ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಮೀಸಲಾತಿಗೆ ಆಕ್ಷೇಪ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಮೀಸಲಾತಿ ನೀಡುವುದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲಿದ್ದು, ಇದನ್ನು ವಿರೋಧಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪಿ.ಸಿ.ಮೋಹನ್ ತಿಳಿಸಿದರು.

ಫೆಬ್ರುವರಿ 3ರಂದು ನಗರದ ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಫೆ. 7 ಅಥವಾ 8ರಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಂದುಳಿದ ವರ್ಗದವರಿಗೆ ನೀಡುತ್ತಿರುವ ಶೇ 27ರ ಮೀಸಲಾತಿಯಲ್ಲೇ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಮೀಸಲಾತಿ ನೀಡುವುದನ್ನು ವಿರೋಧಿಸಿ ಏಪ್ರಿಲ್‌ನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗುವುದು. ಫೆ.3ರ ಸಭೆಯಲ್ಲಿ ಐದು ಸಾವಿರ ಜನ ಮಾತ್ರ ಭಾಗವಹಿಸಲಿದ್ದಾರೆ. 12 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಕೇಂದ್ರದ ಕ್ರಮಕ್ಕೆ ಹಿಂದುಳಿದ ವರ್ಗದವರಿಂದ ವಿರೋಧ ವ್ಯಕ್ತವಾಗಿದೆ ಎಂದರು.

ನಿಲುವು ಸ್ಪಷ್ಟಪಡಿಸಲಿ: ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಮೀಸಲಾತಿ ನೀಡುವ ಬಗ್ಗೆ ಕಾಂಗ್ರೆಸ್, ಜೆಡಿಎಸ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಆಗ್ರಹಿಸಿದರು.

ಆ ಎರಡೂ ಪಕ್ಷಗಳು ಮೌನ ವಹಿಸಿದರೆ ಹಿಂದುಳಿದ ವರ್ಗಗಳ ವಿರೋಧಿ ಎಂದು ಕರೆಯುತ್ತೇವೆ ಎಂದು ಎಚ್ಚರಿಸಿದ ಅವರು, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರದ ಯುಪಿಎ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗದವರ ಜನಸಂಖ್ಯೆ ಶೇ 36ರಷ್ಟಿದ್ದು, ಅವರನ್ನು ಸಂಘಟಿಸಿ ಪಕ್ಷ ಬಲಪಡಿಸುವ ಕೆಲಸ ಮಾಡಲಾಗುವುದು. ಮತಗಟ್ಟೆ, ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಘಟಕಗಳನ್ನು ರಚಿಸಲಾಗುವುದು ಎಂದರು.
 

ಪದಾಧಿಕಾರಿಗಳ ನೇಮಕ
ಸಂಸದ ಪಿ.ಸಿ.ಮೋಹನ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸ   ಲಾಗಿದೆ.

ಉಪಾಧ್ಯಕ್ಷರು- ಶಾಮಸುಂದರ್ ಗಾಯಕವಾಡ, ಎಲ್.ಕೆ.ರಾಜು, ತಿಪ್ಪಣ್ಣಪ್ಪ ಕಮಕನೂರು, ಜಿ.ಎಚ್.ನಾಗರಾಜು, ವಿ.ರಾಜು. ಪ್ರಧಾನ ಕಾರ್ಯದರ್ಶಿಗಳು- ಶ್ರೀಕಾಂತ ಕಟವಟೆ, ಪಿ.ಎಂ.ರಘುನಾಥ.

ಖಜಾಂಚಿ- ಸುರೇಶ ಲಾತೂರ್. ಕಾರ್ಯದರ್ಶಿಗಳು- ರಾಮಲಿಂಗಪ್ಪ, ಈ.ಎಚ್.ಲಕ್ಷ್ಮಣ, ಎಂ.ಬಿ.ಶಿವಕುಮಾರ್, ಲಕ್ಷ್ಮಿಕಾಂತ್ ಯಾದವ್, ಮಲ್ಲಪ್ಪಗೌಡ. ಕಚೇರಿ ಕಾರ್ಯದರ್ಶಿ- ಮು.ರಮೇಶ್. ಮಾಧ್ಯಮ ಪ್ರಮುಖರು- ಎಂ.ಜಿ.ಮಹೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT