ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಆಗರವಾದ ಪಾದಚಾರಿ ಸುರಂಗ ಮಾರ್ಗಗಳು

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಡೆಗೆ ವಾಹನ ದಟ್ಟಣೆ... ಇನ್ನೊಂದು ಕಡೆ ಪಾದಚಾರಿಗಳ ಪರದಾಟ... ಮತ್ತೊಂದೆಡೆ ಪಾದಚಾರಿಗಳ ಸುರಂಗ ಮಾರ್ಗಗಳ್ದ್ದಿದರೂ ಪ್ರಯೋಜನಕ್ಕೆ ಬಾರದೆ ಬೀಗ ಹಾಕಿರುವ ಪರಿಸ್ಥಿತಿ...

ಪಾದಚಾರಿಗಳ ಅನುಕೂಲಕ್ಕಾಗಿ ನಗರದಲ್ಲಿ ನಿರ್ಮಾಣವಾಗಿರುವ ಪಾದಚಾರಿ ಸುರಂಗ ಮಾರ್ಗಗಳು (ಸಬ್‌ವೇ) ಅವ್ಯವಸ್ಥೆಯ ಗೂಡಾಗಿವೆ. ಸಮರ್ಪಕವಾದ ನಿರ್ವಹಣೆಯಿಲ್ಲದೆ  ಈ ಮಾರ್ಗಗಳಲ್ಲಿ ಜನರು ಓಡಾಡದಂತಹ ಸ್ಥಿತಿ ಉಂಟಾಗಿದೆ.

ಕೋಟಿಗಟ್ಟಲೆ ಹಣವನ್ನು ಬಳಸಿ ನಿರ್ಮಿಸಿರುವ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಹಗಲು ಕತ್ತಲೆ, ರಾತ್ರಿಯೂ ಕತ್ತಲೆಯೆ. ಇದರಿಂದ ಕಳ್ಳಕಾಕರಿಗೆ ಮತ್ತು ಅನೈತಿಕ ಚಟುವಟಿಕೆಗಳನ್ನು ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳಗಳಂತಾಗಿವೆ.

ಇವುಗಳನ್ನು ನಿರ್ಮಾಣ ಮಾಡಿ ಸುಮಾರು ಐದು ವರ್ಷಗಳಾಗಿವೆ. ಆರಂಭದಲ್ಲಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿದ್ದ ಪಾದಚಾರಿ ಸುರಂಗ ಮಾರ್ಗಗಳನ್ನು ನಂತರದ ದಿನಗಳಲ್ಲಿ ನಿರ್ವಹಣೆ ಮಾಡುವ ಗೋಜಿಗೆ ಪಾಲಿಕೆ ಹೋಗಿಲ್ಲ. ಕೆಲ ಪಾದಚಾರಿ ಸುರಂಗ ಮಾರ್ಗಗಳಿಗೆ ಬೀಗವನ್ನು ಹಾಕಲಾಗಿದೆ. ಇದರಿಂದಾಗಿ ಈ ಮಾರ್ಗಗಳನ್ನು ನಿರ್ಮಿಸಿದ ಮೂಲ ಉದ್ದೇಶವೇ ಮಾಯವಾಗಿದೆ.

ನಗರದ ಕೆ.ಆರ್.ವೃತ್ತದ ಬಳಿಯ ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಗಳಲ್ಲಿರುವ ಪಾದಚಾರಿ ಸುರಂಗ ಮಾರ್ಗಗಳ ನಿರ್ವಹಣೆಯಲ್ಲಿ ಬಿಬಿಎಂಪಿ ಸೋತಿದೆ. ಇದರಿಂದ ಈ ಭಾಗದಲ್ಲಿ ರಸ್ತೆ ದಾಟುವ ಜನರು ನಿತ್ಯವೂ ಬಿಬಿಎಂಪಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

`ಕೆಟ್ಟ ವಾಸನೆಯಿಂದ ತುಂಬಿರುವ ಈ ಸಬ್‌ವೇ ನ ಒಳ ಹೊಕ್ಕರೆ ಕತ್ತಲೆಯ ಗವಿ ಪ್ರವೇಶಿಸಿದಂತಾಗುತ್ತದೆ. ಸರಿಯಾದ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದ, ಸಮರ್ಪಕ ನಿರ್ವಹಣೆ ಇಲ್ಲದ ಈ ಇವುಗಳನ್ನು ಬಿಬಿಎಂಪಿ ಯಾಕಾದರೂ ನಿರ್ಮಿಸಿದೆಯೋ ಗೊತ್ತಿಲ್ಲ' ಎಂದು ಎಸ್.ಜೆ.ಆರ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಕಾತ್ಯಾಯಿನಿ ಅಸಮಾಧಾನ ವ್ಯಕ್ತಪಡಿಸಿದರು.

`ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಯಿರುವ ರಸ್ತೆಗಳಲ್ಲಿ ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ಮಾಣವಾಗಿ ಐದು ವರ್ಷಗಳೇ ಕಳೆದಿವೆ. ಇವುಗಳ ನಿರ್ವಹಣೆ ಬಿಬಿಎಂಪಿಯ ಜವಾಬ್ದಾರಿ. ಆದರೆ, ಎಲ್ಲ ಕೆಲಸಗಳಂತೆ ಇವುಗಳ ನಿರ್ವಹಣೆಯಲ್ಲೂ ಬಿಬಿಎಂಪಿ ಸೋತಿದೆ' ಎಂದು ಅವರು ಆರೋಪಿಸಿದರು.

`ನಗರದಲ್ಲಿನ ನೃಪತುಂಗ ರಸ್ತೆ, ಹಳೆಯ ಅಂಚೆ ಕಚೇರಿ, ಕಬ್ಬನ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಮಹಾರಾಣಿ ಕಾಲೇಜು, ಬಸವ ಭವನ, ಬಳ್ಳಾರಿ ರಸ್ತೆ, ಪುರಭವನದ ಹತ್ತಿರ, ಸಿಟಿ ಮಾರ್ಕೆಟ್, ವಿಜಯನಗರದಲ್ಲಿ ಹೀಗೆ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪಾದಚಾರಿ ಸುರಂಗ ಮಾರ್ಗಗಳಿವೆ. ಒಂದೊಂದಕ್ಕೂ ನಿರ್ಮಾಣ ವೆಚ್ಚ ಒಂದು ಕೋಟಿ ರೂಪಾಯಿ ತಗುಲಿದೆ. ಸಿಟಿ ಮಾರ್ಕೆಟ್‌ನ ಪಾದಚಾರಿ ಸುರಂಗ ಮಾರ್ಗವು ಹೆಚ್ಚು ವಿಸ್ತರಣೆಯನ್ನು ಹೊಂದಿದೆ. ಆದ್ದರಿಂದ ಅದರ ವೆಚ್ಚ ಸುಮಾರು ಐದೂವರೆ ಕೋಟಿ ರೂಪಾಯಿಯಾಗಿದೆ' ಎಂದು ರಸ್ತೆ ನಿರ್ಮಾಣ ಕಾಮಗಾರಿಯ ಮುಖ್ಯ ಎಂಜಿನಿಯರ್ ಎಸ್.ಸೋಮಶೇಖರ್ ಮಾಹಿತಿ ನೀಡಿದರು.

`ಪಾದಚಾರಿ ಸುರಂಗ ಮಾರ್ಗಗಳ ನಿರ್ವಹಣೆ ಬಿಬಿಎಂಪಿಯ ಆಯಾ ವಲಯ ವಿಭಾಗಗಳಿಗೆ ಬರುತ್ತದೆ. ಈಗ ನೋಡಿದರೆ, ಅವುಗಳ ನಿರ್ವಹಣೆಯು ಸರಿಯಾಗಿಲ್ಲದಿರುವುದು ಕಂಡುಬಂದಿದೆ. ಆದರೆ, ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ, ಅಲ್ಲಿ ಹೆಚ್ಚಾಗಿ ಕತ್ತಲು ಇರುತ್ತದೆ ಎಂಬುದು ಬಹುತೇಕ ಜನರು ಹೇಳುತ್ತಾರೆ. ಆದರೆ, ಅಲ್ಲಿ ವಿದ್ಯುದ್ದೀಪಗಳನ್ನು ಹಾಕಿದರೂ ಸಹ ವೈರುಗಳ ಸಮೇತ ಕಳ್ಳತನವಾಗುತ್ತಿದೆ. ಇದಕ್ಕಾಗಿ ಅಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು' ಎಂದರು.

ವಿಜಯನಗರ ಬಸ್ ನಿಲ್ದಾಣದ ಬಳಿಯ ಪಾದಚಾರಿ ಸುರಂಗ ಮಾರ್ಗವನ್ನು 2010 ರ ಜನವರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಪಾದಚಾರಿ ಸುರಂಗ ಮಾರ್ಗಕ್ಕೆ ಈ ವರ್ಷದ ಜನವರಿಯಿಂದ ಬೀಗ ಹಾಕಲಾಗಿದೆ. ಹೀಗಾಗಿ ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಾರ್ಗ ನಿಷ್ಪ್ರಯೋಜಕವಾಗಿದೆ.

`ಪಾದಚಾರಿ ಸುರಂಗ ಮಾರ್ಗವನ್ನು ಯಾರೂ ಉಪಯೋಗಿಸುತ್ತಿರಲಿಲ್ಲ. ಅಲ್ಲದೇ ಅಲ್ಲಿ ಭಿಕ್ಷುಕರು ವಾಸ ಮಾಡಿ ಹೆಚ್ಚು ಗಲೀಜು ಮಾಡುತ್ತಿದ್ದರು. ಇದರಿಂದ ಅದನ್ನು ಮುಚ್ಚಲಾಗಿದೆ. ಈಗ `ನಮ್ಮ ಮೆಟ್ರೊ' ಕಾಮಗಾರಿ ನಡೆಯುತ್ತಿರುವುದರಿಂದ ಜನರು ಕಷ್ಟಪಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಶೀಘ್ರವಾಗಿ ತೆರೆಯಲಾಗುವುದು' ಎಂದು ವಿಜಯನಗರದ ಬಿಬಿಎಂಪಿ ಸದಸ್ಯ ಎಚ್.ರವೀಂದ್ರ ಅವರು ತಿಳಿಸಿದರು.

`ಮುಚ್ಚುವ ಚಿಂತನೆ ಇದೆ'
`ವಾಹನ ದಟ್ಟಣೆಯಿಂದ ರಸ್ತೆ ದಾಟಲು ಪಾದಚಾರಿಗಳಿಗೆ ಆಗುವ ಅನನುಕೂಲ ತಪ್ಪಿಸಲು ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳನ್ನು ಹೆಚ್ಚು ಜನರು ಬಳಸುತ್ತಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಇವುಗಳನ್ನು ಮುಚ್ಚುವ ಬಗ್ಗೆ ಚಿಂತನೆ ನಡೆದಿದೆ. ಈ ಮಾರ್ಗಗಳನ್ನು ಮುಚ್ಚಿ ಅವುಗಳ ಬದಲು ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡುವ ಚಿಂತನೆ ನಡೆದಿದೆ'
ಡಿ.ವೆಂಕಟೇಶಮೂರ್ತಿ, ಮೇಯರ್, ಬಿಬಿಎಂಪಿ

`ಸುರಕ್ಷತಾ ಕ್ರಮಗಳಿಲ್ಲ'
`ಪಾದಚಾರಿ ಸುರಂಗ ಮಾರ್ಗಗಳಲ್ಲಿ ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಅಲ್ಲಿ ವಿದ್ಯುದ್ದೀಪಗಳಿಲ್ಲ, ಮಳೆ ಬಂದರೆ ಒಳಗೆ ನೀರು ತುಂಬುತ್ತದೆ. ಮೇಲಿನ ಹೊದಿಕೆಯು ಕಿತ್ತು ಬೀಳುತ್ತಿದೆ. ಯಾವ ಸುರಕ್ಷತಾ ಕ್ರಮಗಳೂ ಇಲ್ಲಿಲ್ಲ'
- ಶ್ಯಾಮಲಿ, ಖಾಸಗಿ ಕಂಪೆನಿ ಉದ್ಯೋಗಿ.

`ಅವ್ಯವಹಾರಗಳ ತಾಣ'
`ಪಾದಚಾರಿ ಸುರಂಗ ಮಾರ್ಗಗಳಲ್ಲಿ ಯಾವುದೇ ರೀತಿಯ ಸುರಕ್ಷತೆ ಇಲ್ಲ. ಇಲ್ಲಿ ಏನೆಲ್ಲಾ ಅವ್ಯವಹಾರಗಳು ನಡೆಯುತ್ತವೆ ಎಂಬುದು ತಿಳಿಯುವುದಿಲ್ಲ. ಇವು ಜನರಿಗೆ ಉಪಯೋಗವಾಗುವ ಬದಲು ಅಪಾಯಕಾರಿ ಸ್ಥಿತಿಯನ್ನು ನಿರ್ಮಾಣ ಮಾಡಿವೆ'
- ರಾಣಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT