ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮುಗಿದರೂ ಬಾರದ `ಕೋರ್ಸ್' ಮಾನ್ಯತೆ

Last Updated 5 ಸೆಪ್ಟೆಂಬರ್ 2013, 8:52 IST
ಅಕ್ಷರ ಗಾತ್ರ

ಹಾಸನ: ಕಾಲೇಜಿನಿಂದ ಇನ್ನೊಂದು ಬ್ಯಾಚ್‌ನ ವಿದ್ಯಾರ್ಥಿಗಳು ಕೋರ್ಸ್ ಪೂರೈಸುವ ಹಂತದಲ್ಲಿದ್ದರೂ ಇನ್ನೂ ಮಾನ್ಯತೆ ಲಭಿಸದಿರುವುದನ್ನು ಖಂಡಿಸಿ ಇಲ್ಲಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಬುಧವಾರ ಬೆಳಿಗ್ಗೆ ಕಾಲೇಜಿನ ಪ್ರವೇಶದ್ವಾರದಲ್ಲೇ ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿಗಳು ಡೀನ್ ಸೇರಿದಂತೆ ಯಾವ ಸಿಬ್ಬಂದಿಯನ್ನೂ ಕಾಲೇಜಿನೊಳಗೆ ಹೋಗಲು ಬಿಡಲಿಲ್ಲ.

ಕಾಲೇಜಿನಲ್ಲಿ ಬುಧವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಿಂದಾಗಿ ಈ ಕಾರ್ಯಕ್ರಮಕ್ಕೂ ಅಡಚಣೆಯಾಗಿದೆ.

ಕಾಲೇಜಿನಲ್ಲೆಗ 180 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ 31 ಮಂದಿ ಪದವಿ ಮುಗಿಸಿ ಹೋಗಿದ್ದರೂ ಅವರಿಗೆ ಕೆ.ವಿ.ಸಿ. ನೋಂದಣಿ ಆಗದಿರುವುದರಿಂದ ಅವರು ಪಶು ಚಿಕಿತ್ಸೆ ಮಾಡುವಂತಿಲ್ಲ. ಮಾತ್ರವಲ್ಲದೆ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಂತೆಯೂ ಇಲ್ಲ. ಎರಡನೇ ಬ್ಯಾಚ್ ವಿದ್ಯಾರ್ಥಿಗಳ ಅಧ್ಯಯನ ಇನ್ನು ಮೂರು ತಿಂಗಳಲ್ಲಿ ಮುಗಿದು ನಂತರ ಇಂಟರ್ನ್‌ಶಿಪ್‌ಗೆ ತೆರಳಲಿದ್ದಾರೆ.

ಒಟ್ಟಾರೆ 8-9 ತಿಂಗಳಲ್ಲಿ ಈ ಬ್ಯಾಚ್‌ನವರೂ ಪದವಿ ಮುಗಿಸಿ ಆಚೆ ಬರಲಿದ್ದಾರೆ. ಅವರ ಮತ್ತು ಕಾಲೇಜಿನ ಇತರ ಎಲ್ಲ ವಿದ್ಯಾರ್ಥಿಗಳಸ್ಥಿತಿ ಡೋಲಾಯಮಾನವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಡೀನ್ ನರಸಿಂಹಮೂರ್ತಿ ಅವರು ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಫಲಿಸಲಿಲ್ಲ. ಕಾಲೇಜಿನೊಳಗೆ ಹೋಗಬೇಕಾದರೆ ನಮ್ಮನ್ನು ತುಳಿದುಕೊಂಡೇ ಹೋಗಿ ಎಂದು ವಿದ್ಯಾರ್ಥಿಗಳು ಬಾಗಿಲಲ್ಲೇ ಮಲಗಿದರು.

ಒಂದು ದಿನದಲ್ಲಿ ಪ್ರತಿಭಟನೆ ಮುಗಿಸುವುದಿಲ್ಲ ಎಂದಿರುವ ವಿದ್ಯಾರ್ಥಿಗಳು, ಬುಧವಾರ ಮತ್ತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಮಾಡಿ ಪ್ರತಿಭಟನೆ ಮುಂದುವರಿಸಲು ಅನುಮತಿ ಕೇಳಿದ್ದಾರೆ. ಅಹೋರಾತ್ರಿ ಕಾಲೇಜಿನ ಆವರಣದಲ್ಲೇ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಪ್ರಯತ್ನ ನಡೆಯುತ್ತಿದೆ: `ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ, ಅವರ ಆತಂಕ ಅರ್ಥವಾಗುತ್ತದೆ. ಅದರ ನಿವಾರಣೆಗೆ ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಈಗಿಂದೀಗಲೇ ಎಲ್ಲ ಆಗಬೇಕೆಂದರೆ ಹೇಗೆ ? ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ನಿನ್ನೆ ಒಪ್ಪಿದ್ದ ವಿದ್ಯಾರ್ಥಿಗಳು ಇಂದು ನಮಗೆ ಕಾಲೇಜಿಕೊಳಗೆ ಪ್ರವೇಶಸಲೂ ಬಿಡುತ್ತಿಲ್ಲ, ನಾವು ಕೆಲಸ ಮಾಡಬೇಡವೇ ? ವಿದ್ಯಾರ್ಥಿಗಳು ನಮ್ಮ ಕಷ್ಟವನ್ನೂ ಅರ್ಥ ಮಾಡಿಕೊಳ್ಳಬೇಕು' ಎಂದು ಡೀನ್ ನರಸಿಂಹಮೂರ್ತಿ ಮಾಧ್ಯಮದವರ ಮುಂದೆ ಹೇಳಿಕೊಂಡರು.

ಕಣ್ಣೀರಿಟ್ಟ ವಿದ್ಯಾರ್ಥಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಗದರಿಸಿ, ಬೆದರಿಸಿ ಒಳಗೆ ಹೋಗಲು ಡೀನ್ ಪ್ರಯತ್ನಿಸುತ್ತ್ದ್ದಿದಾಗ ಕೆಲವು ವಿದ್ಯಾರ್ಥಿಗಳ ದುಃಖದ ಕಟ್ಟೆಯೊಡೆಯಿತು.

`ನಿಮಗೆ ತರಬೇತಿ ಕಾರ್ಯಕ್ರಮವೇ ಮುಖ್ಯವಾಗಿದ್ದರೆ ನಮ್ಮ ಎದೆ ಮೇಲೆ ಕಾಲಿಟ್ಟುಕೊಂಡು ಒಳಗಡೆ ಹೋಗಿ. ಮನೆಯವರು ಸಾಲ-ಸಲ ಮಾಡಿ ನಮಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಕೋರ್ಸ್‌ಗೆ ಮಾನ್ಯತೆ ಲಭಿಸದಿದ್ದರೆ ನಾವು ಬದುಕೋದು ಹೇಗೆ ? ಎಂದು ಗದ್ಗದಿತರಾಗಿ ನುಡಿದರು. ಕೆಲವು ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಅಲ್ಲಿಗೆ ಡೀನ್ ವಿದ್ಯಾರ್ಥಿಗಳನ್ನು ಗದರಿಸುವ ಪ್ರಯತ್ನವನ್ನೂ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT