ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರು ಪ್ರಾಣಿಗಳಲ್ಲ, ಮನುಷ್ಯರು

Last Updated 3 ಜನವರಿ 2011, 7:25 IST
ಅಕ್ಷರ ಗಾತ್ರ

ಮಂಗಳ ಮುಖಿಯರು! ನಿಜ. ಸುಂದರವಾದ ಹೆಸರು. ಆದರೆ ಅವರ ಬದುಕು ಇಷ್ಟು ಸುಂದರವೂ ಅಲ್ಲ, ಮಂಗಳಕರವೂ ಅಲ್ಲದಿರುವುದು ವಾಸ್ತವದ ದುರಂತ. ಸಾಮಾನ್ಯವಾಗಿ ಹಿಜಡಾಗಳೆಂದು ನಾವು ಗುರುತಿಸುವ ಇವರ ಕೆಲವು ದುರ್ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅವರ ಅಸಭ್ಯ ನಡವಳಿಕೆಗೆ ಕಾರಣ ಹುಡುಕುತ್ತ ಹೊರಟರೆ ಮನ ಕರಗಿಸುವಂಥ ಸತ್ಯಗಳು ಹೊರಬೀಳುತ್ತವೆ.

ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಒಪ್ಪಿಕೊಂಡು, ಅದರ ಆಧಾರದಿಂದ ಎಲ್ಲ ಬಗೆಯ ‘ವ್ಯವಸ್ಥೆ’ಯನ್ನೂ ರೂಪಿಸಿಕೊಂಡಿರುವ ನಮಗೆ ಈ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ‘ಅಂತರ್‌ಲಿಂಗೀಯರು’ ಅಥವಾ ‘ಮೂರನೇ ಲಿಂಗ’ದವರ ಬದುಕಿನ ಕುರಿತು ತಿಳಿಯಲಾರಂಭಿಸಿದ್ದು ತೀರಾ ಇತ್ತೀಚೆಗಷ್ಟೇ. 4000 ವರ್ಷಗಳ ಹಿಂದಿನ ಇತಿಹಾಸದಲ್ಲಿಯೇ ಅವರ ಕುರಿತು ದಾಖಲೆಗಳಿವೆ.  ಜೊತೆಗೆ ಅವರನ್ನು ಅಶ್ಲೀಲ, ಅಸಭ್ಯ ಪದಗಳಿಂದ ಗುರುತಿಸಿ ನೋಯಿಸುವ, ಹಿಂಸಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ.

ಹಾಸನದಲ್ಲಿ ಹೋದವರ್ಷ ಈ ಮೂರನೆ ಲಿಂಗದವರ ಕುರಿತು ಇದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರ ಕುರಿತು, ಅವರ ಬದುಕು, ನೋವು-ನಲಿವು, ತಲ್ಲಣ-ಅವಮಾನಗಳ ಬಗ್ಗೆ, ಆ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಕೆಲಸ ಮಾಡುತ್ತಿರುವವರಿಂದ ವಿವರವಾಗಿ ಅರಿಯುವ ಅವಕಾಶ ಲಭ್ಯವಾಗಿತ್ತು. ಮುಖ್ಯವಾಗಿ ಹಿಜಡಾಗಳ ನಿರ್ದಿಷ್ಟ ಲಿಂಗ ನಿರ್ಧಾರವಾಗದ ಕಾರಣ ಅವರು ಬಾಲ್ಯದಿಂದಲೂ ಶಿಕ್ಷಣ, ಉದ್ಯೋಗ, ಆರೋಗ್ಯ, ಕಾನೂನು, ಸಾಮಾಜಿಕ ಸ್ಥಾನಮಾನ ಎಲ್ಲದರಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಾರೆ. ಭಾರತೀಯ ಕಾನೂನು ಹಿಜಡಾಗಳಿಗಿರುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ! ಅವರಿಗೆ ಓಟಿನ ಹಕ್ಕಿಲ್ಲ. ಆಸ್ತಿಯ ಹಕ್ಕಿಲ್ಲ. ವಿವಾಹವಾಗುವ ಹಕ್ಕಿಲ್ಲ. ನಮ್ಮಂತೆ ಯಾವ ಬಗೆಯ ಗುರುತಿನ ಚೀಟಿಗಳನ್ನೂ ಹೊಂದುವ ಹಕ್ಕು ಇಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಕುಟುಂಬ ಹಾಗೂ ಸಮಾಜದ ಸಹಜ ಪ್ರೀತಿ ಇವರಿಗೆ ಸಿಗುವುದಿಲ್ಲ. ಇಷ್ಟೆಲ್ಲ ‘ಇಲ್ಲ’ಗಳಿರುವಾಗ ಬದುಕಲು ಭಿಕ್ಷಾಟನೆ ಮಾಡುವುದು, ಲೈಂಗಿಕ ಕಾರ್ಯಕರ್ತರಾಗುವುದು ಅಥವಾ ಗುಂಪಾಗಿ, ಬಲವಂತದಿಂದ ಹಣ ವಸೂಲಿ ಕೆಲಸದಲ್ಲಿ ತೊಡಗಿಕೊಳ್ಳಲೇಬೇಕಾದ ಅನಿವಾರ್ಯತೆ ಇವರಿಗಿರುತ್ತದೆ.

ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಕಾನೂನಿನಲ್ಲಿ ಅನುಮತಿ ಇಲ್ಲ. ಆದ್ದರಿಂದ ಗೋಪ್ಯವಾಗಿ ಅವರ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಳು, ಕೆಲವೊಮ್ಮೆ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತವೆ. ತಮ್ಮದೊಂದು ಗುರುತಿಸುವಿಕೆ ಹಾಗೂ ಅಸ್ತಿತ್ವಕ್ಕಾಗಿ ಅವರು ನಿರ್ದಿಷ್ಟ ಲಿಂಗವನ್ನು ಹೊಂದುವುದು, ಅದಕ್ಕಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಬಹಳ ಮುಖ್ಯವಾದರೂ ಇದಕ್ಕೆ ಬೇಕಾದ ಹಣ ಹೊಂದಿಸಲು ವಿವಿಧ ಮಾರ್ಗಗಳನ್ನೂ ಇವರು ಹಿಡಿಯಬೇಕಾಗುತ್ತದೆ. ಹೀಗಾಗಿ ಇವರು ಮನೆ ಬಿಟ್ಟು, ನಗರ ಪ್ರದೇಶಗಳಲ್ಲಿ ತಮ್ಮಂತಹುದೇ ಸಮಸ್ಯೆ ಇರುವವರೊಂದಿಗೆ ಸೇರಿಕೊಳ್ಳುವುದು ಅನಿವಾರ್ಯವಾಗುತ್ತದೆ. 

 ಮುಂಬೈಯ ಸಮುದಾಯ ಆರೋಗ್ಯ ಸಂಸ್ಥೆಯಾದ ‘ದ ಹಮ್‌ಸಫರ್ ಟ್ರಸ್ಟ್’ ಭಾರತದಲ್ಲಿ ಸದ್ಯ 5 ರಿಂದ 6 ದಶಲಕ್ಷ ಹಿಜಡಾಗಳಿದ್ದಾರೆಂದು ಅಂದಾಜಿಸಿದೆ. ಆದರೆ ಇವರಲ್ಲಿ ಕೇವಲ ಶೇ 8ರಷ್ಟು ಹಿಜಡಾಗಳು ಮಾತ್ರ ನಿರ್ದಿಷ್ಟ ಲಿಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ನಿರ್ದಿಷ್ಟ ‘ಗಂಡು-ಹೆಣ್ಣು’ ಗುರುತಿಸುವಿಕೆಯ ಅಸ್ತಿತ್ವವನ್ನು ಪಡೆದಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನವರು ‘ನಿರ್ವಾಣ’ ಎಂದು ಕರೆಯುತ್ತಾರೆ. 2005 ರಿಂದ ಭಾರತೀಯ ಪಾಸ್‌ಪೋರ್ಟ್‌ಗಳಲ್ಲಿ ಮೂರನೇ ಲಿಂಗೀಯರನ್ನು ಗುರುತಿಸುವ ವ್ಯವಸ್ಥೆಯಾಗಿದೆ. ಜೊತೆಗೆ 2009 ರಲ್ಲಿ ಭಾರತ ಸರ್ಕಾರ ಇವರನ್ನು ಮೂರನೇ ಲಿಂಗದವರೆಂದು ಗುರುತಿಸಿ ಮತದಾನದ ಗುರುತಿನ ಚೀಟಿಯಲ್ಲಿ ನಮೂದಿಸಲು ತೀರ್ಮಾನಿಸಿದೆ. ತಮಿಳುನಾಡು ಸರ್ಕಾರ ಮೊದಲ ಬಾರಿಗೆ ಅವರನ್ನು ‘ಟಿ’ ಎಂಬ ಲಿಂಗ ಚಿಹ್ನೆಯ ಮುಖಾಂತರ ಗುರುತಿಸಲು ಕ್ರಮ ಕೈಗೊಂಡಿದೆ.

ಆದರೆ ಹಿಜಡಾಗಳು ಇತರ ಗಂಡು-ಹೆಣ್ಣುಗಳಂತೆಯೇ ಸಮಾನವಾಗಿ ಬದುಕಲು, ಇನ್ನೂ ಅನೇಕ ಬದಲಾವಣೆಗಳು ಆಗಬೇಕಿದೆ. ಅವರ ಮುಖ್ಯವಾದ ಬೇಡಿಕೆ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಕಾನೂನುಬದ್ಧವಾಗಬೇಕು ಎಂಬುದು. ಇದರೊಂದಿಗೆ, ಶಸ್ತ್ರಚಿಕಿತ್ಸೆಯ ನಂತರ ಹೆಣ್ಣಾಗಿ ಬದಲಾಗಿದ್ದಕ್ಕೆ ಪ್ರಮಾಣಪತ್ರ ಸಿಗಬೇಕು. ರೇಷನ್‌ಕಾರ್ಡ್, ಪಾಸ್‌ಪೋರ್ಟ್, ಗುರುತಿನ ಚೀಟಿ ಯಾವುದೇ ತೊಡಕಿಲ್ಲದೆ ಸಿಗುವಂತಾಗಬೇಕು. ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು.

ಸಾಮಾಜಿಕವಾಗಿ, ಅವರ ಪ್ರಕೃತಿದತ್ತ ಸಮಸ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾದ ಕೆಲಸ. ಶಾಲಾಪಠ್ಯಗಳಲ್ಲೂ ಈ ಮಾಹಿತಿಯನ್ನು ಅಳವಡಿಸಿದರೆ ಮುಂದಿನ ಪೀಳಿಗೆ ಇವರ ಕುರಿತು ಋಣಾತ್ಮಕ ಭಾವನೆಗಳನ್ನಿರಿಸಿಕೊಳ್ಳುವುದು ತಪ್ಪಬಹುದು. ಬರಹ, ಚಲನಚಿತ್ರ, ಸಾಕ್ಷ್ಯಚಿತ್ರ, ಧಾರಾವಾಹಿಗಳ ಮೂಲಕ ಹಿಜಡಾಗಳ ಬದುಕಿನ ನೋವು-ಸಂಘರ್ಷಗಳನ್ನು ಪರಿಚಯಿಸುವ ಕೆಲಸಗಳಾಗಬೇಕಿದೆ. ಮಾಧ್ಯಮಗಳಲ್ಲಿ ಅವರ ಕುರಿತು ಅಮಾನವೀಯವಾಗಿ ಚಿತ್ರಿಸುವ, ಸಾರ್ವಜನಿಕವಾಗಿ ಅವರನ್ನು ಅಶ್ಲೀಲ, ಅವಾಚ್ಯ ಶಬ್ಧಗಳಿಂದ ಕೆಣಕುವ ಸಂದರ್ಭಗಳಲ್ಲಿ ಕಾನೂನಿನ ರೀತ್ಯ ಶಿಕ್ಷೆಯಾಗುವಂತಾ ಶಾಸನಗಳು ಜಾರಿಯಾಗಬೇಕು. ಮುಖ್ಯವಾಗಿ ಹಿಜಡಾಗಳ ಬದುಕು, ಸಮಸ್ಯೆಯ ಕುರಿತು ಮಾನವ ಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳು ವೈಜ್ಞಾನಿಕ ನೆಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಸಮೀಕ್ಷೆ ನಡೆಸಿ ಜನರಲ್ಲಿ ಅವರ ಕುರಿತು ಸಹಜ ಪ್ರೀತಿ, ಅಂತಃಕರಣಗಳು ಮೂಡಿಸಲು ನೆರವಾಗಬೇಕಿದೆ.

ಹಿಜಡಾಗಳ ಪ್ರಕೃತಿದತ್ತವಾದ ಹುಟ್ಟನ್ನು ಸಹಾನುಭೂತಿಯಿಂದ ಕಂಡು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸಗಳ ಜೊತೆಗೆ, ನಮ್ಮಂತೆಯೇ ಸಾಮಾಜಿಕ- ನಾಗರಿಕ ಹಕ್ಕುಗಳನ್ನು ತುರ್ತಾಗಿ ನೀಡಬೇಕಿದೆ. ಮುಖ್ಯವಾಗಿ ಅವರು ಪ್ರಾಣಿಗಳಲ್ಲ, ನಮ್ಮಂತೆಯೇ ಮನುಷ್ಯರು ಎಂದು ಒಪ್ಪಿಕೊಂಡರೆ, ಅವರ ನೋವು-ಸಂಕಟಗಳು ನಮಗೆ ಅರ್ಥವಾದರೆ, ನಾವೆಂದಿಗೂ ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದಿಲ್ಲ. ಅವರಿಗೂ ನಮ್ಮಿಂದ ಮನುಷ್ಯ ಸಹಜ ಪ್ರೀತಿ ಸಿಕ್ಕರೆ ಅವರ ವರ್ತನೆಯೂ ಕೆಟ್ಟದಾಗಿರಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT