ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಷ್ಟಕ್ಕೂ ಡಬ್ಬಿಂಗ್ ಬೇಕಿರುವುದು ಯಾರಿಗೆ ?

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕನ್ನಡ ಪ್ರೇಕ್ಷಕ ಮತ್ತು ಚಿತ್ರರಂಗ, ದೂರದರ್ಶನದವರ ನಡುವೆ ತಳಕು ಹಾಕಿಕೊಂಡಿದ್ದ ಈ ಚರ್ಚಾಸ್ಪದ ಡಬ್ಬಿಂಗ್ ಸಮಸ್ಯೆಯು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಜಾರಿಗೊಳಿಸಿರುವ ನ್ಯಾಯಾಲಯದ ನೋಟೀಸ್‌ನಿಂದಾಗಿ ಮತ್ತೆ ಏದುಸಿರು ಬಿಡುತ್ತಿದೆ. ಡಬ್ಬಿಂಗ್ ವಿರೋಧಿ ಬಣಗಳು ಕೊಡುವ ಕಾರಣ ಕೇವಲ ಅವರ ಮೂಗಿನ ನೇರಕ್ಕಿದ್ದು ಅಲ್ಲೇನೂ ಕನ್ನಡ ಕಲಾವಿದರ, ಕನ್ನಡ ಚಿತ್ರರಂಗದವರ ಉದ್ಯೋಗ ಉದರ ಪೋಷಣೆ ಅಭಿವೃದ್ಧಿ, ಆ ಮೂಲಕ ಕನ್ನಡ ಕಲೆ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿ ಬೆಳೆಸುವ ಯಾವ ಕಾಳಜಿಯೂ ಕಂಡು ಬರುತ್ತಿಲ್ಲವೆಂದೇ ಆರೋಪಿಸಬೇಕಾಗಿದೆ.

ಬಹಳ ವರ್ಷಗಳ ಹಿಂದೆಯೇ ನಮ್ಮಲ್ಲಿ ಡಬ್ಬಿಂಗ್ ಸಿನಿಮಾಗಳು ದಾಳಿಯಿಟ್ಟದ್ದುಂಟು, `ಮಾಯಾಬಜಾರ್', `ಜಗದೇಕವೀರನ' ಕಥಾದಂತಹ ತೆಲುಗು ಸಿನಿಮಾಗಳು ಕನ್ನಡವನ್ನು ತೆಲುಗು ಕಲಾವಿದರ ಬಾಯಲ್ಲಿ ಉದುರಿಸುತ್ತಾ ಬಂದಾಗ ಆಗತಾನೆ ತಲೆ ಎತ್ತುತ್ತಿದ್ದ ಕನ್ನಡ ಚಿತ್ರರಂಗದ ಶ್ರೇಯಸ್ಸಿಗಾಗಿ ಅನಕೃ, ಮ.ರಾಮಮೂರ್ತಿ, ವಾಟಾಳ್ ಅಂಥವರು ಧ್ವನಿ ಎತ್ತಿ ಪ್ರತಿಭಟಿಸಿದ್ದರಿಂದ ಡಬ್ಬಿಂಗ್ ದೂರವಾಗಿತ್ತು. `ಹೋದೆಯಾ ಪಿಶಾಚಿಯೆಂದರೆ ಬಂದೆ ಗವಾಕ್ಷೀಲಿ' ಎಂಬಂತೆ ಈಗ ಕೆಲ ಕನ್ನಡ ನಿರ್ಮಾಪಕರೇ ತೆಲುಗು ಸಿನಿಮಾಗಳನ್ನು ಡಬ್ಬಿಂಗ್ ಮಾಡಲು  ತುದಿಗಾಲಲ್ಲಿ ಕಾದು ನಿಂತಿದ್ದಾರೆ. ರಾಜಕುಮಾರ್ ಕಾಲದಲ್ಲಿ ಇದ್ದ ಸ್ಥಿತಿ ಈಗಿಲ್ಲ. ಚಿತ್ರರಂಗ ಬೆಳೆಯಲು ಇನ್ನೂ ಎಷ್ಟು ವರ್ಷ ಬೇಕು ? ತನ್ನ ಕಾಲ ಮೇಲೆ ತಾನು ಏಕೆ ಈವರೆಗೆ ನಿಂತಿಲ್ಲ?

ಕನ್ನಡ ಚಿತ್ರಗಳು ಇತರೆ ಭಾಷೆಗೆ ಡಬ್ ಆಗುತ್ತಿಲ್ಲವೇ ಎಂದೆಲ್ಲಾ ದಬಾಯಿಸುವವರಿದ್ದಾರೆ, ಇರಲಿ. ಅಂಥವರು ಉದಾರ ಮನಸ್ಸಿನಿಂದ ಯೋಚಿಸುವ ಅಗತ್ಯವಿದೆ. ಬೇರೆಯಾವ ಭಾಷೆಯವರೂ ಎದುರಿಸದಂತಹ ಸಮಸ್ಯೆಯನ್ನು ಕನ್ನಡ ಚಿತ್ರರಂಗವು ಮಾತ್ರ ಬಹಳ ಕಾಲದಿಂದಲೂ ಎದುರಿಸುತ್ತಿದೆ. ನಮ್ಮವರು ತೆಲುಗು ತಮಿಳು, ಮಲೆಯಾಳಿ, ಹಿಂದಿ, ಇಂಗ್ಲಿಷ್ ಇತ್ಯಾದಿ ಚಿತ್ರಗಳ ಪೈಪೋಟಿ ನಡುವೆಯೇ ಸುಪುಷ್ಟವಾಗಿ ಬೆಳೆದಿದ್ದಾರೆಂದರೆ ಅದು ತಮ್ಮ ನಟನಾ ಕೌಶಲ್ಯ ಆತ್ಮವಿಶ್ವಾಸ, ವ್ಯವಹಾರ ಚತುರತೆ, ಸ್ವಂತಿಕೆಯಿಂದ ಮಾತ್ರ. ಅನ್ಯಭಾಷಾ ಪ್ರೇಕ್ಷಕರ ಪ್ರೋತ್ಸಾಹದಿಂದಲ್ಲವೇ ಅಲ್ಲ.

ಬೇರೆ ಭಾಷಿಗರ ಅದ್ದೂರಿತನ ಆಡಂಬರ ಅಬ್ಬರದ ಪ್ರಚಾರದ ನಡುವೆಯೂ ಬಡ ಕನ್ನಡ ಚಿತ್ರರಂಗ ಪೈಪೋಟಿ ಕೊಡುತ್ತಲೇ ತನ್ನ ತನವನ್ನು ತನ್ನನ್ನೂ ಕಾಪಾಡಿಕೊಂಡು ಕಮರ್ಷಿಯಲ್ಲಾಗಿಯೂ, ಕಲಾತ್ಮಕವಾಗಿಯೂ ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯುತ್ತಿದೆಯೆಂದರೆ ಕನ್ನಡಿಗರು ಖಂಡಿತ ಮೀಸೆ ಹುರಿಗೊಳಿಸಲೇಬೇಕು. ಏಕೆಂದರೆ ಇಂತಹ ಪೈಪೋಟಿ, ಸವಾಲು, ಸ್ಪರ್ಧೆ ಬೇರೆ ಯಾವ ಭಾಷೆ ಚಲನಚಿತ್ರಗಳನ್ನು ಪೀಡೆಯಂತೆ ಕಾಡುತ್ತಿದೆ ಹೇಳಿ? ಕನ್ನಡಿಗರು ಕರ್ಣನ ವಂಶಸ್ಥರು. ತಮ್ಮ ಚಿತ್ರಗಳನ್ನಾದರೂ ನೋಡದೆ ಇದ್ದಾರು. ಪರ ಭಾಷಾ ಚಿತ್ರಗಳಿಗೆ ಮೊದಲು ಮನ್ನಣೆ ಕೊಡುತ್ತಾರೆ.

ಇರಲಿ ಅಸೂಯೆ ಪಡುವ ಜಾಯಮಾನವಂತೂ ನಮ್ಮದಲ್ಲ. ಇಲ್ಲದಿದ್ದರೆ ಬೇರೆ ರಾಜ್ಯಗಳಲ್ಲಿ ನಮ್ಮ ಚಿತ್ರಗಳು ಕನಿಷ್ಠ ಬೆಳಗಿನ ಆಟಗಳಲ್ಲೂ ಓಡದಿರುವಾಗ ನಾವೇಕೆ ಅವುಗಳನ್ನು ಪ್ರದರ್ಶಿಸಬೇಕಿತ್ತು? ಅವುಗಳ ಪ್ರದರ್ಶನವನ್ನೇ ರದ್ದುಗೊಳಿಸಬೇಕೆಂಬ ಚಳವಳಿಯನ್ನೂ ಡಾ.ರಾಜ್ ಕಾಲದಲ್ಲಿ ಹೂಡಿದ್ದರೆ ಗೆಲುವು ನಮ್ಮದಾಗುತ್ತಿರಲಿಲ್ಲವೇ? ಡಬ್ಬಿಂಗ್ ವಿರೋಧಿಸಲು ಕಾರಣ ನಮ್ಮವರ ತುತ್ತಿಗೆ ಕಲ್ಲು ಬೀಳುತ್ತದೆಂಬ ಸಹಜ ಭಯ. ಅದು ನಿಜ ಕೂಡ.

ನಮ್ಮ ಮಕ್ಕಳು ಕಾರ್ಟೂನ್ ಅನಿಮೇಷನ್ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿಯಂತಹ ಚಾನೆಲ್‌ಗಳನ್ನು ತಮ್ಮ ಭಾಷೆಯಲ್ಲೇ ನೋಡದೆ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ! ನೋಡಿದರೇನೇ ಅರ್ಥವಾಗುವಂತಹ ಆಗಾಗ ಒಂದೆರಡು ಡೈಲಾಗ್‌ಗಳಿರುವ ಚಿತ್ರಗಳನ್ನು ಭಾಷೆಯ ಹಂಗಿಲ್ಲದೆಯೇ ಆರಾಮವಾಗಿ ನೋಡಬಹುದು, ಅರ್ಥಮಾಡಿಕೊಳ್ಳಲೂಬಹುದು. ಮಕ್ಕಳಿಗೆ ತಮ್ಮ ಶಾಲಾ ಹಾಜರಿ, ಪಾಠ ಪ್ರವಚನ, ಹೋಮ್‌ವರ್ಕ್, ಟ್ಯೂಶನ್‌ಗಳಿಗೆ ಸಮಯ ಒದಗಿಸಲಾಗುತ್ತಿಲ್ಲ. ಸಮಯ ಸಿಕ್ಕಾಗ ಮಕ್ಕಳು ಇಂತಹ ಮಕ್ಕಳ ಚಿತ್ರವನ್ನು ನೋಡುವುದಕ್ಕಿಂತ ಹೆಚ್ಚಾಗಿ ಪುನೀತ್, ಶಾರುಕ್, ಗಣೇಶ್, ಸಲ್ಲು ಚಿತ್ರಗಳನ್ನು ಆಸೆಪಟ್ಟು ನೋಡುತ್ತಾರೆಂಬುದು ಅಪ್ರಿಯ ಸತ್ಯ.

ನಮ್ಮಲ್ಲಿ ಬರುವ ಮಕ್ಕಳ ಚಿತ್ರಗಳನ್ನು ಅದೆಷ್ಟು ಸಾವಿರ ಮಕ್ಕಳು ಥಿಯೇಟರಿಗೇ ಹೋಗಿ ನೋಡಿದ್ದಾರೆ? ಈಗಿನ ಮಕ್ಕಳು ದೊಡ್ಡ ನಟರ ಚಿತ್ರಗಳಲ್ಲೇ ಮನರಂಜನೆ ಅನುಭವಿಸುವಷ್ಟು ಪ್ರಬುದ್ಧರಾಗಿದ್ದಾರೆ. ಕನ್ನಡ ಸಿನಿಮಾಗಳೆಲ್ಲ ಲಾಂಗು ಮಚ್ಚು ಹಿಡಿದೇ ಬರುತ್ತಿಲ್ಲ ಕೇವಲ ಬೆರಳಣಿಕೆ ಚಿತ್ರಗಳಷ್ಟೇ ಬರುತ್ತಿವೆ. ಇದಕ್ಕಿಂತಲೂ ಹಿಂಸಾತ್ಮಕ, ಸೆಕ್ಸ್ ಚಿತ್ರಗಳು ಬೇರೆ ಭಾಷೆಗಳಲ್ಲಿ ಬರುತ್ತಿಲ್ಲವೆ? ನಮ್ಮವರು ಬಹು ಬಾಷಾ ಪರಿಣಿತಮತಿಗಳ್ ಹಲವು ಭಾಷಾ ಚಿತ್ರಗಳನ್ನು ಆಯಾ ಭಾಷೆಗಳಲ್ಲೆೀ ನೋಡಿ 25 ವಾರಗಳಷ್ಟು ಓಡಿಸಬಲ್ಲ ಚತುರಮತಿ ಉದಾರಿಗಳ್. ಹೀಗಿರುವಾಗ ನಮಗೇಕೆ ಡಬ್ಬಿಂಗ್ ಚಿತ್ರಗಳು ಬೇಕೆಂಬ ಹಠ?

ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡಿಗರು ನಿರುದ್ಯೋಗಿಗಳಾಗುವುದಿಲ್ಲವೆಂಬುದು ಹಿರಿತೆರೆ, ಕಿರುತೆರೆಯ ಆಳ ಹರವನ್ನು ಅರಿಯದವರ ಮಾತಾಗುತ್ತದೆ.ನಾವೀಗಾಗಲೆ ತೆಲುಗು ತಮಿಳು ಚಿತ್ರಗಳ ರಿಮೇಕ್ ತಂಗಳನ್ನು ತಿನ್ನುತ್ತಾ ಇರುವುದು ಸಾಲದೆ? ಇನ್ನು ಡಬ್ಬಿಂಗ್ ಎಂಬ ಹಳಸಲೂ ಬಂದು ತಟ್ಟೆಗೆ ಬಿದ್ದು ಬಿಟ್ಟರೆ ಕನ್ನಡಿಗ, ಕನ್ನಡವೆರಡೂ ಡಬ್ಬಿಂಗ್‌ಗುನ್ಯಾಕ್ಕೆ ತುತ್ತಾಗಿ ಗತಪ್ರಾಣವಾಗುವುದು ನಿಸ್ಸಂಶಯ.  ಸಿನಿಮಾ ಇಂದು ವ್ಯಾಪಾರೀಕರಣವಾಗಿದೆ. ಕನ್ನಡಿಗನಿಗೆ ಎಲ್ಲಾ ಕಾರ್ಯಕ್ರಮಗಳನ್ನು ಕನ್ನಡದಲ್ಲಿಯೇ ನೋಡುವ ಹಕ್ಕು ಇದೆ ನಿಜ. ಅದನ್ನು ಯಾರೂ ಅಲ್ಲಗಳೆಯಲಾರರು. ಡಬ್ಬಿಂಗ್ ನಮ್ಮ ಜನ್ಮಸಿದ್ದ ಹಕ್ಕು ಎಂಬುದು ಮಾತ್ರ ವಿತಂಡವಾದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT