ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಸ್ತು ಆಧಾರದಲ್ಲಿ ಪ್ರವೇಶ ನಿರಾಕರಣೆ ಹಕ್ಕು

ಶಿಕ್ಷಣ ಸಂಸ್ಥೆ ಪರ ದೆಹಲಿ ಹೈಕೋರ್ಟ್ ತೀರ್ಪು
Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರವೇಶ ಪಡೆಯುವ ಅರ್ಹತೆಯನ್ನು ಅಭ್ಯರ್ಥಿಯೊಬ್ಬ ಪಡೆದಿದ್ದರೂ ಆ ಸಂಸ್ಥೆ ಅಳವಡಿಸಿಕೊಂಡಿರುವ ಶಿಸ್ತಿನ ನಿಯಮಾವಳಿಗೆ ಇದರಿಂದ ಭಂಗವುಂಟಾಗುತ್ತಿದ್ದರೆ ಅಂತಹ ಅಭ್ಯರ್ಥಿಯ ಪ್ರವೇಶವನ್ನು ನಿರಾಕರಿಸುವ ಹಕ್ಕು ಸಂಸ್ಥೆಗೆ ಇದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಶಿಕ್ಷಣ ಸಂಸ್ಥೆ ಅಳವಡಿಸಿಕೊಂಡಿರುವ ಕಟ್ಟುಪಾಡು ಇಲ್ಲವೆ ಶಿಸ್ತಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಅಭ್ಯರ್ಥಿ ಉಲ್ಲಂಘಿಸುವುದಾದಲ್ಲಿ ಅಂತಹ ಅಭ್ಯರ್ಥಿ ತಾನು `ಪ್ರವೇಶ ಪಡೆದ ಅಭ್ಯರ್ಥಿ' ಎಂದು ಘೋಷಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ. ಮುರುಗೇಶನ್ ಹಾಗೂ ನ್ಯಾಯಮೂರ್ತಿ ಆರ್.ಎಸ್. ಎಂಡ್ಲಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ಯಾವುದೊಂದು ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗಲು ಆಯ್ಕೆಯಾದ ವಿದ್ಯಾರ್ಥಿ ಪ್ರವೇಶಾತಿ ಪಡೆಯಬಹುದು. ಆದರೆ ಇದೇ ಸಂದರ್ಭದಲ್ಲಿ ಅಂತಹ ವಿದ್ಯಾರ್ಥಿಯ ಈ ಹಿಂದಿನ ನಡವಳಿಕೆಯನ್ನೂ ಸಂಬಂಧಿಸಿದ ವಿಶ್ವವಿದ್ಯಾಲಯ ಗಮನಿಸಬೇಕಾಗುತ್ತದೆ. ಒಂದುವೇಳೆ ಪ್ರವೇಶ ಪಡೆದ ಯಾವೊಬ್ಬ ವಿದ್ಯಾರ್ಥಿಯ ನಡವಳಿಕೆ ಇತರೆ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಶಿಸ್ತಿಗೆ ಭಂಗವಾದಲ್ಲಿ ಅಂತಹ ವಿದ್ಯಾರ್ಥಿಯ ಪ್ರವೇಶವನ್ನು ನಿರಾಕರಿಸುವ ಹಕ್ಕು ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಎಂ.ಎ. (ಪರ್ಸಿಯನ್)ಗೆ ದಾಖಲಾಗಲು ಪ್ರವೇಶ ಪರೀಕ್ಷೆಯಲ್ಲಿ 21ನೇ ರ‌್ಯಾಂಕ್ ಪಡೆದರೂ ತನ್ನ ಅಭ್ಯರ್ಥಿತನವನ್ನು ಪರಿಗಣಿಸದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಧೋರಣೆ ಪ್ರತಿಭಟಿಸಿ ಹಮಿದುರ್ ರೆಹಮಾನ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಏಕಸದಸ್ಯ ಪೀಠದ ತೀರ್ಪನ್ನು ಈ ಪೀಠ ಎತ್ತಿಹಿಡಿದಿದೆ.


`ಚೆಕ್‌ನಲ್ಲಿ ಹೋಲಿಕೆಯಾಗದ ಸಹಿ ಅಪರಾಧ'
ನವದೆಹಲಿ (ಪಿಟಿಐ): `ಸಹಿ ಹೋಲಿಕೆಯಾಗದೇ ಚೆಕ್ ನಿರಾಕರಣೆಯಾದ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಯು ಅಪರಾಧ ಕ್ರಮ ಎದುರಿಸುವ ಸಾಧ್ಯತೆ ಇರುತ್ತದೆ' ಎಂದು ಸುಪ್ರೀಂಕೋರ್ಟ್ ಹೇಳಿದೆ.

`ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಚೆಕ್ ಅಮಾನ್ಯಗೊಂಡಾಗ ಮಾತ್ರ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಅಪರಾಧ ಕ್ರಮ ಜರುಗಿಸಬೇಕಾಗುತ್ತದೆ. ಬ್ಯಾಂಕ್ ದಾಖಲೆಯಲ್ಲಿರುವ ಸಹಿಗೆ ಚೆಕ್ ಮೇಲಿನ ಸಹಿ ಹೋಲಿಕೆಯಾಗಿಲ್ಲ ಎನ್ನುವ ಕಾರಣಕ್ಕೆ ಅಪರಾಧ ಕ್ರಮ ಜರುಗಿಸಲಾಗದು' ಎಂದು ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಮಾಡಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT