ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರವರ ಮೂಗಿನ ನೇರಕ್ಕೆ...

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಿವಪ್ರಕಾಶರು ಮೊದಲ ಬಾರಿಗೆ (ಕನ್ನಡ ಚಿಂತನ ವಲಯದ ಮಟ್ಟಿಗೆ) ಬಾಲಗಂಗಾಧರರ ಸಂಶೋಧನಾ ವಿಚಾರಗಳ ಕುರಿತು ಬೌದ್ದಿಕ ಚರ್ಚೆಯ ಪ್ರಸ್ತುತತೆಯನ್ನು ಒತ್ತಿ ಹೇಳಿದ್ದಾರೆ. ಅವರ ಲೇಖನದಲ್ಲಿ ಡಂಕಿನ್‌ರ ವಾದಕ್ಕೆ ಸಂಬಂಧಿಸಿದಂತೆ ಅವರು ಮಾಡಿರುವ ಕೆಲವು ಟೀಕೆಗಳಿಗೆ ಇದು ನನ್ನ ಪ್ರತಿಕ್ರಿಯೆ.

ಮೊದಲನೆಯದಾಗಿ ಡಂಕಿನ್‌ರ ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳವಳಿ ಎಂಬ ಕಥೆಯನ್ನು `ವೀರಶೈವರು ತಮ್ಮ ಮೇಲು ಚಲನೆಗಾಗಿ' ಹರಡಿದರು ಎನ್ನುವ ವಾದವಿಲ್ಲ. ಯಾವುದೇ ಒಂದು ವಾದಕ್ಕೆ ಒಂದು ಸಮುದಾಯ/ಗುಂಪಿನ ಒಂದು ನಿರ್ದಿಷ್ಟ ಉದ್ದೇಶದಿಂದ ಆ ವಾದ ಹುಟ್ಟಿದೆ ಎಂದು ಆರೋಪಿಸುವುದನ್ನು ಮೂಲತಃ ಇವರು ಒಪ್ಪುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ವಸಾಹತುಶಾಹಿಗಳು ತಮ್ಮ `ಶ್ರೇಷ್ಠತೆ'ಗಾಗಿ ಅಥವಾ `ಅಧಿಕಾರ'ದ ಹೇರಿಕೆಗಾಗಿ ವಸಾಹತು ಜ್ಞಾನ ಸೃಷ್ಟಿಸಿದರು ಎನ್ನುವ ವಾದವನ್ನು ಬಾಲುರವರು ತಿರಸ್ಕರಿಸುತ್ತಾರೆ. ಈ ರೀತಿಯ ಕಥೆ ಹರಡಿದವರಿಗೆ ವೀರಶೈವರ ಮೇಲುಚಲನೆಯ ಉದ್ದೇಶವಿತ್ತೆಂದು ಹೇಳುವ ವಾದ ಖಂಡಿತ ಡಂಕಿನ್ ರದ್ದು ಅಲ್ಲವೇ ಅಲ್ಲ.

ಇನ್ನು ಕೆಲವು ಜಾತಿಗಳಿಗೆ ಸೇರಿದವರನ್ನು ಅವರ ಜಾತಿ ಸೂಚಕಗಳನ್ನೇ ಬಳಸಿ ತೆಗಳುವುದಕ್ಕೂ ಆ ರೀತಿಯ ಜಾತಿಗಳೇ (ಜಾತಿಗಳು ಎಂಬ ಸಾಮಾಜಿಕ ರಚನೆಗಳೇ) ಇರಕೂಡದು ಎನ್ನುವುದಕ್ಕೂ ವ್ಯತ್ಯಾಸವಿದೆ. ಈ ವಾದವನ್ನು ಡಂಕಿನ್ ಚೆನ್ನಾಗಿಯೇ ಬೆಳೆಸುತ್ತಾರೆ. ಆದರೆ ಅದನ್ನು ಶಿವಪ್ರಕಾಶರು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಈ ಲೇಖನದಲ್ಲೇ ಶಿವಪ್ರಕಾಶರು ಉಲ್ಲೇಖಿಸುವ ಚನ್ನಯ್ಯನ ವಚನದಲ್ಲಿ `ಕುಲಜ' ಮತ್ತು `ಹೊಲೆ' ಎನ್ನುವುದು ಗುಣದ ಮೇಲಿದೆ ಎನ್ನುವಾಗ ಒಳ್ಳೆಯ ಕುಲದವರೆನ್ನಬೇಕಿದ್ದರೆ ಅವರು ನಡೆ-ನುಡಿಯಲ್ಲಿ ಒಳ್ಳೆಯವರಾಗಿರಬೇಕೆಂದಷ್ಟೇ ತಾನೇ ಅರ್ಥ. ಜಾತಿಗಳೆಲ್ಲಾ ತೊಲಗಬೇಕು ಎಲ್ಲಾ ಮಾನವರೂ ಸರಿ ಸಮಾನರು ಎನ್ನುವ ಈ  ವಚನದ ಮೇಲಿನ ಅವರ ತೀರ್ಮಾನದ `ಸಾಮಾಜಿಕ ಸಮಾನತೆ'ಯ ಅರ್ಥ ಈ ವಚನದ ಯಾವ ಸಾಲಿನಿಂದ ಹೊರಡುತ್ತದೆ? ಇಷ್ಟಕ್ಕೂ ಒಳ್ಳೆಯವನಾರು ಕೆಟ್ಟವನಾರು ಎಂಬ ರೀತಿಯ ಸಾಲುಗಳು ವಚನಗಳಲ್ಲಿ ಮಾತ್ರವೇ ಇರುವುದೇ? ಈ ರೀತಿಯ ಸಾಲುಗಳನ್ನು ಬಹುತೇಕ ಗ್ರಂಥಗಳಲ್ಲಿ ಕಾಣಬಹುದು (ವೈದಿಕ ಎಂದು ತೆಗಳುವ ಗ್ರಂಥಗಳಲ್ಲೂ ಸಹ)!!

ಇನ್ನು ವಚನಗಳ ಸಂಖ್ಯೆಯನ್ನಿಟ್ಟುಕೊಂಡು ಮಾಡಿರುವ ವಿಮರ್ಶೆಯ ಬಗ್ಗೆ ಹೇಳುವುದಾದರೆ; ಒಬ್ಬ ವ್ಯಕ್ತಿ ನೂರೆಂಟು ವಿಚಾರದ ಬಗ್ಗೆ ಯೋಚಿಸಿರಬಹುದು. ಆದರೆ ಇಂತದ್ದು ಬೇಕು ಇಂತದ್ದು ಬೇಡ ಎಂದು ಆ ವ್ಯಕ್ತಿ ಹೇಳಿದ್ದಾರೆ ಎಂದು ಮೂರನೆಯ ವ್ಯಕ್ತಿ ಹೇಳಬೇಕಿದ್ದರೆ, ಆತ ಅದನ್ನು ಹೇಳಿರಲೇ ಬೇಕು; ಮತ್ತು ಅದಕ್ಕೆ ಆಧಾರ ನೀಡಲೇ ಬೇಕು. ಇಲ್ಲವೆಂದರೆ ಮೂರನೆಯ ವ್ಯಕ್ತಿಯ ಪ್ರತಿಪಾದನೆ ಊಹೆಯಾಗುತ್ತದೆ ಅಷ್ಟೆ ಹೊರತು ನಿಜವಾಗುವುದಿಲ್ಲ. ವಚನಗಳು ಜಾತಿ ಮತ್ತು ಜಾತಿವ್ಯವಸ್ಥೆ ವಿರೋಧಿ ಎಂದು ಇಂದು ವಿದ್ವಾಂಸರು ತೀರ್ಮಾನಿಸಬೇಕಿದ್ದರೆ ವಚನಕಾರರು ಆ ರೀತಿ ಹೇಳಿರುವ ವಚನಗಳ ಆಧಾರ ನೀಡಲೇ ಬೇಕಲ್ಲವೇ? ಇಷ್ಟಕ್ಕೂ ಡಂಕಿನ್ ಇಲ್ಲಿ ಸಂಖ್ಯೆಗಳ ಉಲ್ಲೇಖ ಮಾಡುವ ಮೂಲ ಕಾರಣ ಅತಿ ಹೆಚ್ಚಿನ ವಚನಗಳು ಯಾವ ವಿಚಾರಗಳ ಕುರಿತು ಮಾತನಾಡುತ್ತವೆ ಅದರ ಮಹತ್ವ ಏನು ಎನ್ನುವುದರ ಕುರಿತು ಯಾವ ವಿದ್ವಾಂಸರೂ ತಲೆ ಕೆಡಿಸಿಕೊಳ್ಳದೆ ತಮ್ಮ ಜಾತಿ ವ್ಯವಸ್ಥೆ ವಿರೋಧಿ ಐಡಿಯಾಲಜಿಗೆ ಪೂರಕವಾಗುವ (ನೇರವಾಗಿ ಅಲ್ಲದಿದ್ದರೂ) ಕೆಲವೇ ವಚನಗಳನ್ನು ಇಟ್ಟು ಕೊಂಡು ಇಡೀ ವಚನ ಚಳವಳಿ ಜಾತಿವಿರೋಧಿ ಎನ್ನುವ ತೀರ್ಮಾನ ಎಷ್ಟು ಸರಿ ಎನ್ನುವ ಕಾರಣಕ್ಕೆ. ಅಂದರೆ ವಚನಗಳು ಯಾವುದರ ಕುರಿತದ್ದು ಎನ್ನುವ ತೀರ್ಮಾನ ಬೆರಳೆಣಿಕೆಯ ವಚನಗಳ ಮೇಲೆ ನಿರ್ಣಯವಾಗಬೇಕೋ ಅಥವಾ ಅತಿಹೆಚ್ಚಿನ ವಚನಗಳ ಪ್ರಸ್ತಾಪಿಸುವ (ಆಧ್ಯಾತ್ಮ ಸಾಧನೆಯ) ವಿಚಾರಗಳ ಮೇಲೆ ನಿರ್ಣಯವಾಗಬೇಕೋ?
-ಡಾ.ಎ.ಷಣ್ಮುಖ
ಉಪನಿರ್ದೇಶಕರು, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುವೆಂಪು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT