ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳುವವರು ಇಲ್ಲ; ದೇಹ ಹುಡುಕಲೂ ಮನಸ್ಸಿಲ್ಲ!

ಚಿಂದಿ ಆಯುವ ಮಕ್ಕಳು ನೀರು ಪಾಲು
Last Updated 19 ಡಿಸೆಂಬರ್ 2013, 6:22 IST
ಅಕ್ಷರ ಗಾತ್ರ

ಕೆ.ಆರ್.ನಗರ: ತುತ್ತು ಅನ್ನಕ್ಕಾಗಿ ಊರೂರು ಅಲೆಯುತ್ತಿದ್ದ ಚಿಂದಿ ಆಯುವ ಯುವಕರು ಮಂಗಳವಾರ ಮಧ್ಯಾಹ್ನ ಪಟ್ಟಣದ ಕಾಲುವೆಯಲ್ಲಿ ಶೇಖರಣೆಯಾದ ಪ್ಲಾಸ್ಟಿಕ್ ಬಾಟಲ್‌ ಎತ್ತಿಕೊಳ್ಳಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಮೃತರಾಗಿದ್ದಾರೆ. ಆದರೆ, ಅಧಿಕಾರಿಗಳ ನಿರುತ್ಸಾಹದಿಂದ ಯುವಕರ ಮೃತ ದೇಹ ಬುಧವಾರವೂ ಹೊರಗೆ ಬಾರದಿರುವುದು ನಾಗರೀಕ ಸಮಾಜ ತಲೆ ತಗ್ಗಿಸಬೇಕಾಗಿದೆ.

ಕಡೂರು ಮೂಲದ ರಮೇಶ್(35) ಮತ್ತು ತಮಿಳುನಾಡು ಮೂಲದ ಸುರೇಶ್(38) ಮೃತ ದುರ್ದೈವಿಗಳು. ಚಿಂದಿ ಆಯುವ ಈ ಯುವಕರ ಸಂಬಂಧಿಕರು ಎಂಬುವವರು ಇಲ್ಲಿ ಯಾರೂ ಇಲ್ಲ. ಇವರಿಗಾಗಿ ಇಲ್ಲಿ ಅಳುವವರು ಯಾರೂ ಇಲ್ಲ. ನಾಲೆಯಲ್ಲಿ ತ್ಯಾಜ್ಯ ವಸ್ತು ಸಾಕಷ್ಟು ಶೇಖರಣೆಯಾಗಿರುವುದರಿಂದ ಮೃತ ದೇಹಗಳು ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಇದರಿಂದ ಮೃತ ದೇಹ ಹೊರ ತೆಗೆಯಲು ಚೈನ್ ಚಕ್ರ ಹೊಂದಿರುವ ಹಿಟ್ಯಾಚಿ ಅವಶ್ಯಕತೆ ಇದೆ. ಆದರೆ, ಚೈನ್ ಚಕ್ರ ಹೊಂದಿರುವ ಹಿಟ್ಯಾಚಿಗಾಗಿ ಪೊಲೀಸರು ದಿನವೆಲ್ಲ ಕಾಯ್ದರೂ ಬರಲಿಲ್ಲ. ವಾರಸುದಾರರು ಇದ್ದಿದ್ದರೆ ಅಥವಾ ಉಳ್ಳವರ ಸಂಬಂಧಿಕರು ನೀರಿನಲ್ಲಿ ಮುಳುಗಿದ್ದರೆ ಇಷ್ಟೊತ್ತಿಗಾಗಲೇ ಶವಸಂಸ್ಕಾರ ನಡೆದು ಹೋಗಿ ಒಂದು ದಿನ ಕಳೆಯುತ್ತಿತ್ತು. ಆದರೆ, ಇಲ್ಲಿ ಹಾಗಾಗಲಿಲ್ಲ. ಮೃತ ದೇಹ ಬೇಗ ತೆಗೆಯಿರಿ ಎಂದು ಹೇಳಲು ಇಲ್ಲಿ ಯಾವುದೇ ಧ್ವನಿಯೂ ಇಲ್ಲ.

ಕಡೂರು ಮೂಲದ ರಮೇಶ್ ಮತ್ತು ತಮಿಳುನಾಡು ಮೂಲದ ಸುರೇಶ್ ಮತ್ತು ಸುರೇಶ್ ಅವರ ತಂಗಿ ಲಕ್ಷ್ಮಮ್ಮ ಈ ಮೂವರು ಈ ನಾಲೆ ಬಳಿ ಬಂದಿದ್ದಾರೆ. ಲಕ್ಷ್ಮಮ್ಮ ಅನತಿ ದೂರದಲ್ಲಿ ಬಟ್ಟೆ ತೊಳೆಯಲು ಹೋದರೆ ರಮೇಶ್ ಮತ್ತು ಸುರೇಶ್ ಪ್ಲಾಷ್ಟಿಕ್ ಬಾಟಲ್‌ಗಳನ್ನು ಆಯ್ದುಕೊಳ್ಳಲು ನಾಲೆ ಬಳಿ ಹೋಗಿದ್ದಾರೆ.

ಆದರೆ ದುರಾದೃಷ್ಟ ರಮೇಶ್ ಎಂಬುವವರು ಪ್ಲಾಸ್ಟಿಕ್ ಬಾಟಲ್ ಎತ್ತಿಕೊಳ್ಳುವಾಗ ಕಾಲು ಜಾರಿ ನಾಲೆಗೆ ಬಿದ್ದರು. ಇದನ್ನು ಗಮನಿಸಿದ ಸುರೇಶ್ ಕೂಡಲೇ ರಮೇಶನನ್ನು ಕಾಪಾಡಲು ಹರಸಾಹಸ ಮಾಡಿದರು. ಅಲ್ಲದೇ ಅನತಿ ದೂರದಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ತಂಗಿ ಲಕ್ಷ್ಮಮ್ಮ ಬಳಿ ಓಡಿ ಹೋಗಿ ಅವರ ಬಳಿ ಇದ್ದ ಸೀರೆ ತಂದು ಸುರೇಶ್ ನ ಪ್ರಾಣ ಉಳಿಸಲು ಮುಂದಾದರು.

ಆದರೆ, ಸುರೇಶ್ ಸೀರೆ ಹಿಡಿದುಕೊಳ್ಳಲು ವಿಫಲನಾಗಿ ನೀರಿನಲ್ಲಿ ಮುಳುಗಿದರು. ಸುರೇಶ್ ನೀರಿನಲ್ಲಿ ಮುಳುಗಿ ಮೃತಪಡುತ್ತಾನೆ ಎಂದು ತಿಳಿದ ರಮೇಶ್ ಕೂಡ ತಾಜ್ಯ ವಸ್ತುಗಳಿಂದ ಕೂಡಿದ ನಾಲೆಗೆ ಜಿಗಿದರು. ಆದರೆ ಇಲ್ಲಿ ರಮೇಶನು ಉಳಿಯಲಿಲ್ಲ, ಅವರನ್ನು ಬದುಕಿಸಲು ಹೋದ ಸುರೇಶನೂ ಉಳಿಯಲಿಲ್ಲ.

ಈ ಇಬ್ಬರೂ ಯುವಕರು ಮಂಗಳವಾರ ಮಧ್ಯಾಹ್ನ ನೀರನಲ್ಲಿ ಮುಳುಗುತ್ತಿರುವುದು ಕಣ್ಣಾರೆ ಕಂಡ ಲಕ್ಷ್ಮಮ್ಮ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕೂಡ ಮೃತ ದೇಹಕ್ಕಾಗಿ ಶೋಧ ಮಾಡಿದ್ದಾರೆ. ಪುರಸಭೆಗೆ ಸೇರಿದ ಹಿಟ್ಯಾಚಿ ತಂದರೂ ಸಹ ಅದರಿಂದ ಮೃತ ದೇಹ ತೆಗೆಯಲು ಸಾಧ್ಯವಾಗಲಿಲ್ಲ. ಚೈನ್ ಚಕ್ರ ಹೊಂದಿರುವ ಹಿಟ್ಯಾಚಿ ಬರುವಿಕೆಗಾಗಿ ಪೊಲೀಸರು ಇನ್ನೂ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT