ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರು ಘನತೆವೆತ್ತ ಅಂದ್ರು; ಇವರು ಕಾಲಿಗೆರಗಲು ಹೋದ್ರು!

Last Updated 25 ಸೆಪ್ಟೆಂಬರ್ 2013, 6:58 IST
ಅಕ್ಷರ ಗಾತ್ರ

ವಿಜಾಪುರ: ರಾಷ್ಟ್ರಪತಿಗಳು ಬೇಡ ಎಂದು ಹೇಳಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಘನತೆ ವೆತ್ತ’ ಎಂದು  ಕರೆದರು. ನಮ್ಮ ಸಂಸದರು ರಾಷ್ಟ್ರಪತಿಗಳ ಕಾಲಿಗೆರಗಲು ಹೋದರು!

ಭದ್ರತೆಯ ಕಿರಿಕಿರಿಯಿಂದಾಗಿ ಅತಿ ಗಣ್ಯರ ಆಸನಗಳು ಖಾಲಿಯಾಗಿಯೇ ಉಳಿದಿದ್ದವು. ಜಿಲ್ಲೆಯ ಬಹುತೇಕ ಶಾಸಕರು ಬರಲೇ ಇಲ್ಲ. ವಿಜಾಪುರ ನಗರದಲ್ಲಿ ಹಿಂದೆಂದೂ ಕಂಡರಿಯದಷ್ಟು ಭದ್ರತೆ. ಅಚ್ಚುಕಟ್ಟಾದ ಸಮಯ ಪಾಲನೆ. ಸೈನಿಕ ಶಾಲೆಯ ಮಕ್ಕಳಲ್ಲಿ ಪುಳಕ. ಶಿಕ್ಷಕರಿಗೆ ಸಾಧನೆಯ ಸಂಭ್ರಮ.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪಾಲ್ಗೊಂಡಿದ್ದ ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕಂಡು ಬಂದು ಘಟನಾವಳಿಗಳಿವು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸರಳತೆಗೆ ಹೆಸರುವಾಸಿ. ತಮ್ಮ ಹೆಸರು ಕರೆಯುವಾಗ ‘ಘನತೆ ವೆತ್ತ (ಹೀಜ್‌ ಎಕ್ಸಲೆನ್ಸಿ)’ ವಿಶೇಷಣ ಬಳಸುವುದು ಬೇಡ ಎಂದು ಹೇಳಿದ್ದಾರೆ. ಅದನ್ನು ಎಲ್ಲರೂ ಪಾಲನೆ ಮಾಡುತ್ತಿದ್ದಾರೆ ಕೂಡ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣ ಆರಂಭಕ್ಕೆ ಈ ವಿಶೇಷಣ ಬಳಸಿದಾಗ ರಾಷ್ಟ್ರಪತಿಗಳು ತಲೆ ಎತ್ತಿ ಒಂದು ಕ್ಷಣ ಅವರತ್ತ ನೋಡಿದರು. ಆದರೆ, ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಮಾತ್ರ ‘ಗೌರವಾನ್ವಿತ’ ಎಂದಷ್ಟೇ ಸಂಬೋಧಿಸಿದರು.

ಸಮಾರಂಭದ ನಂತರ ವೇದಿಕೆಯಿಂದ ರಾಷ್ಟ್ರಪತಿಗಳು ನಿರ್ಗಮಿಸುತ್ತಿದ್ದಾಗ ವೇದಿಕೆಯಲ್ಲಿಯೇ ಇದ್ದ ಸಂಸದ ರಮೇಶ ಜಿಗಜಿಣಗಿ ಅವರು, ಅವರ ಕಾಲಿಗೆರಗಲು ಹೋದರು. ಬಾಗಿ ರಾಷ್ಟ್ರಪತಿಗಳ ಮೊಣಕಾಲು ಮುಟ್ಟಿ ನಮಸ್ಕರಿಸಲು ಯತ್ನಿಸಿದರು. ಆದರೆ, ರಾಷ್ಟ್ರಪತಿಗಳು ಅದಕ್ಕೆ ಅವಕಾಶ ನೀಡದ ಅವರ ಮೈತಟ್ಟಿ ಮುನ್ನಡೆದರು.

ಬೆಳಿಗ್ಗೆ 11.55ಕ್ಕೆ ನಿಗದಿತ ಸಮಯಕ್ಕೆ ರಾಷ್ಟ್ರಪತಿ­ಗಳು ಆಗಮಿಸಿದರು. 80 ನಿಮಿಷದ ಕಾರ್ಯಕ್ರಮದಲ್ಲಿ ಐದು ನಿಮಿಷದ ವ್ಯತ್ಯಾಸ ಮಾತ್ರ ಆಯಿತು. ರಾಷ್ಟ್ರಪತಿಗಳು 15 ನಿಮಿಷ ಮಾತನಾಡಿದರು. ಮುಖ್ಯಮಂತ್ರಿಗಳು ಮಾತ್ರ ಸಿದ್ಧ ಭಾಷಣ ಓದಿದರು.

ಕೋಟೆ: ಸಮಾರಂಭ ನಡೆದ ಸೈನಿಕ ಶಾಲೆಯಲ್ಲಿ  ದೊಡ್ಡ ಕೋಟೆಯಂತೆ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಸೈನಿಕ ಶಾಲೆ ಎದುರಿನ ಅಥಣಿ ರಸ್ತೆಯನ್ನು ಬಂದ್‌ ಮಾಡಲಾಗಿತ್ತು. ಮೊಬೈಲ್‌ ಫೋನ್‌, ಬ್ಯಾಗ್‌, ಪೆನ್‌, ಪುಸ್ತಕ–ದಿನ ಪತ್ರಿಕೆಗಳು, ಸಿಗಾರೇಟ್‌, ಲೈಟರ್‌, ಬೆಂಕಿ ಪೊಟ್ಟಣ ಮತ್ತಿತರ ವಸ್ತುಗಳನ್ನು ನಿಷೇಧಿಸಲಾಗಿತ್ತು. ಇವುಗಳನ್ನು ಇಟ್ಟುಕೊಂಡು ಬಂದವರಿಂದ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು.

ಜನಸಾಮಾನ್ಯರಿಗೆ ರಾಷ್ಟ್ರಪತಿಗಳನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಲೇ ಇಲ್ಲ. ಸಮಾರಂಭಕ್ಕೆ ಆಹ್ವಾನಿತರಿಗೆ ಮಾತ್ರ ಆಮಂತ್ರಣವಿತ್ತು. ಹೆಲಿಪ್ಯಾಡ್‌ಗೆ ಬರುವಾಗ ದೂರದಿಂದ ನೋಡೋಣ ಎಂದರೆ ಅಲ್ಲಿಯೂ ಅವಕಾಶ ಇರಲಿಲ್ಲ.

ಊರಾಗ್‌ ಬಂದಿದ್ರ ರಸ್ತಾ ಸುಧಾರಿಸತಿದ್ವು ‘ರಾಷ್ಟ್ರಪತಿಗಳು ಊರಾಗ್‌ ಬಂದಿದ್ರ ರಸ್ತಾ ಅರಾ ಸುಧಾರಿಸುತ್ತಿದ್ವು... ಇದು ವಿಜಾಪುರ ನಗರದ ಜನತೆಯ ಉದ್ಗಾರ.

ಸೈನಿಕ ಶಾಲೆಗೆ ಬರುವ ರಾಷ್ಟ್ರಪತಿಗಳನ್ನು ಊರಲ್ಲಿ ಕೊಂಡು ಬಂದು, ಕಡೇ  ಪಕ್ಷ ಗೋಲಗುಮ್ಮಟ­ವನ್ನಾ­ದರೂ ಅವರಿಗೆ ತೋರಿಸಬೇಕಾಗಿತ್ತು. ಆ ನೆಮಪದಲ್ಲಿ ನಮ್ಮೂರಿನ ರಸ್ತೆಗಳು ಸುಧಾರಿಸಿ, ಗೋಲಗುಮ್ಮಟ ಸೇರಿದಂತೆ ಸ್ಮಾರಕಗಳ ಅಭಿವೃದ್ಧಿಗೂ ಸಹಕಾರಿಯಾ­ಗುತ್ತಿತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಶಿಕ್ಷಕರಿಗೆ ಕಾಣಿಕೆ
ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದವರು  ಶಾಲೆಯ ಎಲ್ಲ ಶಿಕ್ಷಕರಿಗೆ ಉಪಹಾರ ಕೂಟ ಏರ್ಪಡಿಸಿ, ಅವರಿಗೆ ಕಾಣಿಕೆಯನ್ನೂ ಸಮರ್ಪಿಸಿದರು.

ಪ್ರಣವ್‌ ಪುತ್ರ ಭಾಗಿ
ರಾಷ್ಟ್ರಪತಿಗಳೊಂದಿಗೆ ಅವರ ಪುತ್ರ, ಪಶ್ಚಿಮ ಬಂಗಾಳ ರಾಜ್ಯದ ಜಂಗಿಪುರ ಕ್ಷೇತ್ರದ ಲೋಕಸಭಾ ಸದಸ್ಯ ಅಭಿಜೀತ್‌ ಪ್ರಣವ್‌ ಮುಖರ್ಜಿ  ಆಗಮಿಸಿದ್ದರು. ಆದರೆ, ಅವರು ಸಮಾರಂಭದ ವೇದಿಕೆಗೆ ಬರಲಿಲ್ಲ. ಅತಿ ಗಣ್ಯರಿಗಾಗಿ ಮೀಸಲಿಟ್ಟಿದ್ದ ಆಸನದಲ್ಲಿ ಆಸೀನ­ರಾಗಿದ್ದರು.

ಕೊನೆಗೂ ಕಾಣಿಸಿಕೊಂಡ ಕನ್ನಡ
ವೇದಿಕೆಯಲ್ಲಿ ಬೃಹತ್‌ ಫಲಕ ಹಾಕಲಾಗಿತ್ತು. ಆದರೆ, ಅದರಲ್ಲಿ ಅಪ್ಪಿತಪ್ಪಿಯೂ ಕನ್ನಡ ಅಕ್ಷರಗಳು ಇರಲಿಲ್ಲ. ಕನ್ನಡ ಕಡೆಗಣಿಸಲಾಗಿದೆ ಎಂಬ ಮಾಧ್ಯಮ­ಗಳ ವರದಿ ಮತ್ತು  ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಸೈನಿಕ ಶಾಲೆಯವರು, ‘ಸುವರ್ಣ ಮಹೋತ್ಸವ, ಸೈನಿಕ ಶಾಲೆ, ವಿಜಾಪುರ’ ಎಂದು ಕನ್ನಡದಲ್ಲಿ ಬರೆಸಿದ್ದ ಬ್ಯಾನರ್‌ನ್ನು ಮೇಲ್ಭಾಗದಲ್ಲಿ ಕಟ್ಟಿದ್ದರು.

ಅಪೂರ್ಣ ಕಟ್ಟಡ ಉದ್ಘಾಟನೆ
ಸೈನಿಕ ಶಾಲೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಇನ್ನೂ ಪೂರ್ಣ ಪ್ರಮಾಣ­ದಲ್ಲಿ ಮುಕ್ತಾಯಗೊಂಡಿಲ್ಲ. ಮೊದಲ ಹಂತದ ಕಾಮ­ಗಾರಿ ಅಷ್ಟೇ ಮುಗಿದಿದೆ. ರಾಷ್ಟ್ರಪತಿಗಳನ್ನು ಅಲ್ಲಿಗೆ ಕರೆ­ದೊಯ್ದು ಅವರಿಂದ ಉದ್ಘಾಟನೆ ಮಾಡಿಸಲಾಯಿತು.

ಸಹಿ ಮಾಡಿದ ರಾಷ್ಟ್ರಪತಿ
ಸಮಾರಂಭದ ನಂತರ ಶಾಲೆಯ ಶಿಕ್ಷಕರೊಂದಿಗೆ ಭಾವಚಿತ್ರ ತೆಗೆಸಿಕೊಂಡ ರಾಷ್ಟ್ರಪತಿಗಳು, ಪ್ರಾಚಾರ್ಯರ ಕೊಠಡಿಗೆ ಹೋದರು. ಅಲ್ಲಿಯ ಗಣ್ಯರ ಭೇಟಿ ದಾಖಲಿಸುವ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿ, ಸಹಿ ಮಾಡಿದರು.

ಅವರಿಗಾಗಿ ಲೋಕೋಪಯೋಗಿ ಮತ್ತು ಸೈನಿಕ ಶಾಲೆಯ  ಪ್ರವಾಸಿ ಮಂದಿರಗಳನ್ನು ಸುಸಜ್ಜಿತಗೊಳಿಸಿ ಕಾಯ್ದಿಡಲಾಗಿತ್ತು. ಅವರು ಅತ್ತ ಹೋಗಲಿಲ್ಲ.

‘ವಿಜಾಪುರ ಸೈನಿಕ ಶಾಲೆಯು ಅತ್ಯದ್ಭುತ ಸೌಲಭ್ಯ ಹೊಂದಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯವಿದೆ. ಅವರು ಮುಂದೆ ರಾಷ್ಟ್ರದ ಆಸ್ತಿ ಆಗಬಲ್ಲರು’.
ಪ್ರಣವ್‌ ಮುಖರ್ಜಿ
ಸಂದರ್ಶನ ಪುಸ್ತಕದಲ್ಲಿ ದಾಖಲಿಸಿದ ಅಭಿಪ್ರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT