ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಸುಳಿಯಲ್ಲಿ ಜನತೆ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕನಕಪುರ:  ಪಟ್ಟಣದ ಎಂ.ಜಿ.ರಸ್ತೆ, ಬಸ್‌ನಿಲ್ದಾಣದ ರಸ್ತೆ, ರಾಮನಗರ ರಸ್ತೆ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆ ಬದಿಯಲ್ಲಿರುವ ವರ್ತಕರು ತಮ್ಮ ಅಂಗಡಿ ಮುಂದಿನ ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡು ಸರಕು ಸಾಮಗ್ರಿ ಜೋಡಿಸಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಎದುರಾಗಿದೆ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ. 

  ಪಟ್ಟಣದಲ್ಲಿನ ಕೆಲವು ಪ್ರಮುಖ ರಸ್ತೆಗಳು ಮೊದಲೇ ಕಿರಿದಾಗಿವೆ. ಇಂತಹ ಸ್ಥಿತಿಯಲ್ಲಿರುವಾಗ ವರ್ತಕರು ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡು ಮತ್ತಷ್ಟು ಕಿರಿದುಗೊಳಿಸಿದ್ದಾರೆ. ವರ್ತಕರು ಅಂಗಡಿ ಒಳಭಾಗದಲ್ಲಿ ಸಾಮಾನುಗಳನ್ನು ಜೋಡಿಸಿಕೊಂಡು ವ್ಯಾಪಾರ ವಹಿವಾಟು ನಡೆಸದೆ, ಅಂಗಡಿ ಮುಂದಿನ 20 ಅಡಿಗಳಷ್ಟು ಫುಟ್‌ಪಾತ್ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. 

ಇದರಿಂದಾಗಿ ರಸ್ತೆ ಇಕ್ಕೆಲಗಳು ಕಿರಿದಾಗಿ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಕ್ರಮವಾಗಿ ಫುಟ್‌ಪಾತ್ ಅನ್ನು ಆಕ್ರಮಿಸಿರುವ  ಜಾಗವನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜನತೆ ಒತ್ತಾಯಿಸಿದ್ದಾರೆ. ಈ ಹಿಂದೆ ಇದೇ ರೀತಿ ಫುಟ್‌ಬಾತ್ ಜಾಗವನ್ನು ಒತ್ತುವರಿ ಮಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು, ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದಂತಹ ಅಂದಿನ ಜಿಲ್ಲಾಧಿಕಾರಿ ಮುನಿಷ್ ಮೌದ್ಗಿಲ್ ಅವರು ದಿಟ್ಟ ನಿರ್ಧಾರದಿಂದ ತೆಗೆದುಕೊಂಡು, ಯಾವುದೇ ಒತ್ತಡಕ್ಕೆ ಮಣಿಯದೆ ಅಕ್ರಮ ಅಂಗಡಿ ಹಾಗೂ ಫುಟ್‌ಪಾತ್  ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದರು.
 

ಆದರೆ ನಂತರ ಬಂದ ಅಧಿಕಾರಿಗಳು ಅದೇ ಶಿಸ್ತು ಕ್ರಮವನ್ನು ಮುಂದುವರಿಸದೆ ಬೇಜವಾಬ್ದಾರಿ ತೋರಿದ್ದರಿಂದ ಮತ್ತೆ ಮತ್ತೆ ಒತ್ತುವರಿ ಪ್ರಾರಂಭಗೊಂಡಿದೆ. ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಈ ಬಗ್ಗೆ ಅಂಗಡಿ ಮಾಲೀಕರನ್ನು ಪ್ರಶ್ನಿಸಿದರೆ ಅವರ ಮೇಲೆ ಗಲಾಟೆ ಮಾಡಿ ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಬೆದರಿಕೆ ಹಾಕುತ್ತಾರೆ. ಸಂಬಂಧಪಟ್ಟ ಇಲಾಖೆಯವರಿಗೂ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಾ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದರೂ ಅವರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ತಾಲ್ಲೂಕು ಆಡಳಿತವಾಗಲಿ ಜಿಲ್ಲಾಡಳಿತವಾಗಲಿ ಇತ್ತ ಗಮನಹರಿಸಿ ಕೂಡಲೇ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ಮುಖ್ಯ ರಸ್ತೆಗಳಲ್ಲಿ ಯಾವುದೇ ಅಂಗಡಿಗಳನ್ನು ತೆರೆಯಬೇಕಾದರೂ ಪುರಸಭೆಯಿಂದ ಪರವಾನಗಿ ಪಡೆಯಬೇಕು. ಸಾರ್ವಜನಿಕರ ಜನ ಜೀವನಕ್ಕೆ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸುವಂತೆ ಎಚ್ಚರಿಕೆ ನೀಡಿ ಅವರು ಲೈಸೆನ್ಸ್ ನೀಡಿರುತ್ತಾರೆ. ಜೊತೆಗೆ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಪುರಸಭೆ ಅಧಿಕಾರಿಗಳೇ ಅದನ್ನು ಖುದ್ದು ತೆರವುಗೊಳಿಸಿ ಸಮಸ್ಯೆಯನ್ನು ನಿವಾರಣೆ ಮಾಡಬೇಕು.

ಆದರೆ ಇಲ್ಲಿನ ಪುರಸಭೆ ವ್ಯಾಪ್ತಿಗೆ ಬರುವ ಬಸ್‌ನಿಲ್ದಾಣದ ರಸ್ತೆ, ರಾಮನಗರ ರಸ್ತೆ, ಎಂ.ಜಿ.ರಸ್ತೆ, ಕೋಡಿಹಳ್ಳಿ ರಸ್ತೆಯಲ್ಲಿನ ವರ್ತಕರು ತಮ್ಮ ಅಂಗಡಿಗಳ ಮುಂದಿನ ಫುಟ್‌ಪಾತ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆಯಲ್ಲಿಯೇ ಸಾಮಾನು ಸರಂಜಾಮುಗಳನ್ನು ಇಟ್ಟಿರುತ್ತಾರೆ. ಆದರೂ ಪುರಸಭೆ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಜವಾಬ್ದಾರಿ ತೋರುತ್ತಿರುವ ಪುರಸಭೆ ಅಧಿಕಾರಿಗಳಂತೆ ಪೊಲೀಸ್ ಇಲಾಖೆ ಸಹ ವರ್ತಿಸುತ್ತಿದೆ. ಸಂಚಾರ ವ್ಯವಸ್ಥೆಯನ್ನು ಸುವ್ಯವಸ್ಥೆಯಲ್ಲಿಡಬೇಕಾದ ಇಲಾಖೆ ನಿದ್ರಾವಸ್ಥೆಯಲ್ಲಿದೆ.
ಇಲ್ಲಿನ ಪೊಲೀಸರು ಪ್ರತಿ ರಸ್ತೆಯಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ. ಪ್ರತಿ ಅಂಗಡಿ ಮುಂಗಟ್ಟುಗಳ ಮುಂದೆ ಓಡಾಡುವಾಗ ಅಂಗಡಿಯವರು ಫುಟ್‌ಪಾತ್ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರವುದನ್ನು ಕಣ್ಣಾರೆ ಕಂಡರೂ ನೋಡಿಯೂ ನೋಡದಂತೆ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ.

ಒಟ್ಟಾರೇ ಪಟ್ಟಣದಲ್ಲಿ ಪುರಸಭೆ ಆಡಳಿತ, ಪೊಲೀಸ್ ಇಲಾಖೆ ಎರಡು ತಮ್ಮ ಜವಾಬ್ದಾರಿಯನ್ನು ಸಂಪೂರ್ಣ ಮರೆತಿವೆ. ಇಷ್ಟಾದರೂ ಚುನಾಯಿತ ಜನಪ್ರತಿನಿಧಿಗಳು ಏನುಮಾಡುತ್ತಿದ್ದಾರೆ. ಅವರಿಗೂ ನಾಗರಿಕರ ಸಮಸ್ಯೆ ಬೇಡವಾಗಿದಿಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. 
                                                             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT