ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನತಿ ದೇಸಿ ಗೋ ತಳಿಗಳ ರಕ್ಷಣೆಗೆ ಕರೆ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಭಾರತದಲ್ಲಿ ಅಪರೂಪವಾಗಿರುವ ದೇಸೀ ಗೋ ತಳಿಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು~ ಎಂದು ಪಂಜಾಬ್‌ನ ಮೋಹನ ಪುರಿ ಸ್ವಾಮೀಜಿ ಕರೆ ನೀಡಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ಆಯೋಜಿಸಿದ್ದ `ಗೋ ಕಥಾ~ ಗೋ ಜಾಗೃತಿ ಅಭಿಯಾನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಭಾರತದಲ್ಲಿನ ದೇಸೀ ಗೋವುಗಳ ಉತ್ಪನ್ನಗಳಿಂದ ಅನೇಕ ರೋಗಗಳು ಗುಣವಾಗುವುದು ವೈಜ್ಞಾನಿಕವಾಗಿ ನಿರೂಪಿತವಾಗಿದೆ.
 
ಹೀಗಾಗಿ ಅವನತಿಯ ಅಂಚಿನಲ್ಲಿರುವ ದೇಸೀ ಗೋ ತಳಿಗಳ ಸಂರಕ್ಷಣೆಗೆ ಜಾತಿ, ಧರ್ಮಗಳ ಭೇದ ಮರೆತು  ಎಲ್ಲರೂ ಒಂದಾಗಬೇಕು~ ಎಂದು ಅವರು ನುಡಿದರು.

`ಗೋವುಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಸಮಾನವಾದ ಪೂಜ್ಯಭಾವದಿಂದ ನೋಡಲಾಗುತ್ತದೆ. ಆದರೆ ಇದೇ ನೆಲದಲ್ಲಿಯೇ ಗೋ ಮಾಂಸದ ಭಕ್ಷಣೆಯೂ ನಡೆಯುತ್ತಿದೆ. ಇದು ಹಂತ ಹಂತವಾಗಿ ತಪ್ಪಲು ಗೋವುಗಳ ಬಗ್ಗೆ ಜನರು ಪೂಜನೀಯ ಭಾವವನ್ನು ಬೆಳೆಸಿಕೊಳ್ಳಬೇಕು.
 
ಡೆನ್ಮಾರ್ಕ್ ಹಾಗೂ ಅಮೆರಿಕಗಳಲ್ಲಿ ಹಾಲಿನ ಅತಿ ಹೆಚ್ಚು ಉತ್ಪಾದನೆಯಾಗುತ್ತದೆ. ಆದರೆ ವಿದೇಶಿ ತಳಿಗಳ ಹಾಲಿನಿಂದ ಕ್ಯಾನ್ಸರ್ ಸೇರಿದಂತೆ ಇನ್ನಿತರ ರೋಗಗಳು ಹರಡುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಭಾರತದ ದೇಸೀಯ ಜಾನುವಾರುಗಳ ಸಂರಕ್ಷಣೆ ಅನಿವಾರ್ಯ~ ಎಂದರು.

`ಭಾರತದ ಗೋ ಉತ್ಪನ್ನಗಳ ಔಷಧೀಯ ಗುಣಗಳ ಬಗ್ಗೆ ವಿದೇಶೀಯರು ಈಗ ಹೆಚ್ಚು ಕೌತುಕ ಹೊಂದಿದ್ದಾರೆ. ಆದರೆ ನಮ್ಮಲ್ಲಿಯೇ ನಮ್ಮ ದೇಸೀ ಗೋ ತಳಿಗಳ ಬಗ್ಗೆ ಜಾಗೃತಿ ಇಲ್ಲವಾಗಿದೆ. ಭಾರತದ ಗ್ರಾಮೀಣ ಭಾಗದ ಜನರೂ ಸೇರಿದಂತೆ ಎಲ್ಲರೂ ದೇಸೀ ಗೋ ತಳಿಗಳ ಮಹತ್ವ ತಿಳಿದು, ಅದರ ಜಾಗೃತಿ ಹರಡುವ ಕೆಲಸ ಮಾಡಬೇಕು~ ಎಂದರು.

`ಇಂದಿನ ಯುವ ಜನರು ಯೋಗದಿಂದ ವಿಮುಖರಾಗುತ್ತಿದ್ದಾರೆ. ಆದರೆ ಯೋಗದ ಮೂಲಕ ಅನೇಕ ರೋಗಗಳ ನಿವಾರಣೆ ಸಾಧ್ಯವಾಗಲಿದೆ ಎಂಬ ಅಂಶವನ್ನು ಯುವಜನರು ಅರಿಯಬೇಕು. ಜೀವನದಲ್ಲಿ ಉಲ್ಲಸಿತರಾಗಿರಲು ಯೋಗದ ಮೊರೆ ಹೋಗಲೇಬೇಕು~ ಎಂದು ಅವರು ಅಭಿಪ್ರಾಯ ಪಟ್ಟರು.

`ಗೋ ಕಥಾ~ ಅಭಿಯಾನದ ಅಂಗವಾಗಿ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ನಗರ್ತಪೇಟೆಯ ಧರ್ಮರಾಯನ ದೇವಾಲಯದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೂ ಶೋಭಾಯಾತ್ರೆ ಹಮ್ಮಿಕೊಂಡಿತ್ತು. ಐದು ದಿನಗಳ ಕಾಲ ನಡೆಯುವ ಅಭಿಯಾನದಲ್ಲಿ ಯೋಗ, ಪ್ರವಚನ ಹಾಗೂ ಸಂಕೀರ್ತನೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT