ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಲ್ಲಯ್ಯ, ನೀ ಅಲ್ಲೇ ನಿಲ್ಲಯ್ಯ..'

ದೇವನೂರರ ಜೊತೆ ಹೀಗೊಂದು ರಸವತ್ತಾದ ಸಂವಾದ
Last Updated 3 ಫೆಬ್ರುವರಿ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಉತ್ತರಗಳು ಬಲು ರಸವತ್ತಾಗಿದ್ದವು. ಶ್ರೋತೃಗಳು ಪಟ್ಟುಬಿಡದೆ ಪ್ರಶ್ನೆ ಹಾಕಿದರೆ, `ಕುಸುಮ ಬಾಲೆ'ಯ ಒಡೆಯ ಅಷ್ಟೇ ಸೊಗಸಾದ ಉತ್ತರ ನೀಡುವ ಮೂಲಕ ಸಭಿಕರ ಮನಸೂರೆಗೊಂಡರು. ಕೆಲವೊಮ್ಮೆ ಸವಾಲಿಗೆ ಪಾಟಿ ಸವಾಲಿನ ರೂಪದಲ್ಲಿ ಉತ್ತರ ಕೊಟ್ಟರು. ಅದರ ಕೆಲವು ತುಣುಕುಗಳು ಇಲ್ಲಿವೆ:

ಹಿಂದುಳಿದ ವರ್ಗಗಳಲ್ಲೇ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಒಗ್ಗಟ್ಟಿಲ್ಲದ ಈ ಸನ್ನಿವೇಶದಲ್ಲಿ ದಲಿತರು ಯಾರಿಗೆ ಮತ ನೀಡಬೇಕು?
ನಮ್ಮ ದೇಶದಲ್ಲಿ ಜಾರಿಯಲ್ಲಿ ಇರುವುದು ಗುಪ್ತ ಮತದಾನ. ನೀವು ಯಾರಿಗೆ ಬೇಕಾದರೂ ಮತ ಹಾಕಬಹುದು. ಯಾರಿಗೆ ಹಾಕುತ್ತಿದ್ದೇವೆ ಎನ್ನುವ ಅರಿವು ಇರಬೇಕಷ್ಟೆ.

ಎದೆಗೆ ಬಿದ್ದ ಅಕ್ಷರ' ಕೃತಿಯ ಮುಖಪುಟದಲ್ಲಿ ದೇವನೂರರ ವ್ಯಂಗ್ಯ ಚಿತ್ರದಲ್ಲಿ ಸಿಗರೇಟ್ ಇರಬಾರದಿತ್ತು ಎನ್ನುವ ಅಭಿಪ್ರಾಯ ಇದೆ. ಹಾಗಾದರೆ ದೇವರ ಕೈಯಲ್ಲಿ ಕತ್ತಿ, ಗುರಾಣಿ, ಚಕ್ರ ಇರುವುದೂ ತಪ್ಪಲ್ಲವೆ?
ಪುಸ್ತಕದ ಮೇಲೆ ಅಚ್ಚು ಹಾಕಲಾದ ನನ್ನ ಚಿತ್ರದಲ್ಲಿ ಸಿಗರೇಟ್ ಇದ್ದಿರುವುದು ಖಂಡಿತಾ ತಪ್ಪಲ್ಲ. ಆದರೆ, `ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ' ಎನ್ನುವ ಅಡಿ ಶೀರ್ಷಿಕೆಯನ್ನು ಕಲಾವಿದರು ಹಾಕಬೇಕಿತ್ತು; ಮರೆತುಬಿಟ್ಟಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ದಲಿತರು ಒಂದು ರಾಜಕೀಯ ನಿಲುವು ತೆಗೆದುಕೊಳ್ಳುವುದು ಕಷ್ಟವಾಗಿದೆ ಅಲ್ಲವೆ?
ಹೌದು, ಕಷ್ಟವಾಗಿದೆ; ಪರಿಹಾರ ಹುಡುಕಬೇಕಿದೆ.

ಎಲ್ಲ ದಲಿತ ಒಕ್ಕೂಟಗಳು ನಿಮ್ಮ ಮಾತು ಕೇಳುತ್ತವೆ; ನೀವೇಕೆ ಮುಂದೆ ನಿಂತು ಒಂದು ರಾಜಕೀಯ ಒಕ್ಕೂಟ ಕಟ್ಟಬಾರದು?
ಇಲ್ಲಪ್ಪ, ಯಾವಾಗಲೂ ನೀವು (ಕೇಳುಗರು) ನನ್ನ ಮಾತು ಕೇಳುವುದಿಲ್ಲ. ನಿಮಗೆ ಹಿತವೆನಿಸುವ ಅಭಿಪ್ರಾಯ ಸಿಕ್ಕಾಗ ಮಾತ್ರ ಕೇಳುತ್ತೀರಿ. ರಾಜಕೀಯ ಜಂಜಾಟವೇ ಬೇರೆ. ಅಲ್ಲಿ ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕು. ಹೆಚ್ಚಿನ ಚರ್ಚೆ ಬೇಡ.

ಒಂದೊಂದು ಸಂಘಟನೆಗಳು ಒಂದೊಂದು ದಾರಿ ಹಿಡಿದಿವೆ. ಹಿಂದೆ ನಿಮ್ಮ ನೇತೃತ್ವದಲ್ಲೇ ಸರ್ವೋದಯ ಪಕ್ಷ ಇತ್ತು. ಎಲ್ಲರನ್ನೂ ಅದರ ಅಡಿಯಲ್ಲಿ ಒಗ್ಗೂಡಿಸಲು ಆಗಲಿಲ್ಲವೆ?
`ನಿಮ್ಮ ಸರ್ವೋದಯ ಪಕ್ಷ ಇದೆ' ಅಂತ ಹೇಳಿದ್ದರೆ ಸಂತೋಷ ಆಗುತ್ತಿತ್ತು (ನಗು). ಇರಲಿ, ರಾಜಕೀಯದ ವಿಷಯವಾಗಿ ಹೆಚ್ಚು ಮಾತನಾಡೋದು ಬೇಡ. ಯಾವ ದಲಿತ ಸಂಘಟನೆಗಳೂ ಕೋಮವಾದಿಗಳ ತೆಕ್ಕೆಗೆ ಜಾರಿಲ್ಲ ಎನ್ನುವ ಸಮಾಧಾನ ಮಾತ್ರ ಇದ್ದೇ ಇದೆ.

ಚಳವಳಿಯ ಅಂತಿಮ ಉದ್ದೇಶ ಏನು? ಬರಿ ಹೋರಾಟವೇ, ಅಧಿಕಾರ ಹಿಡಿಯುವುದೇ?
ಚಳವಳಿಗೆ ರಾಜಕೀಯ ದೃಷ್ಟಿಕೋನ ಬೇಕೇಬೇಕು. ನಮ್ಮ ಆದ್ಯತೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದಲಿತ ಚಳವಳಿ ಸದೃಢಗೊಳಿಸಲು ಯುವಕರು ಮತ್ತು ಮಹಿಳೆಯರ ವೇದಿಕೆ ಕಟ್ಟುವ ಯೋಚನೆ ಇದೆ. ಇವು ಬಲಗೊಂಡ ಮೇಲಾದರೂ ಒಡಕಿನ ಮನೋಭಾವದ ಸಂಘಟನೆಗಳಿಗೆ ಬುದ್ಧಿ ಬರಬಹುದು. ಮೊದಲು ಒಗ್ಗಟ್ಟು ಮೂಡಬೇಕು. ಉಳಿದೆಲ್ಲ ಸಂಗತಿ ನಂತರದ್ದು.

ಕುಸುಮ ಬಾಲೆ ಕೃತಿ ಬಂದ ಬಹಳ ವರ್ಷಗಳ ಬಳಿಕ ಎದೆಗೆ ಬಿದ್ದ ಅಕ್ಷರ ಬಂದಿದೆ. ನೀವೇ ಕೈಗೆತ್ತಿಕೊಂಡಿದ್ದ ಅಲ್ಲಮ ಎಲ್ಲಿಗೆ ಬಂದ?
ಅಲ್ಲಮನಿಗೆ ಸದ್ಯ ಅಲ್ಲಯ್ಯ ಎಂಬ ಹೆಸರು ಇಡೋಣ. ಆತನನ್ನು ಅಲ್ಲೇ ನಿಲ್ಲಯ್ಯ ಎಂದು ಹೇಳಿ ಸುಮ್ಮನಿರೋಣ.

`ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ತಪ್ಪಲ್ಲ'
`ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಎತ್ತಂಗಡಿ ಮಾಡಬೇಕೇ' ಎನ್ನುವ ಪ್ರಶ್ನೆ ಸಂವಾದದಲ್ಲಿ ಕೇಳಿಬಂತು. ಅದಕ್ಕೆ ದೇವನೂರ ಮಹಾದೇವ ಅವರು ಉತ್ತರಿಸಿದ್ದು ಹೀಗೆ: `ಪ್ರತಿಮೆ ಸ್ಥಳಾಂತರದ ಉದ್ದೇಶ, ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು. ತಾಂತ್ರಿಕವಾಗಿ ನೈಜ ತೊಂದರೆ ಇದ್ದರೆ ಪ್ರತಿಮೆ ಸ್ಥಳಾಂತರಕ್ಕೆ ಸಹಕಾರ ಕೊಡಬೇಕು. ಅದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಷಯದಲ್ಲಿ ಸರ್ಕಾರದ ಜೊತೆಗೆ ವ್ಯವಹಾರ ನಡೆಸಿದ ಮುಖಂಡರು ಅದರ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲಬೇಕು'

ದೇವನೂರರ ಈ ಮಾತಿನಿಂದ ವೇದಿಕೆ ಮೇಲೆ ಬಂದ ದಲಿತ ಮುಖಂಡರು, `ಮೂರ್ತಿ ಸ್ಥಳಾಂತರಿಸದೆ ಕಾಮಗಾರಿ ನಡೆಸಬಹುದು ಎಂಬ ವರದಿಯನ್ನು ತಾಂತ್ರಿಕ ಸಮಿತಿಗಳು ನೀಡಿವೆ. ಇದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರ ಪ್ರತಿಷ್ಠೆ ಪ್ರಶ್ನೆಯಾಗಿದೆಯೇ ಹೊರತು ನಮ್ಮದಲ್ಲ. ವಿನಾಕಾರಣ ನಮ್ಮನ್ನು ಖಳನಾಯಕರಂತೆ ಚಿತ್ರಿಸುತ್ತಿದ್ದಾರೆ' ಎಂದು ದೂರಿದರು

`ದಲಿತರು ಒಗ್ಗಟ್ಟಾಗಿ ಸಮಾನತೆ ಕನಸು ಬಿತ್ತಿ'
ಪ್ರಜಾವಾಣಿ ವಾರ್ತೆ
ಬೆಂಗಳೂರು: `ಶೋಷಿತರು ಮತ್ತು ಬಡವರು ಎಲ್ಲ ಜಾತಿಗಳಲ್ಲಿಯೂ ಇರುತ್ತಾರೆ. ಈ ಜನಾಂಗದ ಅಭಿವೃದ್ಧಿಯೇ ಸಮಗ್ರ ದೇಶದ ಏಳಿಗೆ' ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ದಲಿತ ಸಂಘಟನೆಗಳ ಒಕ್ಕೂಟವು ನಗರದ ಗಾಂಧಿಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಸಮಾನತೆಯ ಕನಸು ಕಾಣುತ್ತಾ' ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ದಲಿತರ ಶಕ್ತಿಯನ್ನು ಒಗ್ಗೂಡಿಸಬೇಕಾದ ಹತ್ತು ಹಲವು ದಲಿತ ಸಂಘಟನೆಗಳು ವಿವಿಧ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಹಂಚಿ ಹೋಗಿವೆ. ಮೊದಲಿಗೆ ಈ ಸಂಘಟನೆಗಳು ಒಂದಾಗಿ ಸಮಾನತೆಯ ಕನಸನ್ನು ಬಿತ್ತಬೇಕು' ಎಂದು ಸಲಹೆ ನೀಡಿದರು.

`ಬಡತನ ಮತ್ತು ಅಸ್ಪಶ್ಯೃತೆ ದಲಿತ ಜನಾಂಗದ ಪ್ರಮುಖ ಸಮಸ್ಯೆ. ದಲಿತರಲ್ಲಿ ಶಿಕ್ಷಿತರಾಗಿರುವವರ ಪ್ರಮಾಣ ತುಂಬಾ ಕಡಿಮೆಯಿದ್ದು, ಈ ನಿಟ್ಟಿನಲ್ಲಿಯೂ ಹೆಚ್ಚಿನ ಪ್ರಯತ್ನ ಸಾಗಬೇಕು. ದೇವನೂರ ಅವರ `ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ ದಲಿತ ಜನಾಂಗದ ಸಮಸ್ಯೆ  ಹಾಗೂ ಅದಕ್ಕಿರುವ ಪರಿಹಾರವನ್ನು ಅಮೋಘವಾಗಿ ಚಿತ್ರಿಸಲಾಗಿದೆ' ಎಂದು ಹೇಳಿದರು.

`ಕಿಂಚಿತ್ತು ಕೆಟ್ಟತನವಿಲ್ಲದ, ಮುಕ್ತವಾಗಿಯೇ ಮಾತನಾಡುವ ದೇವನೂರ ಈ ಪುಸ್ತಕದ ಮೂಲಕ ಹಲವು ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಸಾಹಿತ್ಯ ಲೋಕದ ಬಹುಮುಖ್ಯ ಚೈತನ್ಯವಾಗಿ ಪುಸ್ತಕ ಹೊರಹೊಮ್ಮಿದೆ' ಎಂದು ಶ್ಲಾಘಿಸಿದರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ಹಳೆಯ ತಲೆಮಾರಿನ ಸಾಹಿತ್ಯ ಪರಂಪರೆ ಮತ್ತು ವರ್ತಮಾನದ ವಿಚಾರಗಳನ್ನು ಪರಸ್ಪರ ಹೊಂದಿಸಿಕೊಂಡು ಸಾಹಿತ್ಯ ರಚನೆಗಿಳಿಯುವುದು ಇಂದಿನ ಪ್ರಸ್ತುತತೆ. ದಲಿತರು, ಹಿಂದುಳಿದವರಿಗೆ ತಮ್ಮ ಜನಾಂಗದ ಪರಂಪರೆಯೊಂದಿಗೆ ಬೆಸೆದುಕೊಂಡು ವಿಚಾರ ರೂಪಿಸುವ ಅವಕಾಶ ಹೆಚ್ಚಿದೆ' ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವನೂರ ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ'. ತುಕರಾಂ- ನರೇಂದ್ರಕುಮಾರ್ ಸಂಪಾದಿತ ಕೃತಿ `ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ' ಬಿಡುಗಡೆ ಮಾಡಲಾಯಿತು. ವಿಮರ್ಶಕ ಡಾ.ನಟರಾಜ್ ಹುಳಿಯಾರ್, ದಲಿತ ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT