ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ಆರೋಪಗಳ ಸುರಿಮಳೆ

Last Updated 22 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಮಡಿಕೇರಿ: ಸಂಸದ ಎಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಹಲವು ಯೋಜನೆಗಳಲ್ಲಿ ನಡೆದ ಅವ್ಯವಹಾರಗಳು, ಕಳಪೆ ಕಾಮಗಾರಿಗಳು ಪ್ರತಿಧ್ವನಿಸಿದವು.

ರಾಷ್ಟ್ರೀಯ  ಗ್ರಾಮೀಣ ಆರೋಗ್ಯ ಅಭಿ ಯಾನದಡಿ ಕೋಟ್ಯಾಂತರ ರೂಪಾಯಿ ಅವ್ಯ ವಹಾರ, ಗ್ರಾಮ ಸಡಕ್ ಯೋಜನೆಯ ಕಳಪೆ ಕಾಮಗಾರಿಗಳು ಹಾಗೂ ರೇಷ್ಮೆಹಡ್ಲು- ಚಂದನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪಗಳು ಇಡೀ ಸಭೆಯಲ್ಲಿ ರಿಂಗಣಿಸಿದವು.  ಪ್ರತಿ ಆರೋಪಕ್ಕೂ ತನಿಖೆ ನಡೆಸಲು ಹಾಗೂ ವರದಿ ನೀಡಲು ಅಧಿಕಾರಿಗಳಿಗೆ ಆದೇಶ ನೀಡಲಾಯಿತು.

ರಾಷ್ಟ್ರೀಯ  ಗ್ರಾಮೀಣ ಆರೋಗ್ಯ ಅಭಿಯಾನ: ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅನುಷ್ಠಾನದಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗವಾಗಿದೆ ಎಂದು   ಸಮಿತಿ ಸದಸ್ಯ ಬಿ.ಎಸ್. ತಮ್ಮಯ್ಯ ಪ್ರಸ್ತಾಪಿಸಿದರು.

ಮಾರ್ಚ್ ಒಂದೇ ತಿಂಗಳಲ್ಲಿ ರೂ1.60 ಕೋಟಿ ಹಣ ಪಡೆಯಲಾಗಿದೆ. ಇಡೀ ಕಾರ್ಯಕ್ರಮದಲ್ಲಿ ಹಣದ ಗೋಲ್‌ಮಾಲ್ ನಡೆದಿದೆ. ಲೋಕಾ ಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಮಿತಿಯ ಮತ್ತೋರ್ವ ಸದಸ್ಯೆ ಸರಿತಾ ಪೂಣಚ್ಚ ಕೂಡ ಸಾಥ್ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ  ಎಚ್.ವಿಶ್ವನಾಥ್ ಮಾತನಾಡಿ, ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಬೇಕೆಂದು ಸೂಚನೆ ನೀಡಿದರು.

ರೇಷ್ಮೆಹಡ್ಲು ಹಾಗೂ ಚಂದನಕೆರೆ
ಇವೆರಡು ಕೆರೆಗಳ ಅಭಿವೃದ್ಧಿ ಕಾಮಗಾರಿ ಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಸರಿತಾ ಪೂಣಚ್ಚ ಆರೋಪಿಸಿದರು.

ಮಧ್ಯಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿಕುಶಾಲಪ್ಪ ಅವರು, ಜಿಲ್ಲೆಗೆ ಒಳ್ಳೆಯ ದಾಗಲಿ ಎಂದು ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳುತ್ತೇವೆ. ಆದರೆ, ಈಗ ಎಲ್ಲದಕ್ಕೂ ವಿರೋಧ ವ್ಯಕ್ತವಾಗುತ್ತಿದೆ ಎಂದರು.

ಪ್ರತಿಯಾಗಿ ಮಾತನಾಡಿದ ಸಂಸದ ವಿಶ್ವನಾಥ್, ಹಣ ಸಾರ್ವಜನಿಕರದ್ದು. ಇದು ಪೋಲಾಗಬಾರದು ಎನ್ನುವುದಷ್ಟೇ ಸರಿತಾ ಅವರ ಆಶಯ. ಇದನ್ನು ವೈಯಕ್ತಿಕವಾಗಿ ತೆಗೆದು ಕೊಳ್ಳಬೇಡಿ ಎಂದರು.

ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಗ್ರಾಮ ಸಡಕ್ ಯೋಜನೆ
ಕೊಡಗು ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಗಳ  ಕಾಮಗಾರಿ ಕಳಪೆಯಾಗಿದೆ ಎಂದು  ಸದಸ್ಯರು ಆರೋಪಿಸಿದರು.

ಆರೋಪ ಆಲಿಸಿದ ಸಂಸದರು,  ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾಗಿರುವ ಎಲ್ಲ ರಸ್ತೆಗಳನ್ನು ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್   ಹಾಗೂ ಜಾಗೃತಿ ಸದಸ್ಯರು ವೀಕ್ಷಿಸಿ ವರದಿ ನೀಡಬೇಕೆಂದು ಸಂಸದರು ಸೂಚಿಸಿದರು.

ನೀರಿಗಾಗಿ ರೂ 32 ಕೋಟಿ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ  ಕುಡಿಯುವ ನೀರು ಪೂರೈಸಲು  32 ಕೋಟಿ ಕ್ರೀಯಾ ಯೋಜನೆಗೆ                 ಅನುಮತಿ ದೊರೆತಿದ್ದು, ಮಾರ್ಚ್ ಅಂತ್ಯದೊಳಗೆ 15 ಕೋಟಿ ರೂಪಾಯಿ  ಖರ್ಚು ಮಾಡುವ                       ಗುರಿ ಹೊಂದಲಾಗಿದೆ. ಈಗಾಗಲೇ 8 ಕೋಟಿ ರೂ. ಬಿಡುಗಡೆಯಾಗಿದೆ  ಎಂದು ಜಿ.ಪಂ. ಕಾರ್ಯಪಾಲಕ ಅಭಿಯಂತರರಾದ ಕೇಶವ ಮೂರ್ತಿ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಬಾವಿಗೆ  ಹೆಚ್ಚು ಬೇಡಿಕೆಯಿದ್ದು, ಅದಕ್ಕಾಗಿ ಒಂದೂವರೆ ಕೋಟಿ ರೂಪಾಯಿ                      ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದರು.

ಜಿ.ಪಂ. ಅಧ್ಯಕ್ಷರಾದ ರವಿ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಬಾವಿಗೆ ಹೆಚ್ಚು  ಬೇಡಿಕೆ ಇರುವುದರಿಂದ ಲೋಕಸಭಾ ಸದಸ್ಯರಾದ ವಿಶ್ವನಾಥ್ ಅವರು ವಿಶೇಷ ಯೋಜನೆಯಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ  ಸಮಿತಿ ಸದಸ್ಯರಾದ ಟಿ.ಪಿ.ರಮೇಶ್, ಕರಿಯಪ್ಪ  ಅವರು ಹಲವು ವಿಷಯಗಳ  ಕುರಿತು ಬೆಳಕು ಚೆಲ್ಲಿದರು.

ಗಿರಿಜನ ಹಕ್ಕು ಕಾಯ್ದೆ
ಅರಣ್ಯ ಪ್ರದೇಶದಲ್ಲಿ ವಾಸವಿರುವ ಗಿರಿಜನರಿಗೆ ಅರಣ್ಯ ಹಕ್ಕು ನೀಡಲು ವಿಳಂಬವಾಗುತ್ತಿರುವುದಕ್ಕೆ ಆಕ್ರೋಶಗೊಂಡ ಸಂಸದರು, ಗಿರಿಜನ ಹಕ್ಕುಕಾಯ್ದೆಯನ್ನು ಆದಷ್ಟು ಬೇಗನೇ  ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಹಿನ್ನೆಲೆಯಲ್ಲಿ ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾ ಧಿಕಾರಿಗಳ ಸಭೆ ಕರೆಯುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುವುದಾಗಿ ಸಂಸದರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT