ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಕಿತ್ತುಕೊಳ್ಳುವುದಕ್ಕೂ ಸಿದ್ಧರಾಗಿ

Last Updated 17 ಜುಲೈ 2012, 5:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಿಳೆಯರು ಅವಕಾಶ ಪಡೆದುಕೊಳ್ಳುವುದಲ್ಲ; ಅವಕಾಶ ಕಿತ್ತುಕೊಳ್ಳುವ ಮಟ್ಟಕ್ಕೂ ಸಿದ್ಧರಾಗಬೇಕು ಎಂದು ಕಾಂಗ್ರೆಸ್‌ನ ಎಐಸಿಸಿ ಸದಸ್ಯೆ ಮೋಟಮ್ಮ ತಿಳಿಸಿದರು.ಜಿಲ್ಲೆಯಲ್ಲಿ ಸೋಮವಾರ ರಾಜ್ಯ ಮಹಿಳಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಮಹಿಳೆಯರ ಸಮಾವೇಶಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇವತ್ತಿನ ಮಹಿಳೆಯರ ಸವಾಲುಗಳು ಬೇರೆ ಇವೆ. ಎಲ್ಲ ರಂಗದಲ್ಲಿ ಸ್ಪರ್ಧಾತ್ಮಕವಾಗಿ ಮಹಿಳೆ ಭಾಗವಹಿಸಬೇಕಿದೆ. ಆಕೆಗೆ ಬೆನ್ನುತಟ್ಟುವರು, ಅವಕಾಶ ಕೊಡುವವರು ಬೇಕು. ಅದು ಸಿಗದಿದ್ದಾಗ ಅವಕಾಶ ಕಿತ್ತುಕೊಳ್ಳುವಷ್ಟು ಸಾಮರ್ಥ್ಯವನ್ನು ಆಕೆ ಬೆಳೆಸಿಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಮಹಿಳೆಯರನ್ನು ಜಾಗೃತಿಗೊಳಿಸಲು ಜಿಲ್ಲಾಮಟ್ಟದ ಮಹಿಳಾ ಸಮಾವೇಶಗಳನ್ನು ಕಾಂಗ್ರೆಸ್ ಆಯೋಜಿಸುತ್ತಿದೆ ಎಂದರು.ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇರುವ ಮಹಿಳೆಯರು ರಾಜಕೀಯ ಪಕ್ಷಗಳಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಇಂತಹ ಸಮಾವೇಶಗಳು ಅಗತ್ಯ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಹಿಳೆಯರು ಹಾಗೂ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರ ಕಚ್ಚಾಟ, ಹುಚ್ಚಾಟ, ಕುರ್ಚಿ ಕಾಳಗದಲ್ಲಿ ಮುಳುಗಿದೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿರ್ವಹಿಸಲು ತಾವು ಸಿದ್ಧ ಎಂದರು.ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು ಮಾತನಾಡಿ, ಜಿಲ್ಲಾಮಟ್ಟದ ಮಹಿಳಾ ಸಮಾವೇಶಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳುವ ಚಿಂತನೆ ಇದ್ದು, ಈಗಾಗಲೇ ಹುಬ್ಬಳ್ಳಿಯಲ್ಲಿ ವಲಯ ಮಟ್ಟದ ಸಮಾವೇಶ ಏರ್ಪಡಿಸಲಾಗಿತ್ತು. ಪ್ರಸ್ತುತ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸಲು ಹಾಗೂ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಬಗ್ಗೆ ಸಮಾವೇಶದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಾಜಮ್ಮ, ಸಂಸತ್ ಮಾಜಿ ಸದಸ್ಯೆ ಬಿಂಬಾ ರಾಯ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಪುಪುಲ್ಲಾ ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.

ಸಮಾವೇಶ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಮಹಿಳೆಯ ಸಬಲೀಕರಣಕ್ಕಾಗಿ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲಿದೆ ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ, ಇಂದು ಬಿಜೆಪಿ ಸರ್ಕಾರ ನೀಡುತ್ತಿರುವ ಸೀರೆಗೆ ಮಹಿಳೆಯರು ಮರುಳಾಗುತ್ತಿರುವುದು ಸರಿಯಲ್ಲ ಎಂದರು.

ಕೆಲ ಮುಖಂಡರು ಹೋರಾಟ, ಸ್ಥಾನಮಾನ ಸಿಕ್ಕ ನಂತರ ಹೋರಾಟ ಹಾಗೂ ಪಕ್ಷವನ್ನು ಮರೆಯುತ್ತಿದ್ದಾರೆ. ಇದು ಸರಿಯಲ್ಲ. ಪಕ್ಷದ ತತ್ವಾದರ್ಶಗಳಿಗೆ ಬದ್ಧರಾಗಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಆದ್ಯತೆ ನೀಡಬೇಕು.
 
ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಮರೆತು ಮುನ್ನಡೆಯಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಜಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಕರ್ತರು, ಮುಖಂಡರು ಸನ್ನದ್ದರಾಗಬೇಕು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ವಿಫಲ

ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ, ಜನ ವಿರೋಧಿ ಧೋರಣೆಗಳನ್ನು ಪರಿಣಾಮಕಾರಿ ಆಗಿ ಜನತೆ ಮುಂದಿಡುವಲ್ಲಿ ಪಕ್ಷ ವಿಫಲವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಗಮನಹರಿಸಬೇಕು ಎಂದು ಹೇಳಿದರು.

ಮೋಟಮ್ಮ ಮಾತನಾಡಿ, ಮಹಿಳೆ, ಕೇವಲ ಪಂಚಾಯ್ತಿಮಟ್ಟಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಪಕ್ಷದ ಸಂಘಟನೆಯಲ್ಲೂ ಸಕ್ರಿಯವಾಗಬೇಕು. ಹೋರಾಟಕ್ಕೆ ಹೆಸರಾದ ಶಿವಮೊಗ್ಗದಿಂದ ಅದು ಆರಂಭಗೊಳ್ಳಲಿ ಎಂದರು.

ಮಹಿಳೆಯರಿಗೆ ಜಾತಿ ಇಲ್ಲ. ಮಹಿಳೆಯೇ ಒಂದು ಜಾತಿ. ರಾಜ್ಯದಲ್ಲಿ ಶೋಭಾ ಕರಂದ್ಲಾಜೆ ಒಬ್ಬಳೇ ಮಹಿಳೆ ಅಲ್ಲ; ಕುಮಾರಸ್ವಾಮಿ ಹೆಂಡತಿ ಒಬ್ಬರೇ ಶಾಸಕಿ ಅಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿದೆ ಎಂದರು. 

ಸಮಾವೇಶವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ಮಂಜುಳಾ ನಾಯ್ಡು ಉದ್ಘಾಟಿಸಿದರು.
ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಶಾಸಕ ಕಿಮ್ಮನೆ ರತ್ನಾಕರ, ಕೆಪಿಸಿಸಿ ಸದಸ್ಯ ಶಾಂತವೀರಪ್ಪಗೌಡ, ವಿಧಾನ ಪರಿಷತ್ತು ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.

ಘೋಷಣೆ-ಗದ್ದಲ
ಸಮಾವೇಶದಲ್ಲಿ ಶಿಕಾರಿಪುರದ ಕೆಲ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮುಂಭಾಗದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ. ವಲಸಿಗರಿಗೆ ಆದ್ಯತೆ ನೀಡಲಾಗುತ್ತಿದೆ. ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮೀ ಕಂಚುಗಾರ್ ಅವರಿಗೆ ಆಹ್ವಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

`ಇದು ಮಹಿಳಾ ಸಮಾವೇಶ. ಅಡ್ಡಿಪಡಿಸುವುದು ಸರಿಯಲ್ಲ~ ಎಂದು ಮೋಟಮ್ಮ ಸಮಾಧಾನಪಡಿಸಲು ಯತ್ನಿಸಿದರು. ಈ ವೇಳೆ ಕೆಲ ಸಮಯ ಮಾತಿನ ಚಕಮಕಿಯೂ ನಡೆಯಿತು. ಇದರಿಂದ ಸಮಾವೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಿಕಾರಿಪುರದ ಹಿರಿಯ ಕಾಂಗ್ರೆಸ್ ಮುಖಂಡರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಸಮಾವೇಶದಿಂದ ಹೊರಕಳುಹಿಸುವಲ್ಲಿ ಯಶಸ್ವಿಯಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT