ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆಂಜರ್‌ಗೆ ಹೊಸತುಗಳ ಮೆರುಗು

Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಕ್ರೂಸ್ ಬೈಕ್‌ಗಳ ವಿನ್ಯಾಸಕ್ಕೆ ಮೊದಲಿನಿಂದಲೂ ಮಹತ್ವ ಇದ್ದಿದ್ದೇ. ಭಾರತದ ರಸ್ತೆಗಳಿಗೆ ದಶಕಗಳ ಹಿಂದೆ ಇವು ಅಪರೂಪವಾಗಿದ್ದವು ಎನ್ನುವುದೇನೋ ನಿಜ. ರಾಯಲ್ ಎನ್‌ಫೀಲ್ಡ್‌ನ ಮಾದರಿಗಳಿಗೆ ಈಗ ವಿಪರೀತ ಬೇಡಿಕೆ ಬಂದಿರುವುದರಿಂದ ವಿನ್ಯಾಸದಲ್ಲಿ ಅವಕ್ಕೆ ಹೋಲುವಂಥ ಬೈಕ್‌ಗಳಿಗೂ ಪರ್ಯಾಯ ಮಾರುಕಟ್ಟೆ ಇದ್ದೇಇದೆ. ಬೈಕ್ ಮಾರುಕಟ್ಟೆಯ ಆಧುನಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ಬಜಾಜ್ ಎಂದೂ ಹಿಂದೆ ಬಿದ್ದಿಲ್ಲ. ವಿಸ್ತೃತ ಮಾರುಕಟ್ಟೆಯಲ್ಲಿ ಒಂದು ಕಡೆ ಪಲ್ಸರ್‌ನ ಸದ್ದು. ಇನ್ನೊಂದು ಕಡೆ ಅವೆಂಜರ್ ಮಾದರಿಯ ಸಾಂಪ್ರದಾಯಿಕ ವಿನ್ಯಾಸದ ಆಕರ್ಷಣೆ. ಈಗ ಆ ಆಕರ್ಷಣೆಗೆ ಹೊಳಪು ಬಂದಿದೆ ಎನ್ನಲು ಹಲವು ಕಾರಣಗಳಿವೆ.

ಇದುವರೆಗೆ 200 ಸಿಸಿ ಸಾಮರ್ಥ್ಯದ ಎಂಜಿನ್‌ನ ಒಂದೇ ಮಾದರಿಯ ಅವೆಂಜರ್‌ಗಳು ರಸ್ತೆಗಳ ಮೇಲಿದ್ದವು. ಈಗ ಮೂರು ಮಾದರಿಗಳಲ್ಲಿ ಗ್ರಾಹಕರನ್ನು ಸೆಳೆಯಲು ಅವು ಸಜ್ಜಾಗಿವೆ- ಕ್ರೂಸ್ 220, ಸ್ಟ್ರೀಟ್ 220 ಹಾಗೂ ಸ್ಟ್ರೀಟ್ 150. ಸ್ಟ್ರೀಟ್ 220 ಮಾದರಿಯ ಬೈಕ್ ಸಂಪೂರ್ಣ ಹೊಸದು. ಸಾಂಪ್ರದಾಯಿಕ ಅವೆಂಜರ್‌ನಂತೆ ಹಿಂದೆ ಕುಳಿತವರು ಒರಗಲು ಇದರಲ್ಲಿ ಸೀಟ್ ಪ್ಯಾಡ್ ಇಲ್ಲ. ನಗರದ ರಸ್ತೆಗಳ ಟ್ರಾಫಿಕ್ ಕಿರಿಕಿರಿಯನ್ನು ಗಮನದಲ್ಲಿ ಇಟ್ಟುಕೊಂಡು ಹ್ಯಾಂಡಲ್ ಎತ್ತರವನ್ನು ಕಡಿಮೆ ಮಾಡಲಾಗಿದೆ. 1490 ಎಂ.ಎಂ.ನಷ್ಟು ಅಗಲವಾದ ಚಕ್ರದ ತಳಭಾಗ ವೇಗದ ಏರಿಳಿತದ ನಡುವೆಯೂ ವಾಹನ ಅಲುಗಾಡದಂತೆ ನೋಡಿಕೊಳ್ಳುತ್ತದೆ. ಈ ‘ರೋಡ್‌ಗ್ರಿಪ್‌’ನಿಂದಾಗಿಯೇ ಚಾಲನೆಯ ವೇಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸಾಧ್ಯವಿದೆ.

ಸ್ಟ್ರೀಟ್‌ಗೆ ವಿಂಡ್‌ಶೀಲ್ಡ್ ಅಳವಡಿಸಿಕೊಂಡರೆ ಚೆನ್ನಾಗಿ ಕಾಣುವುದಿಲ್ಲ. ಇಡೀ ಬೈಕ್‌ಗೆ ಕಪ್ಪು ಬಣ್ಣದ ಸಮಕಾಲೀನತೆಯನ್ನು ಒದಗಿಸಲಾಗಿದೆ. ‘ಮ್ಯಾಟ್ ಫಿನಿಷ್’ ಬಣ್ಣವಾದದ್ದರಿಂದ ಹೆಚ್ಚು ಆಧುನಿಕವಾಗಿದೆ ಎನ್ನಬಹುದು. ಹೊಸ ಗ್ರಾಫಿಕ್ಸ್‌, ಚಕ್ರಗಳಲ್ಲಿ ಅಲಾಯ್ (ಮುಂಭಾಗದಲ್ಲಿ 12 ಸ್ಪೋಕ್ ಅಲಾಯ್, ಹಿಂಭಾಗದಲ್ಲಿ 9 ಸ್ಪೋಕ್ ಅಲಾಯ್) ಬಳಸಿರುವುದರಿಂದ ಬೈಕ್ ಕಣ್ಣುಕೋರೈಸುತ್ತದೆ. ಎಂಜಿನ್‌ಗೆ ಹೊಂದಿಕೊಂಡ ಭಾಗಗಳು, ಸೈಲೆನ್ಸರ್ ಎಲ್ಲದರಲ್ಲಿ ಕಪ್ಪು ಬಣ್ಣದ ಮೆರುಗು ರಾಚುತ್ತದೆ. ಅಲ್ಲಲ್ಲಿ ಬೆಳ್ಳಿ ಬಣ್ಣದ ಫಿನಿಷಿಂಗ್ ವಾಹನ ವಿನ್ಯಾಸದಲ್ಲಿನ ಸೌಂದರ್ಯಪ್ರಜ್ಞೆಗೆ ಸಾಕ್ಷಿ. ಹಿಂಬದಿ ಸೀಟ್‌ನ ಬ್ರಾಕೆಟ್ ವಿನ್ಯಾಸ ಇದಕ್ಕೆ ಒಳ್ಳೆಯ ಉದಾಹರಣೆ. ಹೆಡ್‌ಲ್ಯಾಂಪ್ ಹಾಗೂ ಇಂಡಿಕೇಟರ್‌ಗಳು ಸಂಪೂರ್ಣ ಬಿಳಿ ಬೆಳಕು ಬೀರುವಂತೆ ಇರುವುದು ಕೂಡ ಸ್ವಾಗತಾರ್ಹ.

219.9 ಸಿಸಿ ಡಿಟಿಎಸ್‌ಐ ಎಂಜಿನ್ ಹೆಚ್ಚು ಸದ್ದಿಲ್ಲದೆಯೇ 19 ಪಿಎಸ್‌ನಷ್ಟು ಶಕ್ತಿ ಒದಗಿಸಬಲ್ಲುದು. ಪ್ರತಿ ಗಂಟೆಗೆ 80 ಕಿ.ಮೀ. ವೇಗದ ಮಿತಿಯನ್ನು ದಾಟಿದರೂ ವಾಹನ ಕಂಪಿಸದು. ಐದು ಸ್ಪೀಡ್‌ನ ಈ ವಾಹನದ ಸುಧಾರಿತ ಟಾರ್ಕ್ (17.5 ಎನ್.ಎಂ@7000ಆರ್.ಪಿ.ಎಂ.) ಹೆಚ್ಚು ಕ್ಷಮತೆಯನ್ನು ಒದಗಿಸಿದೆ. 150 ಕೆ.ಜಿ. ತೂಕದ ಈ ವಾಹನದ ಎತ್ತರ ವಿಪರೀತ ಕಡಿಮೆ (1070 ಎಂ.ಎಂ.). ಐದೂವರೆ ಅಡಿಗಿಂತ ಹೆಚ್ಚು ಎತ್ತರ ಇರುವವರ ಕಾಲುಗಳು ಮುಕ್ಕಾಲು ತಾಸಿನ ಪ್ರಯಾಣದಲ್ಲಿ ಹೈರಾಣಾಗುತ್ತವೆ.

ಆದ್ದರಿಂದ ಕುಳ್ಳಗಿರುವವರಿಗೆ ಇದು ಹೇಳಿ ಮಾಡಿಸಿದ್ದು. ಈ ಕೊರತೆಯನ್ನು ಕ್ರೂಸ್ ಮಾದರಿಯ ಇದೇ ಬೈಕ್ ತುಂಬಿಕೊಡುತ್ತದೆ. ಈ ವಾಹನದಲ್ಲಿ ಇರುವ ಎಲ್ಲಾ ತಾಂತ್ರಿಕ ಸವಲತ್ತುಗಳ ಜೊತೆಗೆ ಹೆಚ್ಚು ‘ಮಾಚೋ’ ಎನ್ನಬಹುದಾದದ್ದು ಕ್ರೂಸ್ ಮಾದರಿ. 1142 ಎಂ.ಎಂ. ಎತ್ತರ ಇರುವ ಈ ಬೈಕ್‌ನಲ್ಲಿ ಮ್ಯಾಟ್ ಫಿನಿಷ್ ಬಣ್ಣವಿಲ್ಲ. ಇದರದ್ದು ‘ಕ್ರೋಮ್ ಥೀಮ್’. ಹೊಳಪಿಗೆ ಆದ್ಯತೆ. ವಾಹನದ ಕಪ್ಪು ಬಣ್ಣವನ್ನೂ ಮೀರಿ ಹೊಳಪು ಲೋಹ ಮಿಂಚುತ್ತದೆ. ಪೆಟ್ರೋಲ್ ಟ್ಯಾಂಕ್ ಮೇಲೂ ಕ್ರೋಮ್‌ನ ಮೆರುಗು. ಹಿಡಿಯಲು ಸ್ಟ್ರೀಟ್‌ಗಿಂತ ಹೆಚ್ಚು ಸ್ಪೋರ್ಟಿ ಆದ, ತುಸು ಎತ್ತರದಲ್ಲಿ ಇರುವ ಹ್ಯಾಂಡಲ್ ಬಾರ್ ಇರುವುದು ಹೆಚ್ಚು ವೈಜ್ಞಾನಿಕ ಎನಿಸುತ್ತದೆ.

ರೋಡ್ ಗ್ರಿಪ್ ವಿಷಯದಲ್ಲಿ ಸ್ಟ್ರೀಟ್‌ಗೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಅಲಾಯ್ ಚಕ್ರಗಳು ಈ ಮಾದರಿಯಲ್ಲಿ ಇಲ್ಲ. ಸಾಂಪ್ರದಾಯಿಕ ರೀತಿಯ ಸ್ಪೋಕ್ಸ್ ಇರುವುದು ಕ್ರೋಮ್ ಥೀಮ್‌ಗೆ ಹೊಂದುತ್ತದೆ. ಹಿಂಬದಿ ಸೀಟಿನಲ್ಲಿ ಕೂರುವವರು ಒರಗಲು ಪ್ಯಾಡ್ ಕೂಡ ಇದರಲ್ಲಿದೆ. ಬಯಸಿದಲ್ಲಿ ವಿಂಡ್‌ಶೀಲ್ಡ್ ಕೂಡ ಹಾಕಿಸಿಕೊಳ್ಳಬಹುದು. ಸೈಲೆನ್ಸರ್‌ನ ಕೊನೆಯಲ್ಲಿ ಒಂದು ಕ್ಯಾನ್ ಕೂಡ ಇದ್ದು, ವಾಹನದ ಕ್ಷಮತೆಯನ್ನು ಕಾಯುತ್ತದೆ.

ಅವೆಂಜರ್ 149 ಸಿಸಿ ಎಂಜಿನ್‌ನ ಸ್ಟ್ರೀಟ್ ಮಾದರಿಯು ನೋಡಲು ಸ್ಟ್ರೀಟ್ 220 ಮಾದರಿಯ ತದ್ವತ್ತು. 14.5 ಪಿ.ಎಸ್. ಪವರ್‌ನ ಇದು ಸಿಟಿ ಬೈಕ್‌ಗಳ ಮಟ್ಟಿಗೆ ಉತ್ತಮವೇ ಹೌದು. ಈ ಎಲ್ಲಾ ಮಾದರಿಗಳಲ್ಲಿ ಮುಂಬದಿಯ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಇದ್ದು, ಹಿಂದಿನ ಬ್ರೇಕ್‌ಗೆ ಡ್ರಮ್ ಬಳಸಲಾಗಿದೆ. ಹೀಗಿದ್ದೂ ಓಡಿಸುವಾಗ ವಾಹನವನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಆಯಿಲ್ ಕೂಲ್ಡ್ ಎಂಜಿನ್ ಆಗಿರುವುದರಿಂದ ಹವೆಯ ತಾಪಮಾನದ ಬದಲಾವಣೆಯಿಂದ ಹೆಚ್ಚು ವ್ಯತಿರಿಕ್ತ ಪರಿಣಾಮಗಳೇನೂ ಆಗುವುದಿಲ್ಲ. ಸಾಮಾನ್ಯ ಬೈಕ್‌ಗಳಿಗಿಂತ ಹೆಚ್ಚು ಉದ್ದ ಇರುವುದರಿಂದ (2177 ಎಂ.ಎಂ) ಈ ಬೈಕ್‌ಗಳನ್ನು ಎರಡು ದೊಡ್ಡ ವಾಹನಗಳ ಸಂದಿಯಲ್ಲಿ ವೇಗವಾಗಿ ನುಗ್ಗಿಸುವುದು, ತಿರುವುಗಳಲ್ಲಿ ಥಟ್ಟನೆ ವಾಲಿಸಿ ಚಲಿಸುವುದು ಸುರಕ್ಷಿತವಲ್ಲ. ಈ ದೃಷ್ಟಿಯಲ್ಲಿ ಇದನ್ನು ‘ಸೆಮಿ ಸ್ಟೋರ್ಟ್ಸ್‌ ವಾಹನ’ ಎನ್ನಬೇಕಷ್ಟೆ.

220 ಸಿಸಿ ಸಾಮರ್ಥ್ಯದ ಎಂಜಿನ್‌ನ ಬೈಕ್‌ಗಳು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 35 ಕಿ.ಮೀ.ನಷ್ಟು ಸರಾಸರಿ ಮೈಲೇಜ್ ನೀಡಬಲ್ಲುದು ಎಂದು ಕಂಪೆನಿ ಹೇಳಿಕೊಂಡಿದೆ. ಇದಕ್ಕಿಂತ ಐದಾರು ಕಿ.ಮೀ. ಆದರೂ ಹೆಚ್ಚು ಮೈಲೇಜನ್ನು 150 ಸಿಸಿ ಎಂಜಿನ್‌ನ ಬೈಕ್ ನೀಡುವುದರಲ್ಲಿ ಅನುಮಾನವಿಲ್ಲ. ಅವೆಂಜರ್ ಕ್ರೂಸ್ 220 ಹಾಗೂ ಸ್ಟ್ರೀಟ್ 220 ಮಾದರಿಯ ಎಕ್ಸ್ ಶೋರೂಮ್ ಬೆಲೆ ರೂ 84,000 ಹಾಗೂ ಸ್ಟ್ರೀಟ್ 150ರ ಬೆಲೆ 75,000 (ದೆಹಲಿ). ಸ್ಟೋರ್ಟಿ ನೋಟದ ಬೈಕ್‌ಗಳಿಗೆ ಮಾರುಕಟ್ಟೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಬಜಾಜ್ ಕಂಪೆನಿಯು ಈ ಬೈಕ್‌ಗಳನ್ನು ಪರಿಚಯಿಸಿರುವುದು ಗಮನಾರ್ಹ ನಡೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT