ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿನಗರಕ್ಕೂ ಬಂತು ಟೆಂಡರ್ ಶ್ಯೂರ್

Last Updated 18 ಅಕ್ಟೋಬರ್ 2011, 6:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರದ ರೂ 100 ಕೋಟಿ ವಿಶೇಷ ಅನು ದಾನದಲ್ಲಿ ಅವಳಿನಗರದ ಎರಡು ರಸ್ತೆಗಳನ್ನು ಮಾದರಿ ಸರ್ವ ಋತು ಮಾರ್ಗಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿರುವ ಮಹಾನಗರ ಪಾಲಿಕೆ, ಅದಕ್ಕಾಗಿ ಹುಬ್ಬಳ್ಳಿಯ ನೀಲಿಜಿನ್ ಹಾಗೂ ಧಾರವಾಡದ ಆಜಾದ್ ರಸ್ತೆಗಳನ್ನು ಆಯ್ಕೆ ಮಾಡಿಕೊಂಡಿದೆ.

`ನಗರಗಳ ರಸ್ತೆ ಅಭಿವೃದ್ಧಿಗಾಗಿಯೇ ವಿಶೇಷವಾಗಿ ವಿನ್ಯಾಸ ಗೊಳಿಸಲಾದ `ಟೆಂಡರ್ ಶ್ಯೂರ್~ ಯೋಜನೆ ಮೂಲಕ ಕಾಮಗಾರಿ ನಡೆಸಬೇಕು ಹಾಗೂ ಯೋಜನೆಗಾಗಿ ರೂ 2 ಕೋಟಿ ಎತ್ತಿಡಬೇಕು ಎಂಬ ತೀರ್ಮಾನವನ್ನು ಮಾಡಲಾಗಿದೆ~ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

`ಟೆಂಡರ್ ಶ್ಯೂರ್ ಯೋಜನೆ ಪ್ರಕಾರ ರಸ್ತೆ ಅಭಿವೃದ್ಧಿ ಗೊಂಡರೆ ಪಾದಚಾರಿಗಳು, ಸೈಕಲ್ ಸವಾರರು, ಲಘು ವಾಹ ನಗಳು ಹಾಗೂ ದೊಡ್ಡ ವಾಹನಗಳ ಓಡಾಟಕ್ಕೆ ಪ್ರತ್ಯೇಕ ಮಾರ್ಗಗಳು ಬರಲಿವೆ. ಸಂಚಾರಕ್ಕೆ ಅಡಚಣೆ ಆಗದಂತೆ ರಸ್ತೆಯಲ್ಲೇ ಪಾರ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ~ ಎಂದು ವಿವರಿಸಿದರು.

`ಒಳಚರಂಡಿ, ನೀರು, ವಿದ್ಯುತ್ ಹಾಗೂ ದೂರ ಸಂಪರ್ಕ ಮಾರ್ಗಗಳಿಗೆ ಈ ರಸ್ತೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡ ಲಾಗುತ್ತದೆ. ಯಾವುದೇ ಕಾರಣಕ್ಕೂ ರಸ್ತೆಯನ್ನು ಅಗಿಯಲು ಅವಕಾಶ ನೀಡುವುದಿಲ್ಲ. ಆಯಾ ಮಾರ್ಗಗಳಲ್ಲಿ ಏನೇ ದುರಸ್ತಿ ಕಾರ್ಯವಿದ್ದರೂ ಬೇಕೆಂದಾಗ ಕೈಗೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ರಸ್ತೆಯನ್ನು ಅಗೆಯುವ ಪ್ರಮೇಯ ಬರುವುದಿಲ್ಲ~ ಎಂದು ಮಾಹಿತಿ ನೀಡಿದರು.

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಮೋಟಾರ್ ರಹಿತ ವಾಹನ (ಸೈಕಲ್) ಬಳಕೆಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದ್ದು, ಆದ್ದರಿಂದಲೇ ಸೈಕಲ್‌ಗಳಿಗೆ ಪ್ರತ್ಯೇಕ ಮಾರ್ಗ ಒದಗಿಸುತ್ತಿದ್ದೇವೆ. ಇದರಿಂದ ದೊಡ್ಡ ವಾಹನಗಳ ಕಿರಿಕಿರಿ ಇವುಗಳಿಗೆ ಇರುವುದಿಲ್ಲ. ಅಷ್ಟು ಮಾತ್ರವಲ್ಲದೆ ಅಡೆತಡೆ ರಹಿತ ಪ್ರಯಾಣಕ್ಕೂ ಅನುವಾಗಲಿದೆ ಎಂದು ಅವರು ಹೇಳಿದರು.

`ಮಳೆಯಿಂದ ರಸ್ತೆಗಳು ಹಾಳಾಗದಂತೆ ಕಾಂಕ್ರೀಟ್ ಹಾಕಲು ನಿರ್ಧರಿಸಲಾಗಿದೆ. ಎರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಜನವರಿ ವೇಳೆಗೆ ಕಾಮಗಾರಿ ಆರಂಭವಾಗಲಿದೆ. ಈ ಮಾರ್ಗಗಳಿಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಇತರ ರಸ್ತೆಗಳನ್ನೂ ಅಭಿವೃದ್ಧಿಗೊಳಿಸ ಲಾಗುವುದು~ ಎಂದು ಅವರು ತಿಳಿಸಿದರು.

ಸುಮಾರು ಒಂದು ಕಿ.ಮೀ. ಉದ್ದದ ನೀಲಿಜಿನ್ ರಸ್ತೆಯಲ್ಲಿ ಭಾರಿ ಪ್ರಮಾಣದ ಸರಕು ಹೊತ್ತ ಲಾರಿಗಳೇ ಹೆಚ್ಚಾಗಿ ಓಡಾ ಡುವುದರಿಂದ ಯಾವಾಗಲೂ ಇಲ್ಲಿ ಗುಂಡಿಗಳು ಬಿದ್ದಿರುತ್ತವೆ. ರಸ್ತೆ ಅಸ್ತವ್ಯಸ್ತ ಸ್ಥಿತಿಯಲ್ಲೇ ಇರುತ್ತದೆ.

ಮಳೆಗಾಲದ ಸಂದ ರ್ಭದಲ್ಲಿ ಇಲ್ಲಿಯ ಗುಂಡಿಗಳು ಪಾದಚಾರಿಗಳ ಜೊತೆ ಓಕುಳಿ ಆಡುತ್ತವೆ. ಎಲ್ಲೆಂದರಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಪ್ರಯಾಣ ದುಸ್ತರವಾಗಿ ಪರಿಣಮಿಸಿದೆ. ಪಾಲಿಕೆ ಕೈಗೊಂಡ ಈ ನಿರ್ಧಾರ ದಿಂದ ನೀಲಿಜಿನ್ ರಸ್ತೆಯ ಅದೃಷ್ಟ ಖುಲಾಯಿಸಿದಂತಾಗಿದೆ.

ಧಾರವಾಡದ ಆಜಾದ್ ರಸ್ತೆ ಹಳೆ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಜುಬಿಲಿ ಸರ್ಕಲ್‌ನಲ್ಲಿ ಕೊನೆಗೊಳ್ಳುತ್ತದೆ. ಚಿಲ್ಲರೆ 300 ಮೀಟರ್ ಉದ್ದದ ಈ ಮಾರ್ಗದಲ್ಲಿ ಬಸ್ಸುಗಳೇ ಅಧಿಕ ಸಂಖ್ಯೆಯಲ್ಲಿ ಓಡಾಡುತ್ತವೆ.

ಪಾದಚಾರಿಗಳು, ಸೈಕಲ್‌ಗಳು, ಸಣ್ಣ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಮಾರ್ಗ ನಿರ್ಮಾಣವಾದರೆ ಸಮಸ್ಯೆ ನೀಗಬಹುದು ಎಂಬ ವಿಶ್ವಾಸ ಪಾಲಿಕೆ ಆಯುಕ್ತರದ್ದಾಗಿದೆ.

`ಬೆಂಗಳೂರು ಮಹಾನಗರ ಪಾಲಿಕೆ ಸಹ ಟೆಂಡರ್ ಶ್ಯೂರ್ ಯೋಜನೆ ಕೈಗೆತ್ತಿಕೊಂಡಿದ್ದು, ಅವರೊಂದಿಗೆ ನಾವೂ ಹೆಜ್ಜೆ ಹಾಕುತ್ತಿದ್ದೇವೆ. ಈ ಯೋಜನೆ ದೇಶದ ಕೆಲವೆಡೆ ಅನುಷ್ಠಾನ ಗೊಂಡು ಜನಪ್ರಿಯತೆ ಗಳಿಸಿದೆ.
 
ಸೈಕಲ್ ಸವಾರಿ ಜಗತ್ತಿ ನಾದ್ಯಂತ ಮತ್ತೆ ಮನ್ನಣೆ ಪಡೆಯತೊಡಗಿದೆ. ಆರ್ಥಿಕ ಮತ್ತು  ಆರೋಗ್ಯದ ದೃಷ್ಟಿಯಿಂದಲೂ ಸೈಕಲ್ ಸವಾರಿ ಒಳ್ಳೆಯದು ಎಂಬುದು ಎಲ್ಲರೂ ಒಪ್ಪುವ ವಿಚಾರವಾಗಿದೆ~ ಎಂದು ಡಾ. ತ್ರಿಲೋಕಚಂದ್ರ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT