ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಧಾರಣ ವ್ಯಕ್ತಿಯ ರೋಚಕ ಆತ್ಮಕಥನ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಕುಲದೀಪ್ ನಯ್ಯರ್ ಅಸಾಧಾರಣ ವ್ಯಕ್ತಿ: ಲಾಹೋರಿನಲ್ಲಿ ಕಾನೂನು ವ್ಯಾಸಂಗವನ್ನು ಮುಗಿಸಿ, ದೇಶವಿಭಜನೆಯ ಕಾಲದಲ್ಲಿ ತಮ್ಮ ಹುಟ್ಟೂರಾದ ಸಿಯಾಲ್‌ಕೋಟ್ ಬಿಟ್ಟು, ಅಪಾರ ಕಷ್ಟ-ನಷ್ಟಗಳನ್ನು ಅನುಭವಿಸಿ, ಕೇವಲ 120 ರೂಪಾಯಿಗಳೊಡನೆ ಒಬ್ಬಂಟಿಯಾಗಿ ಭಾರತಕ್ಕೆ ಬಂದವರು;

`ಅಂಜಾಮ್' ಎಂಬ ಉರ್ದು ಕಿರುಪತ್ರಿಕೆಯ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿ, ಆನಂತರ ಇಂಗ್ಲಿಷ್ ಪತ್ರಿಕೋದ್ಯಮಿಯಾಗಿ ಖ್ಯಾತಿ ಗಳಿಸಿ, ಅನೇಕ ಪ್ರಧಾನ ಮಂತ್ರಿಗಳಿಗೆ ಅನಧಿಕೃತ ಸಲಹೆಗಾರರಾಗಿ, ಲಂಡನ್ನಿನಲ್ಲಿ ಭಾರತದ ಹೈಕಮೀಷನರ್ ಆಗಿ, ಮಾನವಹಕ್ಕುಗಳ ಹೋರಾಟಗಾರರಾಗಿ, ತಮ್ಮ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಂಡವರು.

ಇವರ ಪ್ರಖ್ಯಾತ ಕೃತಿಗಳೆಂದರೆ ಭಾರತ-ಚೀನಾ ಸಂಘರ್ಷದ ಕಾಲಘಟ್ಟವನ್ನು ಕುರಿತ `ಬಿಟ್ವೀನ್ ದ ಲೈನ್ಸ್' (1969) ಮತ್ತು ತುರ್ತುಪರಿಸ್ಥಿತಿಯನ್ನು ಕುರಿತ `ಜಡ್ಜ್‌ಮೆಂಟ್' (1978). ಇತ್ತೀಚೆಗೆ ಹೊರಬಂದ `ಬಿಯಾಂಡ್ ದ ಲೈನ್ಸ್' (2011) ಎಂಬ ಅವರ ಆತ್ಮಕಥೆಯನ್ನು ತುಂಬಾ ಪರಿಶ್ರಮದಿಂದ, ಪ್ರೀತಿಯಿಂದ ಹಾಗೂ ಸಮರ್ಥವಾಗಿ `ಒಂದು ಜೀವನ ಸಾಲದು' (2012) ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಪತ್ರಕರ್ತೆ ಡಾ. ಆರ್. ಪೂರ್ಣಿಮಾ.      

1940ರಲ್ಲಿ ಪಾಕಿಸ್ತಾನ ನಿರ್ಣಯ ಅಂಗೀಕಾರವಾದ ದಿನದಿಂದ ಪ್ರಾರಂಭವಾಗಿ 2010ರಲ್ಲಿ ಮುಗಿಯುವ ತಮ್ಮ ಕೃತಿಯ ಬಗ್ಗೆ ಮುನ್ನುಡಿಯಲ್ಲಿ ನಯ್ಯರ್ ಹೇಳುತ್ತಾರೆ: `ನನ್ನ ಆತ್ಮಕಥೆಯಲ್ಲಿ ಇತಿಹಾಸದ ಘಟನೆಗಳೇ ಹೆಚ್ಚು ತುಂಬಿಕೊಂಡಿವೆ'. ಆರುನೂರು ಪುಟಗಳ ಇಡೀ ಕೃತಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಘಟನೆಗಳ ಕಾಲಾನುಸಾರಿ ಪಕ್ಷಿನೋಟವಾಗಿದೆ; ಈ ನಿರೂಪಣೆ ಭಾಗಶಃ ನಯ್ಯರ್ ಅವರ ವೈಯಕ್ತಿಕ ಅನುಭವಗಳನ್ನು ಮತ್ತು ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳು ಹಾಗೂ ಅನಾಮಧೇಯರು ನಯ್ಯರ್ ಅವರಿಗೆ ಹೇಳಿದ ಘಟನೆಗಳನ್ನ್ನು ಆಧರಿಸಿದೆ.

ನಯ್ಯರ್ ಅವರೇ ಬರೆದಿರುವ `ಬಿಟ್ವೀನ್ ದ ಲೈನ್ಸ್' ಮತ್ತು `ಜಡ್ಜ್‌ಮೆಂಟ್', ಆಜಾದ್ ಅವರ `ಇಂಡಿಯಾ ವಿನ್ಸ್ ಫಿ್ರೀಡಮ್', ಡೊಮಿನಿಕ್ ಲಾಪಿಯೇರ್ ಅವರ `ಫಿ್ರೀಡಮ್ ಅಟ್ ಮಿಡ್‌ನೈಟ್' ಇವೇ ಮುಂತಾದ ಕೃತಿಗಳನ್ನು ಓದಿರುವವರಿಗೆ ಈ ಕೃತಿಯಲ್ಲಿ ಉದ್ದಕ್ಕೂ ಬರುವ ಘಟನೆಗಳು ಹಾಗೂ ವ್ಯಕ್ತಿಚಿತ್ರಗಳು ತೀರಾ ಹೊಸತಲ್ಲ ಎನಿಸಬಹುದಾದರೂ ನಿರೂಪಣೆಯಲ್ಲಿರುವ ನಾಟಕೀಯತೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕುರಿತ ಕಾಳಜಿ ಓದುಗರನ್ನು ನೇರವಾಗಿ ತಟ್ಟುತ್ತವೆ; ಮತ್ತು ರಾಜೀವ ಗಾಂಧಿ ಹಾಗೂ ಅವರ ನಂತರದ ರಾಜಕೀಯ ಘಟನೆಗಳ ವ್ಯಾಖ್ಯಾನ ಈ ಕೃತಿಯಲ್ಲಿ ಮೊದಲ ಬಾರಿಗೆ ಕಾಣಿಸುತ್ತದೆ.

ನಿರೂಪಣೆಯಲ್ಲಿ ಕೃತಿಯುದ್ದಕ್ಕೂ ಎದ್ದು ಕಾಣುವ ಅಂಶವೆಂದರೆ ನಯ್ಯರ್ ಅವರ ನಿಸ್ಸಂಕೋಚ ಮೂರ್ತಿಭಂಜನ ಕಾರ್ಯ. ನೆಹರು ಅವರಿಂದ ಮನಮೋಹನ ಸಿಂಗ್ ಅವರವರೆಗೆ ಆಗಿಹೋದ ಪ್ರಧಾನ ಮಂತ್ರಿಗಳಲ್ಲಿ ಲೇಖಕರ ಮೆಚ್ಚುಗೆ ಗಳಿಸುವವರು ಲಾಲ್‌ಬಹಾದೂರ್ ಶಾಸ್ತ್ರಿ ಮಾತ್ರ, ಮತ್ತು ರಾಷ್ಟ್ರ ನಾಯಕರಲ್ಲಿ ಜಯಪ್ರಕಾಶ್ ನಾರಾಯಣ್ ಮಾತ್ರ. ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯ್, ಚರಣ ಸಿಂಗ್, ನರಸಿಂಹರಾವ್, ದೇವೇಗೌಡ, ಮನಮೋಹನ ಸಿಂಗ್ -ಇವರೆಲ್ಲರ ಇತಿಮಿತಿಗಳನ್ನೂ ನಯ್ಯರ್ ನಿರ್ದಾಕ್ಷಿಣ್ಯವಾಗಿ ಗುರುತಿಸಿ, ಅವನ್ನು ಬಯಲು ಮಾಡುತ್ತಾರೆ.

ಇವರೆಲ್ಲರಲ್ಲಿಯೂ ನಯ್ಯರ್ ಅವರ ಕಟು ಟೀಕೆಗೆ ಗುರಿಯಾಗುವವರೆಂದರೆ ಎಮರ್ಜೆನ್ಸಿಯನ್ನು ದೇಶದ ಮೇಲೆ ಹೇರಿ, ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಿ, ನಯ್ಯರ್ ಅವರೂ ಸೇರಿದಂತೆ ನೂರಾರು ಜನರನ್ನು ಜೈಲಿಗೆ ತಳ್ಳಿದ ಇಂದಿರಾಗಾಂಧಿಯವರು. `ಜನಸಾಮಾನ್ಯರಿಗೆ ಇಷ್ಟವಾಗುವಂಥದನ್ನೇ ಮಾಡುವುದು ಇಂದಿರಾ ಅವರ ನಿಜವಾದ ಉದ್ದೇಶವಾಗಿತ್ತು. ಇಂಥ ಜನಮರುಳು ಕ್ರಮಗಳನ್ನು ಅವರು ಪೂರ್ಣವಾಗಿ ಬಳಸಿಕೊಂಡರು... ಅವರು ದೇಶವನ್ನು ವಿನಾಶದತ್ತ ತಳ್ಳಿದರು' ಎಂದು ನಯ್ಯರ್ ಇಂದಿರಾ ಬಗ್ಗೆ ನೇರವಾಗಿ ಆರೋಪ ಮಾಡುತ್ತಾರೆ (ಪು. 262, 314).

`ಅಯೋಧ್ಯೆಯ ಬಾಬರಿ ಮಸೀದಿ ವಿನಾಶಕ್ಕೆ ನರಸಿಂಹರಾವ್ ಸರ್ಕಾರವೇ ಕಾರಣ ಎಂದು ಎಲ್ಲಾ ಕಾಲಕ್ಕೂ ಹೇಳಬಹುದು' ಪು. 488); `ದೇವೇಗೌಡ ಪ್ರಧಾನಿಯಾಗಿ ವಿಫಲರಾಗಿದ್ದರು'- ಇತ್ಯಾದಿ ಈ ಕೃತಿಯಲ್ಲಿ ನಯ್ಯರ್ ದಾಖಲಿಸಿರುವ ಅನೇಕ ತೀರ್ಮಾನಗಳು ಚರ್ಚಾಸ್ಪದ ಎಂದಷ್ಟೇ ಹೇಳಬಹುದು. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಕ್ಷೇತ್ರ ಎಷ್ಟು ಅನಿರೀಕ್ಷಿತ ಹಾಗೂ ವಿವಾದಾತ್ಮಕ ತಿರುವುಗಳನ್ನು ಕಂಡಿದೆ ಎಂದರೆ, ಪ್ರಾಯಃ, ಇದಮಿತ್ಥಂ ಎಂದು ಹೇಳುವುದು ಯಾರಿಗೂ ಅಸಾಧ್ಯ.

ಕುಲದೀಪ್ ನಯ್ಯರ್ ಕ್ರಿಯಾಶೀಲ ಪತ್ರಕರ್ತರಷ್ಟೇ ಅಲ್ಲ. ಅವರ ಆತ್ಮಕಥೆಯಲ್ಲಿ ರಾಜಕೀಯ ಆಯಾಮಕ್ಕೆ ಅತಿ ಹೆಚ್ಚು ಒತ್ತು ಬಿದ್ದಿದ್ದರೂ ಅವರ ವ್ಯಕ್ತಿತ್ವಕ್ಕೆ ಇತರ ಗಮನೀಯ ಆಯಾಮಗಳೂ ಇವೆ. ಇವುಗಳಲ್ಲಿ ಒಂದೆಂದರೆ, ನಯ್ಯರ್ ಅವರು ತಮ್ಮ ಬದುಕಿನುದ್ದಕ್ಕೂ ನಡೆಸಿದ, ನಡೆಸುತ್ತಿರುವ ಮಾನವ ಹಕ್ಕುಗಳಿಗಾಗಿ ಹೋರಾಟ. ಈ ಹೋರಾಟದ ಮುಖ್ಯ ಸಾಧನೆಗಳಲ್ಲಿ ಮೊದಲನೆಯದು ವಿಚಾರಣಾಧೀನ ಕೈದಿಗಳಿಗೆ ಕೈಕೋಳ ತೊಡಿಸುವ ಪದ್ಧತಿಯನ್ನು ಕುರಿತದ್ದು.

ಒಮ್ಮೆ, ತೀವ್ರಗಾಮಿ ಉಲ್ಫಾ ಸಂಘಟನೆಯ ಪರವಾಗಿದ್ದ ಪತ್ರಿಕಾ ಸಂಪಾದಕನಿಗೆ ಆಸ್ಪತ್ರೆಯಲ್ಲಿಯೂ ಪೋಲೀಸರು ಕೈಕೋಳ ಹಾಕಿರುತ್ತಾರೆ; ಇದನ್ನು ಕಂಡು ಕೆರಳಿದ ನಯ್ಯರ್ ಈ ಘಟನೆಯನ್ನು ಸುಪ್ರೀಮ್ ಕೋರ್ಟ್‌ನ ಗಮನಕ್ಕೆ ತರುತ್ತಾರೆ. ಕೂಡಲೇ ನ್ಯಾಯಮೂರ್ತಿ ಕುಲದೀಪ್ ಸಿಂಗ್ ಯಾರಿಗೂ ಕೈಕೋಳ ಹಾಕಬಾರದೆಂದು ಆದೇಶವನ್ನು ಹೊರಡಿಸುತ್ತಾರೆ. ಹಾಗಾಗಿ `ಇಂದು ಯಾರಿಗೇ ಆಗಲಿ ಕೈಕೋಳ ಹಾಕುವುದು ಕಾನೂನುಬಾಹಿರ ಮತ್ತು ಅಮಾನವೀಯ ಅನ್ನಿಸಿದೆ' ಎಂದು ನಯ್ಯರ್ ದಾಖಲಿಸುತ್ತಾರೆ (ಪು.436).

ಇಂತಹುದೇ ಮತ್ತೊಂದು ಮಾನವೀಯ ಕಾರ್ಯವನ್ನು 1990ರಲ್ಲಿ ನಯ್ಯರ್ ಬ್ರಿಟನ್‌ನ ಹೈಕಮೀಷನರ್ ಆಗಿದ್ದಾಗ ಮಾಡುತ್ತಾರೆ. ಇವರು ಲಂಡನ್ನಿಗೆ ಹೋದ ಕಾಲಘಟ್ಟದಲ್ಲಿ ಇಂಡಿಯನ್ ಹೈಕಮೀಷನ್ನಿನ ಮುಖ್ಯ ದ್ವಾರ ಸಿಖ್ಖರಿಗೆ ತೆರೆಯಲ್ಪಡುತ್ತಿರಲಿಲ್ಲ; ಪ್ರಾಯಃ, ಲಂಡನ್‌ನಲ್ಲಿ ಸಿಖ್ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬುದು ಅಂದಿನ ಭಾರತ ಸರಕಾರದ ನಂಬಿಕೆಯಾಗಿತ್ತು. ಹೈಕಮೀಷನರ್ ಭೇಟಿಗೆ ಬರುತ್ತಿದ್ದ ಸಿಖ್ಖರನ್ನು ತಪಾಸಣೆಗೊಳಪಡಿಸಿ, ಅನಂತರ ಅವರನ್ನು ಹಿಂಬಾಗಿಲ ಮೂಲಕ ಒಳಗೆ ಬಿಡುತ್ತಿದ್ದರು. ಇದು `ಇಂಡಿಯನ್ ಹೌಸ್‌ನಲ್ಲಿ ನನಗೆ ಆದ ಮೊದಲ ಆಘಾತ' ಎಂದು ನಯ್ಯರ್ ದಾಖಲಿಸುತ್ತಾರೆ ಮತ್ತು ಸಾಕಷ್ಟು ಚಿಂತನೆಯ ನಂತರ ಈ ಪಕ್ಷಪಾತವನ್ನು ತ್ಯಜಿಸಿ, ಸಿಖ್ಖರೂ ಸೇರಿದಂತೆ ಎಲ್ಲರಿಗೂ `ಮುಕ್ತದ್ವಾರ'ದ ಅವಕಾಶವನ್ನು ಕಲ್ಪಿಸುತ್ತಾರೆ.

ಈ ತೀರ್ಮಾನದ ಹಿಂದೆ ಎಂತಹ ಅಸಾಧಾರಣ ನೈತಿಕ ಸ್ಥೈರ್ಯವಿತ್ತೆಂದರೆ ಇದನ್ನು ಭಾರತೀಯ ದೂತಾವಾಸದ ಅಧಿಕಾರಿಗಳೇ ವಿರೋಧಿಸುತ್ತಾರೆ ಮತ್ತು ಸಿಖ್ಖರು ಸಂಶಯದಿಂದ ನೋಡುತ್ತಾರೆ. `ಪ್ರಾರಂಭದಲ್ಲಿ ಸಿಖ್ಖರು ಹಿಂದೇಟು ಹಾಕಿದರೂ ನಿಧಾನವಾಗಿ ಕರಗುತ್ತಾ ಬಂದರು. ತೆರೆದ ಬಾಗಿಲ ನೀತಿ ಕೆಲಸ ಮಾಡಿತು' ಎಂದು ನಯ್ಯರ್ ಹೇಳುತ್ತಾರೆ (ಪು. 466). 
ನಯ್ಯರ್ ಅವರ ಬದುಕಿನ ಮತ್ತೊಂದು ಮುಖ್ಯ ಆಯಾಮವೆಂದರೆ ದಶಕಗಳ ಕಾಲ ಅವರು ಇಂಡಿಯಾ-ಪಾಕ್ ಸಂಬಂಧದ ಸುಧಾರಣೆಗಾಗಿ ನಡೆಸಿದ ಯತ್ನ.

ನಯ್ಯರ್ ಪಾಕಿಸ್ತಾನಕ್ಕೆ ಅನೇಕ ಬಾರಿ ಹೋಗಿ ಬಂದಿದ್ದಾರೆ ಮತ್ತು ಪಾಕ್ ಹಾಗೂ ಭಾರತೀಯ ಪ್ರಜೆಗಳ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಇರುವ ಸಂಶಯ-ಪೂರ್ವಗ್ರಹಗಳನ್ನು ದೂರ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ಅಚಲ ವಿಶ್ವಾಸವೆಂದರೆ `ಭಯ ಮತ್ತು ಅವಿಶ್ವಾಸದ ಬೃಹತ್ ಗೋಡೆಗಳು ಒಂದು ದಿನ ಕುಸಿದು ಬಿದ್ದು, ಎರಡೂ ದೇಶಗಳು ತಮ್ಮ ವ್ಯಕ್ತಿತ್ವಗಳನ್ನು ಕಳೆದುಕೊಳ್ಳದೆ, ಉಭಯತ್ರರ ಒಳಿತಿಗೆ ಕೆಲಸ ಮಾಡುವಂತೆ ಆಗುತ್ತದೆ'(ಪು. 569).

ಹಾಗೆಯೇ, ಆನುಶಂಗಿಕವಾಗಿ ಕೃತಿಯಲ್ಲಿ ಬರುವ ಪ್ರಸಿದ್ಧ ವ್ಯಕ್ತಿಗಳ ಕಿರುಚಿತ್ರಗಳು ಮನೋಜ್ಞವಾಗಿವೆ: ಮುಂದೊಂದು ದಿನ ಪಾಕಿಸ್ತಾನ `ಕೆಂಪು ಇಸ್ಲಾಮಿಕ್ ದೇಶವಾಗುತ್ತದೆ' ಎಂದು ನಂಬಿದ್ದ ಪ್ರಸಿದ್ಧ ಉರ್ದು ಕವಿ ಫೈಜ್ ಅಹಮದ್ ಫೈಜ್; `ಅದೇನು ಬಿಡಿ. ರೆಕಾರ್ಡ್‌ಗಳಿಗೂ ಪಾಪಗಳಿಗೂ ಲೆಕ್ಕವಿಲ್ಲ! ಮೊದಲಿನದಕ್ಕೆ ನಿಮ್ಮ ಕ್ಷಮೆಯಿರುತ್ತದೆ; ಎರಡನೆಯದಕ್ಕೆ ಅಲ್ಲಾನ ಕ್ಷಮೆ ಇರುತ್ತದೆ' ಎಂದು ಉತ್ತರಿಸಿದ ಪ್ರಸಿದ್ಧ ಗಾಯಕಿ-ನಟಿ ನೂರ್‌ಜಹಾನ್; ಭಾರತದಲ್ಲಿ ರಾಜಕಾರಣಿಗಳು ತುಂಬಾ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ನಯ್ಯರ್ ವಿಷಾದಿಸಿದುದಕ್ಕೆ, `ಬ್ರಿಟನ್‌ನಲ್ಲಿ ಇನ್ನೂ ಭಯಂಕರ. ಅವರು ನಿಮ್ಮನ್ನು ಒದ್ದು ನೆಲಕ್ಕೆ ಕೆಡವುತ್ತಾರೆ. ನೆಲಕ್ಕೆ ಬಿದ್ದರೂ ನಿಮ್ಮನ್ನು ಹೊಡೆಯುವುದನ್ನು ಬಿಡುವುದಿಲ್ಲ' ಎಂದು ಪ್ರತಿಕ್ರಿಯಿಸಿದ ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್; ಇತ್ಯಾದಿ ಅನೇಕ ವಿಶಿಷ್ಟ ವ್ಯಕ್ತಿಗಳ ಪಾರ್ಶ್ವನೋಟಗಳನ್ನು ಈ ಕೃತಿ ನಮಗೆ ಕೊಡುತ್ತದೆ.

ಕೊನೆಗೆ, ಖೇದದಿಂದ ಹೇಳಬೇಕಾದ ಮಾತೆಂದರೆ, ಕುಲದೀಪ್ ನಯ್ಯರ್ ಭಾರತದ ಅತಿ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು; ಅಂತಹವರ ಆತ್ಮಕಥೆಗೆ `ನೆಹರು ಅವರು ಲೇಡಿ ಮೌಂಟ್‌ಬ್ಯಾಟನ್ ಅವರಿಗೆ ಬರೆದ ಪತ್ರಗಳನ್ನು ನಿತ್ಯ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ಗೆ ಕಳುಹಿಸಲಾಗುತ್ತಿತ್ತು'; ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ಸತ್ತಾಗ, ಇಂದಿರಾ ಗಾಂಧಿ ಆ ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದ ಕಾರಣ `ಸಂಜಯ್ ಅವರ ಸ್ವಿಸ್ ಬ್ಯಾಂಕ್ ಖಾತೆಯ ನಂಬರ್ ಇರಬಹುದೆ?'(ಪು. 383) ಎಂದು ಊಹಿಸುವುದು; ಇತ್ಯಾದಿ `ಗಾಸಿಪ್' ಸ್ವರೂಪದ ಕೆಲವು ಹೇಳಿಕೆಗಳು ಬೇಕಿರಲಿಲ್ಲ; ಅವಿಲ್ಲದೆಯೂ ಈ ಕೃತಿ ಓದುಗರ ಹೃದಯವನ್ನು ತಟ್ಟುತ್ತದೆ; ಅವರ ಅರಿವನ್ನು ವಿಸ್ತರಿಸುತ್ತದೆ; ಮಾನವೀಯ ಮೌಲ್ಯಗಳಿಗಾಗಿ ಮಿಡಿಯುವಂತೆ ಪ್ರಭಾವಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT