ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನಿ ನಿರಾಳ, ಮತ್ತೆ ಓಡಲು ಸಜ್ಜು

Last Updated 4 ಜುಲೈ 2013, 20:07 IST
ಅಕ್ಷರ ಗಾತ್ರ

ಪುಣೆ: ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಬಂಗಾರದ ಸಾಧನೆ ತೋರಿರುವ ಕರ್ನಾಟಕದ ಓಟಗಾರ್ತಿ ಅಶ್ವಿನಿ ಅಕ್ಕುಂಜಿ ಎರಡು ವರ್ಷಗಳ ನಂತರ ಮರಳಿ ಟ್ರ್ಯಾಕ್‌ಗೆ ಬರಲು ಸಜ್ಜಾಗಿದ್ದಾರೆ.

ಸರಿಯಾಗಿ ಎರಡು ವರ್ಷಗಳ ಹಿಂದೆ ಜಪಾನಿನ ಕೋಬೆಯಲ್ಲಿ 19ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆದಿತ್ತು. ಅಲ್ಲಿಗೆ ತೆರಳಲು ಭಾರತ ತಂಡ ಸಜ್ಜಾಗುತಿತ್ತು. ಆಗ ಇದ್ದಕ್ಕಿದಂತೆ ಉದ್ದೀಪನಾ ಮದ್ದು ವಿವಾದ ತಾರಕ್ಕೇರಿತ್ತು. ಕೋಬೆಗೆ ತೆರಳಿದ ಭಾರತ ತಂಡದಲ್ಲಿ ಅಶ್ವಿನಿಗೆ ಅವಕಾಶ ನೀಡಿರಲಿಲ್ಲ.

ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 4x100ಮೀಟರ್ಸ್ ರಿಲೆ ಓಟದಲ್ಲಿ ಚಿನ್ನ ಗೆದ್ದ ಭಾರತದ ತಂಡದ ಪ್ರಮುಖ ಓಟಗಾರ್ತಿಯಾಗಿದ್ದ ಇವರು ಚೀನಾದ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿಯೂ ರಿಲೆಯಲ್ಲಿ ಬಂಗಾರ ಪಡೆದದ್ದೇ ಅಲ್ಲದೆ, 400 ಮೀಟರ್ಸ್ ಹರ್ಡಲ್ಸ್‌ನಲ್ಲಿಯೂ ಸ್ವರ್ಣ ಸಾಧನೆ ಮಾಡಿದ್ದರು. ಆ ಎರಡೂ ಕ್ರೀಡಾಕೂಟಗಳ ವೇಳೆ ನಡೆದಿದ್ದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅವರು ತೇರ್ಗಡೆಗೊಂಡಿದ್ದರು. ಆ ಕೂಟಗಳ ವೇಳೆ ಅವರು ಮದ್ದು ಸೇವಿಸಿಲ್ಲ ಎನ್ನುವುದೂ ದೃಢ ಪಟ್ಟಿತ್ತು.

ಆದರೆ ಅಶ್ವಿನಿ ಅವರು ಕೋಬೆಯಲ್ಲಿ ನಡೆಯಲಿದ್ದ ಏಷ್ಯಾ ಅಥ್ಲೆಟಿಕ್ಸ್‌ಗೆ ಹೊರಟು ನಿಂತಾಗ ಅವರು ಮದ್ದು ಸೇವಿಸಿದ್ದಾರೆಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ ಖಚಿತ ಪಡಿಸಿತು. ಅಶ್ವಿನಿ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಯಿತು. ಆ ನಿಷೇಧದ ಅವಧಿ ಇದೀಗ ಮುಗಿದಿದೆ.

ಗುರುವಾರ ದೆಹಲಿಯಿಂದ ಇಲ್ಲಿಗೆ ಬಂದ ಅಶ್ವಿನಿ ಅವರು ಇಲ್ಲಿ ನಡೆಯುತ್ತಿರುವ 20ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ನೆಚ್ಚಿನ 400 ಮೀಟರ್ಸ್ ಓಟವನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಈ ಸಂದರ್ಭದಲ್ಲಿ `ಪ್ರಜಾವಾಣಿ' ಜತೆ ಮಾತನಾಡಿ `ಮುಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ತಾವು ಸ್ಪರ್ಧಿಸಲಿರುವುದು ಖಚಿತ' ಎಂದರು.

`ನನಗೆ ಉಂಟಾದ ಈ ಆಘಾತ, ನಿರಾಸೆಗಳಿಂದ ಈಗ ಸಂಪೂರ್ಣ ಹೊರಬಂದಿದ್ದೇನೆ. ಆ ನೋವಿನ ದಿನಗಳ ಬಗ್ಗೆ ಏನನ್ನೂ ಹೇಳಲಾರೆ' ಎಂದು ನಗುನಗುತ್ತಲೇ ಹೇಳಿದರು.

`400 ಮೀಟರ್ಸ್ ಓಟಕ್ಕೆ ನನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲಿದ್ದು, ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಲಿದ್ದೇನೆ' ಎಂದರು.

ಸ್ಪರ್ಧೆ ಸಾಧ್ಯತೆ
ಅಶ್ವಿನಿ ಅಕ್ಕುಂಜಿ ಅವರನ್ನು ಪ್ರಸಕ್ತ ಏಷ್ಯಾ ಚಾಂಪಿಯನ್‌ಷಿಪ್‌ನ ಕೊನೆಯ ದಿನ ನಡೆಯಲಿರುವ 4x100 ಮೀಟರ್ಸ್ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎಂದು ಸಂಘಟನಾ ಸಮಿತಿಯ ಉನ್ನತ ಮೂಲಗಳು ತಿಳಿಸಿವೆ.

ಇಷ್ಟೊಂದು ತಡವಾಗಿ ತಂಡದೊಳಗೆ ಸೇರ್ಪಡೆಗೊಳಿಸುವ ಕುರಿತು ಕೆಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆನ್ನಲಾಗಿದೆ. ಆದರೆ ಅಶ್ವಿನಿ ಇದೀಗ ಎರಡು ವರ್ಷದ ನಿಷೇಧ ಶಿಕ್ಷೆಯನ್ನು ಮುಗಿಸಿರುವುದರಿಂದ ಆಕೆಯನ್ನು ತಂಡದೊಳಗೆ ಸೇರಿಸಿಕೊಳ್ಳಲೇ ಬೇಕೆಂದು ಹಲವು ಹಿರಿಯ ಅಥ್ಲೀಟ್‌ಗಳು ಆಕೆಯ ಪರ ವಾದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT