ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಬಳಸಿಕೊಂಡ ಯುವಿ

Last Updated 7 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ತೋರಿದ ಯುವರಾಜ್ ಸಿಂಗ್ ವಿಶ್ವಕಪ್ ಕ್ರಿಕೆಟ್‌ನ ಮುಂದಿನ ಲೀಗ್ ಹಾಗೂ ನಾಕ್‌ಔಟ್ ಪಂದ್ಯಗಳಲ್ಲಿ ಪ್ರಬಲ ತಂಡಗಳ ಸವಾಲನ್ನು ಎದುರಿಸುವಲ್ಲಿ ಉತ್ತಮ ಪ್ರದರ್ಶನ ತೋರಿಸುವ ವಿಶ್ವಾಸ ಮೂಡಿಸಿದ್ದಾರೆ.ಐರ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಮಿಂಚಿದ ‘ರೋಮ್ಯಾಂಟಿಕ್’ ಬೌಲರ್ ಯುವಿ ಇಲ್ಲಿನ ಚಿನ್ನಸ್ವಾಮಿ ಅಂಗಳದಲ್ಲಿ ಭಾನುವಾರ ವಿಲಿಯಮ್ ಪೋಟರ್‌ಫೀಲ್ಡ್ ಬಳಗದ ಐದು ಪ್ರಮುಖ ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶ ಕಂಡಿದ್ದರು.

ಲೀಗ್‌ನ ಮುಂದಿನ ಪಂದ್ಯಗಳಲ್ಲಿ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ತಂಡಗಳ ಸವಾಲನ್ನು ಎದುರಿಸಬೇಕಿರುವುದರಿಂದ ಉತ್ತಮ ಪ್ರದರ್ಶನ ತೋರುವ ಮುನ್ಸೂಚನೆಯನ್ನು ಯುವರಾಜ್ ನೀಡಿದ್ದಾರೆ.ವಿಶ್ವಕಪ್‌ಗೆ ಆಟಗಾರರ ಆಯ್ಕೆಯ ಸಂದರ್ಭದಲ್ಲಿ ತಂಡಕ್ಕೆ ‘ಯುವಿ’ ಸೇರ್ಪಡೆಯಾಗುವ ಬಗ್ಗೆಯೇ ಅನುಮಾನಗಳು ಮೂಡಿದ್ದವು. ಈಗ ಅನುಮಾನಗಳೆಲ್ಲ ಬಗೆಹರಿದು, ಸಿಕ್ಕ ಅವಕಾಶವನ್ನು ಯುವರಾಜ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿಯು ಅಜೇಯ ಅರ್ಧಶತಕ ಗಳಿಸಿ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಕೂಡಾ ಪಾತ್ರರಾದರು. ಯುವಿ ಪ್ರದರ್ಶನ ನಾಯಕ ದೋನಿಗೆ ಸಂತಸ ಉಂಟು ಮಾಡಿದ್ದು, ‘ತಂಡ ಇನ್ನುಷ್ಟು ಪ್ರಬಲವಾಗಬೇಕು. ಮುಖ್ಯವಾಗಿ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಚುರುಕಾಗಬೇಕು’ ಎಂದು ಐರ್ಲೆಂಡ್ ವಿರುದ್ಧದ ಪಂದ್ಯದ ನಂತರ ದೋನಿ ಪ್ರತಿಕ್ರಿಯಿಸಿದ್ದರು.

ತಮ್ಮ ಪ್ರದರ್ಶನದಲ್ಲಿ ಗಣನೀಯ ಸುಧಾರಣೆ ಕಂಡಿದ್ದಕ್ಕೆ ಸ್ವತಃ ಉಲ್ಲಾಸದಲ್ಲಿರುವ ಯುವಿ ‘ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನನ್ನ ಪ್ರದರ್ಶನದ ಬಗ್ಗೆ ಸಂತಸವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ’ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಯುವಿ ಅರ್ಧಶತಕ ಗಳಿಸಿದ್ದರು.

ಭಾರತ-ಇಂಗ್ಲೆಂಡ್ ಹಾಗೂ ಇಂಗ್ಲೆಂಡ್-ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆಯೇ ಹರಿದಿದ್ದರಿಂದ ಮೊದಲು ಟಾಸ್ ಗೆದ್ದರೂ ಬೌಲಿಂಗ್ ಮಾಡುವ ನಿರ್ಧಾರವನ್ನು ದೋನಿ ತಗೆದುಕೊಂಡರು. ಅವರ ಲೆಕ್ಕಾಚಾರ ಫಲಿಸಿತು. ನಾಯಕನ ನಿರ್ಧಾರಕ್ಕೆ ಸಾಥ್ ನೀಡುವಂತ ಆಟವಾಡಿದ ಸಿಂಗ್ ಉತ್ತಮ ಬೌಲಿಂಗ್ ಮಾಡಿದರು. ಕೇವಲ 31 ರನ್‌ಗಳನ್ನು ನೀಡಿ ಐದು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಸಾಂದರ್ಭಿಕ ಬೌಲರ್ ಯುವರಾಜ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ರಧಾನ ಪಾತ್ರ ವಹಿಸಿದರು. ತಮ್ಮ ಸ್ಪಿನ್ ಮೋಡಿಯ ಮೂಲಕವೇ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಲೇ ಪೋರ್ಟರ್‌ಫೀಲ್ಡ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಯಿತು. ವಿಶ್ವಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಿಗೆ ಹೋಲಿಸಿದರೆ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿನ ಬೌಲಿಂಗ್ ಗುಣಮಟ್ಟದ್ದಾಗಿತ್ತು.

ಲೀಗ್ ಹಂತದಲ್ಲಿ ಭಾರತ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಪ್ರದರ್ಶನ ನಾಯಕ ದೋನಿಗೆ ಸಂತಸ ಉಂಟು ಮಾಡಿದೆ. ಭಾರತ ಇನ್ನು ಒಂದು ಪಂದ್ಯ ಗೆದ್ದರೆ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿಲಿದೆ. ಆ ಹಂತದಲ್ಲಿ ಪ್ರಬಲ ತಂಡಗಳ ಸವಾಲನ್ನು ಎದುರಿಸಬೇಕಿರುವುದರಿಂದ ತಂಡದಲ್ಲಿ ‘ಯುವಿ’ ಆಲ್‌ರೌಂಡ್ ಪ್ರದರ್ಶನ ತೋರಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಯಾವ ವಿಕೆಟ್ ಪಡೆಯದ ಯುವರಾಜ್ ತಮ್ಮ ಪೂರ್ಣ ಸಾಮರ್ಥ್ಯವನ್ನು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಳಸಿಕೊಂಡರು. ಲೀಗ್‌ನಲ್ಲಿಯೇ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಪ್ರಬಲ  ಸವಾಲನ್ನು ಎದುರಿಸಬೇಕಿರುವ ಭಾರತಕ್ಕೆ ಯುವಿ ಆಲ್‌ರೌಂಡ್ ಪ್ರದರ್ಶನ ನೆಮ್ಮದಿಯಂತೂ ಮೂಡಿಸಿದೆ.ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಹೊರತು ಪಡಿಸಿ ಉಳಿದ ಎರಡು ಪಂದ್ಯಗಳಲ್ಲಿ ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ‘ಮಹಿ’ ಪಡೆಯ ದೌರ್ಬಲ್ಯದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT