ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಸ್ಮರಣೀಯವಾದ 99ರ ಚುನಾವಣೆ

ಆತ್ಮೀಯ ಸ್ನೇಹಿತರೇ ಸ್ಪರ್ಧಿಗಳಾಗಿದ್ದರು
Last Updated 7 ಏಪ್ರಿಲ್ 2014, 9:37 IST
ಅಕ್ಷರ ಗಾತ್ರ

ಹಾಸನ: 1991ರ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿ ಲೋಕಸಭೆಯನ್ನು ಪ್ರವೇಶಿಸಿದ್ದ ದೇವೇಗೌಡರು ಬಳಿಕ ಮತ್ತೆ ರಾಜ್ಯ ರಾಜಕೀಯಕ್ಕೆ ಬಂದಾಗ ವೈ.ಎನ್‌. ರುದ್ರೇಶಗೌಡ ಅವರಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

ರಾಜ್ಯ ರಾಜಕೀಯಕ್ಕೆ ಬಂದ ದೇವೇಗೌಡರು ಮುಖ್ಯ ಮಂತ್ರಿಯಾದರು, ಸ್ವಲ್ಪ ಕಾಲ ಪ್ರಧಾನಿಯೂ ಆಗಿದ್ದರಿಂದ 1998ರ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗಲೇ ಇಲ್ಲ.

ಹಿಂದಿನ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಪಡೆಯಲೂ ಸಾಧ್ಯವಾಗದೆ ಪರದಾಡಿದ್ದ ಶ್ರೀಕಂಠಯ್ಯ ಅವರಿಗೆ 98ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿತು. ಅವರ ಆತ್ಮೀಯರಾಗಿದ್ದ ಧರ್ಮಸಿಂಗ್‌ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದರಿಂದ ಟಿಕೆಟ್‌ ಪಡೆಯುವುದು ಸುಲಭವಾಯಿತು. 1991 ಮತ್ತು 96ರ ಚುನಾವಣೆಗಳಲ್ಲಿ ಸೋತಿದ್ದರೂ ಶ್ರೀಕಂಠಯ್ಯ ಅವರ ವರ್ಚಸ್ಸು ಕುಗ್ಗಿರಲಿಲ್ಲ. ಆದ್ದರಿಂದ 98ರ ಚುನಾವಣೆಯಲ್ಲಿ ದೇವೇಗೌಡರಿಗೆ ಸರಿಯಾದ ಸ್ಪರ್ಧೆಯನ್ನೇ ಒಡ್ಡಿದರು. ಹಾಗೆಂದು ದೇವೇಗೌಡರಿಗೆ ಕ್ಷೇತ್ರದಲ್ಲಿ ವಿರೋಧವೇ ಇರಲಿಲ್ಲ ಎಂದಲ್ಲ, ಜಿಲ್ಲೆಯ ಲಿಂಗಾಯತರು ಆ ಬಾರಿ ದೇವೇಗೌಡರಿಗೆ ಮತ ನೀಡದಿರಲು ತೀರ್ಮಾನಿಸಿದಂತಿತ್ತು. ಬಿಜೆಪಿಯಿಂದ  ಬಿ.ಬಿ. ಶಿವಪ್ಪ ಅವರ ಪತ್ನಿ ಸುಶೀಲಾ ಶಿವಪ್ಪ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಲಿಂಗಾಯತ ಸಮುದಾಯ ಇವರನ್ನು ಬೆಂಬಲಿಸಿದ್ದರಿಂದ 2,05,628 ಮತ ಪಡೆದರು. ಶ್ರೀಕಂಠಯ್ಯ ಸೋಲಿಗೆ ಇದೂ ಕಾರಣವಾಗಿತ್ತು. ಒಟ್ಟಾರೆ 31,654 ಮತಗಳಿಂದ ಆ ಚುನಾವಣೆಯನ್ನು ದೇವೇಗೌಡರು ಗೆದ್ದರು.

1999ರ ಮರೆಯಲಾಗದ ಚುನಾವಣೆ
ಹಾಸನ ಕ್ಷೇತ್ರದ ಜನರು ದೀರ್ಘಕಾಲದವರೆಗೆ ನೆನಪಿನಲ್ಲಿಡುವ ಚುನಾವಣೆ ಎಂದರೆ 1999ರಲ್ಲಿ ನಡೆದ ಲೋಕಸಭಾ ಚುನಾವಣೆ. ದೇವೇಗೌಡರ ರಾಜಕೀಯ ಜೀವನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೇ ಅವರಿಗೆ ಕ್ಷೇತ್ರದ ಜನರು ಸೋಲಿನ ರುಚಿ ಕಾಣಿಸಿದ ಚುನಾವಣೆ ಇದು.

ಇದಕ್ಕೂ ಮುಖ್ಯವಾಗಿ ಹಲವು ದಶಕಗಳ ಕಾಲ ಜೊತೆಯಲ್ಲೇ ರಾಜಕೀಯ ಮಾಡಿದ್ದ, ತಾಲ್ಲೂಕು ಮಟ್ಟದ ರಾಜಕೀಯದಿಂದಲೇ ಜೊತೆಜೊತೆಯಾಗಿಯೇ ಬೆಳೆಯುತ್ತ ಬಂದಿದ್ದ ಎಚ್‌.ಡಿ. ದೇವೇಗೌಡ ಹಾಗೂ ಜಿ.ಪುಟ್ಟಸ್ವಾಮಿಗೌಡ ಬದ್ಧ ವೈರಿಗಳಂತೆ ಹೋರಾಡಿದ ಚುನಾವಣೆ ಅದು.

ದೇವೇಗೌಡರು ಪ್ರಧಾನಿಯಾಗಿ ಕೆಳಗಿಳಿದ ನಂತರ ನಡೆದ ಎರಡನೇ ಚುನಾವಣೆ ಅದು. ಜಿಲ್ಲೆಯಲ್ಲಿ ಜೆಡಿಎಸ್‌ ಹಾಗೂ ದೇವೇಗೌಡರ ಪ್ರಭಾವ ಕಡಿಮೆಯಾಗಿರಲಿಲ್ಲ. ಆದರೆ ಹತ್ತಾರು ಸಣ್ಣಪುಟ್ಟ ಕಾರಣಗಳು ಸೇರಿಕೊಂಡು ದೇವೇಗೌಡರಿಗೆ ಅಂದು ಸೋಲಾಗಿತ್ತು.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳು ಜೊತೆಜೊತೆಯಾಗಿಯೇ ನಡೆದಿದ್ದವು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪುಟ್ಟಸ್ವಾಮಿ ಗೌಡರು ಅಣ್ಣೇಚಾಕನಹಳ್ಳಿಯ ಎ. ದೊಡ್ಡೇಗೌಡ ಅವರಿಗೆ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯ ಟಿಕೆಟ್‌ ಕೊಡಿಸಿದ್ದರು. ಹೊಳೆನರಸೀಪುರ ಕ್ಷೇತ್ರದಲ್ಲಿ ಕುರುಬ ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ದೊಡ್ಡೇಗೌಡರು ಈ ಸಮುದಾಯದವರಾಗಿದ್ದರಿಂದ ಸಮುದಾಯದ ಮತಗಳೆಲ್ಲ ಕಾಂಗ್ರೆಸ್‌ಗೆ ಲಭಿಸಿದವು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಜೊತೆಜೊತೆಯಾಗಿ ನಡೆದ ಕಾರಣ ಆ ಮತಗಳು ಪುಟ್ಟಸ್ವಾಮಿಗೌಡರಿಗೂ ಲಭಿಸಿದವು.

ಒಂದೆಡೆ ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಅನಾಯಾಸವಾಗಿ ಲಭಿಸಿದ್ದರೆ, ಇನ್ನೊಂದೆಡೆ ವಿವಿಧ ಪಕ್ಷಗಳಲ್ಲಿದ್ದ ಅತೃಪ್ತರೆಲ್ಲರೂ ಒಳಗಿಂದೊಳಗೆ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಡಿ. ಬಸವರಾಜು 1,71,604 ಮತಗಳನ್ನು ಪಡೆದಿದ್ದರು. ಈ ಎಲ್ಲ ಸಣ್ಣಪುಟ್ಟ ವಿಚಾರಗಳು ಆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಕೆಲಸ ಮಾಡಿದ್ದವು.
‘ದೇವೇಗೌಡರ ಮೇಲಿನ ಜನರ ಪ್ರೀತಿ – ವಿಶ್ವಾಸ ಆ ಕಾಲದಲ್ಲೂ ಕಡಿಮೆ ಆಗಿರಲಿಲ್ಲ, ಆದರೆ ಜೆಡಿಎಸ್‌ ‘ನಾಯಕ’ರ ‘ಅಬ್ಬರ’ದಿಂದ ಜನರು ಬೇಸತ್ತಿದ್ದರು. ದೇವೇಗೌಡರಿಗಿಂತ ಹೆಚ್ಚಾಗಿ ಈ ನಾಯಕರಿಗೆ ಬುದ್ಧಿ ಕಲಿಸಲು ಜನರು ಬಯಸಿದ್ದರು. ದೇವೇಗೌಡರ ಸೋಲಿಗೆ ಆ ಅಬ್ಬರವೇ ಕಾರಣ’ ಎಂದು ಅಂದಿನ ಚುನಾವಣೆಯನ್ನು ಹತ್ತಿರದಿಂದ ನೋಡಿದ್ದ ಹಿರಿಯರು ಸ್ಮರಿಸಿಕೊಳ್ಳುತ್ತಾರೆ.

ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಪುಟ್ಟಸ್ವಾಮಿ ಗೌಡರು 1,41,757 ತಗಳಿಂದ ದೇವೇಗೌಡರನ್ನು ಸೋಲಿಸಿದರು. ಜೆಡಿಎಸ್‌ ಮಾತ್ರವಲ್ಲ ಇಡೀ ಕಾಂಗ್ರೆಸ್‌ ಪಕ್ಷ ಈ ಗೆಲುವನ್ನು ಅಚ್ಚರಿಯಿಂದ ನೋಡಿತ್ತು. ಜೆಡಿಎಸ್‌ಗೆ ದೊಡ್ಡ ಆಘಾತವಾಗಿತ್ತು. ಸೋಲಿನಿಂದ ತೀರ ನೊಂದುಕೊಂಡಿದ್ದ ದೇವೇಗೌಡರು ಬೆಂಗಳೂರು ಸೇರಿಕೊಂಡು ಹಲವು ವರ್ಷಗಳ ಕಾಲ ಹಾಸನವನ್ನು ಮರೆತೇ ಬಿಟ್ಟಿದ್ದರು.
ಆ ಬಾರಿ ವಿಧಾನಸಭಾ ಚುನಾವಣೆಯಲ್ಲೂ 4 ಕಾಂಗ್ರೆಸ್‌ ಹಾಗೂ 4 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು.

ಕಾಂಗ್ರೆಸ್‌ ಮುಖಂಡರು ಈಗ ಹೋದಲ್ಲೆಲ್ಲ 1999ರ ಚುನಾವಣೆಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ‘ಪುಟ್ಟಸ್ವಾಮಿಗೌಡರ ಕಾಲದ ಸ್ಥಿತಿಯೇ ಈಗ ಹಾಸನದಲ್ಲಿ ನಿರ್ಮಾಣವಾಗಿದೆ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಚುನಾವಣೆ ಅವಿಸ್ಮರಣೀಯವಾಗಿದೆ.

ಗೌಡರ ಸೋಲು; ಕಾಂಗ್ರೆಸ್‌ಗೂ ಬೇಸರ
1999ರಲ್ಲಿ ದೇವೇಗೌಡರ ಸೋಲು ಕೆಲವು ಕಾಂಗ್ರೆಸ್‌ ಮುಖಂಡರಲ್ಲೂ ಬೇಸರ ತಂದಿತ್ತು. ಕೆಲವರು ಅದನ್ನು ಮುಕ್ತವಾಗಿ ಹೇಳಿಕೊಂಡಿದ್ದರೆ ಇನ್ನೂ ಕೆಲವರು ಖಾಸಗಿ ವಲಯದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಎಸ್‌. ಬಂಗಾರಪ್ಪ, ‘ದೇವೇಗೌಡರ ಸೋಲು ಅಚ್ಚರಿ ಮೂಡಿಸಿದೆ, ಇಂಥ ನಾಯಕತ್ವ ಸೃಷ್ಟಿಯಾಗಲು 40 ವರ್ಷಗಳೇ ಬೇಕಾಗುತ್ತವೆ, ಹಾಸನದ ಜನರು ಅವರನ್ನು ತಿರಸ್ಕರಿಸಿದ್ದು ಅಚ್ಚರಿ ಮೂಡಿಸಿದೆ’ ಎಂದಿದ್ದರು. ಎಸ್‌.ಎಂ. ಕೃಷ್ಣ ಸಹ ‘ದೇವೇಗೌಡರನ್ನು ಜನರು ಸೋಲಿಸಬಾರದಿತ್ತು’ ಎಂದು ತಮಗೆ ಆತ್ಮೀಯರಾಗಿದ್ದ ಜಿಲ್ಲೆಯ ಕೆಲವು ಮುಖಂಡರೊಡನೆ ಹೇಳಿಕೊಂಡಿದ್ದನ್ನು ಮುಖಂಡರು ಈಗಲೂ ಸ್ಮರಿಸುತ್ತಾರೆ.


1998ರ ಚುನಾವಣೆ ಮುಖ್ಯಾಂಶಗಳು

ಒಟ್ಟು ಮತಗಳು: 11,72,571
ಚಲಾವಣೆಯಾದ ಮತಗಳು : 8,64,621
ಅರ್ಹ ಮತಗಳು: 8,53,622
ಎಚ್‌.ಡಿ. ದೇವೇಗೌಡ: 3,36,407
ಎಚ್‌.ಸಿ. ಶ್ರೀಕಂಠಯ್ಯ : 3,04,753
ಸುಶೀಲಾ ಶಿವಪ್ಪ : 2,05,628
ಎಂ.ಡಿ. ಗಂಗಯ್ಯ : 6116
ಯು.ಎಂ. ಕೋಮಲತಾ : 718

              ***

1999ರ ಚುನಾವಣೆ ಮುಖ್ಯಾಂಶಗಳು
ಒಟ್ಟು ಮತಗಳು: 12,17,049
ಚಲಾವಣೆಯಾದ ಮತಗಳು: 8,92,801
ಅರ್ಹ ಮತಗಳು: 8,58,626
ಜಿ. ಪುಟ್ಟಸ್ವಾಮಿಗೌಡ: 9,98,344
ಎಚ್‌.ಡಿ. ದೇವೇಗೌಡ: 2,56,587
ಬಿ.ಡಿ. ಬಸವರಾಜು: 1,71,604
ಕೋವಿ ಬಾಬಣ್ಣ: 16,397
ಎಂ.ಚಿಕ್ಕೇಗೌಡ: 15,694

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT