ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಷ್ಟಾವಧಾನದ ಮಹಿಮೆ!

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗಣಕಯಂತ್ರ ಮೀರಿಸಬಲ್ಲ ಸ್ಮರಣಶಕ್ತಿ   ರೂಢಿಸಿಕೊಂಡಿರುವ ಅವಧಾನಿಗಳು  ಅಷ್ಟಾವಧಾನವನ್ನು ಏಕಾಗ್ರತೆಯಿಂದ ನಡೆಸಿಕೊಡುವ ಪ್ರಕ್ರಿಯೆಯು  `ಹೀಗೂ ಉಂಟೆ~ ಎನ್ನುವ ವಿಸ್ಮಯ ಮೂಡಿಸುತ್ತದೆ. ಉದ್ದಿಮೆ ಸಂಸ್ಥೆಯೊಂದರ ಮ್ಯಾನೇಜರ್ ಕೂಡ ಒಬ್ಬ ಅವಧಾನಿಯಂತೆ ಇರಬೇಕು. 

ಬೋರ್ಡ್‌ರೂಮಿನ ಸುತ್ತ ಮುತ್ತಲಿನವರು ಕೂಡ ಅವಧಾನಿಗಳಂತೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹತ್ತಾರು ಕೆಲಸಗಳನ್ನು ಒಂದೇ ಬಾರಿ ಹೇಗೆ  ನಿಭಾಯಿಸಬೇಕೆಂಬ ಶಿಕ್ಷಣ ಅಷ್ಟಾವಧಾನದಲ್ಲಿ ದೊರೆಯುತ್ತದೆ.
 

ಸಹನೆಯೊಂದಿಗೆ ಇರಲಿ ಎಚ್ಚರದ ವಹಿವಾಟು /
ಗಹನ ತತ್ವದ ಜೊತೆಗೆ ಹಾಸ್ಯ ಪ್ರಜ್ಞೆ //
ಬಹು ವಿಧದ ಕೆಲಸಗಳ ಏಕಕಾಲದಿ ಮುಗಿಸಿ /
ಬಹುರೂಪಿ ನೀನಾಗು - ನವ್ಯಜೀವಿ //

ಆರು ವರ್ಷಗಳ ಕೆಳಗೆ ಮೊಟ್ಟಮೊದಲ ಬಾರಿಗೆ ದೈವವಶಾತ್ ನನಗೆ ಅಷ್ಟಾವಧಾನವೊಂದನ್ನು ವೀಕ್ಷಿಸುವ ಅವಕಾಶ ಕೂಡಿಕೊಂಡು ಬಂತು. ನನ್ನ ಮೊದಲ ಕೃತಿ `ಚಿಂತನ ಚಿಲುಮೆ~ ಪ್ರಕಟಿಸಿದ ಅಭಿಜ್ಞಾನದ ಗೆಳೆಯರಾದ ಸೂರ್ಯಪ್ರಕಾಶ್ ಪಂಡಿತರ ಆಹ್ವಾನದ ಮೇರೆಗೆ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಬಂದು ಕುಳಿತ್ತಿದ್ದೆ.

ವೇದಿಕೆಯ ಮೇಲೆ ಮಧ್ಯದಲ್ಲಿ ಶತಾವಧಾನಿ ಡಾ. ಆರ್. ಗಣೇಶ್ ಕುಳಿತಿದ್ದಾರೆ. ಅವರ ಅಕ್ಕಪಕ್ಕಗಳಲ್ಲಿ ಎಂಟು ಜನ ಪೃಚ್ಛಕರು ನನ್ನ ಪಕ್ಕದಲ್ಲೇ ಕುಳಿತಿದ್ದ ನನ್ನ ಅಮ್ಮ ಹೇಳುತ್ತಿದ್ದರು - `ಅವಧಾನ ಎಂದರೆ ಏಕಚಿತ್ತತೆ ಎಂದರ್ಥ.
 
ಅದೆಷ್ಟೇ ಅಡ್ಡಿ ಆತಂಕಗಳಿದ್ದರೂ ಕೈ ಹಿಡಿದ ಆ ಕ್ಷಣದ ಕೆಲಸದೆಡೆಗೆ ಲಕ್ಷ್ಯವನ್ನು ಕಳೆದು ಕೊಳ್ಳದಿರುವುದು. ಪ್ರೇಕ್ಷಕರ ಮುಂದೆ ಅವಧಾನವನ್ನು ನಡೆಸಿ ಕೊಡುವವರೇ ಅವಧಾನಿಗಳು. ಇವರು ಗಣಕಯಂತ್ರ ಮೀರಿಸಬಲ್ಲ ಸ್ಮರಣಶಕ್ತಿಯನ್ನು  ತಮ್ಮ ಸ್ವಂತ ಪರಿಶ್ರಮದಿಂದ  ರೂಢಿಸಿಕೊಂಡಿರುತ್ತಾರೆ.

ಇವರು ವೇದಶಾಸ್ತ್ರಗಳನ್ನಲ್ಲದೆ ಸಾಹಿತ್ಯದ ಬಹುತೇಕ ಎಲ್ಲ ಗ್ರಂಥಗಳನ್ನೂ ನೆನಪಿಟ್ಟುಕೊಳ್ಳುವ ಹಾಗೆ ಓದಿಕೊಂಡಿರುತ್ತಾರೆ. ಕಾವ್ಯಕ್ಕೆ ತಳಹದಿಯಾದ ಛಂದೋಬಂಧಗಳನ್ನು ಆಳವಾಗಿ ಅಧ್ಯಯನ ಮಾಡಿರುತ್ತಾರೆ.
 
ನಿಘಂಟುಗಳನ್ನು ಸ್ಮೃತಿಯಲ್ಲಿ ಧಾರಣೆ ಮಾಡಿಕೊಂಡಿರುತ್ತಾರೆ. ಯಾವುದೇ ವಿಷಯದ ಬಗ್ಗೆ ಯಾವುದೇ ಛಂದಸ್ಸಿನಲ್ಲಾದರೂ ಆಶು ಕವಿತೆಗಳನ್ನು ಪುಂಕಾನುಪುಂಕವಾಗಿ ಹೆಣೆಯಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ.
 
ಕೇಳುವವರು ನಿಬ್ಬೆರಗಾಗುವ ಹಾಗೆ ವಿಸ್ತಾರದಲ್ಲಿ ಮಾತನಾಡುವುದರ ಜೊತೆಯೇ ಸಂದರ್ಭೋಚಿತವಾಗಿ ಎಲ್ಲರನ್ನೂ ನಗಿಸಬಲ್ಲ ಹಾಸ್ಯ ಪ್ರವೃತ್ತಿಯನ್ನೂ ಬೆಳೆಸಿಕೊಂಡಿರುತ್ತಾರೆ~.

ಅಮ್ಮ ಹೇಳಿದ ಈ ಎಲ್ಲವನ್ನೂ ಒಬ್ಬ ವ್ಯಕ್ತಿ ಅದು ಹೇಗೆ ತಾನೆ ತನ್ನ ಒಂದು ಜೀವಿತದಲ್ಲಿ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂದು ಯೋಚಿಸುತ್ತಿರುವಾಗಲೇ ಅವಧಾನಿಗಳು  ತಮ್ಮ ಕಾರ್ಯಕ್ರಮವನ್ನು ದೇವಿ  ಸ್ತುತಿಯೊಂದಿಗೆ ಆರಂಭ ಮಾಡಿದರು.

ಅವಧಾನ ಅಂದರೇನು, ಪೃಚ್ಛಕರು ಒಡ್ಡುವ ಸವಾಲುಗಳ ವಿಶೇಷತೆಗಳೇನು ಎಂಬುದನ್ನು ಉದಾಹರಣೆಗಳ ಮೂಲಕ ವಿಶದವಾಗಿ ತಿಳಿಸಿದರು.ಅಲ್ಲಿಂದ ನಂತರದ ಮೂರು ತಾಸುಗಳವರೆಗೆ ನಡೆಯುವುದೆಲ್ಲ ಒಂದು ಕೌತುಕ.

ಅವೆಲ್ಲವನ್ನೂ ಸವಿಸ್ತಾರವಾಗಿ ಬಣ್ಣಿಸಲು ಅಂಕಣದ ಕೆಲ ಸಾಲುಗಳು ಸಾಲವು. ಅದನ್ನು ನೋಡಿಯೇ ಅನುಭವಿಸಬೇಕು. ಆನಂದ ಇರುವುದು ಅಷ್ಟಾವಧಾನವನ್ನು ನೇರವಾಗಿ ಕಂಡಾಗ ಮಾತ್ರ!

ಮೊದಲಿಗೆ ಸಂಖ್ಯಾಬಂಧದ ಪೃಷ್ಛಕರು ಅವಧಾನಿಗಳಿಗೆ ಒಂದು ಸಂಖ್ಯೆ ನೀಡುತ್ತಾರೆ. ಇಪ್ಪತ್ತೈದು ಮನೆಗಳ ಚೌಕದಲ್ಲಿ ಎಡದಿಂದ ಬಲಕ್ಕೆ, ಮೇಲಿನಿಂದ ಕೆಳಕ್ಕೆ ಹಾಗೂ ಅಡ್ಡಡ್ಡವಾಗಿ ಹೇಗೆ ಕೂಡಿದರೂ ಆ ಸಂಖ್ಯೆಯೇ ಇರಬೇಕು.

ಅವಧಾನಿಗಳು ಪ್ರತಿ ಮನೆಯ ಸಂಖ್ಯೆಯನ್ನೂ ಬಿಡಿಸಿ ಪೃಚ್ಛಕರು ಕೇಳಿದಾಗಲೆಲ್ಲ, ಅವರು ಕೇಳುವ ಮನೆಯ ಸಂಖ್ಯೆಯನ್ನೇ ತಪ್ಪಿಲ್ಲದೆ ಒಪ್ಪಿಸಬೇಕು. ಅಂದ ಹಾಗೆ ಅವಧಾನಿಗಳು ಈ ಕಾರ್ಯಕ್ರಮದುದ್ದಕ್ಕೂ ಪೇಪರ್ ಹಾಗೂ ಪೆನ್ನನ್ನು ಬಳಸುವ ಹಾಗಿಲ್ಲ.
 
ಅವಧಾನದ ಎಲ್ಲ ಆಶು ಕವಿತೆಗಳು ಹಾಗೂ ಲೆಕ್ಕಾಚಾರಗಳು ಸೃಷ್ಟಿಯಾಗುವುದು ಅವಧಾನಿಗಳ ಒಳಗಡೆಯ ಮೆದುಳಿನ ಆರ್‌ಎಎಂ (ಯಾದೃಚ್ಛಿಕ ಸ್ಮೃತಿ) ಬಿಲ್ಲೆಗಳಲ್ಲಿ ಮಾತ್ರ! ಅಲ್ಲಿನ ಕವಿತೆಗಳಲ್ಲಿ ನಾಲ್ಕು ಸುತ್ತುಗಳಲ್ಲಿ ಸುತ್ತಿಗೊಂದು ಸಾಲಿನಂತೆ ಮೂಡಿ ಬರುತ್ತವೆ ಕೂಡ - ಇದೇ ನಿಯಮ.

ಈಗ ನಿಷೇಧಾಕ್ಷರದ ಪೃಚ್ಛಕರು ಅವಧಾನಿಗಳಿಗೆ ಛಂದಸ್ಸನ್ನು ಸೂಚಿಸಿ ತಾವು ಕೊಡುವ ಬಗ್ಗೆ ಕವಿತೆ ರಚಿಸಲು ಹೇಳುತ್ತಾರೆ. ಅಷ್ಟಕ್ಕೆ ಸುಮ್ಮನಿರುವ ಜಾಯಮಾನ ಅವರದಲ್ಲ.

ಆದ್ದರಿಂದ ಕವಿತೆಯ ಮೊದಲ ಅಕ್ಷರವನ್ನು ಅವಧಾನಿಗಳು ಹೇಳಿದ ತಕ್ಷಣ ಎರಡನೆಯ ಅಕ್ಷರಕ್ಕೆ ಇವರು ನಿಷೇಧ ಮಾಡುತ್ತಾರೆ. ಅವಧಾನಿಗಳು ಹೇಳುವ ಪ್ರತಿ ಅಕ್ಷರದ ನಂತರದ ಅಕ್ಷರವನ್ನು ಇವರು ನಿಷೇಧಿಸುತ್ತಲೇ ಸಾಗುತ್ತಾರೆ.

ಈ ಎಲ್ಲ ಅಡಚಣೆಗಳ ನಡುವೆಯೂ ಅವಧಾನಿಗಳು ಸರಾಗವಾಗಿ ಪದ್ಯದ ಮೊದಲ ಸಾಲನ್ನು ಪೂರ್ಣಗೊಳಿಸುವುದು ಹತ್ತಾರು ಬಾರಿ ಹೊಡೆದು, ಬಡಿದು ಪದ್ಯ ರಚಿಸುವ ನಮ್ಮಂತಹವರಿಗೆ ದಿಗ್ಭ್ರಮೆ ಮೂಡಿಸಿರುತ್ತದೆ.

ನಂತರದ್ದು ಸಮಸ್ಯೆ! ಪೃಚ್ಛಕರು ಕೊಡುವ ಅಸಂಬದ್ಧವಾದ, ಅರ್ಥವಿಲ್ಲದ, ಕೆಲವೊಮ್ಮೆ ಅಸಭ್ಯವೆಂದು ತೋರಿ ಬರುವ ಕಡೆಯ ಸಾಲಿಗೆ ಅವಧಾನಿಗಳು ಪ್ರತಿ ಸುತ್ತಿನಲ್ಲೂ ಪದವೊಂದನ್ನು ಜೋಡಿಸುತ್ತಾ ಕಡೆಯಲ್ಲಿ ಆ ಕವಿತೆಗೊಂದು ಆಕಾರ ಕೊಡಬೇಕು. ತಾಯಿ ಮಗುವಿಗೆ ಜನ್ಮ ಕೊಟ್ಟ ಹಾಗೆ!

ಮೂರನೆಯವರೇ ದತ್ತಪದಿ ವಿಭಾಗದವರು. ನಾಲ್ಕು ಪದಗಳನ್ನು ನೀಡಿ, ಸಾಮಾನ್ಯವಾಗಿ ಆ ಪದಗಳಿಗೆ ತದ್ವಿರುದ್ಧವಾದ ಭಾವವೊಂದನ್ನು ಕಾವ್ಯವಾಗಿಸಿ ಎಂದು ಸವಾಲೊಡ್ಡುತ್ತಾರೆ.

ಒಂದೊಂದು ಪದವನ್ನು ಒಂದೊಂದು ಪಾದದಲ್ಲಿ ಬಳಸಬೇಕಾದ ಅನಿವಾರ್ಯತೆ. ಇತ್ತೀಚೆಗಷ್ಟೇ ನಡೆದ ಅವಧಾನದಲ್ಲಿ ದತ್ತಪದಿಯ ಪೃಚ್ಛಕನಾಗಿದ್ದ ನಾನು  ‘He commode, sink, showerಎಂಬ ನಾಲ್ಕು ಪದಗಳನ್ನು ನೀಡಿ ಮದನಪತಿ ಛಂದಸ್ಸಿನಲ್ಲಿ ತಮ್ಮ ಒಳಮನದ ಕೋರಿಕೆಯನ್ನು ಪ್ರಕಟಿಸುವಂತಹ ಸ್ತೋತ್ರವೊಂದನ್ನು ರಚಿಸಬೇಕೆಂದು ವಿನಂತಿಸಿದ್ದೆ.

ಅವರು ರಚಿಸಿದ ಪದ್ಯದಲ್ಲಿ ಈ ಆಂಗ್ಲಪದಗಳೆಲ್ಲ ಕಸ್ತೂರಿ ಕನ್ನಡವಾಗಿ ಕಡೆಗೆ ಶೌಚಾಲಯವು ಶಿವಾಲಯವಾಗಿತ್ತು!

ಈಗ ಚಿತ್ರಬಂಧ. ಪೃಚ್ಛಕರ ಬೇಡಿಕೆಯಂತೆ ಅವರ ನಿಬಂಧನೆಗಳ ಮಿತಿಯಲ್ಲಿ ರಚಿಸಲಾಗುವ ಕವಿತೆಯನ್ನು ಎಲ್ಲರಿಗೂ ಕಾಣುವಂತೆ ಬೋರ್ಡಿನ ಮೇಲೆ ಕಡೆಯಲ್ಲಿ ಬರೆದಾಗ ನಮಗಲ್ಲಿ ಕಮಲದ ಹೂವಿನ ಅಥವಾ ನಾಗರಹಾವಿನ ಅಥವಾ ಮತ್ತಾವುದೋ ಜೀವವೊಂದರ ಚಿತ್ರ ಮೂಡಿರುತ್ತದೆ. ಪ್ರಾಣವಿಲ್ಲದ ಅಕ್ಷರಗಳೆಲ್ಲ ಜೀವ ತುಂಬುವ ರೇಖೆಗಳಾಗಿರುತ್ತವೆ!

ಕಾವ್ಯವಾಚನದ ಪೃಚ್ಛಕರು ಯಾವುದೋ ಗ್ರಂಥದ, ಯಾವುದೋ ಸಾಲನ್ನು ಗಮಕದಲ್ಲಿ ರಾಗವಾಗಿ ಹಾಡುತ್ತಾರೆ. ಆ ಸಾಲುಗಳ ಮೂಲವನ್ನು, ಅದನ್ನು ಬರೆದವರ ಪರಿಚಯವನ್ನು ಹಾಗೂ ಅವುಗಳ ಸನ್ನಿವೇಶವನ್ನು ರಸವತ್ತಾಗಿ ಅವಧಾನಿಗಳು ತಕ್ಷಣವೇ ಅರಿತುಕೊಂಡು ಸಭೆಗೆ ಒಪ್ಪಿಸಬೇಕು.
 
ಇಂದು ನಾನೇ ಬರೆದ ಸಾಲುಗಳನ್ನು ನಾಳೆಗೆ ಮರೆತುಬಿಡುವ ನನಗೆ ಅವಧಾನಿಗಳ ಸ್ಮರಣ ಶಕ್ತಿ ಕಾವ್ಯ ವಾಚನದ ಪ್ರತಿಸುತ್ತಿನಲ್ಲೂ ಅಚ್ಚರಿ ಮೂಡಿಸುತ್ತದೆ.

ನಂತರದ ಆಶುಕವಿತ್ವದ ಪೃಚ್ಛಕರು ನೀಡುವ ವಸ್ತುಗಳ ಬಗ್ಗೆ ಇಡಿಯ ಕಾವ್ಯವನ್ನು ಆ ಕ್ಷಣಕ್ಕೆ ರಚಿಸಿ, ಅವುಗಳ ಅರ್ಥನಿರೂಪಣೆಯಲ್ಲೇ ಲೋಕ ವಿಷಯಗಳನ್ನೆಲ್ಲ ಸಾರಿ, ಕವಿತೆ ರಚಿಸುವುದು ಅದೆಷ್ಟು ಸುಲಭ ಎನ್ನುವಂತೆ ಮುಂದೆ ಕುಳಿತ ಮಂದಿಗೆ ತಾವೇ ಒಂದು ಬಿಡಿಸಲಾಗದ ಒಗಟಾಗಿ ಬಿಡುತ್ತಾರೆ ಅವಧಾನಿಗಳು!

ಇವೆಲ್ಲದರ ನಡುವೆ ಅವಧಾನಿಗಳ ಚಿತ್ತವನ್ನು ಕಲಕಿ ಅವರ ಲಕ್ಷ್ಯಕ್ಕೆ ಧಕ್ಕೆ ಆಗುವಂತೆ ಪ್ರಶ್ನೆಗಳನ್ನು ಕೇಳುವವರೇ ಅಪ್ರಸ್ತುತ ಪ್ರಸಂಗಿಯ ಪೃಚ್ಛಕರು.

ಮನಸೋಇಚ್ಛೆ ಬೇಕೆಂದಾಗಲೆಲ್ಲ ಪ್ರಶ್ನೆ ಕೇಳುವ ಅಧಿಕಾರ ಅವರದ್ದು. ತಾವು ಬಿಡಿಸುತ್ತಿರುವ ಸಮಸ್ಯೆಯನ್ನು ಬದಿಗಿಟ್ಟು ಅವರ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹೇಳಬೇಕಾದ್ದು ಅವಧಾನಿಗಳ ಕರ್ತವ್ಯ.

ಒಟ್ಟಾರೆ ಇವೆಲ್ಲಾ ಒಂದುಗೂಡಿ ನೋಡುವವರನ್ನು ಮಂತ್ರಮುಗ್ಧರನ್ನಾಗಿಸಿ ಬಿಡುತ್ತದೆ. ಅಂದಿನ ಅಷ್ಠಾವಧಾನದ ಕಾರ್ಯಕ್ರಮದುದ್ದಕ್ಕೂ ತಲ್ಲೆನನಾಗಿ ಕುಳಿತಿದ್ದ ನನಗೆ ಅರ್ಥವಾದ ವಿಚಾರಗಳೆಷ್ಟೋ ಗೊತ್ತಿಲ್ಲ. ಆದರೆ, ಆಗಿಂದಾಗ್ಗೆ ನನ್ನಿಂದ ನನ್ನರಿವಿಲ್ಲದೆಯೇ ಹೊರಹೊಮ್ಮುತ್ತಿದ್ದ ಒಂದೇ ಒಂದು ಉದ್ಗಾರವೆಂದರೆ - `ಹೀಗೂ ಉಂಟೆ?~!

ನಾನು ಇತ್ತೀಚೆಗೆ ನೀಡಿದ ಮ್ಯಾನೇಜ್‌ಮೆಂಟ್ ಉಪನ್ಯಾಸವೊಂದರಲ್ಲಿ ಮ್ಯಾನೇಜರ್ ಒಬ್ಬನಲ್ಲಿ ಇರಬೇಕಾದ ಗುಣಗಳ ಬಗ್ಗೆ ಮಾತನಾಡುತ್ತ `e Should be like a jugglerಎಂದಿದ್ದೆ.

ಎರಡು ಚೆಂಡುಗಳನ್ನು ಗಾಳಿಯಲ್ಲಿ ತೂರಿ ಎರಡೂ ಕೈಗಳಿಂದ ಒಂದರ ನಂತರ ಮತ್ತೊಂದನ್ನು ಹಿಡಿಯುವುದು ಸುಲಭದ ಮಾತು. ಆದರೆ ಚೆಂಡುಗಳ ಸಂಖ್ಯೆ ಮೂರಾದಾಗ, ನಾಲ್ಕಾದಾಗ, ಐದಾದಾಗ, ಆರಾದಾಗ ಅದನ್ನಾಡಿ ತೋರಿಸುವುದಕ್ಕೆ ಗಾರುಡಿಗನೊಬ್ಬನಿಗೆ ಮಾತ್ರ ಸಾಧ್ಯ.

ಆದರೂ ಮ್ಯಾನೇಜರ್ ಒಬ್ಬ ಅವಧಾನಿಗಳಂತಿರಬೇಕು ಎಂದಿದ್ದರೆ ಇನ್ನೂ ಪ್ರಶಸ್ತವಾಗಿರುತ್ತಿತ್ತು ಎಂದು ಈ ಅಂಕಣವನ್ನು ಬರೆಯುವಾಗ ನನಗನ್ನಿಸುತ್ತಿದೆ.

ಏಕೆಂದರೆ ಗಾರುಡಿಗ ಹಾಗೂ ಅವಧಾನಿಗಳಿಬ್ಬರದೂ ಅತ್ಯದ್ಭುತವಾದ ಕಲೆಯೇ ಆದರೂ ಗಾರುಡಿಗನದು ಮನರಂಜನೆಗೆ ಮಾತ್ರ ಸೀಮಿತ. ಆದರೆ, ಅವಧಾನಿಗಳದ್ದು ಮನೋವಿಕಾಸವನ್ನೂ ದಾಟಿ ನಿಲ್ಲುತ್ತದೆ.
 
ಗಾರುಡಿಗ ಪರಿಭಾಷೆಯಲ್ಲೇ ಹೇಳುವುದಾದರೆ ಕತ್ತಿಯ ಅಲುಗಿನ ಮೇಲೆ ನಿಂತು, ಕೆಳಕ್ಕೆ ಬಿದ್ದರೆ ಸ್ಫೋಟಿಸುವ ಬಾಂಬುಗಳನ್ನು ಗಾಳಿಯಲ್ಲಿ ಎಸೆಯುತ್ತ ತಮ್ಮತ್ತ ಬರುತ್ತಿರುವ ವಿಷ ಬಾಣಗಳನ್ನು ತಪ್ಪಿಸಿಕೊಂಡು ನಗುನಗುತ್ತ ಮುಂದೆ ಸಾಗುವುದಿದೆಯಲ್ಲ - ಇದು ಅವಧಾನಿಗಳು ನಮಗೆ ನೀಡುವ ಒಂದು ಪರಿಪೂರ್ಣ ಕಲೆಯ ವೈಶಿಷ್ಟ್ಯ.

ಬೋರ್ಡ್‌ರೂಮಿನ ಸುತ್ತ ಮುತ್ತಲಿನವರದೂ ಒಂದು ರೀತಿಯಲ್ಲಿ ಮೇಲಿನ ದೃಷ್ಟಾಂತಕ್ಕೆ ಹತ್ತಿರವಾದದ್ದು. ಅವರು ಗಾಳಿಯಲ್ಲಿ ತೂರುವುದು ಚೆಂಡುಗಳನ್ನಲ್ಲ. ಹಣದ ಕಂತೆಗಳನ್ನು, ಅವರು ನಡೆದಾಡುವುದು ನೆಲದ ಮೇಲಲ್ಲ.

ಬೆಂಕಿಯ ಮೇಲೆ. ಮೇಲಿಂದ ತನ್ನೆಡೆಗೆ ಬೀಳುತ್ತಿರುವ ಹಣದ ಕಂತೆಯೊಂದನ್ನು ಆತ ಹಿಡಿಯದಿದ್ದರೆ ಅದು ಕೆಳಕ್ಕೆ ಬಿದ್ದು ಬೆಂಕಿಯಲ್ಲಿ ಉರಿದು ಹೋಗುತ್ತದೆ. ಅರ್ಥಾತ್ ಅಷ್ಟರ ಮಟ್ಟಿಗೆ ನಷ್ಟ! ಬದಲಾಗಿ ಹಿಡಿದದ್ದೇ ಆದರೆ, ಅಷ್ಟರಮಟ್ಟಿಗೆ ಅದೃಷ್ಟ! ಲಾಭ ನಷ್ಟಗಳ ನಡುವಿನ ಅಂತರ ಇದರಿಂದ ನಮಗೆ ಸ್ಪಷ್ಟ!

ಆಫೀಸಿನ ತನ್ನ ರೂಮಿನಲ್ಲಿ ಇವನು ಕುಳಿತಿರುತ್ತಾನೆ. ತನ್ನ ಗುಂಪಿನ ಸಹೋದ್ಯೋಗಿಯೊಬ್ಬನ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದಾನೆ. ಆ ಸಮಸ್ಯೆಯನ್ನು ಪರಿಗಣಿಸಿ ಅವನಿಗೆ ಮಾರ್ಗದರ್ಶನ ನೀಡುವುದು ಇವನ ಕರ್ತವ್ಯ.

ಆದರೆ, ತನ್ನ ಬಾಸ್ ಕೇಳಿರುವ ಮಾಹಿತಿಯನ್ನು ಇದರ ಜೊತೆಜೊತೆಯಲ್ಲೇ ಮುಗಿಸಿ ಕೊಡಬೇಕು. ಜೊತೆಯಲ್ಲೇ ಇನ್ನರ್ಧ ಗಂಟೆಯಲ್ಲಿ ನಡೆಯುವ ಗ್ರಾಹಕ ಸಂವಾದಕ್ಕೆ ಸಾಕಷ್ಟು ತಯಾರಿ ನಡೆಸಬೇಕು.

ಸಂಜೆಗೆ ಮಂಡಿಸಬೇಕಾದ ತನ್ನ ಸೆಮಿನಾರಿನ ಗುಂಗು ತಲೆಯಲ್ಲಿನ್ನೂ ಸುತ್ತುತ್ತಿದೆ. ಕೆಲಸ ಬಿಡುತ್ತೇನೆಂದು ಬೇಸರಿಸಿಕೊಂಡಿರುವ ಸಹೋದ್ಯೋಗಿಯೊಬ್ಬನನ್ನು ಸಮಾಧಾನದಿಂದ ಮಾತನಾಡಿಸಿ ಮತ್ತೆ ತನ್ನ ಸಮಸ್ಯೆಗಳ ಸುಳಿಯಲ್ಲಿ ಜಾರುತ್ತಾನೆ.

ದಿನದ ಈ ಎಲ್ಲ ಚಟುವಟಿಕೆಗಳೂ ಒಂದರ ನಂತರ ಸರದಿ ಸಾಲಿನಲ್ಲೇ ಬರುವುದಾದರೆ ಅದೆಷ್ಟು ಚೆನ್ನ ಎಂದೆನ್ನಿಸುವಾಗಲೇ ಬೋರ್ಡ್ ರೂಮಿನಿಂದ ಕರೆ! ಅತ್ತ ಹೆಜ್ಜೆ ಹಾಕುತ್ತಿರುವಾಗಲೇ ಕಿಸೆಯಲ್ಲಿರುವ ಮೊಬೈಲ್ ಜೀವಂತವಾಗುತ್ತದೆ.

ಕೆಂಡಾಮಂಡಲವಾದ ದೂರದೂರಿನ ಗ್ರಾಹಕನೊಬ್ಬನ ಎತ್ತರದ ದನಿಯ ದೂರು!
ಇದು ಇವನ ದಿನನಿತ್ಯದ ವಹಿವಾಟಿನ ಒಂದು ಜಳಕು ಅಷ್ಟೆ. ಇರುವ ಎರಡೇ ಕೈಗಳಲ್ಲಿ ಹತ್ತಾರು ಕೆಲಸಗಳನ್ನು ಒಂದಕ್ಕೊಂದು ಪೂರಕವಾಗುವಂತೆ, ಎಲ್ಲ ಸೇರಿ ಒಂದಾಗುವಂತೆ ಕಾರ್ಯ ನಿರ್ವಹಿಸಬೇಕಾದುದು ಅವನ ಜವಾಬ್ದಾರಿ.

ತನ್ನ ಕೆಲಸ ಕಷ್ಟವಾಗುತ್ತಿದೆಯಲ್ಲ ಎಂದವನಿಗೆ ಅನ್ನಿಸತೊಡಗಿದ ದಿನವೇ ಅವನು ಡಾ. ಗಣೇಕರ ಅಷ್ಟಾವಧಾನವೊಂದಕ್ಕೆ ಹೋಗಿ ಕುಳಿತುಕೊಳ್ಳುವುದು ಒಳಿತು. ಹತ್ತಾರು ಕೆಲಸಗಳನ್ನು ಒಂದೇ ಬಾರಿ ಹೇಗೆ ನಿಭಾಯಿಸಬೇಕೆಂಬ ಶಿಕ್ಷಣ ಅವನಿಗೆ ಅಲ್ಲಿ ಶತಸಿದ್ಧ! ಅಲ್ಲಿಂದ ಅವನು ಬಹುರೂಪಿಯಾಗಿ ಹೊರಹೊಮ್ಮಿ ಬರುವುದು ಖಂಡಿತ!         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT