ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರಕ್ಕೀಗ `ಅಷ್ಟಪಥ'

ವಿನೂತನ ಸಾರಿಗೆ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಣಿಜ್ಯ ವಹಿವಾಟು ವಿಚಾರದಲ್ಲಿ ಹೆಮ್ಮರವಾಗಿ ಬೆಳೆದ ನಗರ, `ಛೋಟಾ ಮುಂಬೈ' ಎಂದೇ ಕರೆಸಿಕೊಳ್ಳುವ ಹುಬ್ಬಳ್ಳಿ. ಸಾಂಸ್ಕೃತಿಕವಾಗಿ ದಟ್ಟವಾದ ಬೇರುಗಳನ್ನು ಹೊಂದಿರುವ ನಗರ `ಸಾಹಿತಿಗಳ ತವರೂರು'- ಧಾರವಾಡ. ಈ ಅವಳಿ ನಗರಗಳ ಮಧ್ಯೆ `ಹೂ-ದಾರ' ಎಂಬಂತೆ ಬಹುನಿರೀಕ್ಷಿತ `ಕ್ಷಿಪ್ರ ಬಸ್ ಸಂಚಾರ ವ್ಯವಸ್ಥೆ' (ಬಸ್ ರ‌್ಯಾಪಿಡ್ ಟ್ರ್ಯಾನ್‌ಸಿಟ್ ಸಿಸ್ಟಂ- ಬಿಆರ್‌ಟಿಎಸ್) ಅನುಷ್ಠಾನ ಹಂತದಲ್ಲಿದೆ!

ನಾಡಿನ ಎರಡನೇ ರಾಜಧಾನಿಯಾಗಿ ಹುಬ್ಬಳ್ಳಿಯಲ್ಲಿ ಇರಬೇಕಾದ ಯಾವ ಸೌಕರ್ಯಗಳೂ, ಯೋಜನೆಗಳೂ ಭವಿಷ್ಯದ ಕನಸೂ ಇಲ್ಲದೆ, ದೇಶದ ದೊಡ್ಡ ಹಳ್ಳಿಯಾಗಿಯೇ ಹುಬ್ಬಳ್ಳಿ ಉಳಿದಿದೆ. ಹೊಂದಿಕೊಂಡೇ ಇರುವ ಧಾರವಾಡದ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಆದರೆ, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ(ಪಿ.ಬಿ. ರಸ್ತೆ) ನಾಲ್ಕರಲ್ಲಿ, ಉತ್ತರ ಕರ್ನಾಟಕದ ಪ್ರಮುಖ ನಗರಗಳಾಗಿ `ಖ್ಯಾತಿ' ಪಡೆದಿರುವ ಈ ಅವಳಿ ನಗರದಲ್ಲಿ ಮುಂಬೈ ಜನರಂತೆಯೇ ಜೀವಂತಿಕೆಯಿದೆ, ಸ್ವಂತಿಕೆಯಿದೆ. ನಗರೀಕರಣದ ಗತಿ ನಿರೀಕ್ಷೆಗಳನ್ನೂ ಮೀರಿ ಬೆಳೆಯುತ್ತಿದೆ. ಅದಕ್ಕೆ ಪೂರಕ ಎಂಬಂತೆ ರೂ.692 ಕೋಟಿ ವೆಚ್ಚದಲ್ಲಿ ಬರಲಿದೆ ಈ ವಿನೂತನ ಬಸ್ ಸಾರಿಗೆ ವ್ಯವಸ್ಥೆ.

ಅತ್ಯಧಿಕ ಜನಸಂಚಾರ ಇರುವ ಈ ಅವಳಿ ನಗರಗಳಿಗೆ ಪಿ.ಬಿ. ರಸ್ತೆಯೇ ಸಂಪರ್ಕ ಸೇತು. ಸಂಚಾರ ದಟ್ಟಣೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮೂಲಕ ದ್ವಿಪಥ ರಸ್ತೆಯನ್ನು ಚತುಷ್ಪಥ ಆಗಿ ಪರಿವರ್ತಿಸುವ ಹಾದಿಯಲ್ಲಿದ್ದಾಗಲೇ, ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ರಾಜ್ಯ ನಗರ ಭೂ ಸಾರಿಗೆ ಅಭಿವೃದ್ಧಿ ಇಲಾಖೆ ವಿಶ್ವ ಬ್ಯಾಂಕ್ ನೆರವಿನಲ್ಲಿ `ಬಿಆರ್‌ಟಿಎಸ್' ಪರಿಚಯಿಸಲು ಮುಂದಾಗಿದೆ. ಹೀಗಾಗಿ ಚತುಷ್ಪಥ ಬದಲು ಅಷ್ಟಪಥ ನಿರ್ಮಾಣವಾಗುತ್ತಿದ್ದು, ಯೋಜನೆ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಇತ್ತೀಚಿನ ಸಮೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಮಧ್ಯೆ 1.50 ಲಕ್ಷ ಜನ ನಿತ್ಯ ಸಂಚರಿಸುತ್ತಾರೆ. ಈ ಪೈಕಿ ಬಸ್‌ಗಳನ್ನು ಅವಲಂಬಿಸಿದವರ ಪ್ರಮಾಣ ಶೇ 7 ಮಾತ್ರ. ಬಹುತೇಕ ಮಂದಿ ದ್ವಿಚಕ್ರ, ಕಾರುಗಳನ್ನು ಬಳಸುತ್ತಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ ಸುಗಮ ಮತ್ತು ಸರಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಈ ಉದ್ದೇಶದಿಂದ `ಬಿಆರ್‌ಟಿಎಸ್' ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ, ನಮ್ಮಲ್ಲಿ ಅಹಮದಾಬಾದ್, ಪುಣೆ, ಜೈಪುರ ಮಹಾನಗರಗಳಲ್ಲಿ `ಬಿಆರ್‌ಟಿಎಸ್' ಯೋಜನೆ ಇದೆ. ರಾಜ್ಯದಲ್ಲಿ ಮೊದಲ ಬಾರಿಗೆ ಆ ಮಾದರಿಯ ಸಾರಿಗೆ ವ್ಯವಸ್ಥೆಯನ್ನು ಅವಳಿ ನಗರದ ಮಧ್ಯೆ ಕಾರ್ಯಗತಗೊಳಿಸುವ ಉದ್ದೇಶದಿಂದ `ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಂಪೆನಿ' ಸ್ಥಾಪಿಸಲಾಗಿದೆ. ಇಡೀ ಯೋಜನೆಯ ಹೊಣೆ ಈ ಕಂಪೆನಿಗೆ ವಹಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ರೂ.119 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಯನ್ನು 2010ರಲ್ಲಿ ಆರಂಭಿಸಲಾಗಿತ್ತು. ಅದಾಗಿ ಎರಡು ವರ್ಷದಲ್ಲಿ `ಬಿಆರ್‌ಟಿಎಸ್' ಯೋಜನೆ ಬಂದಿರುವುದರಿಂದ, ಅದಕ್ಕೆ ಪೂರಕವಾಗಿ ರಸ್ತೆ ವಿಸ್ತರಣೆ ನಡೆಯುತ್ತಿದೆ. ಈಗಾಗಲೇ ಸುಮಾರು 8 ಕಿ.ಮೀ ಉದ್ದ ಕಾಂಕ್ರಿಟ್ ರಸ್ತೆ ನಿರ್ಮಾಣವೂ ಪೂರ್ಣಗೊಂಡಿದೆ.
`ಬಿಆರ್‌ಟಿಎಸ್'ಗಾಗಿ ನಗರ ಭಾಗದಲ್ಲಿ ರಸ್ತೆಯ ಮಧ್ಯಭಾಗದಿಂದ ಇಕ್ಕೆಡೆಗಳಲ್ಲಿ ತಲಾ 17.5 ಮೀಟರ್‌ನಂತೆ 35 ಮೀಟರ್, ಗ್ರಾಮೀಣ ಭಾಗದಲ್ಲಿ ತಲಾ 22 ಮೀಟರ್‌ನಂತೆ 44 ಮೀಟರ್ ವಿಸ್ತಾರದಲ್ಲಿ ರಸ್ತೆ ಪಥ ನಿರ್ಮಿಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಹೊಸೂರು ವೃತ್ತದಿಂದ ಬಿವಿಬಿ ಕಾಲೇಜುವರೆಗೆ 35 ಮೀಟರ್, ಬಿವಿಬಿಯಿಂದ ಧಾರವಾಡದ ಜಿಎಸ್‌ಎಸ್‌ವರೆಗೆ 44 ಮೀಟರ್ ಅಗಲದಲ್ಲಿ ಈ ಅಷ್ಟಪಥ ಇರಲಿದೆ. ಒಟ್ಟು ಯೋಜನೆಯಡಿ 19.7 ಕಿ.ಮೀ ಉದ್ದದ ರಸ್ತೆ ವಿಸ್ತರಣೆಯಾಗಲಿದೆ. ಯೋಜನೆಗೆ 63 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. `ಬಿಆರ್‌ಟಿಎಸ್'ನಡಿ ರಸ್ತೆ ಮಧ್ಯದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣಗಳ ನಿರ್ಮಾಣವೂ ಆಗಲಿದೆ. ಜಂಕ್ಷನ್‌ಗಳಲ್ಲಿ ಬಿಆರ್‌ಟಿಎಸ್ ಫ್ಲೈಓವರ್, ಬಸ್ ಟರ್ಮಿನಲ್, ಡಿಪೊ, ವಿಭಾಗೀಯ ಕಾರ್ಯಾಗಾರ ಬರಲಿವೆ. ಬಿಆರ್‌ಟಿಎಸ್ ಕಾರಿಡಾರ್ ನಿರ್ಮಾಣಕ್ಕೆ ಪ್ರತಿ ಕಿ.ಮೀಗೆ ರೂ.15 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ `ಬಿಆರ್‌ಟಿಎಸ್' 2015ರ ಫೆಬ್ರುವರಿ ವೇಳೆಗೆ ಪೂರ್ಣಗೊಂಡು 150 ಸಾಮಾನ್ಯ ಬಸ್‌ಗಳು ಮತ್ತು ಒಂದಕ್ಕೊಂದು ಜೋಡಿಸಿದ 30 ಬಸ್‌ಗಳೂ ಅವಳಿ ನಗರದ ಮಧ್ಯೆ ಓಡಾಡಲಿವೆ. ನಗರ ಪ್ರದೇಶದಲ್ಲಿ ಮೂರು ಮತ್ತು ನಗರಕ್ಕೆ ಹೊರತಾದ ಪ್ರದೇಶದಲ್ಲಿ ನಾಲ್ಕು ಪಥಗಳ ಬಿಆರ್‌ಟಿಎಸ್ ಕಾರಿಡಾರ್ ನಿರ್ಮಿಸಲಾಗುತ್ತಿದ್ದು, ಕಾರಿಡಾರಿನ ಇಕ್ಕೆಡೆಗಳಲ್ಲಿ ಇತರ ವಾಹನಗಳ ಸಂಚಾರಕ್ಕಾಗಿ ಎರಡು ಪಥಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಿಆರ್‌ಟಿಎಸ್ ಪಥದಲ್ಲಿ ಸಂಚರಿಸುವ ಬಸ್‌ಗಳಿಗೆ 33 ಬಸ್ ನಿಲ್ದಾಣಗಳು ನಿರ್ಮಾಣವಾಗಲಿವೆ.

ಬಿಆರ್‌ಟಿಎಸ್ ಸೇವೆಗೆ ಬಸ್ ನಿಲ್ದಾಣದಲ್ಲೇ ಟಿಕೆಟ್ ಪಡೆಯಬೇಕು. ಪ್ರಯಾಣಿಕರಿಗೆ ಬಸ್ ನಿಲುಗಡೆ ಸ್ಥಳ, ವೇಳಾಪಟ್ಟಿಯ ಮಾಹಿತಿ ಸಹಿತ ಅವಘಡ ಸಂಭವಿಸಿದರೆ ಮಾಹಿತಿಯನ್ನು ನಿಯಂತ್ರಣ ಕೇಂದ್ರದ ಮೂಲಕ ಬಸ್‌ನಲ್ಲೇ ನೀಡಲಾಗುವುದು.

ಪ್ರತಿ 10 ಸೆಕೆಂಡ್‌ಗೆ ಒಮ್ಮೆ ಮಾಹಿತಿ ಪರಿಷ್ಕರಣೆ ಸೌಲಭ್ಯವಿರುತ್ತದೆ. ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಒಟ್ಟು ಪ್ರಯಾಣಿಕರ ಪೈಕಿ ಶೇಕಡಾ 30ರಷ್ಟು ಮಂದಿ ಈ ಎರಡೂ ಸಿಟಿ ಮಧ್ಯೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ನೇರ ಪ್ರಯಾಣಕ್ಕಾಗಿ ಎಕ್ಸ್‌ಪ್ರೆಸ್ ಬಸ್ ಸೇವೆ ಆರಂಭಿಸಲಿದೆ. ಸಾಮಾನ್ಯ ಬಸ್‌ಗಳು ಎಲ್ಲ 33 ನಿಲ್ದಾಣಗಳಲ್ಲಿ ನಿಲ್ಲಲಿವೆ.

ಯೋಜನೆಗೆ `ಸುಸ್ಥಿರ ನಗರ ಸಾರಿಗೆ ಯೋಜನೆ'(ಎಸ್‌ಯುಟಿಪಿ) ಅಡಿ ವಿಶ್ವ ಬ್ಯಾಂಕ್ 4.70 ಕೋಟಿ ಡಾಲರ್ ಸಾಲ ರೂಪದಲ್ಲಿ ನೀಡಲಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಯೋಜನೆ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಹುಬ್ಬಳ್ಳಿ-ಧಾರವಾಡ `ಬಿಆರ್‌ಟಿಎಸ್' ನೋಡಿಕೊಳ್ಳುತ್ತಿದೆ. ಈ ಕಂಪೆನಿ ರೂ.20 ಕೋಟಿ ಷೇರು ಬಂಡವಾಳ ಹೊಂದಿದೆ. ಯೋಜನೆಗೆ ಅಹಮದಾಬಾದ್ ಮೂಲದ ಸೆಪ್ಟ್ ಯೂನಿವರ್ಸಿಟಿ ಆಫ್ ಎಕ್ಸಲೆನ್ಸ್ ತಾಂತ್ರಿಕ ನೆರವು ನೀಡುತ್ತಿದೆ.

ಯೋಜನೆಯಿಂದ ಸಂತ್ರಸ್ತರಾಗುವವರ ಅಹವಾಲು ಆಲಿಸಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಸಂತ್ರಸ್ತ ಭೂ ಮಾಲೀಕರಿಗೆ ಮತ್ತು ಬಾಡಿಗೆದಾರರಿಗೆ ಸೂಕ್ತ ಪರಿಹಾರ ನೀಡಲು, `ಪ್ರತ್ಯೇಕ ಪುನರ್ವಸತಿ ಕ್ರಿಯಾ ಯೋಜನೆ' ಸಿದ್ಧಪಡಿಸಲಾಗಿದೆ.

ಈ ಮಧ್ಯೆ ಬಿಆರ್‌ಟಿಎಸ್ ಮತ್ತು ಚತುಷ್ಪಥದ ಅಗಲವನ್ನು 53 ಮೀಟರ್‌ಗೆ ಹೆಚ್ಚಿಸಬೇಕು ಎಂಬ ಹೊಸ ಬೇಡಿಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ!

ಹಸಿರು ಬಿಆರ್‌ಟಿಎಸ್
ಬಿಆರ್‌ಟಿಎಸ್ ಅನುಷ್ಠಾನಕ್ಕಾಗಿ 12,560 ಮರಗಳಿಗೆ ಕೊಡಲಿಯೇಟು ಬಿದ್ದಿದೆ. ಅದರ ವಿರುದ್ಧ ಪರಿಸರ ಪ್ರಿಯರು ಧ್ವನಿ ಎತ್ತಿದ್ದು, `ಅವಳಿ ನಗರದ ಮಧ್ಯೆ ಬಿಆರ್‌ಟಿಎಸ್ ಅಗತ್ಯವಿಲ್ಲ; ಚತುಷ್ಪಥ ಸಾಕು' ಎಂದು ಪ್ರತಿಪಾದಿಸುತ್ತಿದ್ದಾರೆ.

ಪರಿಸರವಾದಿಗಳ ಪ್ರತಿಭಟನೆಗೆ ಮಣಿದಿರುವ `ಬಿಆರ್‌ಟಿಎಸ್', ಅವಳಿ  ನಗರದಲ್ಲಿ ಹಂತ ಹಂತವಾಗಿ 18,000 ಸಸಿ ನೆಡಲು ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ 8 ಸಾವಿರ ಸಸಿಗಳನ್ನು ನೆಡಲು  ಮುಂದಾಗಿದೆ. ಉದ್ಯಾನ, ಶಾಲೆ ಮತ್ತು ನೀರಿನ ಟ್ಯಾಂಕ್‌ಗಳಿರುವ ಅವಳಿ ನಗರದ ವಿವಿಧ ಪ್ರದೇಶಗಳಲ್ಲಿ ಅರಣ್ಯೀಕರಣ, ಕಾರಿಡಾರಿನ ಇಕ್ಕೆಲಗಳಲ್ಲಿ 4,000 ಸಸಿ ಹಾಗೂ `ಬಿಆರ್‌ಟಿಎಸ್' ಟರ್ಮಿನಲ್ ಪ್ರದೇಶದಲ್ಲಿ 1200 ಸಸಿ ನೆಡಲು ಉದ್ದೇಶಿಸಲಾಗಿದೆ. ಪರಿಸರ ನಿರ್ವಹಣೆ ಯೋಜನೆಗಾಗಿ `ಹಸಿರು ಬಿಆರ್‌ಟಿಎಸ್' ಸಮಿತಿ ರಚಿಸಲಾಗಿದೆ.

ಬಿಆರ್‌ಟಿಎಸ್ ಎರಡನೇ ಹಂತದಲ್ಲಿ ಹುಬ್ಬಳ್ಳಿ, ಗೋಪನಕುಪ್ಪ, ವಿಮಾನ ನಿಲ್ದಾಣ, ಧಾರವಾಡ ಕರ್ನಾಟಕ ವಿವಿ, ಧಾರವಾಡ ಕೇಂದ್ರ ಬಸ್ ನಿಲ್ದಾಣಗಳಿಗೆ ಫೀಡರ್ ಕಾರಿಡರ್ ಸಂಚಾರವನ್ನು 62 ಕಿ.ಮೀ ವ್ಯಾಪ್ತಿಯಲ್ಲಿ ಕೈಗೊಳ್ಳಲು `ಬಿಆರ್‌ಟಿಎಸ್' ಉದ್ದೇಶಿಸಿದೆ.

ಶಾಪವಾಗುವ ಅನುಮಾನ
ಅಭಿವೃದ್ಧಿಯ ನಾಗಾಲೋಟಕ್ಕೆ ಪೂರಕವಾಗಿ ಬರುತ್ತಿರುವ `ಬಿಆರ್‌ಟಿಎಸ್', ಕೃಷಿಕರು, ಹೈನುಗಾರರ ದೃಷ್ಟಿಯಿಂದ ಶಾಪವಾಗುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಅವಳಿ ನಗರದ ಮಧ್ಯೆ 10ಕ್ಕೂ ಹೆಚ್ಚು ಹಳ್ಳಿಗಳು ಇನ್ನೂ ಕೃಷಿ ಅವಲಂಬಿತ. ಕೃಷಿ ಚಟುವಟಿಕೆಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್, ಸೈಕಲ್ ಬಳಸಲಾಗುತ್ತಿದೆ. ಈ `ಅತ್ಯಾಧುನಿಕ ಪಥ'ಗಳಲ್ಲಿ ಈ `ಹಳ್ಳಿ ರಥ'ಗಳ ಸಂಚಾರ ಸ್ಥಿತಿ ಹೇಗೆ ? ಎನ್ನುವುದೂ ಪ್ರಶ್ನೆಯಾಗಿದೆ.

`ಕಡಿಮೆ ಸಮಯ-ಬಲು ದೂರ'
`ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಸಂಚಾರ ದಟ್ಟಣೆ, ಜನರಿಗೆ ಸಾರಿಗೆ ಸೌಲಭ್ಯ ಕಲಿಸುವ ಉದ್ದೇಶದಿಂದ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಅಹಮದಾಬಾದ್ ಮತ್ತು ಪುಣೆಯಲ್ಲಿ ಈ ವ್ಯವಸ್ಥೆ ಈಗಾಗಲೇ ಇದೆ. ಬಿಆರ್‌ಟಿಎಸ್‌ನಿಂದ ಕಡಿಮೆ ಸಮಯದಲ್ಲಿ ಹೆಚ್ಚು ದೂರ ಪ್ರಯಾಣ ಸಾಧ್ಯ. ಜೊತೆಗೆ ಪರಿಸರಸ್ನೇಹಿ ಸಂಚಾರ ವ್ಯವಸ್ಥೆ ಇದಾಗಿದೆ'
ವಿ. ಮಂಜುಳಾ ಆಯುಕ್ತೆ, ನಗರ ಭೂ ಸಾರಿಗೆ ನಿರ್ದೆಶನಾಲಯ
(ಡಿಯುಎಲ್‌ಟಿ)


`2015 ಫೆಬ್ರುವರಿಗೆ ಬಿಆರ್‌ಟಿಎಸ್ ಪೂರ್ಣ'
`ಬಿಆರ್‌ಟಿಎಸ್ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಹಣಕಾಸು ನೆರವಿಗೆ ಸಂಬಂಧಿಸಿ ವಿಶ್ವ ಬ್ಯಾಂಕ್, ಭಾರತ ಸರ್ಕಾರದ ನಡುವೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಒಪ್ಪಂದ ಆಗಿವೆ. ಭೂಸ್ವಾಧೀನ, ಸಂತ್ರಸ್ತರಿಗೆ ಪರಿಹಾರ ವಿತರಣೆ ಮುಂದಿನ 2 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಉಳಿದಂತೆ ಡಿಪೊ, ಕಾರ್ಯಾಗಾರ, ಟರ್ಮಿನಲ್, ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲ ಪ್ರಕ್ರಿಯೆ 2015 ಜನವರಿಗೆ ಪೂರ್ಣವಾಗಿ ಫೆಬ್ರುವರಿಗೆ ಬಿಆರ್‌ಟಿಎಸ್ ಬಸ್‌ಗಳು ರಸ್ತೆಗಿಳಿಯಲಿವೆ'.
 - ಸಿ.ಎಂ.ನೂರ್ ಮನ್ಸೂರ್, ವ್ಯವಸ್ಥಾಪಕ, ಹು-ಧಾ ಬಿಆರ್‌ಟಿಎಸ್

ಅವಳಿ ನಗರಗಳಲ್ಲಿ...

ವಾರ್ಡ್ ಸಂಖ್ಯೆ: ಹುಬ್ಬಳ್ಳಿ- 46, ಧಾರವಾಡ- 21
ವ್ಯಾಪ್ತಿ- 202 ಚದರ ಕಿ.ಮೀ
ಜನಸಂಖ್ಯೆ (2001) ಹುಬ್ಬಳ್ಳಿ-5,06,064 ಧಾರವಾಡ-2,36,333
ಜನಸಂಖ್ಯೆ (2011) ಹುಬ್ಬಳ್ಳಿ- ಧಾರವಾಡ:  9.44 ಲಕ್ಷ
ಜನದಟ್ಟಣೆ: 4745/ ಚದರ ಕಿ.ಮೀ
ಒಟ್ಟು ಮನೆಗಳು: 1,77,777
ಹುಬ್ಬಳ್ಳಿ- ಧಾರವಾಡ ನಗರ ಅಂತರ 22.25 ಕಿ.ಮೀ
ಅವಳಿ ನಗರಗಳ ಮಧ್ಯೆ ನಿತ್ಯ ಸಂಚರಿಸುವವರ ಸಂಖ್ಯೆ- 1.70ಲಕ್ಷ
ಇಂಟರ್‌ಸಿಟಿ ಪ್ರಯಾಣಿಕರ ಸಂಖ್ಯೆ ಶೇಕಡಾ 62
ನಗರ ಬಸ್‌ಗಳು - 279
ಬಸ್‌ನಲ್ಲಿ ಸಂಚರಿಸುವವರ ಸಂಖ್ಯೆ- 875
ಬಸ್ ಸರಾಸರಿ ಗಳಿಕೆ:  ರೂ. 5,270
ಸಾರಿಗೆ: ನಿಮಿಷಕ್ಕೊಂದರಂತೆ ವಾಯವ್ಯ ಸಾರಿಗೆ ಬಸ್

ಬಿಆರ್‌ಟಿಎಸ್ ವೈಶಿಷ್ಟ್ಯ
-ಎಲ್ಲ ಬಸ್ ನಿಲ್ದಾಣಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ
-ಜಿಪಿಎಸ್ ಆಧಾರಿಸಿ ವಾಹನ ಟ್ರ್ಯಾಕಿಂಗ್
-ಪ್ರಯಾಣಿಕರಿಗೆ ಕ್ಷಣಕ್ಷಣದ ಮಾಹಿತಿ
-ಬಸ್‌ಗಳಲ್ಲಿ ಎಲ್‌ಇಡಿ ಮತ್ತು ಆಡಿಯೋ 
-ಬಸ್‌ಗಳ ಆಗಮನ-ನಿರ್ಗಮನ ತಿಳಿಸಲು ಎಲ್‌ಇಡಿ ಡಿಸ್‌ಪ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT