ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕ ಭೀಷ್ಮ

Last Updated 8 ಜನವರಿ 2011, 14:15 IST
ಅಕ್ಷರ ಗಾತ್ರ

ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ದುಶ್ಯಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಭೀಷ್ಮ ಪಿತಾಮಹ ತಲೆತಗ್ಗಿಸಿ ಮೌನವಹಿಸುತ್ತಾನೆ.  ಅತ್ತ ಕೌರವರ ಮೇಲಿನ  ವ್ಯಾಮೋಹ, ಇತ್ತ ಕಣ್ಣೆದುರೇ ಹೆಣ್ಣಿನ ಮಾನಹರಣ; ಇವರೆಡರ ನಡುವಿನ ತಾಕಲಾಟ ಅವನನ್ನು ಕಾಡುತ್ತದೆ. ಅಂತಃಸ್ಸಾಕ್ಷಿಗೆ ವಿರುದ್ಧವಾಗಿದ್ದರೂ ಅಸಹಾಯಕನಂತೆ ಕೈಚೆಲ್ಲುತ್ತಾನೆ. ಮುಂದೆ ಬದುಕಿನುದ್ದಕ್ಕೂ ಇದಕ್ಕಾಗಿ ಆತ ಎಲ್ಲ ಬಗೆಯ ನಿಂದನೆ, ಚುಚ್ಚು ಮಾತು ಕೇಳಬೇಕಾಗುತ್ತದೆ.

ಸ್ವತಂತ್ರ ಭಾರತದ ಅತಿದೊಡ್ಡ ಹಣಕಾಸು ಹಗರಣ ಎಂದೇ ಹೇಳಲಾಗುವ 2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಕೂಡ ನೇರವಾಗಿ ತಪ್ಪು ಮಾಡದಿದ್ದರೂ ಟೀಕೆಗೆ ಆಹಾರವಾಗಿದ್ದಾರೆ. ಯಾರೋ ಮಾಡಿದ ಅಕ್ರಮದ ಕಳಂಕ ಅವರನ್ನು ಸುತ್ತಿಕೊಂಡಿದೆ. ಅವರದೂ ಅಸಹಾಯಕ ಭೀಷ್ಮನ ಸ್ಥಿತಿ. ಪ್ರತಿಭಟಿಸಬೇಕಾದ ಸಂದರ್ಭದಲ್ಲೂ ಮೌನಕ್ಕೆ ಶರಣಾಗುವುದು ಅವರ ಅತಿದೊಡ್ಡ ದೌರ್ಬಲ್ಯ. ಹೀಗಾಗಿಯೇ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತಾ ಹಗರಣ, ಕೇಂದ್ರ ಜಾಗೃತ ಆಯುಕ್ತರಾಗಿ (ಸಿವಿಸಿ) ಪಾಮೋಲಿನ್ ಖಾದ್ಯ ತೈಲ ಆಮದು ಹಗರಣದ ಆರೋಪಿ ಮಾಜಿ ಐಎಎಸ್ ಅಧಿಕಾರಿ ಪಿ.ಜೆ. ಥಾಮಸ್ ನೇಮಕ ವಿವಾದದಲ್ಲೂ ಸಕಾಲಿಕ ಕ್ರಮ ಕೈಗೊಳ್ಳದೇ ಇರುವುದಕ್ಕಾಗಿ ಅವರು ಕಟು ಟೀಕೆಗಳಿಗೆ ಗುರಿಯಾಗಿದ್ದಾರೆ.

ಸೌಜನ್ಯವೇ ಸಮಸ್ಯೆ: ಮೆದು ಮಾತಿನ ಮಿತಭಾಷಿ, ಸರಳ, ಸಜ್ಜನ, ಕೈ-ಬಾಯಿ ಎರಡನ್ನೂ ಶುದ್ಧವಾಗಿ ಇಟ್ಟುಕೊಂಡ ಅಪರೂಪದ ‘ರಾಜಕಾರಣಿ’ ಅವರು. ಹಾಗೆ ನೋಡಿದರೆ ಹೊಲಸೆದ್ದು ಹೋಗಿರುವ ಇಂದಿನ ರಾಜಕಾರಣಕ್ಕೆ ಅವರು ಲಾಯಕ್ಕಾದ ವ್ಯಕ್ತಿಯೇ ಅಲ್ಲ. ಅದೇ ಅವರ ಪಾಲಿಗೆ ದೊಡ್ಡ ಸಮಸ್ಯೆ ಎಂದರೂ ಅತಿಶಯೋಕ್ತಿಯಲ್ಲ. ಒಂದಕ್ಕೊಂದು ವಿರೋಧಾಭಾಸದ ತತ್ವ ಸಿದ್ಧಾಂತ, ಕಾರ್ಯಸೂಚಿ ಹೊಂದಿದ 20ಕ್ಕೂ ಹೆಚ್ಚು ಪಕ್ಷಗಳನ್ನು ಕಟ್ಟಿಕೊಂಡು ಸಮ್ಮಿಶ್ರ ಸರ್ಕಾರ ನಡೆಸುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ. ಪ್ರತಿ ಕ್ಷಣವೂ ಕಸರತ್ತು, ತಂತಿ ಮೇಲಿನ ನಡಿಗೆ. ಇದರಲ್ಲಿ ಕೆಲವು ಪಕ್ಷಗಳಂತೂ ಸಂಖ್ಯಾಬಲ ಕಡಿಮೆ ಇದ್ದರೂ ಸರ್ಕಾರದ ಅಸ್ತಿತ್ವಕ್ಕೇ ಧಕ್ಕೆ ತರಬಲ್ಲ, ತಮಗೆ ಬೇಕಾದಂತೆ ಇಡೀ ಸರ್ಕಾರವನ್ನೇ ಮಣಿಸಬಲ್ಲ ತಾಕತ್ತು ಉಳ್ಳವು.

ಇಂಥ ಪಕ್ಷಗಳಲ್ಲೊಂದಾದ ಡಿಎಂಕೆಯ ಮಂತ್ರಿಯೊಬ್ಬ (ಅವರೀಗ ಮಾಜಿ) ಸಂಪುಟದಲ್ಲಿದ್ದಾಗ ಮಾಡಿದ ಭಾನಗಡಿಗೆ ಪ್ರಧಾನಿ ತಲೆ ಕೊಡುವಂತಾಗಿದೆ. ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ಲುಕ್ಸಾನು ಮಾಡಿದ ಈ ಭಾರಿ ಹಗರಣದಲ್ಲಿ ಪ್ರಧಾನಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಯಾರೊಬ್ಬರೂ ಹೇಳುತ್ತಿಲ್ಲ. ಸ್ವತಃ ಈ ಬಗ್ಗೆ ಗಲಾಟೆ ಮಾಡುತ್ತ ಸಂಸತ್ತಿನ ಕಲಾಪಕ್ಕೇ ಅಡ್ಡಿಪಡಿಸಿದ ಪ್ರತಿಪಕ್ಷಗಳೂ ಸಿಂಗ್ ಪ್ರಾಮಾಣಿಕತೆ ಬಗ್ಗೆ ಎಳ್ಳಷ್ಟೂ ಅನುಮಾನ ವ್ಯಕ್ತಪಡಿಸುತ್ತಿಲ್ಲ. ಆದರೆ ಸಚಿವ ಸಂಪುಟದ ಮುಖ್ಯಸ್ಥರಾಗಿ ಅವರ ನೈತಿಕ ಹೊಣೆಗಾರಿಕೆಯನ್ನೇ ಮುಂದೆ ಮಾಡಿ ಅವರ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿವೆ. ಪ್ರತಿಪಕ್ಷದ ಸಂಸದರೊಬ್ಬರು ಅಧ್ಯಕ್ಷರಾಗಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ತನಿಖೆ ಬದಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ  ಪಟ್ಟು ಹಿಡಿದಿವೆ.

ಇಲ್ಲಿ ಇನ್ನೊಂದು ವಿಶೇಷವೂ ಇದೆ. ಜೆಪಿಸಿ ರಚನೆಗೆ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ತನ್ನದೇ ಪಕ್ಷದ ಮುಖ್ಯಮಂತ್ರಿ ಮತ್ತವರ ಸಂಪುಟ ಸಹೋದ್ಯೋಗಿಗಳ ಮೇಲಿನ ಭ್ರಷ್ಟಾಚಾರ ಆರೋಪಗಳ ತನಿಖೆಗೆ ತಯಾರಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅದರ ನೈತಿಕತೆಗೆ, ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದ್ದರೂ 2 ಜಿ ಹಗರಣದ ಎಳೆ ಹಿಡಿದು ಪ್ರಧಾನಿಯನ್ನು ಬಗ್ಗುಬಡಿಯುವ ಯತ್ನದಲ್ಲಿದೆ. 

ಆದರೂ ಪ್ರಧಾನಿ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳಲಾರದ ಅಸಹಾಯಕತೆಯಲ್ಲಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗಲು ಸ್ವತಃ ಮುಂದಾಗಿದ್ದಾರೆ. ದೇಶದ ಇತಿಹಾಸದಲ್ಲಿ ಹಿಂದೆ ಪ್ರಧಾನಿಯೊಬ್ಬರು ವಿಚಾರಣೆಗಾಗಿ ಪಿಎಸಿ ಮುಂದೆ ನಿಲ್ಲಲು ಸಿದ್ಧ ಎಂದು ಹೇಳಿದ ಉದಾಹರಣೆ ಕೂಡ ಇಲ್ಲ. ಏಕೆಂದರೆ ಪಿಎಸಿಗೆ ಅವರನ್ನು ತನ್ನೆದುರು ಕರೆಸುವ ಅಧಿಕಾರವೇ ಇಲ್ಲ.

ತಪ್ಪು ಮಾಡಿದ ವ್ಯಕ್ತಿ ಯಾರು ಎಂಬುದು ಎಲ್ಲರಿಗೂ ಗೊತ್ತು. ಅವರದೇ ಸಂಪುಟದಲ್ಲಿ ಡಿಎಂಕೆಯನ್ನು ಪ್ರತಿನಿಧಿಸುತ್ತಿದ್ದ, ದೂರಸಂಪರ್ಕ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಎ. ರಾಜಾ ಅಧಿಕಾರದಲ್ಲಿ ಇದ್ದಾಗ ನಡೆಸಿದ ಹಗರಣ ಇದು. ಇದರ ಸುಳಿವು ಸಿಕ್ಕಾಗಲೇ ಅವರು ಸಚಿವರ ಕೃತ್ಯಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರು. ಆದರೆ ಅದ್ಯಾವುದಕ್ಕೂ ರಾಜಾ ಸೊಪ್ಪು ಹಾಕಿರಲಿಲ್ಲ. ಪ್ರಧಾನಿಯ ಸಲಹೆ ಸೂಚನೆ ಧಿಕ್ಕರಿಸಿದರು. ಆದರೂ ಸಿಂಗ್ ಅವಮಾನವನ್ನು ಸಹಿಸಿಕೊಂಡು ಸುಮ್ಮನಿರಬೇಕಾಯಿತು. ಸಮ್ಮಿಶ್ರ ಸರ್ಕಾರದ ರಾಜಕಾರಣದ ಅನಿವಾರ್ಯತೆ ಅವರ ಕೈ ಕಟ್ಟಿತ್ತು.

ಜನತಾ ಪಕ್ಷದ ಮುಖಂಡರಾಗಿದ್ದ ಡಾ. ಸುಬ್ರಮಣಿಯನ್ ಸ್ವಾಮಿ 2 ಜಿ ಹಗರಣವನ್ನು 16 ತಿಂಗಳ ಹಿಂದೆಯೇ ಪ್ರಧಾನಿ ಗಮನಕ್ಕೆ ತಂದಿದ್ದರು. ಅದೇನು ಅನಿವಾರ್ಯವೊ ಏನೋ; ಪ್ರಧಾನಿ ಸುಮ್ಮನಾಗಿಬಿಟ್ಟರು. ಮುಂದೆ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಲೇರಿತು. ಆಗ ಕೋರ್ಟ್ ಈ ವಿಚಾರದಲ್ಲಿ ಸಕಾಲಿಕ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಷ್ಟೇ ಅಲ್ಲ ಅಫಿಡವಿಟ್ ಸಲ್ಲಿಸುವಂತೆ ಪ್ರಧಾನಿಗೆ ಸೂಚಿಸಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಥ ಪ್ರಸಂಗ ಇದೇ ಮೊದಲು.

ಡಾ. ಮನಮೋಹನ್ ಸಿಂಗ್ ಒಬ್ಬ ವೃತ್ತಿ ರಾಜಕಾರಣಿ ಅಲ್ಲ. ಮೂಲತಃ ಅವರೊಬ್ಬ ಆರ್ಥಿಕ ತಜ್ಞ. ರಾಜಕೀಯದ ಅಸಹ್ಯ ಪಟ್ಟುಗಳನ್ನು ಬಳಸುವುದು ಅವರಿಗೆ ಕರಗತವಾಗಿಲ್ಲ. ಅಲ್ಲದೆ ಅವರು ಪ್ರಧಾನಿ ಹುದ್ದೆಯಲ್ಲಿದ್ದರೂ ಪ್ರತಿಯೊಂದು ನಿರ್ಧಾರಕ್ಕೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆ ಪಡೆಯಬೇಕಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಅನೇಕ ಕೇಂದ್ರ ಸಚಿವರು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಮಹತ್ವದ ವಿಷಯಗಳಲ್ಲಿ ಪ್ರಧಾನಿಯನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ; ಏನಿದ್ದರೂ ಜನಪಥ್‌ನ (ಸೋನಿಯಾ ನಿವಾಸ) ಆದೇಶಕ್ಕೆ ಕಾಯುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಅವರೆಲ್ಲರ ತಪ್ಪುಗಳಿಗೆ  ತಾತ್ವಿಕವಾಗಿ ಸಿಂಗ್ ಅವರನ್ನೇ ಹೊಣೆ ಮಾಡಲಾಗುತ್ತಿದೆ. ಅವರೊಬ್ಬ ದುರ್ಬಲ ಪ್ರಧಾನಿ ಎಂಬ ಮೂದಲಿಕೆಯಂತೂ ಸದಾ ಕೇಳಿ ಬರುತ್ತಿರುತ್ತದೆ.

ಸಾಧನೆಯ ರೂವಾರಿ: ಇದೆಲ್ಲ ಏನೇ ಇದ್ದರೂ ಅವರ ಪ್ರಾಮಾಣಿಕತೆ, ನಿಷ್ಠೆ ಸಂದೇಹಾತೀತ. ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಕುಟುಂಬ ವರ್ಗಕ್ಕೆ ಅವರು ಅವಕಾಶ ಕೊಟ್ಟವರೇ ಅಲ್ಲ. ಹೊಲಸೆದ್ದು ಹೋಗಿರುವ ರಾಜಕಾರಣದಲ್ಲಿ ಇದು ತೀರಾ ಅಪರೂಪ. ಹೀಗಾಗಿಯೇ ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಎಳ್ಳುಕಾಳಿನಷ್ಟು ಆರೋಪವೂ ಅವರ ಮೇಲಿಲ್ಲ.

ಪ್ರವಾಸ ಕಾಲದಲ್ಲಿ, ಸಾಂಪ್ರದಾಯಿಕ ಸಭೆ ಸಮಾರಂಭಗಳಲ್ಲಿ ಜೊತೆಗಿರುವ ಪತ್ನಿ ಗುರುಶರಣ್ ಕೌರ್ ಅವರನ್ನು ಬಿಟ್ಟರೆ ಸಿಂಗ್ ಕುಟುಂಬದ ಬಗ್ಗೆ ಹೆಚ್ಚು ಪ್ರಚಾರವೇ ಇಲ್ಲ. ಈ ದಂಪತಿಗೆ ಮೂರು ಹೆಣ್ಣುಮಕ್ಕಳು ಮಾತ್ರ. ಆದರೆ ಅವರ್ಯಾರೂ ಅಪ್ಪನ ಹೆಸರಿನಲ್ಲಿ ಅಧಿಕಾರ ಚಲಾಯಿಸಲು ಆಸೆ ಪಟ್ಟವರಲ್ಲ.
ಅಷ್ಟೇ ಏಕೆ, ಗುರುಶರಣ್ ಅವರ ಸೋದರಿ ವಾಸವಾಗಿರುವುದು ನಮ್ಮದೇ ರಾಜ್ಯದ ಹುಬ್ಬಳ್ಳಿಯಲ್ಲಿ. ಆ ಕುಟುಂಬ ಕೂಡ ಪ್ರಧಾನಿ ಸಂಬಂಧಿ ಎಂದು ಗತ್ತು ಗೈರತ್ತು ತೋರಿಸಿದ ಉದಾಹರಣೆ ಇಲ್ಲ.

1932 ಸೆ 26ರಂದು ಗಾಹ್ ಗ್ರಾಮದಲ್ಲಿ (ಈಗಿನ ಪಾಕಿಸ್ತಾನದ ಚಕ್ವಾಲ್ ಜಿಲ್ಲೆ) ಗುರುಮುಖ್ ಸಿಂಗ್, ಅಮೃತ್ ಕೌರ್ ದಂಪತಿಯ ಮಗನಾಗಿ ಜನಿಸಿದ ಮನಮೋಹನ್ ಸಿಂಗ್. ಮಹಾ ಮೇಧಾವಿ. ಉನ್ನತ ಆಲೋಚನೆ, ಸರಳ ಜೀವನಕ್ಕೆ ಉದಾಹರಣೆ. ವಿಶ್ವದ ದೇಶಗಳ ಪ್ರಧಾನಿ, ಅಧ್ಯಕ್ಷರುಗಳ ಪೈಕಿ ಶೈಕ್ಷಣಿಕ ಸಾಧನೆ, ಅರ್ಹತೆಯಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಡಜನ್‌ಗಟ್ಟಲೆ ಡಾಕ್ಟರೇಟ್, ವಿಶ್ವದ ಪ್ರತಿಷ್ಠಿತ ವಿವಿಗಳ ಗೌರವ, ಆರ್ಥಿಕ ವಿಷಯಗಳ ಮೇಲೆ ಅಪಾರ ಪಾಂಡಿತ್ಯ, ಪ್ರಬಂಧ ಮಂಡನೆ, ವಿವಿಧ ದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ, ಕಾಲೇಜು, ವಿವಿಗಳಲ್ಲಿ ಅಧ್ಯಾಪಕರಾಗಿ ಸುದೀರ್ಘ ಅನುಭವ ಹೀಗೆ ಎಲ್ಲದರಲ್ಲೂ ಅವರೊಬ್ಬ ಬಹುಮುಖ ಪ್ರತಿಭಾವಂತ.

ನಮ್ಮ ದೇಶದಲ್ಲೂ ಪ್ರಧಾನಿಯಾದವರಲ್ಲಿ ಡಾ.ಸಿಂಗ್ ಅವರಷ್ಟು ವೈವಿಧ್ಯಮಯ ಹುದ್ದೆಗಳನ್ನು ಅಲಂಕರಿಸಿದವರು ಇಲ್ಲವೇ ಇಲ್ಲ. ಕೇಂದ್ರದ ಹಣಕಾಸು, ವಿದೇಶ ವ್ಯಾಪಾರ ಖಾತೆಗಳಿಗೆ ಆರ್ಥಿಕ ಸಲಹೆಗಾರ, ಹಣಕಾಸು ಖಾತೆ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಎಡಿಬಿಯಲ್ಲಿ ಭಾರತದ ಪ್ರತಿನಿಧಿ, ಯೋಜನಾ ಆಯೋಗದ ಉಪಾಧ್ಯಕ್ಷ, ಯುಜಿಸಿ ಅಧ್ಯಕ್ಷ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ದೇಶ ಈಗ ಕಾಣುತ್ತಿರುವ ಮುಕ್ತ ಆರ್ಥಿಕ ನೀತಿ, ಉದಾರೀಕರಣದ ರೂವಾರಿ ಮನಮೋಹನ್. ದೇಶವನ್ನು ಆರ್ಥಿಕ ಸುಧಾರಣೆಯ ಹಾದಿಗೆ ತಂದು ನಿಲ್ಲಿಸಿದ ಕೀರ್ತಿ ದಿ. ಪ್ರಧಾನಿ ಪಿ.ವಿ. ನರಸಿಂಹರಾವ್ ಜತೆ ಸಿಂಗ್ ಅವರಿಗೂ ಸಲ್ಲುತ್ತದೆ. 1991ರಲ್ಲಿ ಪಿ.ವಿ.ಎನ್ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ನೇಮಕಗೊಂಡ ಅವರು ಲೈಸನ್ಸ್, ಪರ್ಮಿಟ್ ರಾಜ್, ಆಡಳಿತಶಾಹಿಯ ಹಿಡಿತದಿಂದ ದೇಶದ ಅರ್ಥ, ವ್ಯಾಪಾರ, ಉದ್ಯಮ ವ್ಯವಸ್ಥೆಯನ್ನು ಮುಕ್ತ ಮಾಡಿದವರು. ಆಗ ಅತ್ಯಂತ ಕಷ್ಟದ ಸ್ಥಿತಿಯಲ್ಲಿದ್ದ ಭಾರತ ಈಗ ವಿಶ್ವದ ಪ್ರಮುಖ, ಸದೃಢ ಆರ್ಥಿಕ ಶಕ್ತಿಯಾಗಿ ಬೆಳೆಯಲು ರಾವ್- ಸಿಂಗ್ ಜೋಡಿ ಹಾಕಿದ ಅಸ್ತಿಭಾರವೇ ಕಾರಣ.
 
ಲೋಕಸಭೆಗೆ ಒಮ್ಮೆ ಸ್ಪರ್ಧಿಸಿ ಸೋಲಿನ ಕಹಿ ಅನುಭವಿಸಿರುವ ಸಿಂಗ್ ರಾಜ್ಯಸಭೆಯಲ್ಲಿ ಅಸ್ಸಾಂನ ಪ್ರತಿನಿಧಿ. ಹೀಗಾಗಿ ಲೋಕಸಭೆಯಲ್ಲಿ ತಮ್ಮದೇ ಸಚಿವ ಸಂಪುಟದ ಮೇಲಿನ ವಿಶ್ವಾಸ ಮತದಲ್ಲಿ ಅವರು ಮತ ಹಾಕುವಂತಿಲ್ಲ. ನ್ಯೂಸ್‌ವೀಕ್ ನಿಯತಕಾಲಿಕದ ಸಮೀಕ್ಷೆಯ ಪ್ರಕಾರ ಅವರು ‘ವಿಶ್ವದ ನಾಯಕರೆಲ್ಲರ ಪ್ರೀತಿಗೆ ಪಾತ್ರರಾದ ನಾಯಕ’, ಪೋಬ್ಸ್ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ಪ್ರಬಲ ವ್ಯಕ್ತಿಗಳ ಪಟ್ಟಿಯಲ್ಲಿ ಅವರದು 18ನೇ ಸ್ಥಾನ. ಆದರೂ ದೇಶದೊಳಗೆ ಮಾತ್ರ ಅವರೊಬ್ಬ ಸ್ವತಂತ್ರ ತೀರ್ಮಾನ ಕೈಗೊಳ್ಳಲಾರದ, ಸಂಪುಟ ಸಹೋದ್ಯೋಗಿಗಳ ಮೇಲೆ ನಿಯಂತ್ರಣ ಇಲ್ಲದ ಅಸಹಾಯಕ, ದುರ್ಬಲ ಪ್ರಧಾನಿಯಾಗೇ ಬಿಂಬಿತರಾಗುತ್ತಿದ್ದಾರೆ, ಅದೇ ವಿಪರ್ಯಾಸ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT