ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಧಾರಣ ಮಣಿಕರಣ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲು ಹಲವು ಪ್ರವಾಸಿ ಸ್ಥಾನಗಳ ತವರು. ಅವುಗಳಲ್ಲೊಂದು ಈ ಪರ್ವತ ಶ್ರೇಣಿಯಿಂದ ಇಳಿಯುವ ಪಾರ್ವತಿ ನದಿ ದಂಡೆಯ ಮೇಲಿರುವ ಮಣಿಕರಣ್. ಇದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಕ್ಷೇತ್ರವಷ್ಟೇ ಅಲ್ಲ, ಮೈ ನವಿರೇಳಿಸುವ ಸಾಹಸ ಕ್ರೀಡೆಗಳಿಗೆ ಹೆಬ್ಬಾಗಿಲು ಕೂಡ ಹೌದು.

ಸಮುದ್ರ ಮಟ್ಟದಿಂದ ಸುಮಾರು ಏಳು ಸಾವಿರ ಅಡಿ ಎತ್ತರದಲ್ಲಿ ಇರುವ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮಣಿಕರಣ್ ಸಿಖ್ ಮತ್ತು ಹಿಂದೂಗಳ ಪವಿತ್ರ ಕ್ಷೇತ್ರ. ಇಲ್ಲಿ ಬಿಸಿ ನೀರಿನ ಬುಗ್ಗೆಗಳು ಇರುವುದರಿಂದ ಮತ್ತು ಚಾರಣ ಹಾಗೂ ರಿವರ್ ರಾಫ್ಟಿಂಗ್ ಮಾಡಲು ಪ್ರಶಸ್ತವಾದ ಸ್ಥಳ ಇದಾದ ಕಾರಣ ಇಲ್ಲಿಗೆ ದೇಶ-ವಿದೇಶಗಳಿಂದಲೂ ಜನರು ಬರುತ್ತಾರೆ.

ಗುರು ನಾನಕರು ಪ್ರವಾಸ ಸಂದರ್ಭದಲ್ಲಿ ಮಣಿಕರಣ್‌ಗೆ ಭೇಟಿ ನೀಡಿದ್ದರಂತೆ. ಹಾಗಾಗಿ ಇದು ಸಿಖ್ಖರ ಪವಿತ್ರ ಕ್ಷೇತ್ರ. ನಾನಕರ ಸ್ಮರಣಾರ್ಥ ಇಲ್ಲಿನ ಮಂದಿರವನ್ನು `ಗುರುದ್ವಾರ್ ಮಣಿಕರಣ್ ಸಾಹಿಬ್~ ಎಂದು ಕರೆಯುತ್ತಾರೆ. ಈ ನೆನಪುಗಳ ಕಾರಣದಿಂದಲೇ ಮಣಿಕರಣ್‌ಗೆ ಬರುವ ಪ್ರವಾಸಿಗಳಲ್ಲಿ ಸಿಖ್ಖರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿರುತ್ತದೆ.

ಮಣಿಕರಣ್ ಆಸ್ತಿಕರ ಪಾಲಿಗೆ ಅಕ್ಷರಪಾತೆಯಿದ್ದಂತೆ. ಗುರುದ್ವಾರದೊಟ್ಟಿಗೆ ಶಿವಾಲಯ, ರಾಮಮಂದಿರ, ನೈನಾದೇವಿ ಆಲಯ ಮತ್ತು ಇನ್ನು ಅನೇಕ ದೇವಾಲಯಗಳು ಇಲ್ಲಿವೆ. ಈ ದೇಗುಲಗಳಲ್ಲೂ ಬಿಸಿ ನೀರಿನ ಬುಗ್ಗೆಗಳಿವೆ. ಈ ನೀರು ಸ್ನಾನ ಮಾಡುವರ ಹಿತಕ್ಕೆ ತಕ್ಕಂತೆ ಹದವಾಗಿರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕೊಳಗಳಿವೆ. ಚಾರಣ ಮಾಡಿ ದಣಿದು ಬರುವವರಿಗಂತೂ ಇದು ಆಯಾಸ ಪರಿಹರಿಸುವ ಸಂಜೀವಿನಿಯೇ ಸರಿ.

ವಿದೇಶಿ ಪ್ರವಾಸಿಗರು ಹೆಚ್ಚಾಗಿರುವುದರಿಂದ ಇಲ್ಲಿ ದುಬಾರಿ ದರ್ಜೆಯ ಮೂರು ತಾರಾ ಹೋಟೆಲ್‌ಗಳು, ಹೋಂ ಸ್ಟೇಗಳಿಂದ ಹಿಡಿದು ಸಾಧಾರಣ ಮಟ್ಟದ ಹೋಟೆಲ್‌ಗಳೂ ಇವೆ. ಅಲ್ಲದೆ ಗುರುದ್ವಾರದಲ್ಲಿ ಕೂಡ ಕೋಣೆಗಳು ಬಾಡಿಗೆಗೆ ದೊರೆಯುತ್ತವೆ. ಗುರುದ್ವಾರದಲ್ಲಿ `ಲಂಗರ್~ (ದಾಸೋಹ) ವ್ಯವಸ್ಥೆ ಇದೆ. ಚಳಿ ಪ್ರದೇಶವಾದ ಕಾರಣ ಬೆಚ್ಚಗಿನ ಉಡುಪುಗಳ ವ್ಯಾಪಾರ ಇಲ್ಲಿ ಹೆಚ್ಚು. ಕೈಮಗ್ಗ ಮತ್ತು ಯಂತ್ರದಿಂದ ಸಿದ್ಧಪಡಿಸಿದ ಉಣ್ಣೆಯ ಉಡುಪುಗಳು ದೊರಕುತ್ತವೆ. ಚೌಕಾಸಿ ಮಾಡಬೇಕಷ್ಟೆ!

ಮಣಿಕರಣ್‌ಗೆ ಕುಲು-ಮನಾಲಿ ಮತ್ತು ಚಂಡೀಗಡದಿಂದ ನೇರವಾಗಿ ಬರಬಹುದು. ಹತ್ತಿರದ ವಿಮಾನ ನಿಲ್ದಾಣ ಭುನ್ತರ್. ಇಲ್ಲಿಂದ ಮಣಿಕರಣ್‌ಗೆ ಸುಮಾರು 40 ಕಿ.ಮೀ. ಚಂಡೀಗಡ ಮತ್ತು ಕುಲು-ಮನಾಲಿಯಿಂದ ಬರುವವರು ಸಹ ಭುನ್ತರ್ ದಾಟಿಕೊಂಡೇ ಮಣಿಕರಣ್‌ಗೆ ಬರಬೇಕು. ಘಟ್ಟವನ್ನು ಹತ್ತಿಳಿಯುವ, ಪಾರ್ವತಿ ಹೊಳೆಯನ್ನು ಸುತ್ತಿಬಳಸುವ ಈ ಅಂಕುಡೊಂಕಿನ ರಸ್ತೆ ಅನೇಕ ಪ್ರಕೃತಿ ಸೊಬಗನ್ನು ಅನಾವರಣಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT