಾಲ ನಡೆಸಿದರೆ ದೊಡ್ಡ ಪ್ರಮಾಣದ ದಾಳಿ ನಡೆಸುವುದಕ್ಕೆ ಅವರಿಂದ ಸಾಧ್ಯವಾಗುವುದಿಲ್ಲ ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಅವಧಿಗೆ ಸ್ಪರ್ಧೆ: ಒಬಾಮ ಇಂಗಿತ
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಜಾರಿಗೆ ತಂದಿರುವ ಯೋಜನೆಗೆ ಜನಬೆಂಬಲ ವ್ಯಕ್ತವಾಗದಿದ್ದರೂ ತಾವು 2012ನೇ ಸಾಲಿನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಎಂದು  ಒಬಾಮ ಹೇಳಿದ್ದಾರೆ.

ಭವಿಷ್ಯದ ಬಗ್ಗೆ ಸ್ಪಷ್ಟ ಮನ್ನೋಟವನ್ನು ಹೊಂದಿರುವ ಹಾಗೂ ಸಾಮಾನ್ಯ ಕುಟುಂಬ ವರ್ಗದ ಕನಸುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿಯನ್ನೇ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

2008ರ ಚುನಾವಣೆಯಲ್ಲಿ `ಹೌದು ನಿಮ್ಮಿಂದ ಸಾಧ್ಯ~ ಎಂಬುದು ಘೋಷವಾಕ್ಯವಾಗಿತ್ತು. 2012ರ ಘೋಷವಾಕ್ಯ ಇದುವರೆಗೆ ನಿರ್ಧಾರವಾಗಿಲ್ಲ. ಪ್ರಸಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಅಗತ್ಯ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಆದ್ದರಿಂದ ಭವಿಷ್ಯದ ಮುನ್ನೋಟವೇ ಮುಂದಿನ ಚುನಾವಣೆಯ ಪ್ರಮುಖ ಅಂಶವಾಗಲಿದೆ ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT