ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಪಿಂಚಣಿ ಯೋಜನೆ

Last Updated 18 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರ್ಕಾರ ಜಾರಿಗೊಳಿಸಲು ಹೊರಟಿರುವ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ. ಸರ್ಕಾರ ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಿಂಚಣಿ ಯೋಜನೆಗೆ ಸಮಪಾಲು ಕೊಡುಗೆ ನೀಡುವ ಯೋಜನೆ ಇದಾಗಿದೆ. ಇದರ ಪ್ರಕಾರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾಸಿಕ ಕ್ರಮವಾಗಿ  150 ಮತ್ತು 75 ರೂಪಾಯಿ ನೀಡಬೇಕು. ಸರ್ಕಾರ ಇದೇ ಪ್ರಮಾಣದಲ್ಲಿ ತನ್ನ ಪಾಲಿನ ಹಣ ನೀಡುತ್ತದೆ. ಇದನ್ನು ಜೀವವಿಮಾ ನಿಗಮದಲ್ಲಿ ಇಟ್ಟು ಆ ಮೂಲಕ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂಬುದು ಅಂಗನವಾಡಿ ನೌಕರರ ಬೇಡಿಕೆ.

ಆದರೆ ಸರ್ಕಾರ ಇದನ್ನು ತಿರಸ್ಕರಿಸಿ ನಿವೃತ್ತಿ ನಿಧಿ ಮತ್ತು ಪಿಂಚಣಿ ವ್ಯವಸ್ಥೆ ಪ್ರಾಧಿಕಾರದಡಿ ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇಡಲು ಹೊರಟಿದೆ. ಅಲ್ಲಿ ಲಾಭ ಬಂದರೆ ಮಾತ್ರ ಸೌಲಭ್ಯ ಸಿಗುತ್ತದೆ. ಒಂದು ವೇಳೆ ಅಲ್ಲಿ ಲಾಭ ಬರದೆ ಇದ್ದರೆ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ನೌಕರರಿಗೆ ತಮ್ಮ ಹಣದ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ.ಇದಕ್ಕೆ  ವಿರೋಧ ವ್ಯಕ್ತಪಡಿಸಿ, ಇದರಿಂದ ಆಗುವ ಅನಾನುಕೂಲಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳೆದ ಡಿಸೆಂಬರ್ ಎರಡರಂದು ಮನವರಿಕೆ ಮಾಡಿಕೊಟ್ಟಾಗ ಪಿಂಚಣಿ ಸಂಬಂಧ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಎಂಬ ಸೂಚನೆ ನೀಡಿದ್ದರು. ಆದರೆ ಇದನ್ನು ಲೆಕ್ಕಿಸದೆ 1.20 ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಂಚಣಿ ಅರ್ಜಿಗಳನ್ನು ಕಳುಹಿಸಿಕೊಟ್ಟು, ಬಲವಂತವಾಗಿ ಸಹಿ ಮಾಡಿಸಿಕೊಳ್ಳಲಾಗುತ್ತಿದೆ.

ಒಂದು ವೇಳೆ ಪಿಂಚಣಿ ಹಣ ವಾಪಸ್ ಬಾರದೆ ಹೋದರೆ ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂಬುದು ಸೇರಿದಂತೆ ಹಲವಾರು ಷರತ್ತುಗಳಿಗೆ ಒಪ್ಪಿ ಸಹಿ ಹಾಕಬೇಕು ಎಂದು ಒತ್ತಡ ಹೇರಲಾಗುತ್ತಿದೆ. ರಿಲಯನ್ಸ್, ಯುಟಿಐ, ಮಹೇಂದ್ರ ಮೊದಲಾದ ಸಂಸ್ಥೆಗಳಲ್ಲಿ ಹಣವನ್ನು ಇಡಲಾಗುತ್ತದೆ. ಇದನ್ನು ವಿರೋಧಿಸಿ ನೌಕರರು ಸಹಿ ಹಾಕುತ್ತಿಲ್ಲ. ಆದರೂ ಈ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. 55 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆ ಅನ್ವಯವಾಗುವುದಿಲ್ಲ. ಇಂತಹವರು ಸುಮಾರು 10 ಸಾವಿರ ಮಂದಿ ಇದ್ದಾರೆ. ಅಲ್ಲದೆ ಪಿಂಚಣಿ ಯೋಜನೆ ಜಾರಿ ಸಂಬಂಧ ಸರ್ಕಾರ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಒಡಂಬಡಿಕೆಯನ್ನು ಸಹ ಮಾಡಿಕೊಂಡಿಲ್ಲ. ಇದನ್ನು ಒಪ್ಪುವುದಾದರೂ ಹೇಗೆ?

 ಕೆಲಸಗಳು
-ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಅವರಿಗೆ ಆಹಾರ ಪೂರೈಕೆ,
-ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಸಂಗ್ರಹ
-  ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳ ಮಾಹಿತಿ,
-ಆರೋಗ್ಯ ತಪಾಸಣೆ ಮತ್ತು ಪೌಷ್ಠಿಕ ಆಹಾರದ ಪೂರೈಕೆ, 
-ರೋಗ ನಿರೋಧಕ ಚುಚ್ಚುಮದ್ದು ನೀಡುವುದು
-ಮಕ್ಕಳು ಮತ್ತು ವಯಸ್ಕ ಅಂಗವಿಕಲರ ಮಾಹಿತಿ
-   ಜನನ-ಮರಣ ಮಾಹಿತಿ
-ಆರೋಗ್ಯ ಇಲಾಖೆ, ರೆವಿನ್ಯೂ ಇಲಾಖೆ ಮೂಲಕ ಬರುವ ಜನಗಣತಿ,
-   ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಗಣತಿ.
-   ಕುಷ್ಠರೋಗಿಗಳ ಗಣತಿ,
-   ರೇಶನ್ ಕಾರ್ಡ್ ಗಣತಿ
-ಭಾಗ್ಯಲಕ್ಷ್ಮಿ ಯೋಜನೆಯ ಮಗುವಿನ ಆಯ್ಕೆ.
-ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳ ರಚನೆ ಮತ್ತು ತರಬೇತಿ
-ಪಲ್ಸ್ ಪೋಲಿಯೋ ಲಸಿಕೆ ಹಾಕುವುದು

ರಾಜ್ಯದ ಅಂಗನವಾಡಿಗಳು
ಅಂಗನವಾಡಿ ಕೇಂದ್ರಗಳು 63,376
- ಮಿನಿ ಅಂಗನವಾಡಿಗಳು   3,331
-ಒಟ್ಟು ಅಂಗನವಾಡಿ ಹುದ್ದೆಗಳು 1,26,752
- ಖಾಲಿ ಇರುವ ಹುದ್ದೆಗಳು 8,000 .
 

ದೇಶದ ಅಂಗನವಾಡಿಗಳು
-ಮಂಜೂರಾದ ಅಂಗನವಾಡಿಗಳು 13,56,027
-ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳು 11,04,262
-ಒಟ್ಟು ಅಂಗನವಾಡಿ ಹುದ್ದೆಗಳು 22,08,524
-ಖಾಲಿ ಇರುವ ಹುದ್ದೆಗಳು   ಸುಮಾರು      1.60 ಲಕ್ಷ


 ಪ್ರಧಾನ ಕಾರ್ಯದರ್ಶಿ,  ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT