ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ್ಣನೀಯ ನೇಸರಗಾನ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪಾಶ್ಚಾತ್ಯ ರಾಷ್ಟ್ರಗಳಲ್ಲಿ 18-19ನೇ ಶತಮಾನದ ಹೊತ್ತಿಗೆ ಶೃಂಗಾರ ನೆಲೆಯ ಕೃತಿಗಳಿಗೆ ಅಂತ್ಯ ಹಾಡಿ ಪ್ರಯೋಗಾತ್ಮಕ ಅಭಿವ್ಯಕ್ತಿಯೆಡೆಗೆ ಗಮನ ನೀಡಲಾಯಿತು. ಕಲಾವಿದರು ತಂಡ ತಂಡವಾಗಿ ಕಲೆಯಲ್ಲಿ ಹೊಸತನವನ್ನು ಸೃಷ್ಟಿಸಲು ಹೆಣಗಾಡಿದ ಸಮಯವದು.

ಇದರೊಂದಿಗೆ ಹೊಸ ಹೊಸ ಪಂಥಗಳು ಹುಟ್ಟಿಕೊಂಡು ಕಲಾವಲಯದಲ್ಲಿ ಸಂಚಲನ ಮೂಡಿಸತೊಡಗಿದವು. ಈ ಪ್ರಯೋಗದ ಅಲೆ ಶತಮಾನದ ನಂತರ ಸಾಗರದಾಚೆಯಿಂದ ಭಾರತಕ್ಕೂ ಅಪ್ಪಳಿಸತೊಡಗಿತು. ಅದುವರೆಗೂ ಸಂಪ್ರದಾಯದ ಚೌಕಟ್ಟಿನೊಳಗೆ ಅಭಿವ್ಯಕ್ತಿ ಕಂಡುಕೊಂಡಿದ್ದ ಭಾರತೀಯ ಕಲಾವಿದರು ನವ್ಯ ಕಲೆಯ ಪ್ರಯೋಗದಲ್ಲಿ ತೊಡಗಿಸಿಕೊಂಡರು.

ಭಾರತದಂತಹ ಸಂಪ್ರದಾಯಬದ್ಧ ಮತ್ತು ಮಡಿವಂತಿಕೆಯುಳ್ಳ ದೇಶದಲ್ಲಿ ನವ್ಯಕಲೆಯ ಅಭಿವ್ಯಕ್ತಿ ಸಿದ್ಧಾಂತ ನೆಲೆಗೊಳ್ಳಲು ಅದು ಸಕಾಲವೂ ಆಗಿರಲಿಲ್ಲ. ಅಂತೂ ದಶಕಗಳ ನಿರಂತರ ಚಿತ್ರ ಅಭಿವ್ಯಕ್ತಿಯ ಹೋರಾಟದ ನಡುವೆ ನವ್ಯಕಲೆ ಭಾರತದ ಪ್ರಮುಖ ನಗರಗಳಲ್ಲಿ ಬೇರೂರಿತು. ದೇಶದ ಕೆಲ ಕಲಾವಿದರು ಗುಂಪುಗೂಡಿ ನವ್ಯ ಕಲಾ ಸಂಪ್ರದಾಯವನ್ನು ನೆಲೆಗೊಳ್ಳುವಂತೆ ಮಾಡಿದರು. ಇದನ್ನೇ ನಾವು ಆಧುನಿಕ ಕಲಾ ಚಳವಳಿ ಎಂದು ಅರ್ಥೈಸುತ್ತೇವೆ.

ಎಂ.ಎಫ್. ಹುಸೇನ್, ಅಕ್ಬರ್ ಪದಮ್‌ಸೀ, ಎಸ್.ಎಚ್. ರಝಾ, ಫ್ರಾನ್ಸಿಸ್ ನ್ಯೂಟನ್ ಸೌಝಾ ಮತ್ತಿತರ ಕಲಾವಿದರು ಕೂಡಿಕೊಂಡು ಪ್ರಗತಿಪರ ಸಮೂಹ ಹೆಸರಿನಲ್ಲಿ ನವೀನ ಕಲಾ ಕೃಷಿಯತ್ತ ತಮ್ಮ ಚಿತ್ತ ಹಾಯಿಸಿದರು. ಈ ಕಲಾವಿದರು ನಿರಂತರ ಕೃತಿರಚನೆಯ ಮೂಲಕ ವಿಶ್ವಮನ್ನಣೆಯನ್ನೂ ಪಡೆದಿರುವುದು ಈಗ ಇತಿಹಾಸ.

ಮೂಲ ವಿಷಯಕ್ಕೆ ಬರೋಣ, ಭಾರತೀಯ ಆಧುನಿಕ ಅಥವಾ ಸಮಕಾಲೀನ ಸಂದರ್ಭದ ಮೇರು ಕಲಾವಿದರಲ್ಲಿ ಒಬ್ಬರೆನಿಸಿದ ಅಕ್ಬರ್ ಪದಮ್‌ಸೀ ಅವರು ಅಭಿವ್ಯಕ್ತಿಸಿದ ಕೃತಿಯಿದು.

ಪ್ರಾಫೆಟ್, ಲವರ್ಸ್‌, ಸಿಟಿಸ್ಕೇಪ್, ಮೆಟಾಸ್ಕೇಪ್; ಹೀಗೆ ಸಾಕಷ್ಟು ಸರಣಿ ಚಿತ್ರಗಳ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ ಕಲಾವಿದ ಪದಮ್‌ಸೀ. 1950-80ರ ದಶಕದ ಅವಧಿಯಲ್ಲಿ ಇವರು ಚಿತ್ರಿಸಿರುವ ಮೆಟಾಸ್ಕೇಪ್ ಸರಣಿ ಚಿತ್ರಗಳಿಗೆ ವಿಶೇಷ ಆಕರ್ಷಣೆ ಇದೆ. ಮಾತ್ರವಲ್ಲ ಅವರ ಕಲಾ ಬದುಕಿ ಹೊಸ ಸಂಚಲನಕ್ಕೂ ನಾಂದಿ ಹಾಡಿವೆ. 

ಪ್ರಸ್ತುತ ವರ್ಣಚಿತ್ರವು ಮೆಟಾಸ್ಕೇಪ್ (Metascape) ಸರಣಿ ಚಿತ್ರಗಳಲ್ಲೊಂದಾಗಿದೆ. ಮೆಟಾಸ್ಕೇಪ್ ಚಿತ್ರಸರಣಿಯನ್ನು `ಮಿರರ್ ಇಮೇಜಸ್ ಸೀರೀಸ್~ ((Mirror Images Series) ಎಂತಲೂ ಪರಿಭಾವಿಸಲಾಗುತ್ತದೆ.

ಅಕ್ಬರ್ ಪದಮಸೀ ಅವರು ಈ ಚಿತ್ರ ಸರಣಿಯನ್ನು ಸೃಷ್ಟಿಸುವ ಮುನ್ನ ಪೌರಾಣಿಕ ಕಥನ-ಕಾವ್ಯಗಳ ಮೊರೆಹೋಗಿದ್ದುಂಟು. ಅದರಲ್ಲಿಯೂ ಕಾಳಿದಾಸನ ಕಾವ್ಯದ ಪ್ರಭಾವ ಅವರ ಈ ಸರಣಿ ಮೇಲಿದೆ. ಕಾಳಿದಾಸ ತನ್ನ ಕೃತಿಗಳಲ್ಲಿ ಸೂರ್ಯ, ಚಂದ್ರರನ್ನು ಸಾಂಕೇತಿಕ ಅರ್ಥದಲ್ಲಿ ಮಾತ್ರ ಅಭಿವ್ಯಕ್ತಿಸಿದ್ದಾನೆ.

ಅದಕ್ಕೆ ಪ್ರತಿಯಾಗಿ ಪದಮಸೀ ಅವರು ರೂಪಕ ತಂತ್ರವನ್ನು  ವರ್ಣರೇಖೆಗಳ ಮೂಲಕ (ಅಮೂರ್ತ ಪರಿಕಲ್ಪನೆಯಲ್ಲಿ) ಅಭಿವ್ಯಕ್ತಿಸಿದ್ದಾರೆ. `ಕವಿಯಾಗಿದ್ದ ಕಾಳಿದಾಸ ರೂಪಕ ವಿಧಾನವನ್ನು ಪದಗಳಿಂದ ವರ್ಣಿಸಲು ಸಾಧ್ಯ. ಆದರೆ, ವರ್ಣಗಳಿಂದ ಹೇಗೆ ಚಿತ್ರಿಸಬಲ್ಲ? ಹಾಗೆಯೇ ಒಬ್ಬ ಚಿತ್ರಕಾರನಾದ ನನಗೂ ಮೆಟಾಫರ್ಸ್ ಸಿದ್ಧಾಂತಗಳನ್ನು ಪದಗಳಿಂದ ಹೇಗೆ ಕಟ್ಟಕೊಡಲು ಸಾಧ್ಯ?~ ಎನ್ನುವುದು ಪದಮಸೀ ಅವರ ವಾದ.

ಕಾಳಿದಾಸ ವರ್ಣಿಸುವ ಸೂರ್ಯ, ಚಂದ್ರ, ಜಲ, ಅಗ್ನಿ, ವಾಯು, ಮುಂತಾದವುಗಳು ಶಿವನನ್ನು ಸಂಕೇತಿಸುತ್ತವೆ ಎಂದು ಹೇಳುವ ಪದಮಸೀ ಅವರು ಈ ಸಿದ್ಧಾಂತವನ್ನಿಟ್ಟುಕೊಂಡೇ ನಿಸರ್ಗ ದೃಶ್ಯದ ಪರಿಕಲ್ಪನೆಯಲ್ಲಿ (ಮೆಟಾಸ್ಕೇಪ್ ಚಿತ್ರಸರಣಿ ಮೂಲಕ) ಚಿತ್ರರಚನೆಗೆ ಮುಂದಾಗುತ್ತಾರೆ.

ಇವರ ಈ ಸರಣಿಯಲ್ಲಿ ಸೂರ್ಯ-ಚಂದ್ರರೊಂದಿಗೆ ಬೆಟ್ಟ-ಗುಡ್ಡ, ಮೋಡಗಳು, ನೀಲಾಕಾಶ ಮತ್ತು ನಿರಾಕಾರ ಸ್ವರೂಪದ ವಾಯು ಪ್ರತಿಧ್ವನಿಸುತ್ತವೆ. ಪದಮಸೀ ಅವರು ಮೆಟಾಸ್ಕೇಪ್ ಚಿತ್ರಸರಣಿ ಕುರಿತು ಒಂದು ಕಡೆ ಹೀಗೆ ಹೇಳಿದ್ದಾರೆ:

1959ರಲ್ಲಿ ಬೂದುವರ್ಣದಲ್ಲಿ (Grey) ಮಾತ್ರ ಈ ಸರಣಿ ಚಿತ್ರಗಳನ್ನು ((Metascape)) ಚಿತ್ರಿಸುತ್ತಿದ್ದೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಚೀನಾದ ಕಲಾವಿದರು ಮಸಿ ಮತ್ತು ನೀರು ಬಳಸಿ ಯಿನ್-ಯಾಂಗ್ ತಾತ್ವಿಕ ನೆಲೆಯ ಚಿತ್ರಗಳನ್ನು ಚಿತ್ರಿಸಿದ್ದು, ಅವು ಬೂದುವರ್ಣದಲ್ಲಿವೆ. ಈ ಚಿತ್ರರಚನಾ ಪದ್ಧತಿಯಿಂದ ನಾನು ಪ್ರಭಾವಿತನಾದೆ...

ಪ್ರಸ್ತುತ ವರ್ಣಚಿತ್ರವು ಭೂದೃಶ್ಯದ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಚಚ್ಚೌಕ ಅವಕಾಶದ ಕ್ಯಾನ್ವಾಸಿನ ಮೇಲ್ತುದಿಯಲ್ಲಿ ಕಂದುವರ್ಣದ (Mixed colors like Red, Yellow with Blue) ದಟ್ಟಲೇಪನವಿದ್ದು, ಬಹುಶಃ ಇದು ಚಿತ್ರದಲ್ಲಿ ಮೋಡಗಳನ್ನು ಕಲ್ಪಿಸುತ್ತದೆ. ಮೋಡಗಳಿಗೆ ಹೊಂದಿಕೊಂಡಂತೆ ಕೆಳಬದಿಯಲ್ಲಿ ಒಂದು ರೀತಿಯ ಬೂದುವರ್ಣದ (Maximum Brown with Red, Yellow some of White) ಲೇಪನವಿದ್ದು, ಸಾಂಕೇತಿಕವಾಗಿ ಆಕಾಶದ ಸನ್ನಿವೇಶವನ್ನು ವ್ಯಕ್ತಪಡಿಸುತ್ತದೆ.

ಇನ್ನೊಂದರ್ಥದಲ್ಲಿ ಈ ವರ್ಣಲೇಪನ ಚಿತ್ರಕ್ಕೆ ಹಿನ್ನೆಲೆಯಾಗಿಯೂ (ಪರ್ವತಶ್ರೇಣಿ) ಪರಿಣಮಿಸಿದೆ. ಈ ವರ್ಣಲೇಪನದ ಮಧ್ಯದಲ್ಲಿ ಹಳದಿ ವರ್ಣದ ವೃತ್ತಾಕಾರದ ಮೂಲಕ ಸೂರ್ಯನನ್ನು ಸಾಂಕೇತಿಕವಾಗಿ ಚಿತ್ರಿಸಿದ್ದು, ಸುತ್ತಲೂ ಬಿಳಿವರ್ಣದ ವರ್ತುಲದ ಮೂಲಕ ಸೂರ್ಯನ ಕಿರಣಗಳನ್ನೂ ಸಾಂಕೇತಿಕ ಅರ್ಥದಲ್ಲೇ ತೋರಿಸಿದೆ.

ನೀಲಾಕಾಶಕ್ಕೆ ಹೊಂದಿಕೊಂಡಂತೆ ಚಿತ್ರದ ಎಡಬದಿಯಲ್ಲಿ ನೇರ ಕೆಂಪು ವರ್ಣದಿಂದ ವಿಶಾಲವಾದ ಪರ್ವತವೊಂದನ್ನು ಸಂಕೇತಿಸಲಾಗಿದೆ. ಪರ್ವತದ ಕೆಳಭಾಗದಲ್ಲಿ ನೀಲಿ, ಬಿಳಿ ಮತ್ತು ಹಳದಿ ವರ್ಣಗಳ ಮಿಶ್ರಣದೊಂದಿಗೆ ನಿಶ್ಶಬ್ದ ಸರೋವರವನ್ನು (ನೈಫ್ ತಂತ್ರಗಾರಿಕೆವುಳ್ಳ ಕಾರಣಕ್ಕೆ ಇದನ್ನು ತೆರೆಗಳುಳ್ಳ ನದಿಯೆಂತಲೂ ಪರಿಭಾವಿಸಬಹುದು) ಚಿತ್ರಿಸಲಾಗಿದೆ. ಸೂರ್ಯನ ಕಿರಣಗಳು ಸರೋವರದ ನೀರಿನಲ್ಲಿ ಪ್ರಜ್ವಲಿಸುತ್ತಿವೆ ಎನ್ನುವ ಸಾಂಕೇತಿಕ ಭಾವನೆ ಚಿತ್ರದಲ್ಲಿ ಒಡಮೂಡಿದೆ.

ಉಳಿದಂತೆ ಚಿತ್ರದ ತೀರ ಕೆಳಭಾಗದಲ್ಲಿ ಭೂಮಿ ಮತ್ತು ಕಟ್ಟೆ ವಿನ್ಯಾಸವನ್ನು ಸಹಜ ಮಿಶ್ರವರ್ಣದಲ್ಲಿ ತೋರಿಸಿದೆ.  ಚಿತ್ರರಚನೆಗೆ ತೈಲಮಾಧ್ಯಮದ ಮೂಲವರ್ಣಗಳನ್ನೇ ಬಳಸಲಾಗಿದೆಯಾದರೂ, ಪೂರಕ ವರ್ಣಗಳ ಮಿಶ್ರಣ ಮತ್ತು ನೈಫ್‌ನಿಂದ ಮಾಡಿದ ತಂತ್ರಗಾರಿಕೆ ಚಿತ್ರರಚನೆಯ ಹಿಂದಿರುವ ಶಕ್ತಿ ಎನ್ನಬಹುದು.

ಒಟ್ಟಾರೆ ಚಿತ್ರವು ವರ್ಣಲೇಪನ ಮತ್ತು ತಂತ್ರಗಾರಿಕೆಯಿಂದ ಆಧುನಿಕ ಸ್ಪರ್ಶವನ್ನು ಪಡೆದುಕೊಂಡಿದೆ. ಸಾಂಕೇತಿಕ ಅರ್ಥಕೊಡುವ ಈ ವರ್ಣಚಿತ್ರವನ್ನು ಅವರು ಶೀರ್ಷಿಕೆ ರಹಿತ ಎಂಬ ತಲೆಬರಹ ನೀಡಿದ್ದಾರಾದರೂ, ಕಲೆಯ ಭಾಷೆಯನ್ನು (Visual Language)  ಬಲ್ಲವರು ಚಿತ್ರದ ವಸ್ತುಸ್ಥಿತಿಯನ್ನು ಸಹಜವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಪ್ರಸ್ತುತ ಕೃತಿ 1977ರಲ್ಲಿ ಬರೆದದ್ದು. ಈ ಚಿತ್ರರಚನೆ ವೇಳೆಗೆ ಪದಮ್‌ಸೀ ಅವರಿಗೆ ಐವತ್ತರ ಆಸುಪಾಸಿನ ವಯೋಮಾನ ಇರಬಹುದು. ಆ ವೇಳೆಗಾಗಲೇ ಪದಮ್‌ಸೀ ದೃಶ್ಯಕಲೆಯ ಎಲ್ಲ ವಲಯದಲ್ಲಿ ಕೈಯಾಡಿಸಿ ಸಾಕಷ್ಟು ಹೆಸರೂ ಮಾಡಿದ್ದರು. ಮಾತ್ರವಲ್ಲ ಕೃತಿ ರಚನೆಯಲ್ಲಿ ಹೊಸ ಹೊಳಹುಗಳ ಹುಡುಕಾಟ ಮತ್ತು ಸರಳೀಕರಣಗೊಳಿಸುವ ಕಡೆಗೆ ತಮ್ಮ ಚಿತ್ತ ಹರಿಸಿದ್ದರು.

ಅದಕ್ಕೂ ಮುಂಚೆ ಅವರು ಅಕಾಡೆಮಿಕ್ ಕಲಾ ವಲಯದೊಳಗೆ ಸಾಕಷ್ಟು ಕೃಷಿ ಮಾಡಿದ್ದರು. ಇವರ ಲವರ್ಸ್‌, ಸಿಟಿಸ್ಕೇಪ್ ಮತ್ತು ಕೆಲ ರೇಖಾ ಚಿತ್ರಗಳು ಅಕಾಡೆಮಿಕ್ ಶಿಸ್ತಿನಲ್ಲೇ ದುಡಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಲಾವಿದನಿಗಿರುವ ಕಲೆಯ ಹಸಿವು ಅವನನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎನ್ನುವ ಮಾತು ಇಲ್ಲಿ ನೆನಪಿಗೆ ಬರುತ್ತದೆ. ಅಕ್ಬರ್ ಪದಮಸೀ ಅವರಿಗೂ ಆ ಹಸಿವಿತ್ತು ಎನ್ನುವುದನ್ನು ಅವರ ಚಿತ್ರಸರಣಿಗಳೇ ಸ್ಪಷ್ಟಪಡಿಸಿವೆ.

ಅಂತೆಯೇ ಅವರು ದೃಶ್ಯಕಲೆಗಳ ಭವ್ಯ ಸಾಮ್ರಾಜ್ಯ ಎನಿಸಿಕೊಂಡಿದ್ದ ಫ್ರಾನ್ಸ್, ಇಂಗ್ಲೆಂಡ್ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಿಗೆ ಭೇಟಿಯಿತ್ತು ಹೊರ ಜಗತ್ತಿನ ಕಲಾ ಲೋಕವನ್ನು ತನ್ನ ನೆಲದ ಪರಿಸರಕ್ಕೆ ಹೊಂದಿಸಿಕೊಂಡು ಅನಾವರಣಗೊಳಿಸಿದ್ದಾರೆ. ಒಬ್ಬ ಸೃಜನಶೀಲ ಕಲಾವಿದನಿಂದ ಒಂದು ದೇಶ, ಒಂದು ನಾಡು ಇದಕ್ಕೂ ಹೆಚ್ಚೇನು ನಿರೀಕ್ಷಿಸಲು ಸಾಧ್ಯ.

ಲೇಖಕರು ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT