ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಕ್ಷಿತ ವ್ಯಕ್ತಿ ಅಭಿವೃದ್ಧಿಗೂ ಕಂಟಕ

Last Updated 6 ಜುಲೈ 2012, 10:25 IST
ಅಕ್ಷರ ಗಾತ್ರ

ಶಿವಮೊಗ್ಗ: ಅಶಿಕ್ಷಿತ ವ್ಯಕ್ತಿ ಸಮಾಜಕ್ಕೆ ತೊಂದರೆ ಮಾತ್ರವಲ್ಲ; ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಕಂಟಕಪ್ರಾಯವಾಗಲಿದ್ದಾನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ರವೀಂದ್ರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಶಿಕ್ಷಣದಿಂದ ವಂಚಿತರಾದ ಮಕ್ಕಳು ಹೋಟೆಲ್, ಗ್ಯಾರೇಜ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೋಷಕರು, ಸಮಾಜ ಮತ್ತು ಜನಪ್ರತಿನಿಧಿಗಳೇ ಹೊಣೆಗಾರರು. ಶಿಕ್ಷಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದ ಅವರು, ಶಿಕ್ಷಣ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಶಿಕ್ಷಣದ ಯೋಜನೆ ಸಫಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಮಾತನಾಡಿ,  ಕಡ್ಡಾಯ ಶಿಕ್ಷಣದ ಕುರಿತು ಸರ್ಕಾರ ರೂಪಿಸುವ ಯೋಜನೆಗಳನ್ನು ಸಾರ್ವಜನಿಕರು ಸುಲಭವಾಗಿ ಅರ್ಥೈಸಿಕೊಳ್ಳುವುದಿಲ್ಲ. ಅದಕ್ಕಾಗಿ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ ಎಂದರು.

ರಾಜ್ಯದ ಅನೇಕ ಮಠ-ಮಾನ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿವೆ. ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಯಲ್ಲಿ ವಿದ್ಯಾರ್ಥಿಸ್ನೇಹಿ ವಾತಾವರಣ ಇರಬೇಕಾದುದು ಅಗತ್ಯ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್  ಮಾತನಾಡಿ, ಉಚಿತ, ಕಡ್ಡಾಯ ಮತ್ತು ಗುಣಾತ್ಮಕ ಶಿಕ್ಷಣ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರ ಪಾತ್ರ ಪ್ರಮುಖವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಕಾರ್ಯ ನಿರ್ವಹಿಸಿದಾಗ ಇಲಾಖಾ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ  ಶುಭಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಓಂಕಾರಮೂರ್ತಿ, ನಗರಸಭಾ ಸದಸ್ಯ ಎಂ. ಶಂಕರ್, ಡಯಟ್ ಪ್ರಾಚಾರ್ಯೆ ಚಂದ್ರಮ್ಮ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್ ವಂದಿಸಿದರು.

ಗುಣಮಟ್ಟದ ಶಿಕ್ಷಣಕ್ಕೆ ಕರೆ

ತೀರ್ಥಹಳ್ಳಿ: ಗುಣಮಟ್ಟದ ಶಿಕ್ಷಣದಿಂದ ಸಮಾಜದ ಉನ್ನತಿ ಸಾಧ್ಯ. ಶಿಕ್ಷಣದ ಮಹತ್ವ ಅರಿತು ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳು ಪ್ರತಿ ಶಾಲೆಯ ಅಗತ್ಯತೆಗಳನ್ನು ಪೂರೈಸಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಗುರುವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜುಲೈ 6ರಿಂದ ಎಲ್ಲಾ ಶಾಲೆಗಳ ಮೌಲ್ಯಮಾಪನವನ್ನು ನುರಿತ ಶಿಕ್ಷಣ ಅಧಿಕಾರಿಗಳ ತಂಡದಿಂದ ನಡೆಸಲಾಗುವುದು. ಆ ವೇಳೆಯಲ್ಲಿ ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಶಾಲೆಗಳಲ್ಲಿ ಹಾಜರಿದ್ದು, ಶಾಲೆಗೆ ಬೇಕಾದ ಪೂರಕ ಪರಿಕರ ಹಾಗೂ ವಾತಾವರಣದ ಬಗ್ಗೆ ಚರ್ಚಿಸಿ ಅಗತ್ಯತೆಗಳನ್ನು ಪಡೆಯಲು ಸಹಕರಿಸಬೇಕು ಎಂದು ಅವರು ಹೇಳಿದರು.

ತಹಶೀಲ್ದಾರ್ ಗಣೇಶಮೂರ್ತಿ ಮಾತನಾಡಿ, ಕಡ್ಡಾಯ ಶಿಕ್ಷಣ ಕಾಯ್ದೆ ಸಮಾಜದಲ್ಲಿ ಒಳ್ಳೆಯ ಶಿಕ್ಷಣ ನೀಡಲು ಬುನಾದಿ ಆಗಲಿದೆ. ಅದಕ್ಕೆ ಸಮಾಜದ ಎಲ್ಲ ಸಮುದಾಯಗಳ ಸ್ಪಂದನೆ ಅಗತ್ಯ. ಇದರಿಂದ ಪರಿಣಾಮಕಾರಿಯಾದ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ವಿನುತಾ ಮುರಳೀಧರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ  ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀವೆಂಕಟಪ್ಪ, ಉಪಾಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮಾಜಿ ಅಧ್ಯಕ್ಷೆ ವಿನೋದಾಶೆಟ್ಟಿ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಶೈಲಜಾ  ಪಾಲ್ಗೊಂಡಿದ್ದರು.

ಉಪ ಪ್ರಾಂಶುಪಾಲ ಎ.ಜೆ. ಮುಕುಂದ ಪ್ರಮಾಣವಚನ ಬೋಧಿಸಿದರು. ಶಿಕ್ಷಕರಾದ ಧನಂಜಯ ಸ್ವಾಗತಿಸಿದರು, ಚಿಕ್ಕಪ್ಪ ವಂದಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಶಾಲೆಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದ ನೀರಿನ ತೊಟ್ಟಿ ನಿರ್ಮಿಸಿಕೊಡುವುದಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀವೆಂಕಟಪ್ಪ ಹಾಗೂ ಉಪಾಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದರು.

ತಾಲ್ಲೂಕಿನಲ್ಲಿ 174 ಶಿಕ್ಷಕರ ಹುದ್ದೆ ಖಾಲಿ ಇದ್ದು, 11 ಶಾಲೆಗಳಿಗೆ ಶಿಕ್ಷಕರು ಇಲ್ಲದೇ ಇರುವುದನ್ನು ಖಂಡಿಸಿ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯರಾದ ಟಿ.ಎಲ್. ಸುಂದರೇಶ್, ಎಚ್.ಬಿ. ಪದ್ಮನಾಭ್ ಹಾಗೂ ಶ್ರುತಿವೆಂಕಟೇಶ್ ಸಭೆ ಬಹಿಷ್ಕರಿಸಿದ್ದರು.

ಬಹಿಷ್ಕಾರ

ಹೊಸನಗರ: ಸರ್ಕಾರಿ ಪ್ರಾಯೋಜಕತ್ವದ ಶಾಲೆಗಾಗಿ ನಾವು- ನೀವು ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಚಂದ್ರಮೌಳಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಕುಬೇರಪ್ಪ, ಪೂರ್ಣಿಮಾ ಮೂರ್ತಿ ಸೇರಿದಂತೆ  ಬಹುತೇಕ ಕಾಂಗ್ರೆಸ್ ಜನಪ್ರತಿನಿಧಿಗಳು ಬಹಿಷ್ಕರಿಸಿದ ಘಟನೆ ವರದಿಯಾಗಿದೆ.

ಶಿಕ್ಷಕರ ನೇಮಕಾತಿಯಲ್ಲಿ ವಿಳಂಬ, ಕುಗ್ರಾಮದ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರೂ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಜಿ.ಪಂ. ಸದಸ್ಯೆ ಜ್ಯೋತಿ ಚಂದ್ರಮೌಳಿ ಸುದ್ದಿಗಾರರಿಗೆ ತಿಳಿಸಿದರು.

ಹೊಸನಗರ ತಾಲ್ಲೂಕಿನ ಪ್ರಾಥಮಿಕ ಶಾಲೆಯಲ್ಲಿ 120 ಶಿಕ್ಷಕರು, ಪ್ರೌಢಶಾಲೆಯಲ್ಲಿ 9 ಶಿಕ್ಷಕರು ಹಾಗೂ 11 ಸಹಾಯಕರ ಹುದ್ದೆಗಳನ್ನು ನೇಮಕಾತಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಪಾಠ-ಪ್ರವಚನ ಇಲ್ಲದೇ ಪರದಾಡುವಂತಾಗಿದೆ ಎಂದು ದೂರಿದರು.

ಶಾಲೆಗಾಗಿ ನಾವು-ನೀವು: ಗುಣಾತ್ಮಕ ಶಿಕ್ಷಣ ಹಾಗೂ ಮಕ್ಕಳ ಶೈಕ್ಷಣಿಕ ಹಕ್ಕು ಕುರಿತಂತೆ ಸಾರ್ವಜನಿಕರಲ್ಲಿ ಮನಗಾಣಿಸಲು ಶಾಲೆಯತ್ತ ಹೋಗೋಣ ಎಂಬ ಕಾರ್ಯಕ್ರಮದ ಅಡಿಯಲ್ಲಿ `ಶಾಲೆಗಾಗಿ ನಾವು-ನೀವು~ ಹಮ್ಮಿಕೊಳ್ಳಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಮಾದರಿ ಶಾಸಕರ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪ್ರಮುಖ ಬೀದಿಗಳಲ್ಲಿ ಮಕ್ಕಳ ಶೈಕ್ಷಣಿಕ ಹಕ್ಕು ಬಿತ್ತರಿಸುವ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.

`ನಾವು-ನೀವು~

ಭದ್ರಾವತಿ: `ಅರ್ಹ ವಯಸ್ಸಿನ ಎಲ್ಲಾ ಮಕ್ಕಳ ಶಾಲೆ ದಾಖಲಾತಿ, ಅವರಿಗೆ ಮೂಲಸೌಲಭ್ಯ, ಗುಣಮಟ್ಟದ ಶಿಕ್ಷಣ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಸೇರ್ಪಡೆ ಮಾಡುವ ಸುದುದ್ದೇಶಕ್ಕಾಗಿ ನಾವು-ನೀವು ಕಾರ್ಯಕ್ರಮ ನಡೆದಿದೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಹೇಳಿದರು.

ಇಲ್ಲಿನ ಹೊಸಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮಕ್ಕಳ ಹಕ್ಕು. ಅದನ್ನು ಸರಿಯಾದ ರೀತಿಯಲ್ಲಿ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದರ ಅರಿವು ಮೂಡಿಸುವ ಭಾಗವಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯ ಜನರನ್ನು ಒಟ್ಟುಗೂಡಿಸಿ, ಕಲಿಕೆ ಕುರಿತಾದ ಕಾಳಜಿಯನ್ನು ಮಕ್ಕಳಲ್ಲಿ ಮೂಡಿಸುವ ಅಗತ್ಯವಿದೆ ಎಂದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ ಮಾತನಾಡಿ, `ಗುಣಾತ್ಮಕ ಶಿಕ್ಷಣವನ್ನು ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅದಕ್ಕೆ ಬದ್ಧವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪೂರಕ~ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಜೆ. ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕ ಬಿ.ಎಸ್. ಶೇಷಯ್ಯ ಮಾತನಾಡಿದರು. ಧರ್ಮಪ್ಪ, ಮಹೇಶ್ವರಪ್ಪ ಉಪಸ್ಥಿತರಿದ್ದರು.
ಸಿಆರ್‌ಪಿ ಶಿವಾನಂದಯ್ಯ ಮಠದ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಸಾಯಿ ಸೇವಾ ಸಂಸ್ಥೆಯು ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾತಿ ನೋಟ್‌ಬುಕ್, ಪೆನ್, ಪೆನ್ಸಿಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

ಜಾಥಾ

ಶಿರಾಳಕೊಪ್ಪ: ಪಟ್ಟಣದ ವಿವಿಧ ಶಾಲೆಯ ಮಕ್ಕಳು ಗುರುವಾರ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಪೋಷಕರಲ್ಲಿ ಶಿಕ್ಷಣ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ರಾಜ್ಯಾದ್ಯಂತ ಒಂದೇದಿನ ನಡೆದ ಶಾಲೆಗೆ ನಾವು-ನೀವು ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಕೂಡಾ ಉತ್ಸಾಹದಿಂದ ಪಾಲ್ಗೊಂಡಿದರು.

ಪ.ಪಂ. ಸದಸ್ಯ ಎಸ್.ಎಂ. ಮಜೀದ್ ಮಾತನಾಡಿ, ಪೋಷಕರು ತಾವು ಹೆತ್ತ ಮಕ್ಕಳಲ್ಲಿ ಬುದ್ಧಿವಂತ ಮುಗುವನ್ನು ಖಾಸಗಿ ಶಾಲೆಗೆ, ದಡ್ಡ ಮಗುವನ್ನು ಸರ್ಕಾರಿ ಶಾಲೆಗೆ ಸೇರಿಸುವ ಪ್ರವೃತ್ತಿ ಬೆಳೆಯುತ್ತಿದ್ದು. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಂಕಗಳಿಸುವ ಮೂಲಕ ಅಂಥ ಮೂರ್ಖ ಪೋಷಕರಿಗೆ ಕಪಾಳಮೋಕ್ಷ ಮಾಡಬೇಕು ಎಂದು ಕರೆಕೊಟ್ಟರು.

ಕಾಂಗ್ರೆಸ್ ಬಹಿಷ್ಕಾರ

ಸಾಗರ: ಇಲ್ಲಿನ ಕಾಂಗ್ರೆಸ್ ಮುಖಂಡರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಗೂ ಮೂಲಸೌಕರ್ಯಗಳ ಕೊರತೆ ಖಂಡಿಸಿ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮವನ್ನು ಬಹಿಷ್ಕರಿಸಿ ಗುರುವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ವಿವಿಧ ಭಾಗಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಶಿಕ್ಷಕರ ಕೊರತೆ ಇದೆ. ಹಲವು ಶಾಲೆಗಳಲ್ಲಿ ಶೌಚಾಲಯದಂತಹ ಮೂಲ ಸೌಕರ್ಯಗಳೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಶಾಲೆಗಾಗಿ ನಾವು-ನೀವು ಕಾರ್ಯಕ್ರಮವನ್ನು ಆಚರಿಸುವುದರಲ್ಲಿ ಏನು ಅರ್ಥವಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರು.

ಈಗಾಗಲೇ, ತಾಲ್ಲೂಕಿನ ಆಚಾಪುರ ಗ್ರಾಮದಲ್ಲಿ ಶಿಕ್ಷಕರ ಕೊರತೆಯನ್ನು ಖಂಡಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಆನಂದಪುರಂ, ಕೆಳದಿ, ಆವಿನಹಳ್ಳಿ, ತಾಳಗುಪ್ಪ ಭಾಗದ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯದ ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಸರ್ಕಾರಿ ಶಾಲೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ, ಅಲ್ಪಸಂಖ್ಯಾತ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯದ ಕೊರತೆ ಇಲ್ಲದಿರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಅರಿವು ಸರ್ಕಾರಕ್ಕೆ ಇರಬೇಕು ಎಂದು ಕಾಂಗ್ರೆಸ್ ಮುಖಂಡರು ತಮ್ಮ ಅಹವಾಲು ಮಂಡಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹೊಳಿಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಲಲಿತಾ ನಾರಾಯಣ್, ಸುಮಂಗಲಾ ರಾಮಕೃಷ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷೆ ಸುಮಿತ್ರಮ್ಮ, ಸದಸ್ಯರಾದ ಜ್ಯೋತಿ ಮುರುಳೀಧರ್, ಶ್ಯಾಮಲಾ ದೇವರಾಜ್, ಶ್ವೇತಾ ಉಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಗಾಳಿಪುರ, ಅನ್ವರ್, ಮಹಾಬಲ ಕೌತಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT