ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಜ್ಞೆಗೆ ಒಳಗಾದ ಚೌಡ್ಲು

Last Updated 12 ಸೆಪ್ಟೆಂಬರ್ 2011, 4:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಚೌಡ್ಲು ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಈಗ ಕಾಲನ ಕಾಲ್ತುಳಿತಕ್ಕೆ ಸಿಕ್ಕಿ ಅವಜ್ಞೆಗೆ ಒಳಗಾಗಿದೆ. ಒಂದು ಸಮಯದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಮೆರೆದ ಈ ಪ್ರದೇಶದಲ್ಲಿ ಈಗ ಗ್ರಾಮೀಣ ಭಾಗದ ನೀರವ ವಾತಾವರಣವಿದ್ದು, ಗತಕಾಲದ ವೈಭವದ ಕುರುಹುಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ.

ಸೋಮವಾರಪೇಟೆ ನಗರದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿ ಸಾಗಿದರೆ ಸುಂದರವಾದ ದೊಡ್ಡ ಕೆರೆಯೊಂದು ಸಿಗುತ್ತದೆ. ಇದನ್ನು ದಾಟಿ ಸ್ವಲ್ಪ ದೂರ ಕ್ರಮಿಸಿದರೆ ಕಾಡಿನಿಂದ ಆವೃತವಾದ ಚೌಡ್ಲು ಗ್ರಾಮ ಎದುರಾಗುತ್ತದೆ. ಗ್ರಾಮದ ಪಕ್ಕದಲ್ಲಿರುವ ಎತ್ತರದ ಗುಡ್ಡವನ್ನು ಏರಿ ನೋಡಿದರೆ ಸುತ್ತಲಿನ ಪ್ರಕೃತಿಯ ಸೊಬಗು ಮನಸ್ಸಿಗೆ ಮುದ ನೀಡುತ್ತದೆ. ಗುಡ್ಡದ ನೆತ್ತಿಯ ಮೇಲೆಯೇ ಬಹುದೂರ ಸಾಗಿದರೆ ತಂಪಿನ ಆಹ್ಲಾದಕರ ಅನುಭವ ಸಿಗುತ್ತದೆ. 

ಜಾನಪದ ಸುಗ್ಗಿಹಬ್ಬವನ್ನು ಆಚರಿಸುವ ಸುಪ್ರಸಿದ್ಧವಾದ ಕೇಂದ್ರ ಇದಾಗಿದ್ದು, ಎರಡು ವರ್ಷಕ್ಕೊಮ್ಮೆ ನಡೆಯುವ ಸುಗ್ಗಿಹಬ್ಬ ಈ ಭಾಗದಲ್ಲಿ ಬಹಳ ಪ್ರಸಿದ್ಧಿ. ಊರಿನ ಮುಂಭಾಗದಲ್ಲಿಯೇ ನಾಲ್ಕು ಕಂಬಗಳಿರುವ ಸುಗ್ಗಿಕಟ್ಟೆ ಎದುರಾಗುತ್ತದೆ. ಇಂತಹ ವಿನ್ಯಾಸದ  ಸುಗ್ಗಿಕಟ್ಟೆ ತಾಲ್ಲೂಕಿನಲ್ಲಿ ಮತ್ತೆಲ್ಲಿಯೂ ಕಂಡುಬರುವುದಿಲ್ಲ. ಈ ಸುಗ್ಗಿಕಟ್ಟೆಯಲ್ಲಿ ಒಂದು ಕಾಲದಲ್ಲಿ ವರ್ಷವಿಡೀ ಹಲವಾರು ಸಂದರ್ಭಗಳಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.

ಕೆರೆಯ ಪಕ್ಕದಲ್ಲಿಯೇ ಮೂಡ್ಲಯ್ಯ ಮತ್ತು ಚೌಡಯ್ಯರ ದೇವಾಲಯವಿದ್ದು, ವಿಧಿವತ್ತಾಗಿ ಪೂಜಿಸುವ ಪರಿಪಾಠವನ್ನು ಗ್ರಾಮಸ್ಥರು ಇದುವರೆಗೂ ನಡೆಸಿಕೊಂಡು ಬಂದಿದ್ದಾರೆ. ಇವು ಬಹುಶಃ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಮರಣವನ್ನಪ್ಪಿದ ವೀರಯೋಧರ ನೆನಪಿಗಾಗಿ ರಚಿಸಿದ ವೀರಗಲ್ಲುಗಳಿರಬೇಕು. 13ನೆಯ ಶತಮಾನದಲ್ಲಿ ಚೆಂಗಾಳ್ವ ವಂಶದ ಹರಿಹರ ದೇವನ ಕಾಲದ ಶಾಸನವೊಂದು ಇದರ ಸಮೀಪವೇ ಇದೆ.

ಆಸ್ತಿಪಾಸ್ತಿಗಳ ಉತ್ತರಾಧಿಕಾರದ ಪ್ರಶ್ನೆಯೊಂದರಲ್ಲಿ ಕುಂದೂರಿನಲ್ಲಿ ಗುಲಾಮಳಾಗಿದ್ದ ಸ್ತ್ರೀಯೊಬ್ಬಳು ತನ್ನ ಮಗಳು ಮತ್ತು ಮೊಮ್ಮಗಳಿಗೆ ತನ್ನ ಆಸ್ತಿಯ ಸಂಪೂರ್ಣ ಹಕ್ಕನ್ನು ಕೊಟ್ಟಿರುವ ಕುರಿತು ಒಪ್ಪಿಗೆ ನೀಡಿರುವುದಾಗಿ ಈ ಶಾಸನವು ತಿಳಿಸುತ್ತದೆ. ಈ ಶಾಸನವನ್ನು ಬರೆದವನು ಸೇನಭೋವ ಚಿನ್ನಯ್ಯ ಹಾಗೂ ಇದನ್ನು ಕೆತ್ತಿದ ಶಿಲ್ಪಿ ಮಾಲೋಜ ಎಂಬುದಾಗಿ ಅದು ಹೇಳುತ್ತದೆ.

ಇಲ್ಲಿನ ಇನ್ನೊಂದು ಶಾಸನವು 1884 ರಲ್ಲಿ ಮರಿಯಮ್ಮ ಎಂಬುವವಳು ಬಾವಿ ತೆಗೆಸುವ ಧರ್ಮಕಾರ್ಯ ಮಾಡಿರುವ ವಿಚಾರ ಹೇಳುತ್ತದೆ. ಈ ಶಾಸನವಿರುವ ದಿಬ್ಬದ ಮೇಲೆ ಹಲವಾರು ವಿವಿಧ ಶೈಲಿಯ ವೀರಗಲ್ಲು ಅಥವಾ ಕೊಲೆಗಲ್ಲುಗಳು ಇದ್ದು ಅಧ್ಯಯನಕ್ಕೆ ಅರ್ಹವಾಗಿವೆ. ಚೌಡ್ಲು ಗ್ರಾಮದ ಸಮೀಪದಲ್ಲಿರುವ ಇನ್ನೊಂದು ಪ್ರದೇಶವು ವ್ಯಾಪಾರಸ್ಥರ ಬಡಾವಣೆಯಾಗಿತ್ತೆಂದು ಶಾಸನಗಳು ತಿಳಿಸುತ್ತವೆ.

ಗ್ರಾಮದ ಮಧ್ಯಭಾಗದಲ್ಲಿ ಸಾವಿರಾರು ವರ್ಷಗಳ ಹಿಂದಿನ ಹಳೆಯ ಶೈಲಿಯ ಈಶ್ವರ ದೇವಾಲಯವಿತ್ತು. ಜೀರ್ಣಗೊಂಡಿದ್ದ ಈ ದೇವಸ್ಥಾನವನ್ನು ನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿಕೊಂಡು ನವೀಕರಿಸಿದ್ದಾರೆ. ಇದರ ಬಳಿಯಲ್ಲಿ ಸದಾ ನೀರಿರುವ ಚಿಕ್ಕ ಕೊಳವೂ ಇದೆ.

ಗತಕಾಲದ ಇತಿಹಾಸವನ್ನು ಮಡಿಲಲ್ಲಿ ಹುದುಗಿಸಿಕೊಂಡಿರುವ ಚೌಡ್ಲು ಗ್ರಾಮದಲ್ಲಿ ಅನೇಕ ಶಾಸನಗಳು ಕಾಣಸಿಗುತ್ತದೆ. ಇವುಗಳನ್ನು ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲುವ ಅವಶ್ಯಕತೆಯಿದೆ. ಪ್ರಾಕೃತಿಕ ಸೌಂದರ್ಯ ಹರಡಿರುವ ಈ ಗ್ರಾಮದಲ್ಲಿ ಅಡ್ಡಾಡುವುದೇ ಒಂದು ಸುಖಕರ ಸಂಗತಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT