ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ಕುರಿ ಸಂವರ್ಧನಾ ಕೇಂದ್ರ

Last Updated 15 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಗುತ್ತಲ (ಹಾವೇರಿ ಜಿಲ್ಲೆ): ಕುರಿ ಮತ್ತು ಉಣ್ಣೆ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಏಳು ದಶಕಗಳ ಹಿಂದೆ ಸ್ಥಾಪನೆಯಾದ ಇಲ್ಲಿಯ ಕುರಿ ಸಂವರ್ಧನಾ ಕೇಂದ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವಸಾನದತ್ತ ಸಾಗಿದೆ.

ಗ್ರಾಮದ ಹೊರ ವಲಯದಲ್ಲಿರುವ 295 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರ  ಸಮರ್ಪಕ ನಿರ್ವಹಣೆ ಇಲ್ಲದೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನರಳಾಡುತ್ತಿದೆ. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಅಡಿಯಲ್ಲಿರುವ ಈ ಕೇಂದ್ರ ಅಧಿಕಾರಿಗಳ ಆಸಕ್ತಿಯ ಕೊರತೆಯಿಂದ ಅನುದಾನ ಬಳಸಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಸಾವಿರಾರು ಕುರಿಗಳನ್ನು ಹೊಂದಿ, ಸಾಕಾಣಿಕೆದಾರರಿಗೆ ನೀಡುವ ಸಾಮರ್ಥ್ಯ ಹೊಂದಿರುವ ಈ ಕೇಂದ್ರ ಇಂದು ಕೇವಲ 140 ಕುರಿಗಳನ್ನು ಮಾತ್ರ ಹೊಂದಿದೆ.

ಸ್ಥಳೀಯ ದಖನಿ ತಳಿಯ ಕುರಿಯೊಂದಿಗೆ ಆಸ್ಟ್ರೇಲಿಯಾದ ರಾಂಬ್ಯೂಯಿಲ್ಟ್ ಟಗರುಗಳ ಸಂಕರ ಸಂತಾನೋತ್ಪತ್ತಿ ಮೂಲಕ ಹೊಸ ಜಾತಿಯ ಕುರಿಗಳಿಂದ ಉತ್ತಮ ಇಳುವರಿಯ ಕುರಿ ಮಾಂಸ ಮತ್ತು ಉಣ್ಣೆ ಉತ್ಪಾದಿಸುವ ಉದ್ದೇಶದಿಂದ ಗುತ್ತಲದ ಕುರಿ ಸಂವರ್ಧನಾ ಕೇಂದ್ರ 1947 ರಲ್ಲಿ ಸ್ಥಾಪನೆಯಾಗಿದೆ.

1992-93 ರಲ್ಲಿ 395 ಕುರಿಗಳಿಂದ 159 ಹಾಗೂ 1993-94 ರಲ್ಲಿ 427 ಕುರಿಗಳಿಂದ 191 ಮಿಶ್ರ ತಳಿಯ ಕುರಿ ಮರಿಗಳನ್ನು ಕೇಂದ್ರದಿಂದ ರೈತರಿಗೆ ವಿತರಿಸಿದ್ದನ್ನು ಬಿಟ್ಟರೆ ಮೂರು ವರ್ಷಗಳಿಂದ ಸಂವರ್ಧನಾ ಕೇಂದ್ರದಲ್ಲಿ ಕುರಿಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಆದರೆ ಕುರಿಗಳ ಸಾವಿನ ಪ್ರಮಾಣದಲ್ಲಿ ಮಾತ್ರ ಏರಿಕೆ ಕಂಡಿದೆ. 2008ರಿಂದ ಈ ವರೆಗೆ ಕೇಂದ್ರದಲ್ಲಿ ಕೇವಲ 316 ಕುರಿಗಳನ್ನು ಸಾಕಲಾಗಿದ್ದು, ಈ ಅವಧಿಯಲ್ಲಿ  ಕೇವಲ 84 ಕುರಿಗಳನ್ನು  ಮಾರಾಟ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಾಯಿಲೆಗಳಿಂದ ಸುಮಾರು 353 ಕುರಿಗಳು ಸತ್ತಿವೆ.

ನೂತನ ತಳಿಯ ಕುರಿಗಳ ಸಾಕಾಣಿಕೆಗೆ ಪ್ರೋತ್ಸಾಹವಾಗಲಿ ಅಥವಾ ತರಬೇತಿ ಕಾರ್ಯಗಾರವಾಗಲಿ ಕಳೆದ ಒಂದು ವರ್ಷದಿಂದ ನಡೆದಿಲ್ಲ ಎಂದು ರಾಜ್ಯ ದುರ್ಗಾದೇವಿ ಸಂಚಾರಿ ಕುರುಬರ ಸಂಘದ ಅಧ್ಯಕ್ಷ ವಿಠ್ಠಲ ಬನ್ನೆ ಮತ್ತು ಮೈಲಾರಲಿಂಗ ಕೋಳಿ ಸಾಕಣೆದಾರರ ಸಂಘದ ಅಧ್ಯಕ್ಷ ಭೈರಪ್ಪ ಕಮದೋಡ ಆರೋಪಿಸುತ್ತಾರೆ.

ಕೇಂದ್ರದ ಅವ್ಯವಸ್ಥೆ ಕುರಿತು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಅವರನ್ನು ಸಂಪರ್ಕಿಸಿದಾಗ, ಗುತ್ತಲದ ಕುರಿ ಸಂವರ್ಧನಾ ಕೇಂದ್ರದ ಈ ಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು.

ರಾಜ್ಯದಲ್ಲಿರುವ ಇನ್ನುಳಿದ ಐದು ಕುರಿ ಸಂವರ್ಧನಾ ಕೇಂದ್ರಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದ ಕರೂದಿ, ನಿಗಮದಲ್ಲಿ ಅಧಿಕಾರಿಗಳು ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನಿಗಮದಲ್ಲಿ ಆಡಳಿತ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಅಧಿಕಾರಿಗಳು ತಮ್ಮ ಹಿಡಿತದಲ್ಲಿ ಇಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಕುರಿ ಸಂವರ್ಧನಾ ಕೇಂದ್ರಗಳ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಭೋಜರಾಜ ’ಪ್ರಜಾವಾಣಿಗೆ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT