ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಜಿಲ್ಲೆಗಳಿಗೆ ಎಲ್ಲಿಂದ ನೀರು

Last Updated 12 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕು, ಜಿಲ್ಲೆಯ ಜನರು ಎದುರಿಸುತ್ತಿರುವ ನೀರಿನ ಬವಣೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಮತ್ತೆ ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಉದ್ದೇಶದಿಂದ ಫೆ.14ರಂದು ಅವಳಿ ಜಿಲ್ಲೆಗಳ ಬಂದ್‌ಗೆ ಕರೆ ನೀಡಿದ್ದಾರೆ. 

 ತಾಲ್ಲೂಕು ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಆದರೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ನೀರು ಎಲ್ಲಿಂದ ಹರಿಯಲಿದೆ ಎಂಬ ಪ್ರಶ್ನೆಗೆ ಮಾತ್ರ ಈವರೆಗೆ ಉತ್ತರ ಸಿಕ್ಕಿಲ್ಲ.
ಒಂದೆಡೆ ನೀರಾವರಿ ತಜ್ಞ ಡಾ. ಪರಮಶಿವಯ್ಯ ಅವರು ಸಲ್ಲಿಸಿರುವ ವರದಿ ಅನುಷ್ಠಾನ ಕಷ್ಟಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಇತರ ನೀರಿನ ಮೂಲದಿಂದ ಜಿಲ್ಲೆಗೆ ನೀರನ್ನು ತರಲು 2014ರವರೆಗೆ ಕಾಯುವಂತೆ ಭರವಸೆ ನೀಡಲಾಗುತ್ತಿದೆ. ಕೋಲಾರದ ಅವಿಭಜಿತ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು, ರಾಜ್ಯ ಸರ್ಕಾರದ ಪ್ರಭಾವಿ ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ನೀರಾವರಿ ಯೋಜನೆಗೆ ಮಾತ್ರ ಸ್ಪಷ್ಟವಾದ ರೂಪ ಸಿಗುತ್ತಿಲ್ಲ.

ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದಾಗಲೆಲ್ಲ ನೀರಾವರಿ ಯೋಜನೆಯ ಶೀಘ್ರ ಅನುಷ್ಠಾನದ ಬಗ್ಗೆ ಭರವಸೆ ನೀಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗ ಮೌನ ವಹಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ತಿಂಗಳಲ್ಲಿ ನೀರಾವರಿ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದ್ದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿಯವರು 2014ರವರೆಗೆ ನೀರಿನ ವಿಷಯ ಪ್ರಸ್ತಾಪಿಸಬೇಡಿ ಎಂದು ಹೇಳುತ್ತಿದ್ದಾರೆ. ‘ಕೆಲವೇ ದಿನಗಳಲ್ಲಿ ರಹಸ್ಯವಾಗಿ ಯೋಜನೆ ಅನುಷ್ಠಾನಗೊಳಿಸುತ್ತೇನೆ. ಯಾರ ಮುಂದೆಯೂ ಹೇಳಬೇಡಿ’ ಎಂದು ನಂದಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಬಹಿರಂಗವಾಗಿ ಹೇಳಿದ್ದ ಮೊಯಿಲಿ ಅವರು ಪರಮಶಿವಯ್ಯ ವರದಿ ಶೀಘ್ರ ಅನುಷ್ಠಾನ ಕಷ್ಟ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ.

ಫೆ.14ರಂದು ನಡೆಸಲಾಗುತ್ತಿರುವ ಅವಳಿ ಜಿಲ್ಲೆ ಬಂದ್ ಕಳೆದ ವರ್ಷದ ಅಕ್ಟೋಬರ್ 26ರಂದೇ ಕೈಗೊಳ್ಳಬೇಕಿತ್ತು. ಈ ಸಂಬಂಧ ಸಿದ್ಧತೆಗಳು ಆರಂಭಗೊಂಡಿದ್ದವು.

ಆದರಡಾ.ಪರಮಶಿವಯ್ಯ ಅವರು ನವೆಂಬರ್ 15ರ ನಂತರ ಹೋರಾಟ ಮುಂದುವರೆಸೋಣ ಎಂದು ಹೇಳಿದ್ದಕ್ಕೆ ಹಿಂಪಡೆಯಲಾದ ಬಂದ್‌ನ್ನು ಈಗ ತರಾತುರಿಯಲ್ಲಿ ಮಾಡಲು ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಮುಂದಾಗಿದ್ದಾರೆ. ಬಂದ್‌ಗೆ ಎರಡೇ ದಿನಗಳು ಬಾಕಿಯುಳಿದಿದ್ದು, ವಿವಿಧ ಸಂಘಟನೆಗಳು ಮತ್ತು ಕೆಲ ಮುಖಂಡರು ಹಸೇರ್ಪಡೆಗೊಳ್ಳುತ್ತಿದ್ದಾರೆ. ಇದರ ಪರಿಣಾಮ ಹೋರಾಟಕ್ಕೆ ಸೂಕ್ತ ರೂಪುರೇಷೆ ಸಿದ್ಧಪಡಿಸಿಕೊಳ್ಳುವಿಕೆ ಕಷ್ಟಕರವಾಗುತ್ತಿದ್ದರೆ, ಮತ್ತೊಂದೆಡೆ ಅಪಸ್ವರಗಳು ಸಹ ಕೇಳಿ ಬರುತ್ತಿವೆ.

ನಗರದ ಒಕ್ಕಲಿಗರ ಭವನದಲ್ಲಿ ಈಚೆಗಷ್ಟೆ ಕರೆಯಲಾಗಿದ್ದ ಸಭೆಯಲ್ಲಿ ಮಾಜಿ ಶಾಸಕ ಎಂ.ಶಿವಾನಂದ ಅವರು ಹೋರಾಟದ ರೂಪುರೇಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಸಿಪಿಎಂ ಮುಖಂಡ ಲಕ್ಷ್ಮಯ್ಯ ಅವರು ನೀರಾವರಿ ಬಗ್ಗೆ ಕಳಕಳಿಯುಳ್ಳ ಹೋರಾಟಗಾರರೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಎನ್.ಸಂಪಂಗಿ ಅವರು ವೀರಪ್ಪ ಮೊಯಿಲಿ ಅವರ ಪರವಾಗಿ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವರು, ‘ಕೇವಲ ಭರವಸೆಗಳನ್ನು ನೀಡಿದರೆ ಸಾಲದು, ಅನುಷ್ಠಾನಕ್ಕೂ ತರಬೇಕು’ ಎಂದು ವ್ಯಂಗ್ಯವಾಡಿದ್ದರು.
 
ಸಮಿತಿಯೊಂದಿಗೆಗುರುತಿಸಿಕೊಂಡಿರುವ ಕೆಲ ಕನ್ನಡಪರ ಸಂಘಟನೆಗಳ ಸದಸ್ಯರು ಹೋರಾಟವು ತಮ್ಮ ನೇತೃತ್ವದಲ್ಲಿ ನಡೆದಲ್ಲಿ, ಯಶಸ್ಸು ಲಭಿಸುತ್ತದೆ ಎಂದು ಹೇಳಿಕೊಂಡಿದ್ದರು. ರಾಜ್ಯಮಟ್ಟದ ನಾಯಕರನ್ನು ಕರೆತರುವ ಬಗ್ಗೆಯೂ ಪ್ರಸ್ತಾಪಿಸಿದ್ದರು.

ಇದೇ ತಿಂಗಳ 20ರಂದು ಆದಿಚುಂಚನಗಿರಿ ಮಠದ ವೀರಾಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಮಿಸಲಿದ್ದು, ಅವರಿಗೆ ಮನವಿಪತ್ರ ಸಲ್ಲಿಸುವ ಮತ್ತು ಒತ್ತಡ ಹೇರುವ ಮೂಲಕ ಹೋರಾಟದ ಮುಂದಿನ ರೂಪುರೇಷೆ ಸಿದ್ಧಪಡಿಸಿಕೊಳ್ಳಲು ಹೊರಾಟ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. 

‘ಕಳೆದ ಸಲದಂತೆ ಈ ಬಾರಿಯು ಯಡಿಯೂರಪ್ಪ ಅವರು ಮನವಿಪತ್ರ ಸ್ವೀಕರಿಸುತ್ತಾರೆ. ಒಂದು ವಾರದ ಅವಧಿಯಲ್ಲಿ ವಿಧಾನಸೌಧದಲ್ಲಿ ಸಭೆ ಕರೆಯಲಾಗುವುದು, ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡುತ್ತಾರೆ. ಆದರೆ ನಂತರದ ದಿನಗಳಲ್ಲಿ ಸಮಿತಿಯ ಸದಸ್ಯರಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಆಗುವುದೇ? ಭರವಸೆಗಳು ಭರವಸೆಯಾಗಿಯೇ ಉಳಿಯುತ್ತವೆ ಅಥವಾ ಅನುಷ್ಠಾನಕ್ಕೆ ಬರುವವೇ? ಎಂಬ ಪ್ರಶ್ನೆಗಳಿಗೆ ಉತ್ತರ ಅಸ್ಪಷ್ಟ’ ಎಂದು ಜಿಲ್ಲೆಯ ಹಿರಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT