ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಒಳಮೀಸಲಾತಿ ರದ್ದು: ತಡೆಗೆ ಸುಪ್ರೀಂ ನಕಾರ

Last Updated 13 ಜೂನ್ 2012, 8:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಐಟಿಯಂತಹ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 4.5ರಷ್ಟು ಒಳಮೀಸಲಾತಿ ಒದಗಿಸಿದ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸಿದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ತಡೆ ಹಿಡಿಯಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿತು.

~ತಡೆಯಾಜ್ಞೆ ನೀಡಲು ನಮಗೆ ಒಲವು ಇಲ್ಲ~ ಎಂದು ಹೇಳಿದ ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಸ್. ಖೇಹರ್ ಅವರನ್ನು ಒಳಗೊಂಡ ಪೀಠವು ಇತರ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಶೇಕಡಾ 27 ಮೀಸಲಾತಿಯ ಒಳಗಡೆಯೇ ಶೇಕಡಾ 4.5ರಷ್ಟು ಒಳಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ಒದಗಿಸಿದ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿತು.

ತನ್ನ ಮುಂದೆ  ಒಳಮೀಸಲಾತಿ ಒದಗಿಸಿದ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ~ನೀವು ಧಾರ್ಮಿಕ ನೆಲೆಯಲ್ಲಿ ವರ್ಗೀಕರಣ ಮಾಡುವಿರಾ?~ ಎಂದು ಪೀಠವು ಪ್ರಶ್ನಿಸಿತು.

ಒಳಮೀಸಲಾತಿ ಕಲ್ಪಿಸಲು ಹೊರಡಿಸಲಾದ 2011 ಡಿಸೆಂಬರ್ 22ರ ಪ್ರಕಟಣೆಗೆ ಶಾಸಕಾಂಗ ಸಮರ್ಥನೆಯೂ ಇಲ್ಲ ಎಂದೂ ಪೀಠವು ಹೇಳಿತು.

ಇತರ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಶೇಕಡಾ 27 ಮೀಸಲಾತಿಯೊಳಗೆಯೇ ಶೇಕಡಾ 4.5 ಒಳಮೀಸಲಾತಿ ಕಲ್ಪಿಸುವ ಲೆಕ್ಕಾಚಾರವನ್ನೂ ಪ್ರಶ್ನಿಸಿದ ಪೀಠವು ~ಶೇಕಡಾ 4.5 ಒಳಮೀಸಲಾತಿ ಒದಗಿಸಲು ಯಾವುದಾದರೂ ಸಾಂವಿಧಾನಿಕ ಇಲ್ಲವೇ ಶಾಸನಬದ್ಧ ಸಮರ್ಥನೆ ಇದೆಯೇ?~ ಎಂದು ತಿಳಿಯಬಯಸಿತು.

~ಶೇಕಡಾ 4.5 ಒಳಮೀಸಲಾತಿಗೆ ಸಾಂವಿಧಾನಿಕ ಅಥವಾ ಶಾಸನಬದ್ಧ ಸಮರ್ಥನೆ ಇದೆಯೇ ಅಥವಾ ಇಲ್ಲವೇ ಎಂದು ನಾವು ಕೇಳುತ್ತಿದ್ದೇವೆ. ಈ ಸಂಬಂಧ ಹೊರಡಿಸಲಾದ ಅಧಿಕೃತ ಪ್ರಕಟಣೆಗೆ ಸಾಂವಿಧಾನಿಕ ಮತ್ತು ಶಾಸನಬದ್ಧ ಬೆಂಬಲ ಇದೆಯೇ ಅಥವಾ ಇಲ್ಲವೇ ಎಂಬುದು ಎರಡನೇ ಪ್ರಶ್ನೆ~ ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯವನ್ನು ತೃಪ್ತಿಪಡಿಸಲು ಅಡಿಷನಲ್ ಸಾಲಿಸಿಟರ್ ಜನರಲ್ ಗೌರವ್ ಬ್ಯಾನರ್ಜಿ ಎಲ್ಲ ಪ್ರಯತ್ನಗಳನ್ನೂ ಮಾಡಿದರಾದರೂ ಪ್ರಯೋಜನವಾಗಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT