ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಗೊಂದು, ನಮಗೊಂದು ನಿಯಮ ಏಕೆ?

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಈ ವಾರ ಪ್ರವಾಸದ ನಿಮಿತ್ತ ಬಿಜಾಪುರ, ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳಿಗೆ ಭೇಟಿ ಕೊಟ್ಟಿದ್ದೆ. ಪ್ರತಿ ಆಕರ್ಷಣೀಯ ಸ್ಥಳದಲ್ಲೂ ಟಿಕೇಟಿನ ದರವು `ಭಾರತೀಯರಿಗೆ ಐದು ರೂಪಾಯಿಗಳು ಮತ್ತು ವಿದೇಶಿಗರಿಗೆ ನೂರು ರೂಪಾಯಿಗಳು' ಎಂದಿದೆ. ಪಟ್ಟದಕಲ್ಲಿನಲ್ಲಿ ಒಬ್ಬ ವಿದೇಶಿ ಪ್ರವಾಸಿಗನಿಗೆ ಇದು  ಇರುಸುಮುರಿಸನ್ನೇ ತಂದಿತು.

ಅಲ್ಲಿ ಯಾರೂ ಈ ವ್ಯತ್ಯಾಸಕ್ಕೆ ಸೂಕ್ತ ಕಾರಣವನ್ನು ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಟಿಕೇಟು ಕೊಳ್ಳುವವರ ಗುರುತಿನ ತಪಾಸಣೆ ಮಾಡುವುದಿಲ್ಲವಾಗಿ ಯಾರು ದೇಶೀಯರು ಮತ್ತು ಯಾರು ವಿದೇಶೀಯರು ಎನ್ನುವುದನ್ನು ಟಿಕೇಟು ಕೌಂಟರಿನ ಕೆಲಸಗಾರ ಟಿಕೇಟು ಕೊಳ್ಳಲು ಬಂದ ವ್ಯಕ್ತಿಯ ಚರ್ಮದ ಬಣ್ಣದ ಮೇಲೆ ನಿರ್ಧರಿಸುತ್ತಾನೆ.

ಹಾಗಾಗಿ, ಚರ್ಮದ ಮತ್ತು ತಲೆಗೂದಲಿನ ಬಣ್ಣದಲ್ಲಿ ನಮ್ಮಂತೆಯೇ ಇರುವ ವಿದೇಶಿಗರು ತಾವು ಹೊರದೇಶದವರೆಂದು ಸಾರಿಕೊಳ್ಳದೆ ನಾವು ಕೊಡುವಷ್ಟೇ ದರವನ್ನು ಟಿಕೇಟಿಗೆ ಕೊಡಬಹುದಾದರೆ ನಮಗಿಂತ ದೈಹಿಕವಾಗಿ ಭಿನ್ನವಾಗಿರುವ ಹೊರದೇಶದ ಜನರು ನಾವು ಕೊಡುವ ಟಿಕೇಟಿನ ಬೆಲೆಯ ಇಪ್ಪತ್ತರಷ್ಟನ್ನು ಕೊಡಬೇಕಾಗುತ್ತದೆ. ಇದು ಒಂದು ಬಗೆಯ ವರ್ಣಭೇದ ನೀತಿ.

ಈ ತರಹ ಆಕರ್ಷಣೀಯ ಪ್ರದೇಶದ ಟಿಕೇಟಿನ ಬೆಲೆಯನ್ನು ದೇಶೀಯರು ಮತ್ತು ವಿದೇಶಿಯರು ಎಂದು ಬೇರ್ಪಡಿಸುವುದೇ ಪ್ರಬುದ್ಧ ನಾಗರಿಕತೆಗೆ ಕಪ್ಪುಚುಕ್ಕಿಯಾಗಿದೆ.

ಪ್ರವಾಸೋದ್ಯಮವನ್ನು ಬೆಳೆಸಬೇಕೆಂಬ ಇಚ್ಛೆಯು ಸರಕಾರಗಳಿಗಿದ್ದಲ್ಲಿ ಪ್ರವಾಸೀ ಕ್ಷೇತ್ರಗಳ ಮೂಲ ಸೌಕರ್ಯವನ್ನು ಉತ್ತಮಪಡಿಸಿ, ಕ್ಷೇತ್ರದ ಇತಿಹಾಸ ಮತ್ತು ಸಂಸೃತಿಗಳನ್ನು ಪರಿಚಯಿಸುವಂತಹ ಕಾರ್ಯಗಳನ್ನು ಕೈಗೊಂಡು ಪ್ರವಾಸಿಗರನ್ನು  ಆಕರ್ಷಿಸಿ ಆ ಮೂಲಕ ಹೆಚ್ಚಿನ ಗಳಿಕೆಯನ್ನು ಪಡೆಯಬೇಕೇ ಹೊರತು ವಿದೇಶೀ ಪ್ರವಾಸಿಗರಿಗೆ ಭಾರತೀಯ ಪ್ರವಾಸಿಗರಿಗಿಂತ ವಿಪರೀತ ಹೆಚ್ಚಿನ ಬೆಲೆಯಲ್ಲಿ ಟಿಕೇಟು ಮಾರಿಯಲ್ಲ.

ಈ ಭೇದ ನೀತಿಯು ಪ್ರವಾಸಿಗರನ್ನು ಅಸಂತುಷ್ಟಗೊಳಿಸುತ್ತದೆಯೇ ಹೊರತು ಪ್ರವಾಸೋದ್ಯಮಕ್ಕೆ ಏನೂ ಉಪಕಾರ ಮಾಡುವಂತದ್ದಲ್ಲ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಂತಹ ಸಂಸ್ಥೆಯನ್ನು ಸ್ಥಾಪಿಸಿ ಬಾದಾಮಿ, ಐಹೊಳೆ, ಪಟ್ಟದಕಲ್ಲಿನಂತಹ ಇತಿಹಾಸ ಪ್ರಮುಖ ಕ್ಷೇತ್ರಗಳ ಭೂಶೋಧನೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರಲ್ಲಿ ಬ್ರಿಟಿಷರನ್ನೂ ಸೇರಿಸಿ ದೊಡ್ಡ ಸಂಖ್ಯೆಯಲ್ಲಿ ವಿದೇಶೀಯರು ಇದ್ದರು ಎನ್ನುವುದನ್ನು ನೆನಪಿಸಿಕೊಂಡರೆ ಟಿಕೇಟಿನ ದರದಲ್ಲಿ ನಾವು ಎಣಿಸುತ್ತಿರುವ ಭೇದವು ನಮ್ಮ ಸಂಸ್ಕೃತಿಗೆ ತಕ್ಕದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT