ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರ: ಅನಧಿಕೃತ ಬಡಾವಣೆ ಹೆಚ್ಚಳ

Last Updated 1 ಜುಲೈ 2013, 6:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ಅನುಮೋದನೆ ಪಡೆಯದೆ ಅನಧಿಕೃತ ಬಡಾವಣೆಗಳ ನಿರ್ಮಾಣ ದಿನೇ ದಿನೇ ಹೆಚ್ಚುತ್ತಿದೆ. ವರ್ಷದ ಹಿಂದಷ್ಟೇ ಅನಧಿಕೃತ ಬಡಾವಣೆಗಳ ಮೇಲೆ ಹುಡಾ ಆಡಳಿತ ದಾಳಿ ನಡೆಸಿ ಅನುಮತಿ ಇಲ್ಲದೆ ಬಡಾವಣೆ ನಿರ್ಮಾಣ ಮಾಡಿದವರಿಗೆ ಎಚ್ಚರಿಕೆ ನೀಡಿತ್ತಾದರೂ, ಕಾನೂನು ಕ್ರಮ ಜರುಗಿಸದ ಕಾರಣ ಅಕ್ರಮ ಬಡಾವಣೆ ಅಭಿವೃದ್ಧಿ ಕೆಲಸ ನಿರಾತಂಕವಾಗಿ ಸಾಗಿದೆ.

ನಾಲ್ಕು ವರ್ಷಗಳ ಹಿಂದೆ ಹುಡಾ ನಡೆಸಿದ್ದ ಸಮೀಕ್ಷೆಯ ವೇಳೆ ಅವಳಿ ನಗರದ ವ್ಯಾಪ್ತಿಯಲ್ಲಿ 1246.62 ಎಕರೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ಗೊಂಡಿರುವುದನ್ನು ಗುರುತಿಸಿ ಪಟ್ಟಿ ಮಾಡಿದೆ. ಇದರಲ್ಲಿ ಸರ್ಕಾರಿ ಭೂಮಿ, ಕೆರೆ ಅಂಗಳ, ಶಾಲಾ ಆವರಣ, ಸಾರ್ವಜನಿಕ ಆಟದ ಮೈದಾನ ಒತ್ತುವರಿ ಮಾಡಿಕೊಂಡು ಹಲವರು ಬಡಾವಣೆ ನಿರ್ಮಿಸಿದ್ದಾರೆ. ಕನಿಷ್ಠ ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಪ್ರಯತ್ನವೂ ಸಂಬಂಧಿಸಿದವರಿಂದ ನಡೆದಿಲ್ಲ.
ಹೀಗೆ ಅಭಿವೃದ್ಧಿಗೊಂಡ ಬಡಾವಣೆಗಳಲ್ಲಿ ಈಗಾಗಲೇ ಹಲವೆಡೆ ಸಾರ್ವಜನಿಕರಿಗೆ ನಿವೇಶನಗಳ ಮಾರಾಟ ಮಾಡಲಾಗಿದೆ. ಕೆಲವೆಡೆ ವಸತಿ ಕಟ್ಟಡಗಳು ನಿರ್ಮಾಣಗೊಂಡಿವೆ. ನಿವೇಶನ ಮಾರಾಟ ಮಾಡುವಾಗ ಹುಡಾ ಅನುಮತಿ ಪಡೆದೇ ಬಡಾವಣೆ ನಿರ್ಮಿಸಲಾಗಿದೆ ಎಂದು ಗ್ರಾಹಕರನ್ನು ನಂಬಿಸಿದ್ದಾರೆ.

ಜವಾಬ್ದಾರಿ ಹಂಚಿಕೆ ಲೋಪ: ಅನಧಿಕೃತ ಬಡಾವಣೆಗಳ ಗುರುತಿಸಿ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಹುಡಾ ಕೆಲಸವೋ, ಪಾಲಿಕೆಯ ಕೆಲಸವೋ ಇಲ್ಲವೇ ಕಂದಾಯ ಇಲಾಖೆ ಜವಾಬ್ದಾರಿಯೋ ಎಂಬ ಗೊಂದಲ ಅಕ್ರಮ ವಿನ್ಯಾಸಗಳು ನಿರಾತಂಕವಾಗಿ ಹೆಚ್ಚಲು ಕಾರಣವಾಗಿದೆ ಎನ್ನಲಾಗುತ್ತಿದೆ.

`ಅನಧಿಕೃತ ಬಡಾವಣೆ ಗುರುತಿಸಿ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮಾತ್ರ ನಮ್ಮ ಕೆಲಸ. ಕಾನೂನು ಕ್ರಮ ಕೈಗೊಳ್ಳುವುದು ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಡಳಿತದ ಕೆಲಸ' ಎಂದು ಹುಡಾ ಆಯುಕ್ತ ತಿಪ್ಪೇಶ ನೀಡಿದ ಪ್ರತಿಕ್ರಿಯೆ ಇದನ್ನು ಪುಷ್ಟಿಕರಿಸುತ್ತದೆ.

10 ಸಾವಿರ ಎಕರೆ: `ಅವಳಿ ನಗರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಇರುವುದು ಬರೀ 1246 ಎಕರೆ ಅಲ್ಲ. 10 ಸಾವಿರ ಎಕರೆಯಷ್ಟು ಇದೆ' ಎನ್ನುತ್ತಾರೆ ಹುಡಾದ ಹಿಂದಿನ ಅಧ್ಯಕ್ಷ ಲಿಂಗರಾಜ ಪಾಟೀಲ.

`ನನ್ನ ಅವಧಿಯಲ್ಲಿ ಅನಧಿಕೃತ ಬಡಾವಣೆಗಳ ತೆರವುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಆಗ ಹುಡಾ, ಕಂದಾಯ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಅದರಲ್ಲಿ ತಹಶೀಲ್ದಾರರು, ಪಾಲಿಕೆ ಹಾಗೂ ಹುಡಾ ಆಯುಕ್ತರು ಇದ್ದರು. ಕಾರ್ಯಪಡೆ ಆರಂಭದಲ್ಲಿ ಎರಡು ಬಾರಿ ಸಭೆ ನಡೆಸಿತ್ತು' ನಂತರ ಅದು ತಟಸ್ಥಗೊಂಡಿದೆ ಎನ್ನುತ್ತಾರೆ ಅವರು.

`ಅನಧಿಕೃತ ಬಡಾವಣೆ ಅಭಿವೃದ್ಧಿಪಡಿಸಿದವರಲ್ಲಿ ಬಹುತೇಕ ಪ್ರಭಾವಿಗಳೇ ಇದ್ದಾರೆ. ಕ್ರಮ ಕೈಗೊಳ್ಳಲು ಮುಂದಾದರೆ ರಾಜಕೀಯ ಒತ್ತಡ ತರುತ್ತಾರೆ. ನೆೋಟಿಸ್ ಕೊಟ್ಟರೆ ಅದಕ್ಕೆ ಉತ್ತರ ಕೊಡುವ ಗೋಜಿಗೂ ಹೋಗುವುದಿಲ್ಲ. ಕನಿಷ್ಠ ಅಕ್ರಮ ಬಡಾವಣೆಗಳನ್ನು ದಂಡ ಪಾವತಿಸಿಕೊಂಡು ಸಕ್ರಮಗೊಳಿಸಿ ಎಂದು ಹುಡಾಗೆ ಮನವಿ ಸಲ್ಲಿಸಲು ಸಿದ್ಧರಿಲ್ಲ ಎಂದರೆ ಅವರ ಪ್ರಭಾವ ತಿಳಿಯುತ್ತದೆ' ಎಂದು ಹುಡಾದ ಅಧಿಕಾರಿಯೊಬ್ಬರು ಹೇಳುತ್ತಾರೆ.

`ಹಿಂದಿನ ಸರ್ಕಾರ ರೂಪಿಸಿರುವ ಅಕ್ರಮ-ಸಕ್ರಮ ಯೋಜನೆ ಕಡತಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದಲ್ಲಿ `ಅನಧಿಕೃತ ಬಡಾವಣೆ'ಯ ಮಾತೇ ಇರುವುದಿಲ್ಲ ಎಂಬುದು ಅವರ ಈ ಧೋರಣೆಗೆ ಕಾರಣ' ಎನ್ನುತ್ತಾರೆ.

`ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಅದರ ಬಗ್ಗೆ ಮಾಹಿತಿ ಇಲ್ಲ. ಕಾರ್ಯಪಡೆಯ ಕುರಿತಾದ ವಿವರಗಳನ್ನು ಪರಿಶೀಲಿಸಿ ನಂತರ ಕಾರ್ಯೋನ್ಮುಖವಾಗುವುದಾಗಿ' ಸಹಾಯಕ ಆಯುಕ್ತ ಮಹೇಶ ಕರ್ಜಗಿ ಪತ್ರಿಕೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT