ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರ ಅರೇಹಳ್ಳಿ ಸರ್ಕಾರಿ ಶಾಲೆ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ:   ದನದ ಕೊಟ್ಟಿಗೆಯಂತಿರುವ ಕಟ್ಟಡ, ಉಸಿರುಕಟ್ಟುವ ವಾತಾವರಣ, ನೊಣ-ಸೊಳ್ಳೆಗಳ ಕಾಟ, ಮೂರೇ ಕೊಠಡಿಗಳಲ್ಲಿ ಅಂಗನವಾಡಿಯಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಪಾಠ ಪ್ರವಚನ
- ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ವಾರ್ಡ್‌ನ ಅರೇಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಒಂದು ಚಿತ್ರಣ.

ಮಳೆ ಬಂದಾಗಲೆಲ್ಲ ಕಿಟಕಿ- ಬಾಗಿಲು, ಹೆಂಚುಗಳ ಮೂಲಕ ಸೋರುವ ಮಳೆ ನೀರಿನ ಜತೆಗೆ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ. ಇದರ ಜತೆಗೆ ನೊಣ-ಸೊಳ್ಳೆಗಳ ಕಾಟ. ಕಿಷ್ಕಿಂಧೆಯಂತಿರುವ ಕೊಠಡಿಗಳ ನೆಲದಲ್ಲಿ ಕೂತು ಮಕ್ಕಳು ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ. ಶಾಲೆಯ ಅವ್ಯವಸ್ಥೆ ಬಗ್ಗೆ ವಿವರಿಸಲು ಇಷ್ಟು ಸಾಕು.

ಇನ್ನು ಒಂದೇ ಕೊಠಡಿಯಲ್ಲಿ ಎರಡು ಕಡೆಯಿಂದ ಶಿಕ್ಷಕರು ಪಾಠ ಮಾಡುವಂತಹ ಸ್ಥಿತಿ. ಶಾಲೆ ಬಳಿ ಒಂದು ಶೌಚಾಲಯವಿದ್ದು, ಶಿಕ್ಷಕರು ಮಾತ್ರ ಉಪಯೋಗಿಸಿ ನಂತರ ಬೀಗ ಹಾಕಲಾಗುತ್ತದೆ. ಹೆಣ್ಣು ಮಕ್ಕಳು ಕೂಡ ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವ ಸ್ಥಿತಿ. ಕಂಪ್ಯೂಟರ್, ಕಿತ್ತು ಹೋಗಿರುವ ಮಣೆಗಳು, ಬಿಸಿಯೂಟದ ಪಾತ್ರೆಗಳು ಒಂದೆಡೆಯಾದರೆ, ಅದೇ ಕೊಠಡಿಯ ಮತ್ತೊಂದು ಮೂಲೆಯಲ್ಲಿ ಶಿಕ್ಷಕರ ಪಾಠ.

`ಸಿಲಿಕಾನ್ ಸಿಟಿ~ಯೊಳಗಿನ ಸರ್ಕಾರಿ ಶಾಲೆಗಳ ಸ್ಥಿತಿಯೇ ಹೀಗಿದ್ದರೆ, ಇನ್ನು ಹೊರಗಿನ ಅದರಲ್ಲೂ ಗ್ರಾಮೀಣ ಪ್ರದೇಶಗಳ ಶಾಲೆಗಳ ಸ್ಥಿತಿ ಹೇಗಿರಬಹುದು ಎಂದು ಅರೇಹಳ್ಳಿಯ ಜನತೆ ಪ್ರಶ್ನಿಸುತ್ತಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವ ಸರ್ಕಾರ, ಸರ್ಕಾರಿ ಶಾಲೆಗಳ ಬಗ್ಗೆಯೇ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಇಂತಹ ನಿರ್ಲಕ್ಷ್ಯ ಶಾಲೆಗಳತ್ತ ಸರ್ಕಾರ ಗಮನಹರಿಸಲಿ ಎಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.                                                                                                                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT