ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಕಾಲುದಾರಿ-ನಾಗರಿಕರಿಗೆ ಕಿರಿಕಿರಿ

Last Updated 15 ಏಪ್ರಿಲ್ 2011, 7:10 IST
ಅಕ್ಷರ ಗಾತ್ರ

ಪುತ್ತೂರು: ಪಟ್ಟಣವನ್ನು ಸುಂದರವನ್ನಾಗಿಸುವ ಕನಸು ಕಂಡಿದ್ದ ಪುರಸಭೆ ಆ ನಿಟ್ಟಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಫುಟ್‌ಪಾತ್ ಮತ್ತು ಒಳಚರಂಡಿ ದುರಸ್ತಿ ಕಾಮಗಾರಿಗೆ ಮುಂದಾಗಿತ್ತು. ಕಾಮಗಾರಿಯೂ ಆರಂಭವಾಗಿತ್ತು. ಆದರೆ ಒಂದೆರಡು ಕಡೆ ಅಪೂರ್ಣ ಮತ್ತು ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಪಟ್ಟಣದ ಜನತೆ ಸಮಸ್ಯೆ ಎದುರಿಸುವಂತಾಗಿದೆ.

ಪುತ್ತೂರಿನ ಕೇಂದ್ರ ಪ್ರದೇಶ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಮುಖ್ಯ ರಸ್ತೆಯ ವೆಂಕಟರಮಣ ದೇವಾಲಯದವರೆಗೆ ಪಾದಚಾರಿ ಮಾರ್ಗ ಮತ್ತು ಒಳಚರಂಡಿ ಕಾಮಗಾರಿಯನ್ನು ಪುರಸಭೆ ಆರಂಭಿಸಿದೆ. ಇದು ಪಟ್ಟಣದ ಅಭಿವೃದ್ದಿ ಮತ್ತು ಸ್ವಚ್ಚತೆಯ ದೃಷ್ಟಿಯಿಂದ ಉತ್ತಮ ಕಾಮಗಾರಿ ಎಂಬ ಪ್ರಶಂಸೆ ಜನತೆಯಿಂದ ಕೇಳಿ ಬಂದಿತ್ತು. ಆದರೆ ಕಾಮಗಾರಿ ಆರಂಭವಾಗಿ ಕೆಲವು ತಿಂಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಅವ್ಯವಸ್ಥೆಯಿಂದಾಗಿ ತೊಂದರೆ ಆಗುತ್ತಿದೆ ಎಂದು ಈಗ ನಾಗರಿಕರು ದೂರುತ್ತಿದ್ದಾರೆ.

ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಸಂಜೀವ ಶೆಟ್ಟಿ ಜವುಳಿ ಅಂಗಡಿ ಪಕ್ಕದಲ್ಲಿ ಮತ್ತು ಸ್ಟೆಪ್ ಫುಟ್‌ವೇರ್ಸ್‌ ಪಾದರಕ್ಷೆ ಅಂಗಡಿ ಬಳಿ ಹೊಂಡ ಗುಂಡಿಗಳನ್ನು ಅಗೆದು ಫುಟ್‌ಪಾತ್‌ನಲ್ಲೇ ಹಾಸು ಕಲ್ಲುಗಳನ್ನು ರಾಶಿ ಹಾಕಲಾಗಿದೆ. ಅಲ್ಲಲ್ಲಿ ಕಬ್ಬಿಣದ ಸರಳುಗಳ ತುಂಡುಗಳು ಹರಡಿವೆ. ಪಟ್ಟಣದ ವೆಂಕಟರಮಣ ದೇವಾಲಯದ ಬಳಿ, ರೋಶನಿ ಹೋಟೆಲ್ ಎದುರು ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಗುಂಡಿಯನ್ನು ಅಗೆದು ಅಷ್ಟಕ್ಕೇ ನಿಲ್ಲಿಸಲಾಗಿದೆ. ಪಾದಚಾರಿಗಳಿಗೆ ಭಯ ಮೂಡಿಸುವ ರೀತಿಯಲ್ಲಿ ಇವು ಬಾಯಿತೆರೆದಿವೆ.

ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿ ಅವ್ಯವಸ್ಥೆಯಿಂದ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು  ಪುರಸಭೆಯವರು ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ   ಕೇಳಿಬರುತ್ತಿದೆ. ಪುತ್ತೂರು ಪೇಟೆಯಲ್ಲಿ ಜನ ಸಂದಣಿ ಜಾಸ್ತಿ. ಅಲ್ಲದೆ ಇಲ್ಲಿನ ವಾಹನ ಸಂಚಾರದಲ್ಲಿ ಗೊತ್ತುಗುರಿಯೂ ಇರುವುದಿಲ್ಲ. ರಸ್ತೆಯೂ ಇಕ್ಕಟ್ಟಾಗಿರುವುದರಿಂದ ಮತ್ತು ಫುಟ್‌ಪಾತ್ ಕಾಮಗಾರಿ ಅವ್ಯವಸ್ಥೆಯಿಂದಾಗಿ   ಇಲ್ಲಿ ಪಾದಚಾರಿಗಳಿಗೆ ಸಮಸ್ಯೆ ತೀವ್ರವಾಗಿದೆ.

ಹಲವರಿಗೆ ಗಾಯ: ಈಗಾಗಲೇ ಹಲವು ಮಂದಿ ಫುಟ್‌ಪಾತ್ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಚಿತ್ರನಟ ಶಿವಧ್ವಜ ಅವರ ತಂದೆ ಕಾಸರಗೋಡಿನ ತಿಮ್ಮಪ್ಪ ಶೆಟ್ಟಿ ಬುಧವಾರ ಪುತ್ತೂರು ದೇವಾಲಯದ ಜಾತ್ರೆಗೆ ಹೋಗುತ್ತಿದ್ದ ವೇಳೆ ಆಯತಪ್ಪಿ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಇದೇ ಜಾಗದಲ್ಲಿ ದಿನಂಪ್ರತಿ ಹಲವು ಮಂದಿ ಎಡವಿ ಬೀಳುತ್ತಿದ್ದಾರೆ ಎಂದು ತಿಮ್ಮಪ್ಪ ಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ  ಸ್ಟೆಪ್ ಫುಟ್‌ವೇರ್ಸ್‌ ಅಂಗಡಿಯ  ಮಾಲಕ ಹಮೀದ್ ಹೇಳುತ್ತಾರೆ.

ಜಾತ್ರೆಗಾದರೂ ಸರಿಪಡಿಸಿ-ಮನವಿ: ಪುತ್ತೂರಿನ ಪ್ರಸಿದ್ದ ಮಹಾಲಿಂಗೇಶ್ವರ ದೇವಾಲಯದಲ್ಲಿ ಇದೇ 16ರಂದು ತೆಪ್ಪೋತ್ಸವ ಮತ್ತು 17ರಂದು ಮಹಾರಥೋತ್ಸವ ಮತ್ತು ಬೆಡಿ ಪ್ರದರ್ಶನ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಪುತ್ತೂರಿನಲ್ಲಿ ಸೇರುತ್ತಾರೆ. ಪತ್ತೂರಿನ ಬಸ್ ನಿಲ್ದಾಣ ಬಳಿಯಿಂದ ದೇವಾಲಯದ ತನಕ ರಸ್ತೆಯಲ್ಲಿ ಕಿಕ್ಕಿರಿದ ಜನಸಂಚಾರವಿರುತ್ತದೆ. ಈ ಹಿನ್ನಲೆಯಲ್ಲಿ  ಅದಕ್ಕೆ ಮುಂಚಿತವಾಗಿಯಾದರೂ ಕಾಮಗಾರಿಯನ್ನು ಮುಗಿಸಿ ಬಿಡಿ ಎಂಬುದು ಇಲ್ಲಿನ ಸಾರ್ವಜನಿಕರ ಕಳಕಳಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT