ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದ ಅಂಚಿನಲ್ಲಿ ಅವಲಕ್ಕಿ ಬಟ್ಟಿ

Last Updated 28 ನವೆಂಬರ್ 2011, 8:35 IST
ಅಕ್ಷರ ಗಾತ್ರ

ತುಮಕೂರು: ಕುಶಲ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ `ಅವಲಕ್ಕಿ ಬಟ್ಟಿ~ ಉದ್ಯಮ ತೀವ್ರ ಹಿನ್ನಡೆಯತ್ತ ಹೆಜ್ಜೆ ಹಾಕುತ್ತಿದೆ. ಈ ಹಿಂದೆ ಅವಲಕ್ಕಿ ಹದಕ್ಕೆ ಹೆಸರುವಾಸಿಯಾಗಿದ್ದ 10ಕ್ಕೂ ಹೆಚ್ಚು ಬಟ್ಟಿಗಳು ಅಸ್ತಿತ್ವದಲ್ಲಿದ್ದ ನಗರದಲ್ಲಿ ಇಂದು ಒಂದೇ ಒಂದು ಅವಲಕ್ಕಿ ಬಟ್ಟಿ ಹಾಗೂ ಹೀಗೂ ಕಾಲ ಹಾಕುತ್ತಿದೆ.

ಅವಲಕ್ಕಿ ಮಾಡಿಸಲೆಂದು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬತ್ತದ ಮೂಟೆ ಹೊತ್ತು ತರುವ ರೈತರಿಗೆ ನಗರದ ಚಿಕ್ಕಪೇಟೆ ನಾಲ್ಕು ಗಾಲಿ ಬಾವಿ ಗಣೇಶನ ಗುಡಿ ಸಮೀಪ ಇರುವ `ಭಾಗ್ಯಲಕ್ಷ್ಮಿ ಅವಲಕ್ಕಿ ಬಟ್ಟಿ~ ಏಕೈಕ ಗಮ್ಯಸ್ಥಾನ. ಈ ಬಟ್ಟಿಯೂ ಪ್ರತಿದಿನ ಕೆಲಸ ಮಾಡುವುದಿಲ್ಲ. ಹೀಗಾಗಿ ರೈತರು ಅಲ್ಲಿ ಮೂಟೆ ಇಳಿಸಿ, `ಅವಲಕ್ಕಿ ಕುಟ್ಟಿದ ಮೇಲೆ ತಿಳಿಸಿ ತಗೊಂಡು ಹೋಗ್ತೇವೆ~ ಎಂದು ದೂರವಾಣಿ ಸಂಖ್ಯೆ ಕೊಟ್ಟು ಹಿಂದಿರುಗುತ್ತಾರೆ.

ಕಾರ್ಮಿಕರ ಲಭ್ಯತೆ, ವಿದ್ಯುತ್, ನೀರು, ಯಂತ್ರದ ಸುಸ್ಥಿತಿ ಎಲ್ಲವೂ ಸರಿಯಿದ್ದಾಗ ಮಾತ್ರ ಈ ಬಟ್ಟಿಗೆ ಜೀವ ಬರುತ್ತದೆ. ಭತ್ತ ಕೊಟ್ಟವರು ಪ್ರತಿ ಸೇರಿಗೆ ರೂ. 4 ತೆತ್ತು ಅವಲಕ್ಕಿ ಕೊಂಡೊಯ್ಯುತ್ತಾರೆ.

ಕೊನೆಯ ದಿನಗಳು: `ಇನ್ನು ಸ್ವಲ್ಪ ದಿನ ನಡುದ್ರೆ ಹೆಚ್ಚು, ಮೂಟೆ ಅವಲಕ್ಕಿ ಮಾಡಿದ್ರೆ 65 ರೂಪಾಯಿ ಕೂಲಿ ಕೊಡ್ತೀವಿ ಅಂದ್ರೂ ಕೆಲ್ಸದವ್ರ ಸಿಗಲ್ಲ. ಇನ್ನೇನು ನಾವೂ ನಿಲ್ಸಿ ಬಿಡ್ತೀವಿ~ ಎಂದೇ ಭಾಗ್ಯಲಕ್ಷ್ಮಿ ಬಟ್ಟಿಯ ಒಡತಿ ಸುಶೀಲಮ್ಮ ಮಾತು ಪ್ರಾರಂಭಿಸಿದರು.

ಬತ್ತವನ್ನು ಕುದಿಯುವ ನೀರಿಗೆ ಹಾಕುವ, ಹದವಾಗಿ ಹುರಿಯುವ, ಯಂತ್ರದಿಂದ ಅದನ್ನು ನಾಜೂಕಾಗಿ ತೆಗೆಯುವ, ಜರಡಿಯಾಡುವ ಕೆಲಸ ಎಲ್ಲರಿಂದಲೂ ಸಾಧ್ಯವಿಲ್ಲ. ಸಾಕಷ್ಟು ಕುಶಲತೆ ಬೇಡುವ ಈ ಕೆಲಸ ಮಾಡುವುದರಲ್ಲಿ ಹಿಂದಿನ ತಲೆಮಾರಿನ ಮುಸ್ಲಿಮರು ನಿಷ್ಣಾತರಾಗಿದ್ದರು. ಆದರೆ ಹೊಸ ತಲೆಮಾರಿನ ಯುವಕರು ಈ ಕೆಲಸವನ್ನೇ ಕಲಿಯಲು ಉತ್ಸಾಹ ತೋರಲಿಲ್ಲ. ಹೀಗಾಗಿ ಬಟ್ಟಿಯಲ್ಲಿ ಯಂತ್ರಗಳಿದ್ದರೂ, ಕೆಲಸ ನಡೆಯುತ್ತಿಲ್ಲ.

ಅವಲಕ್ಕಿ ತಯಾರಿಕೆಯಲ್ಲಿ ಕುದಿಯುವ ನೀರಿನಲ್ಲಿ ಬೆಂದ ಬತ್ತವನ್ನು ಹುರಿಯುವುದೇ ಅತಿ ಮುಖ್ಯವಾದ ಕೆಲಸ. ಕೊಂಚ ಹೆಚ್ಚಾಗಿ ಹುರಿದರೆ ಮುದ್ದೆಯಾಗುತ್ತೆ, ಕಡಿಮೆ ಹುರಿದರೆ ಪುಡಿಪುಡಿ ಆಗುತ್ತೆ. ಹೀಗಾಗಿ ಅನುಭವದ ಕೈಲೇ ಕೆಲಸ ಸಾಗಬೇಕು. ಒಂದು ಸೇರು ಬತ್ತ ಹುರಿದರೆ 65 ಪೈಸೆ ಕೂಲಿ ಕೊಡುತ್ತೇವೆ ಎನ್ನುತ್ತಾರೆ ಬಟ್ಟಿಯ ಉಸ್ತುವಾರಿ ಹೊತ್ತಿರುವ ಸುರೇಶ್.

ಬೆಂದ ಬತ್ತ ಹುರಿಯಲು ಉರುವಾಲಾಗಿ ಬಳಕೆಯಾಗುವ ಹುಣಸೆ ಹೊಟ್ಟಿನ ದರ ರೂ. 500ಕ್ಕೆ ತಲುಪಿದೆ. ಹೀಗಾಗಿ ಕಾಯಿಮಟ್ಟೆ, ಮರದ ತೊಪಡಾ ಬಳಸಿ ಹುರಿಯುತ್ತಿದ್ದಾರೆ. ಬೆಂಕಿಯ ಹದದಲ್ಲಿ ಆಗುವ ಬದಲಾವಣೆ ಅವಲಕ್ಕಿ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.

ಯಾಂತ್ರೀಕರಣ ಅಸಾಧ್ಯ: `ಕಾರ್ಮಿಕರ ಕೊರತೆಗೆ ಯಾಂತ್ರೀಕರಣದ ಪರಿಹಾರ ಇಲ್ಲವೇ?~ ಎಂಬ ಪ್ರಶ್ನೆ ಮುಂದಿಟ್ಟರೆ, `ಇಲ್ಲ~ ಎಂಬ ಒಂದೇ ಪದದ ಉತ್ತರವನ್ನು ಸುಶೀಲಮ್ಮ ನೀಡುತ್ತಾರೆ.

ಮಿಷಿನ್‌ಗಳಲ್ಲಿ ಬತ್ತ ಹುರಿಯುವಾಗ ಮೊದಮೊದಲು ಚೆನ್ನಾಗಿರುತ್ತೆ. ಐದಾರು ಇಬ್ಬೆಯ ನಂತರ ಉಷ್ಣಾಂಶ ನಿಯಂತ್ರಣ ಕಷ್ಟ. ಬತ್ತ ಸೀದು ಹೋಗುವ ಅಪಾಯವಿದೆ. ಬಟ್ಟಿಯಲ್ಲಿ ಅವಲಕ್ಕಿ ಮಾಡುವಾಗಲೂ ಎರಡು ಸೇರಿಗಿಂತ ಹೆಚ್ಚು ಬತ್ತ ಹಾಕಿಕೊಳ್ಳಲು ಆಗುವುದಿಲ್ಲ. ಅವಲಕ್ಕಿಯ ಹದ ಗಮನಿಸಿ ಕೈಲೇ ತೆಗೆಯಬೇಕು. ದಾವಣಗೆರೆ ಕಡೆ ದೊಡ್ಡ ಅವಲಕ್ಕಿ ಬಟ್ಟಿಗಳಿವೆ. ಆದರೆ ಅಲ್ಲಿಯೂ ಕಾರ್ಮಿಕರೇ ಸರ್ವಸ್ವ.

ದೊಡ್ಡ ಬತ್ತ ಒಳ್ಳೇದು: ಆಧುನಿಕ ಸುಧಾರಿತ ತಳಿಗಳಿಗಿಂತ ಪಾರಂಪರಿಕ ದಡ್ಡಿ ಬತ್ತದಲ್ಲಿ ಉತ್ತಮ ಗುಣಮಟ್ಟದ ಅವಲಕ್ಕಿ ತಯಾರಿಕೆ ಸಾಧ್ಯ. 1 ಸೇರು ಗಟ್ಟಿ ಬತ್ತಕ್ಕೆ 1 ಸೇರು ಅವಲಕ್ಕಿ ಸಿಗುತ್ತದೆ. ಜಯ, ಐಆರ್ 64 ತಳಿಗಳ ಬತ್ತದಿಂದಲೂ ಉತ್ತಮ ಗುಣಮಟ್ಟದ ಅವಲಕ್ಕಿ ಉತ್ಪಾದನೆಯಾಗುತ್ತದೆ. ಸಣ್ಣ ತಳಿಯ ಬತ್ತವಾದರೆ ಪುಡಿ ಹೆಚ್ಚಾಗಿ ಹಾಳಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT