ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಮಕ್ಕಳ ಅವ್ವನ ಚಿನ್ನದ ಗುರಿ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಈ ಪುಟ್ಟ ಅವಳಿ ಮಕ್ಕಳಿಗೆ ಆಗಸ್ಟ್ 5ಕ್ಕೆ ಐದು ವರ್ಷ ತುಂಬಲಿದೆ. ಆದರೆ ಜನ್ಮದಿನದ ಸಂಭ್ರಮ ಆಚರಿಸಲು ಅಮ್ಮ ಮನೆಯಲ್ಲಿರುವುದಿಲ್ಲ. ಮನೆಯಲ್ಲೇ ಏನು, ದೇಶದಲ್ಲೇ ಇರುವುದಿಲ್ಲ. ಆ ಸಮಯದಲ್ಲಿ ಅವರು ಲಂಡನ್‌ನಲ್ಲಿ `ರಿಂಗ್~ನೊಳಗೆ ಕಾದಾಡುತ್ತಿರುತ್ತಾರೆ. ಈ ಪುಟ್ಟ ಮಕ್ಕಳ ಅಮ್ಮನ ಹೆಸರು ಮೇರಿ ಕೋಮ್. ಐದು ಬಾರಿಯ ವಿಶ್ವ ಚಾಂಪಿಯನ್. ಈ ಬಾರಿಯ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಮಹಿಳೆ.

ತನ್ನ ಪುಟ್ಟ ಮಕ್ಕಳೊಂದಿಗೆ ಒಂದಿಷ್ಟು ದಿನ ಕಳೆಯಲು ಮೇರಿ ಕೋಮ್ ಅವರಿಗೆ ಸಮಯ ಸಿಗುತ್ತಿಲ್ಲ. ಒಂದೂವರೆ ವರ್ಷದ ಅವಧಿಯಲ್ಲಿ 300 ದಿನ ತರಬೇತಿ, ಸ್ಪರ್ಧೆ ಎಂದು ಮಕ್ಕಳಿಂದ ದೂರ ಉಳಿದಿರುತ್ತಾರೆ. ಪುತ್ರ ಖೂಪ್ನಿವರ್ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಕೂಡ ಜೊತೆಗಿರಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೇರಿ ಕಾದಾಡುತ್ತಿದ್ದರು.

`ಇಬ್ಬರು ಮಕ್ಕಳನ್ನು ಬಿಟ್ಟು ತರಬೇತಿಗೆ ಅಥವಾ ಸ್ಪರ್ಧೆಗೆ ತೆರಳಲು ತುಂಬಾ ಕಷ್ಟವಾಗುತ್ತದೆ. ಆದರೆ ಒಲಿಂಪಿಕ್ಸ್ ಪದಕದ ಗುರಿ ಒಂದೆಡೆ, ಪುಟ್ಟ ಮಕ್ಕಳ ಜೊತೆಗಿರಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ಮತ್ತೊಂದೆಡೆ. ಇದೇ ರೀತಿಯ ಜೀವನವನ್ನು ಒಲಿಂಪಿಕ್ಸ್ ಮುಗಿಯುವವರೆಗೆ ಮುಂದುವರಿಸಬೇಕು~ ಎನ್ನುತ್ತಾರೆ ಮೇರಿ. ಅವರ ಧ್ವನಿಯಲ್ಲಿ ನೋವಿತ್ತು. ಆದರೆ ಸಾಧನೆ ಮಾಡಬೇಕೆಂಬ ಛಲವಿತ್ತು.

ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ `ಮೆಗ್ನಿಫಿಶೆಂಟ್ ಮೇರಿ~ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೋಮ್‌ಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಿದಿದೆ. ಅಷ್ಟೇ ಅಲ್ಲ, ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಲು ಸೇನಾಪಡೆ ಮುಂದಾಗಿದೆ. ಈ ಗೌರವಕ್ಕೆ ಪಾತ್ರರಾಗಲಿರುವ ಭಾರತದ ಮೊದಲ ಮಹಿಳೆ ಎನಿಸಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿ ಮಹಿಳಾ ಬಾಕ್ಸಿಂಗ್‌ಗೆ ಪ್ರವೇಶ ನೀಡಲಾಗಿದೆ. ಅದರಲ್ಲಿ ಪದಕ ಗೆಲ್ಲಬೇಕು ಎಂಬುದು 29 ವರ್ಷ ವಯಸ್ಸಿನ ಮೇರಿ ಅವರ ಪ್ರಮುಖ ಗುರಿ. ಅವರು 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಜಗತ್ತು ಕಂಡ ಶ್ರೇಷ್ಠ ಮಹಿಳಾ ಅಮೆಚೂರ್ ಬಾಕ್ಸರ್ ಎನಿಸಿರುವ ಮೇರಿ ಲಂಡನ್‌ಗೆ ತೆರಳುವ ಮುನ್ನ ನೀಡಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.

ಪುಟ್ಟ ಮಕ್ಕಳನ್ನು ಹೊಂದಿರುವ ನಿಮಗೆ ಶಿಬಿರ ಹಾಗೂ ಸ್ಪರ್ಧೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಲು ಕಷ್ಟವಾಗುವುದಿಲ್ಲವೇ?
ಹಲವು ತಿಂಗಳು ಮಕ್ಕಳಿಂದ ದೂರ ಉಳಿದ ಉದಾಹರಣೆ ಇದೆ. ಅವರು ಜನಿಸಿದಾಗಿನಿಂದ ಈ ರೀತಿ ಆಗುತ್ತಿದೆ. ಪುಟ್ಟ ಮಕ್ಕಳಿಂದ ಅಮ್ಮ ದೂರವಿಲು ಸಾಧ್ಯವೇ? ಈ ನೋವನ್ನು ಯಾರ ಬಳಿ ಹೇಳಿಕೊಳ್ಳಲಿ. ಇನ್ನು ನಾನು ಲಂಡನ್‌ನಲ್ಲಿರುತ್ತೇನೆ. ಸುಮಾರು ಒಂದು ತಿಂಗಳು ಮಕ್ಕಳ ಮುಖ ನೋಡಲು ಸಾಧ್ಯವಿಲ್ಲ. ಪತಿ ಕೂಡ ನನ್ನೊಂದಿಗೆ ಲಂಡನ್‌ನಲ್ಲಿರುತ್ತಾರೆ. ನನ್ನ ಪೋಷಕರು ಈ ಮಕ್ಕಳನ್ನು ನೋಡಿಕೊಳ್ಳಬೇಕು.

ಒಂದನ್ನು ಸಾಧಿಸಲು ಇನ್ನೊಂದನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾನಿದ್ದೇನೆ. ನೋವಿನ ಸಂಗತಿ ಎಂದರೆ ಮಕ್ಕಳು ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗ್ದ್ದಿದರು. ಆದರೆ ಆ ಸುದ್ದಿಯನ್ನು ಕುಟುಂಬ ನನಗೆ ತಿಳಿಸಲೇ ಇಲ್ಲ.

ಏಕೆಂದರೆ ನಾನು ಆ ಸಮಯದಲ್ಲಿ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿರುತ್ತಿದ್ದೆ. ಆದರೆ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬ ಖುಷಿ ಇದೆ. ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಹೆಮ್ಮೆ ಇದೆ.

ನಿಮ್ಮ ಮಗು ಹೃದಯ ಸಮಸ್ಯೆ ಚಿಕಿತ್ಸೆಗೆ ಒಳಗಾಗಿದ್ದಾಗ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ತೆರಳ್ದ್ದಿದಿರಿ. ಆ ಸಮಯ ಹೇಗಿತ್ತು?
ಚೀನಾದಲ್ಲಿ ನಡೆದ ಆ ಚಾಂಪಿಯನ್‌ಷಿಪ್‌ಗೆ ಹೋಗುವ ಹಿಂದಿನ ರಾತ್ರಿ ನಾನು ನಿದ್ದೆ ಮಾಡಿರಲಿಲ್ಲ. ದೇಶವನ್ನು ಪ್ರತಿನಿಧಿಸಬೇಕು ಎಂಬ ತುಡಿತ ಒಂದೆಡೆ, ಅನಾರೋಗ್ಯಕ್ಕೆ ಒಳಗಾಗಿರುವ ಕಂದಮ್ಮನಿಂದ ದೂರ ಇರಬೇಕಲ್ಲ ಎಂಬ ಚಿಂತೆ ಇನ್ನೊಂದೆಡೆ. ಏನೇ ಕಷ್ಟಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಪತಿ ಆನ್ಲೆರ್ ಕೋಮ್ ನೀಡಿದ ಭರವಸೆ ಸಮಾಧಾನ ಉಂಟು ಮಾಡಿತು.

ಕಂದನಿಗಾಗಿ ಚಿನ್ನ ಗೆದ್ದು ಬರಬೇಕು ಎಂದು ಪಣತೊಟ್ಟ ಚೀನಾಕ್ಕೆ ತೆರಳಿದ್ದೆ. ಏಷ್ಯನ್ ಕಪ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದು ಬಂದು ಅದನ್ನು ಪುತ್ರನ ಕೈಗೆ ಕೊಟ್ಟೆ. ಅವನು ನಗು ಸೂಚಿಸಿದ ಆ ಕ್ಷಣ ನೋಡಿ ನಾನು ಮತ್ತೆ ಕಣ್ಣೀರಾದೆ.

ನೀವು ಇದುವರೆಗೆ ತೆಗೆದುಕೊಂಡ ಕಠಿಣ ನಿರ್ಧಾರ ಯಾವುದು?
ನನ್ನ ಜೀವನದಲ್ಲಿ ಎದುರಾದ ಅತ್ಯಂತ ಕಠಿಣ ಸಮಯವೆಂದರೆ ಮಗ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು. ಆ ಸಮಯದಲ್ಲಿ ಚಾಂಪಿಯನ್‌ಷಿಪ್‌ಗೆ ತೆರಳಿದ್ದೆ. ಸ್ಪರ್ಧಿಸಲು ರಿಂಗ್‌ನೊಳಗೆ ಇಳಿಯುವಾಗ ಕಣ್ಣೀರು ಬರುತ್ತಿತ್ತು.

ಮತ್ತೊಮ್ಮೆ ಅಂದರೆ ನಾನು ಗರ್ಭಿಣಿ ಆಗಿದ್ದಾಗ ಬಾಕ್ಸಿಂಗ್‌ಗೆ ವಿದಾಯ ಹೇಳಬೇಕೆಂಬ ಒತ್ತಡ ನನ್ನ ಕುಟುಂಬದಿಂದಲೇ ಬಂದಿತ್ತು. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಹಾಗಾಗಿ ಈ ಒತ್ತಡ ಬಂದಿತ್ತು. ಆ ಮಾತಿಗೆ ನಾನು ಕಿವಿಕೊಡಲಿಲ್ಲ. ಕೆಲವೇ ದಿನಗಳಲ್ಲಿ ರಿಂಗ್ ಪ್ರವೇಶಿಸಿದೆ. ಒಂದೇ ವರ್ಷದ ಅವಧಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಆದೆ.

ನಿಮ್ಮ ಮಹತ್ವಾಕಾಂಕ್ಷೆ ಏನು?
ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನ್ನ ಕನಸಾಗಿತ್ತು. ಅದು ಈಡೇರಿದೆ. ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನ ಪ್ರಮುಖ ಗುರಿ. ಪದಕ ಗೆದ್ದ ಮೇಲೆ ಮಕ್ಕಳತ್ತ ಪೂರ್ಣ ಗಮನ ಹರಿಸುತ್ತೇನೆ. ಅವರ ವಿದ್ಯಾಭ್ಯಾಸ, ಆರೈಕೆಯಲ್ಲಿ ತೊಡಗುತ್ತೇನೆ. 

ಭಾರತದಲ್ಲಿ ಹೆಚ್ಚು ಮಹಿಳಾ ಬಾಕ್ಸರ್‌ಗಳಿಲ್ಲ. ಇಷ್ಟು ಸಾಧನೆ ಮಾಡಲು ಕೂಡ ಅವರಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ?
ಈ ಮಾತು ನಿಜ, ಆದರೆ ಭಾರತದಲ್ಲೂ ಪ್ರತಿಭಾವಂತ ಬಾಕ್ಸರ್‌ಗಳಿದ್ದಾರೆ. ಅವರಿಗೆ ಸರಿಯಾದ ಪ್ರೋತ್ಸಾಹ ಹಾಗೂ ತರಬೇತಿ ಸಿಗಬೇಕು ಅಷ್ಟೆ. ಹಾಗೇ, ಮನಸ್ಸಿಟ್ಟು ಕಠಿಣ ಅಭ್ಯಾಸ ನಡೆಸಬೇಕು. `ನಾನು ಮಹಿಳೆ~ ಎಂಬುದನ್ನು ಬದಿಗಿಟ್ಟು ಸ್ಪರ್ಧಿಸಬೇಕು.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಇದೆಯಾ?
ಮೊದಲ ಸುತ್ತಿನಲ್ಲಿ ಬೈ ಸಿಕ್ಕಿ, ಎರಡನೇ ಸುತ್ತಿನಲ್ಲಿ ಗೆದ್ದರೆ ಪದಕ ಗ್ಯಾರಂಟಿ. ಒಂದು ಪದಕದೊಂದಿಗೆ ಖಂಡಿತ ಹಿಂತಿರುಗುತ್ತೇನೆ. ನನ್ನ ಅವಳಿ ಮಕ್ಕಳು ಜನಿಸಿ ಆಗಸ್ಟ್ ಐದಕ್ಕೆ ಐದು ವರ್ಷ ಆಗಲಿದೆ. ವಿಶೇಷವೆಂದರೆ ಅದೇ ದಿನ ನನ್ನ ಸ್ಪರ್ಧೆ ಇರುತ್ತದೆ. ಈ ಮುದ್ದು ಕಂದಮ್ಮಗಳಿಗೆ ನಾನು ಅಚ್ಚರಿ ಉಡುಗೊರೆಯೊಂದನ್ನು ನೀಡಬೇಕು.

ಪುರುಷರೊಂದಿಗೆ ತರಬೇತಿ ಪಡೆದ ಅನುಭವ ಹೇಗಿತ್ತು?
ನನ್ನ ಎದುರಾಳಿ ಸ್ಪರ್ಧಿಗಳು ಎತ್ತರ ಹಾಗೂ ಶಕ್ತಿಯುತರಾಗಿರುತ್ತಾರೆ. ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಪುರುಷರೊಂದಿಗೆ ತರಬೇತಿ ನಡೆಸಿರುವುದು ನನ್ನ ನೆರವಿಗೆ ಬರಬಹುದು. ಪುಣೆಯಲ್ಲಿ ಜರುಗಿದ ಶಿಬಿರದಲ್ಲಿ ನಾನು ಅವರೊಂದಿಗೆ ತರಬೇತಿ ನಡೆಸಿದ್ದೆ. 
 
ನೀವು ಬಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಆರಂಭದಲ್ಲಿ ಅಥ್ಲೀಟ್ ಆಗಬೇಕೆಂಬ ಕನಸು ಹೊಂದಿದ್ದೆ. ಆದರೆ ಮಣಿಪುರದವರೇ ಆದ ದಿಂಕೊ ಸಿಂಗ್ ಬಾಕ್ಸಿಂಗ್‌ನಲ್ಲಿ ಯಶಸ್ಸು ಕಂಡಿದ್ದು ನನ್ನನ್ನು ಹುರಿದುಂಬಿಸಿತು. ಪೋಷಕರ ವಿರೋಧದ ನಡುವೆಯೂ ಬಾಕ್ಸಿಂಗ್ ಅಭ್ಯಾಸ ಶುರು ಮಾಡಿದೆ.

ಆದರೆ ಆ ಹಾದಿಯಲ್ಲಿ ಎದುರಾದ ಟೀಕೆ, ಮುಜುಗರವನ್ನು ಮರೆಯುವಂತಿಲ್ಲ. ನಾನು ಬಾಕ್ಸರ್ ಆಗಿದ್ದನ್ನು ಕಂಡು ನನ್ನ ಸಂಬಂಧಿಗಳೇ ವ್ಯಂಗ್ಯವಾಡಿದ್ದರು. ವಿಶ್ವ ಚಾಂಪಿಯನ್ ಆದರೂ ಸಹಾಯ ಮಾಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನನಗೆ ಎಲ್ಲಾ ಕಡೆಯಿಂದ ಬೆಂಬಲ ಸಿಗುತ್ತಿದೆ. 

ಆರಂಭದಲ್ಲಿ ನಿಮ್ಮ ತಂದೆಯೂ ವಿರೋಧ ವ್ಯಕ್ತಪಡಿಸಿದ್ದರಲ್ಲವೇ?
ಮಹಿಳೆಯರು ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುತ್ತಾರೆ ಎಂಬ ವಿಷಯ ತಂದೆಗೆ ಗೊತ್ತಿರಲಿಲ್ಲ. ಜೊತೆಗೆ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುವುದರಿಂದ ನನ್ನ ರೂಪದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕವಾಗಿತ್ತು.
 
ನಮ್ಮದು ಬಡ ಕುಟುಂಬ. ಬಾಕ್ಸಿಂಗ್‌ಗೆ ಬೇಕಾದ ಒಂದು ಗ್ಲೌಸ್ ಖರೀದಿಸುವುದೂ ಕಷ್ಟವಿತ್ತು. ಆದರೆ ವೃತ್ತಿಪರ ಹಾಗೂ ಅಮೆಚೂರ್ ಬಾಕ್ಸಿಂಗ್ ನಡುವೆ ಇರುವ ವ್ಯತ್ಯಾಸವನ್ನು ನಾನು ಅವರಿಗೆ ತಿಳಿಸಿದೆ. ಮೊದಲ ಬಾರಿ ಚಾಂಪಿಯನ್ ಆದಾಗ ನನಗಿಂತ ಹೆಚ್ಚು ಖುಷಿಯಾಗಿದ್ದು ತಂದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT