ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಷ್ಟದಿಕ್ಕಿನಲ್ಲೂ ದಾಳಿ ನಡೆಸುವ ಬಂದೂಕು

Last Updated 9 ಫೆಬ್ರುವರಿ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: ಶತ್ರುಪಡೆ ಎದುರಿನಲ್ಲಿ ಮುಖಾಮುಖಿಯಾಗಿ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸುವುದು ಕಷ್ಟದ ಕೆಲಸ. ಅಕ್ಕಪಕ್ಕದಲ್ಲಿ, ಸಂದಿಗೊಂದಿಯಲ್ಲಿ ಮೇಲೆರಗಿದರೆ ಎಂತಹ ಎಂಟೆದೆಯ ಬಂಟನಾದರೂ ಒಂದು ಕ್ಷಣ ಕಂಗಾಲಾಗುವುದು ಸಹಜ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಶತ್ರುಸಂಹಾರ ಮಾಡುವ ಅತ್ಯಾಧುನಿಕ ಶಸ್ತ್ರವೇ `ಕಾರ್ನರ್ ಶಾಟ್'.

ಇದು ಸಾಮಾನ್ಯ ಬಂದೂಕಿನ ಸುಧಾರಿತ ರೂಪ. ಈ ಬಂದೂಕು ಅಷ್ಟದಿಕ್ಕುಗಳಲ್ಲಿ ಎದುರಾಳಿಯ ಚಲನವಲನವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ ದಾಳಿ ನಡೆಸಲು ನೆರವಾಗುತ್ತದೆ. ಅಲ್ಲದೆ ದಾಳಿ ನಡೆಸುವವ ಆಯಕಟ್ಟಿನ ಜಾಗದಲ್ಲಿ ಅಥವಾ ಮರದ ಮರೆಯಲ್ಲೇ ಕುಳಿತು ಎಡ ಅಥವಾ ಬಲಕ್ಕೆ ಗನ್ನಿನ ಮೂತಿಯನ್ನು ಮಾತ್ರ ಮಡಚಿ ವಿಡಿಯೋ ನೋಡಿಕೊಂಡು ಶತ್ರುವಿನ ಮೇಲೆ ಗುರಿಯಿರಿಸಿ ಗುಂಡು ಹಾರಿಸಬಹುದು.

ಈ ಅಸ್ತ್ರವನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆ `ಆಲ್ಫಾ ಡಿಸೈನ್ ಟೆಕ್ನಾಲಜಿಸ್ ಲಿಮಿಟೆಡ್'. ಇದು ಬೆಂಗಳೂರು ಮೂಲದ ಕಂಪೆನಿ. ಇಂದಿರಾನಗರದಲ್ಲಿ ಕೇಂದ್ರ ಕಚೇರಿ ಇದೆ. ಕರ್ನಲ್ ಎಚ್.ಎಸ್.ಶಂಕರ್ ಮಾಲೀಕತ್ವದ ಈ ಕಂಪೆನಿ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಸೇನಾಪಡೆಗೆ ಅನೇಕ ಉತ್ಪನ್ನಗಳನ್ನು ಪೂರೈಕೆ ಮಾಡಿರುವ ಈ ಸಂಸ್ಥೆ ಇದೀಗ ರಾಜ್ಯ ಪೊಲೀಸರಿಗೆ ಸುಧಾರಿತ ಉತ್ಪನ್ನವನ್ನು ಪೂರೈಕೆ ಮಾಡಲು ಸಜ್ಜಾಗಿದೆ.

ಈ ಉತ್ಪನ್ನವು ಸಾಮಾನ್ಯ ಗನ್‌ನಷ್ಟೇ ದೊಡ್ಡದು. ಈ ಬಂದೂಕಿನ ಮೂತಿಯ ಕೆಳಭಾಗದಲ್ಲಿ ಗ್ರೆನೇಡ್ ಅಳವಡಿಸಲು ಅವಕಾಶ ಇದೆ. ದೂರದಲ್ಲಿ ನಡೆಯುವ ಘಟನೆಗಳನ್ನೂ ಸೆರೆ ಹಿಡಿಯಬಲ್ಲ ಪುಟ್ಟ ವಿಡಿಯೋ ಕ್ಯಾಮೆರಾ ಬಂದೂಕಿನ ಮಧ್ಯಭಾಗದಲ್ಲಿ ಇದೆ. ಈ ಕ್ಯಾಮೆರಾ ಮೂಲಕ ಎದುರಾಳಿಯ ಕಾರ್ಯಚಟುವಟಿಕೆಗಳನ್ನು ಸುಲಭದಲ್ಲಿ ಪತ್ತೆ ಹಚ್ಚಬಹುದು.

ತುರ್ತು ಕಾರ್ಯಾಚರಣೆ ಸಂದರ್ಭದಲ್ಲಿ ಭಾರತೀಯ ಸೇನಾಪಡೆಗೆ, ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಮಾಡಲು ಇದರ ವಿನ್ಯಾಸವನ್ನು ಮಾಡಲಾಗಿದೆ. ಇಸ್ರೇಲ್‌ನ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ನರ್ ಶಾಟ್ ಅನ್ನು ತಯಾರಿಸಲಾಗಿದೆ. ಬಂದೂಕಿನ ತೂಕ 3.5 ಕೆ.ಜಿ. ಹಾಗೂ ಬೆಲೆ ್ಙ7 ಲಕ್ಷ. ಇದರಲ್ಲಿ ದಾಳಿ ನಡೆಸುವವನಿಗೆ ಅಪಾಯ ತೀರಾ ಕಡಿಮೆ.

`ಮಿಲಿಟರಿ, ಪೊಲೀಸ್ ಹಾಗೂ ಸುರಕ್ಷತಾ ಕಾರ್ಯಾಚರಣೆ ವಿಭಾಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಅಷ್ಟದಿಕ್ಕುಗಳಿಂದ ದಾಳಿ ನಡೆಸುವ ಎದುರಾಳಿಯನ್ನು ಸುಲಭದಲ್ಲಿ ಬಗ್ಗುಬಡಿಯಲು ನೆರವಾಗುವಂತೆ ಈ ಹೈಟೆಕ್ ಅಸ್ತ್ರವನ್ನು ರೂಪಿಸಲಾಗಿದೆ' ಎಂದು ಕಂಪೆನಿಯ ಉವ್ಯವಸ್ಥಾಪಕ (ಸಂಶೋಧನೆ ಹಾಗೂ ಅಭಿವೃದ್ಧಿ) ಎಂ.ಆರ್.ಲೋಹಿತ್ ತಿಳಿಸುತ್ತಾರೆ.

`ಭಾರತೀಯ ಸೇನಾಪಡೆಯಲ್ಲದೆ ಈಗಾಗಲೇ ದಿಲ್ಲಿ, ಪಂಜಾಬ್, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಪೊಲೀಸರಿಗೆ ಈ ಉತ್ಪನ್ನವನ್ನು ನೀಡಿದ್ದೇವೆ. ಈವರೆಗೆ 150 ಕಾರ್ನರ್ ಶಾಟ್‌ಗಳು ಪೊಲೀಸರ ಮಡಿಲಿಗೆ ಸೇರಿವೆ. ರಾಜ್ಯ ಪೊಲೀಸರಿಗೆ ಪೂರೈಸುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿನ ಪೊಲೀಸರು ಪ್ರಾಯೋಗಿಕವಾಗಿ ಬಳಸಿದ್ದಾರೆ. ಉತ್ಪನ್ನ ಪೂರೈಸಲು ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿ ಕಾರ್ಯಾದೇಶ ಪಡೆಯುವ ನಿರೀಕ್ಷೆಯಲ್ಲಿದ್ದೇವೆ' ಎಂದು ಅವರು ಹೇಳುತ್ತಾರೆ. 

`ಏರೋ ಇಂಡಿಯಾ-2013' ವೈಮಾನಿಕ ಪ್ರದರ್ಶನದಲ್ಲಿ ಈ ಕಂಪೆನಿಯ ಮಳಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT