ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆ ವಿರುದ್ಧ ಸಂಘರ್ಷ

Last Updated 7 ಫೆಬ್ರುವರಿ 2012, 6:30 IST
ಅಕ್ಷರ ಗಾತ್ರ

ಆಲ್ದೂರು (ಚಿಕ್ಕಮಗಳೂರು): ನಮ್ಮ ವ್ಯವಸ್ಥೆ ಅಂಬೇಡ್ಕರ್ ಭಾವಚಿತ್ರ ಇಟ್ಟು ದಲಿತರನ್ನು ಸಮಾಧಾನ ಪಡಿಸುತ್ತಿದೆ. ಆದರೆ ದಲಿತರು ಕೇವಲ ಅಂಬೇಡ್ಕರ್ ಅವರನ್ನು ಭಾವನಾತ್ಮಕವಾಗಿ ನೋಡದೇ ಅವರ ಆದರ್ಶ, ವಿಚಾರಧಾರೆ ಮೈಗೂಡಿಸಿಕೊಂಡು ಅಸಮಾನತೆ ವಿರುದ್ಧ ಸಂಘರ್ಷ ಮಾಡಬೇಕು ಎಂದು ಸಿಪಿಐಎಂಎಲ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಕರೆ ನೀಡಿದರು.

ಆಲ್ದೂರು ಪಟ್ಟಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ವೇದಿಕೆ ಹಮ್ಮಿಕೊಂಡಿದ್ದ ದಲಿತ ಸಾಂಸ್ಕೃತಿಕ ಕಲಾಮೇಳ, ಜನಜಾಗೃತಿ ಸಮಾವೇಶ ಹಾಗೂ ಗ್ರಾಪಂ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ವೃತ್ತ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲ ಬಂಡವಾಳ ಭೂಮಿಯೇ ಆಗಿರುವುದರಿಂದ ದಲಿತರಿಗೆ ಭೂಮಿ ದಕ್ಕಿದರೆ ಮಾತ್ರ ದಲಿತರಿಗೆ ಆರ್ಥಿಕ, ಸಮಾಜಿಕವಾಗಿ ಸಮಾನತೆ ಗಳಿಸಲು ಸಾಧ್ಯ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಸಮಾಜದಲ್ಲಿ ದಲಿತರು, ಹಿಂದುಳಿದವರು,  ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಮೇಲ್ವರ್ಗದಲ್ಲಿರುವ ಅವಿದ್ಯಾವಂತರನ್ನೂ ಸಹ ಶಿಕ್ಷಿತರನ್ನಾಗಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಪ್ರಜಾಪ್ರಭುತ್ವದ ಮೇಲೆ ಪ್ರತಿಯೊಬ್ಬರು ನಂಬಿಕೆ ಇಟ್ಟುಕೊಂಡು ಮುನ್ನಡೆಯಬೇಕು. ಜಾತಿ, ಮತ, ಧರ್ಮ ಬಿಟ್ಟು ಕುವೆಂಪು ಅವರ ವಿಶ್ವಮಾನವ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದರು.

 ದಲಿತ ಮುಖಂಡ ಚಂಡಗೋಡು ಮುದ್ದಣ್ಣ ಮಾತನಾಡಿ, ಆಲ್ದೂರಿನ ಸ್ಥಳೀಯ ಮುಖಂಡರು ಈ ವೃತ್ತಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಅನೇಕ ದಲಿತ ಹೋರಾಟಗಾರರ ಶ್ರಮಕ್ಕೆ  ಪ್ರತಿಫಲ ದಕ್ಕಿದೆ ಎಂದರು.

ಗ್ರಾ.ಪಂ ಮಾಜಿ ಸದಸ್ಯ ಹಾಗೂ ವೇದಿಕೆ ಸಂಚಾಲಕ ನವರಾಜ್, ಗ್ರಾ.ಪಂ ಅಧ್ಯಕ್ಷ ಸತೀಶ್, ತಾಪಂ ಸದಸ್ಯ ಕೃಷ್ಣೇಗೌಡ, ಗ್ರಾ.ಪಂ ಸದಸ್ಯ ಹಂಪಮ್ಮ, ಕೆಸರಿಕೆ ಸಿದ್ದರಾಜು, ಹಿರೇಮಗಳೂರು ರಾಮ ಚಂದ್ರ, ಹೆಡದಾಳು ಕುಮಾರ್, ಹುಣಸೇ ಮಕ್ಕಿ ಲಕ್ಷ್ಮಣ್ ಇನ್ನಿತರರು ಇದ್ದರು.

`ಅಸ್ತಿತ್ವಕ್ಕಾಗಿ ಹೋರಾಟ~
ಆಲ್ದೂರು (ಚಿಕ್ಕಮಗಳೂರು): 
ಶೋಷಿ ತರ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಆಲ್ದೂರು ಪಟ್ಟಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ವೇದಿಕೆ ಹಮ್ಮಿಕೊಂಡಿದ್ದ ದಲಿತ ಸಾಂಸ್ಕೃತಿಕ ಕಲಾ ಮೇಳ, ಜನಜಾಗೃತಿ ಸಮಾವೇಶ ಹಾಗೂ ಗ್ರಾ.ಪಂ. ನೂತನವಾಗಿ ನಿರ್ಮಿ ಸಿರುವ ಅಂಬೇಡ್ಕರ್ ವೃತ್ತ ಉದ್ಘಾಟಿಸಿ ಅವರು ಮಾತನಾಡಿ, ದಲಿತರು, ಮಹಿಳೆ ಯರು, ಧಮನಿತರ ಮೇಲೆ ಇಂದಿಗೂ ಶೋಷಣೆ ನಡೆಯುತ್ತಲೇ ಇದೆ. ಶೋಷಣೆಯಿಂದ ಮುಕ್ತರಾಗಲು ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ಸಮಾಜದ ಕಟ್ಟಕಡೆಯ ಜನರಿಗೆ ಮೊದಲ ಆದ್ಯತೆ ನೀಡುವುದು ನನ್ನ ಜವಾಬ್ದಾರಿ. ಆಲ್ದೂರಿನಲ್ಲಿ ನಿರ್ಮಿಸಿರುವ ಅಂಬೇಡ್ಕರ್ ವೃತ್ತಕ್ಕೆ ಯಾರ ವಿರೋಧವಿಲ್ಲ. ಎಲ್ಲ ವರ್ಗದ, ಎಲ್ಲ ಜಾತಿ, ಜನಾಂಗದ ಸಹಕಾರದಿಂದ ಗ್ರಾಮ ಪಂಚಾ ಯಿತಿ ಅಂಬೇಡ್ಕರ್ ವೃತ್ತ ನಿರ್ಮಿಸಿದೆ ಎಂದರು.

ಸುಮಾರು 1. 65 ಲಕ್ಷ ರೂಪಾಯಿ ವೆಚ್ಚ ದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಲಾಗಿದೆ. ವೃತ್ತ ನಿರ್ಮಾಣಕ್ಕೆ ಕಾರಣಕರ್ತರಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅಂಬೇಡ್ಕರ್ ಹೋರಾಟ ವೇದಿಕೆಯಿಂದ ಸನ್ಮಾನಿಸಲಾಯಿತು. 

ಇದಕ್ಕೂ ಮೊದಲು ಪಟ್ಟಣದ ಹಳೇ ಫಾರೆಸ್ಟ್‌ಗೇಟ್‌ನಿಂದ ಮಹಿಳೆಯರೂ ಸೇರಿದಂತೆ ಸಾವಿರಾರು ಜನರು ವಿವಿಧ ಕಲಾತಂಡ ಹಾಗೂ ವಾದ್ಯವೃಂದದೊಂದಿಗೆ  ಪಟ್ಟಣದ ಮುಖ್ಯಬೀದಿಗಳಲ್ಲಿ ಬೃಹತ್ ಮೆರವಣಿಗೆ  ನಡೆಸಿದರು.

ಸಿಪಿಐಎಂಎಲ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜೆಡಿಯು ಜಿಲ್ಲಾ ಅಧ್ಯಕ್ಷ ಕೆ.ಭರತ್, ತಾಪಂ ಸದಸ್ಯ ಸತ್ತಿಹಳ್ಳಿ ಗಂಗಯ್ಯ ಮಾತನಾಡಿದರು. ದಲಿತ ಸಂ.ಸಮಿತಿಯ ಜಿಲ್ಲಾ ಸಂಚಾಲಕ ಯಲಗುಡಿಗೆ ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT