ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಕ್ತ ಕುಟುಂಬದ ವಿಶಿಷ್ಟ ವಾರ್ಷಿಕೋತ್ಸವ

Last Updated 8 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮಾಯಾವಾಗಿ ವಿಭಕ್ತ ಕುಟುಂಬಗಳೇ ಹೆಚ್ಚಾಗುತ್ತಿವೆ. ಅಲ್ಲದೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಮೈಪಾನ್ ಎಂಬ ಹೆಸರಿನ ಕ್ರೈಸ್ತ ಕುಟುಂಬದ ಸದಸ್ಯರು ಬೇರೆ ಬೇರೆ ವಾಸಿಸುತ್ತಿದ್ದರೂ  ವರ್ಷಕ್ಕೊಮ್ಮೆ ಎಲ್ಲರೂ ಒಂದೆಡೆ ಸೇರುವ ಪದ್ಧತಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಈ ಕುಟುಂಬದ ಪೂರ್ವಿಕರು ಕೇರಳದಿಂದ ಇಲ್ಲಿಗೆ ಬಂದು ಸುಮಾರು 50 ವರ್ಷಗಳು ಸಂದಿವೆ. ಇವರಲ್ಲಿ 5ಜನ ಅಣ್ಣ ತಮ್ಮಂದಿರಿದ್ದು, ಕುಟುಂಬದ ಸದಸ್ಯರನ್ನು ಸೇರಿಸಿದರೆ ಬರೋಬ್ಬರಿ 324 ಜನರಿದ್ದಾರೆ. ಈ 5 ಕುಟುಂಬದ ಸದಸ್ಯರು ತಾಲ್ಲೂಕಿನ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೂ ಸಹ ಕುಟುಂಬದ ಪ್ರಮುಖರು ಮಾತ್ರ ಪ್ರತೀ ತಿಂಗಳು ತಪ್ಪದೆ ಒಂದೆಡೆ ಸೇರಿ ಸಭೆ ನಡೆಸುವುದು ವಿಶೇಷ. ಅದೇ ರೀತಿ ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ನಡೆಸುತ್ತಾರೆ. ಇದಕ್ಕೆ ಪ್ರತಿಯೊಬ್ಬರು ತಪ್ಪದೆ ಬರುತ್ತಾರೆ.
 
ಒಂದೆಡೆ ಸೇರಿ ಬೋಜನ ಸವಿಯುತ್ತಾರೆ. ಕಳೆದೆರೆಡು ತಿಂಗಳ ಹಿಂದೆ ಈ ಕುಟುಂಬ ಕೇರಳದಿಂದ ಬಂದು 50ವರ್ಷಗಳು ಸಂದ ಪ್ರಯುಕ್ತ 50ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದವು. ಇಲ್ಲಿ ಕುಟುಂಬದ ಸದಸ್ಯರಿಗೆ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನ ಏರ್ಪಡಿಸುತ್ತಾರೆ. ಕುಟುಂಬದ ಹಿರಿಯ ಸದಸ್ಯರಾದ ಮರಿಯಮ್ಮ(83ವರ್ಷ) ಸೇರಿದಂತೆ ಹಲವು ಹಿರಿಯರನ್ನು ಈ ಬಾರಿಯ ವಾರ್ಷಿಕೋತ್ಸವದಲ್ಲಿ ಸನ್ಮಾನಿಸಲಾಯಿತು.

ಮೈಪಾನ್‌ನ ಹಿರಿಯ ಕುಟುಂಬದ ಸದಸ್ಯರಲ್ಲೊಬ್ಬರಾದ ಎಂ.ಓ.ಜೋಯಿ ಹೇಳುವ ಪ್ರಕಾರ, 5ಜನ ಅಣ್ಣ ತಮ್ಮಂದಿರಿದ್ದು, ಬೇರೆ ಬೇರೆ ವಾಸವಾಗಿದ್ದರು. ಪ್ರತಿ ವರ್ಷ ಒಂದೊಂದು ಮನೆಯಲ್ಲಿ ಎಲ್ಲರೂ ಸೇರುವುದು ವಾಡಿಕೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಅನ್ಯೋನ್ಯತೆ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೆ ಎಲ್ಲರೂ ತಮ್ಮ ಕಷ್ಟ ಸುಖಗಳನ್ನು ಹಂಚಿ ಕೊಳ್ಳಲು ಅವಕಾಶ ಸಿಗುತ್ತದೆ. ಇದರಿಂದ ಸಂಬಂಧಗಳು ಬೆಳೆಯುತ್ತವೆ ಎನ್ನುತ್ತಾರೆ.ಒಟ್ಟಿನಲ್ಲಿ ವಿಭಕ್ತ ಕುಟುಂಬಗಳೇ ಅಧಿಕವಾಗಿರುವ ಇಂದಿನ ದಿನದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿನಂತೆ ಎಲ್ಲರೂ ಒಟ್ಟಾಗಿ ಬಾಳ ಬೇಕೆಂಬುದಕ್ಕೆ ಮೈಪಾನ್ ಕುಟುಂಬ ಆದರ್ಶವಾಗಿದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT