ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಹೋರಾಟ

ಕೆ.ಜಿ.ಎಫ್. ವಿಧಾನ ಸಭಾ ಕ್ಷೇತ್ರ
Last Updated 2 ಏಪ್ರಿಲ್ 2013, 4:13 IST
ಅಕ್ಷರ ಗಾತ್ರ

ಕೋಲಾರ: ಹಲವು ತಲೆಮಾರುಗಳಿಂದ ತಮಿಳುಗನ್ನಡ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿಯನ್ನೇ ಹಾಸಿ ಹೊದ್ದಿರುವ ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್, ಜನತಾ ಪರಿವಾರ ಮತ್ತು ಬಿಜೆಪಿಗೆ ಅಧಿಕಾರದ ಅವಕಾಶ ದೊರಕಿದ್ದು ಬಹಳ ಕಡಿಮೆ.

2008ರಲ್ಲಿ ಬಿಜೆಪಿಗೆ ಒಮ್ಮೆ ಅವಕಾಶ ದೊರಕಿದ್ದು ಬಿಟ್ಟರೆ, 1983ರಿಂದ ಇಲ್ಲಿವರೆಗೆ ನಡೆದಿರುವ 7 ಚುನಾವಣೆಗಳಲ್ಲಿ ತಮಿಳುನಾಡು ಪಕ್ಷಗಳು ನಾಲ್ಕು ಬಾರಿ, ಆರ್‌ಪಿಐ ಮತ್ತು ಬಿಆರ್‌ಪಿ ಎರಡು ಬಾರಿ, ಸಿಪಿಎಂ ಒಂದು ಬಾರಿ ಪ್ರಾಬಲ್ಯ ಸಾಧಿಸಿವೆ. ಕಾರ್ಮಿಕ ಹೋರಾಟದ ನೆಲವೂ ಆಗಿರುವ ಕೆಜಿಎಫ್‌ನಲ್ಲಿ ಸಿಪಿಎಂ ಒಮ್ಮೆ ಅವಕಾಶವನ್ನು ಪಡೆದಿರುವುದು ವಿಶೇಷ.

ಇಷ್ಟೂ ಅವಧಿಯಲ್ಲಿ ಕಾಂಗ್ರೆಸ್‌ಗೆ ಒಮ್ಮೆ ಮಾತ್ರ ಅವಕಾಶ ದೊರೆತಿದೆ. ಜನತಾ ಪರಿವಾರಕ್ಕೆ ಇಲ್ಲಿನ ಮತದಾರರು ಆಯ್ಕೆಯಾಗುವ ಅವಕಾಶ ನೀಡಿಲ್ಲ. ಈ ಹೀಗಾಗಿ ಎರಡೂ ಪಕ್ಷಗಳಿಗೆ ಇಲ್ಲಿ ಅಸ್ತಿತ್ವ ಸ್ಥಾಪನೆ ಎಂಬುದು ದೊಡ್ಡ ಸವಾಲಾಗಿಯೇ ಉಳಿದಿದೆ. ಎಡಿಎಂಕೆ, ಎಡಿಕೆಯಿಂದ ಸ್ಪರ್ಧಿಸಿ ಶಾಸಕರಾಗಿ, ಜೆಡಿಎಸ್ ಸೇರಿರುವ ಎಂ.ಭಕ್ತವತ್ಸಲಂ ಅವರ ಕಾರಣಕ್ಕೆ ಕೆಜಿಎಫ್ ನಗರದಲ್ಲಿ ಮಾತ್ರ ಜೆಡಿಎಸ್‌ಗೆ ಕೊಂಚ ಬಲವಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.

1983ರಲ್ಲಿ ಮೊದಲ ಬಾರಿಗೆ ಎಡಿಎಂಕೆಯಿಂದ ಸ್ಪರ್ಧಿಸಿ ಗೆದ್ದ ಎಂ.ಭಕ್ತವತ್ಸಲಂ ಪರ ಪ್ರಚಾರಕ್ಕೆ ತಮಿಳುನಾಡಿನ ಕರುಣಾನಿಧಿ ಕೂಡ ಕೆಜಿಎಫ್‌ಗೆ ಭೇಟಿ ನೀಡಿದ್ದನ್ನು ಇಲ್ಲಿನ ಮತದಾರರು ಈಗಲೂ ಸ್ಮರಿಸುತ್ತಾರೆ.

ಆಗ 1380 ಮತಗಳಿಂದ ಸೋತಿದ್ದ ಸಿಪಿಎಂ ಅಭ್ಯರ್ಥಿ ಟಿ.ಎಸ್.ಮಣಿ 1985ರಲ್ಲಿ ನಡೆದ ಚುನಾವಣೆಯಲ್ಲಿ ಭಕ್ತವತ್ಸಲಂ ಅವರನ್ನು 15,780ರಷ್ಟು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಆಯ್ಕೆಯಾಗಿದ್ದೂ ಕೂಡ ಕ್ಷೇತ್ರ ಚುನಾವಣೆಯ ಇತಿಹಾಸದಲ್ಲಿ ಅಚ್ಚರಿಯ ಘಟನೆಯಾಗಿಯೇ ಉಳಿದಿದೆ. ಆದರೆ 1989ರ ಚುನಾವಣೆಯಲ್ಲಿ ಮಣಿಯವರು ನಿರೀಕ್ಷೆ ಮೀರಿ 20,736 ಮತಗಳ ಭಾರೀ ಅಂತರದಲ್ಲಿ ಭಕ್ತವತ್ಸಲಂ ಅವರ ವಿರುದ್ಧವೇ ಸೋಲನುಭವಿಸುವ ಸನ್ನಿವೇಶವೂ ಸೃಷ್ಟಿಯಾಗಿತ್ತು. ನಂತರ ಈ ಕ್ಷೇತ್ರದಲ್ಲಿ ಸಿಪಿಎಂಗೆ ಗೆಲ್ಲುವ ಅವಕಾಶ ದೊರಕಲೇ ಇಲ್ಲ.

1994ರಲ್ಲಿ ಮತದಾರರು ಮತ್ತೆ ಎಡಿಎಂಕೆಯಿಂದ ಸ್ಪರ್ಧಿಸಿದ್ದ ಭಕ್ತವತ್ಸಲಂ ಅವರಿಗೆ ಅವಕಾಶ ನೀಡದೆ, ಅಂದಿನ `ಹೊಸ ಮುಖ' ಬಿಆರ್‌ಪಿಯಿಂದ ಸ್ಪರ್ಧಿಸಿದ್ದ ಎಸ್.ರಾಜೇಂದ್ರನ್ ಅವರನ್ನು ಆಯ್ಕೆ ಮಾಡಿದ್ದರು. ನಂತರದ ಮೂರು ಚುನಾವಣೆಗಳಲ್ಲೂ ಈ ಇಬ್ಬರ ಮುಖಾಮುಖಿ ತೀವ್ರಗತಿಯಲ್ಲಿ ನಡೆದಿರುವುದು ವಿಶೇಷ.

1999ರಲ್ಲಿ ನಡೆದ ಚುನಾವಣೆಯಲ್ಲಿ ಭಕ್ತವತ್ಸಲಂ ಅವರ ವಿರುದ್ಧ ಸೋತರೂ ತೀವ್ರ ಪೈಪೋಟಿ ನೀಡಿದ್ದ ಡಾ.ಕೆ.ದಿನಕರನ್ ಬಿಜೆಪಿಗೆ ಕ್ಷೇತ್ರದಲ್ಲಿ ಬಲ ತರುವಲ್ಲಿ ಯಶಸ್ವಿಯಾದವರು. 2004ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಮತ್ತೆ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇಡೀ ಕ್ಷೇತ್ರದ ಇತಿಹಾಸದಲ್ಲಿ 2008ರ ಚುನಾವಣೆಯು ಬಿಜೆಪಿಗೆ ಖಾತೆ ತೆರೆಯುವ ಅವಕಾಶ ನೀಡುವ ಮೂಲಕ ಹೊಸ ಪರ್ವಕಾಲವೊಂದರ ಆಗಮನಕ್ಕೆ ದಾರಿ ಮಾಡಿದೆ. ಬಿಜೆಪಿಗೆ ಅಧಿಕಾರ ನೀಡದೆ ವಿಧಾನಸಭೆಯನ್ನು ವಿಸರ್ಜಿಸಿದ ಎಚ್.ಡಿ.ಕುಮಾರಸ್ವಾಮಿಯವರ ನಿರ್ಧಾರದ ಪರಿಣಾಮವಾಗಿ ಸೃಷ್ಟಿಯಾಗಿದ್ದ ಬಿಜೆಪಿ ಪರವಾದ ಅನುಕಂಪದ ಅಲೆಯ ಮೇಲೆ ವೈ.ಸಂಪಂಗಿ ಶಾಸಕರಾಗಿ ಆಯ್ಕೆಯಾಗಿದ್ದರು.

ತಮಿಳುನಾಡು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದ ಭಕ್ತವತ್ಸಲಂ ಜೆಡಿಎಸ್‌ಗೆ ಸೇರಿದರೂ 2008ರಲ್ಲಿ ಮೂರನೇ ಸ್ಥಾನಕ್ಕೆ ಇಳಿದರೆ, ರಾಜೇಂದ್ರನ್ 2ನೇ ಸ್ಥಾನಕ್ಕೆ ತೃಪ್ತಿಪಡುವ ಸನ್ನಿವೇಶ ನಿರ್ಮಾಣವಾಗಿತ್ತು.

ಈಗಿನ ಸ್ಥಿತಿ: 1989ರ ಚುನಾವಣೆಯಲ್ಲಿ 20,736 ಮತಗಳ ಭಾರೀ ಅಂತರದಲ್ಲಿ ಗೆದ್ದಿದ್ದ ಭಕ್ತವತ್ಸಲಂ ಅವರಿಗೇ ಈ ಬಾರಿಯ ಜೆಡಿಎಸ್ ಟಿಕೆಟ್ ಎನ್ನಲಾಗಿದೆ. 1967ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಜಗೋಪಾಲ್ ಅವರು ಈ ಕ್ಷೇತ್ರದ ಕೊನೆಯ ಕಾಂಗ್ರೆಸ್ ಶಾಸಕರಾಗಿದ್ದವರು.

ಆನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಅಲ್ಲಿ ಕಾಂಗ್ರೆಸ್ ಅನ್ನು ಪ್ರತಿಷ್ಠಾಪಿಸುವ ಸಲುವಾಗಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಮಗಳು ರೂಪಕಲಾ ಅವರಿಗೇ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ಹಲವು ಪ್ರಭಾವಿ ಮುಖಂಡರೂ ದೆಹಲಿ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಸಂಪಂಗಿಯವರ ಲಂಚ ಪ್ರಕರಣದಿಂದ ಸಾಕಷ್ಟು ಮುಜುಗರಗಳನ್ನು ಕ್ಷೇತ್ರದಲ್ಲಿ ಅನುಭವಿಸಿರುವ ಬಿಜೆಪಿಯಲ್ಲಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಬಗೆಗಿನ ಭಿನ್ನಾಭಿಪ್ರಾಯಗಳೂ ಹೆಚ್ಚಾಗುತ್ತಲೇ ಇವೆ. ಸಂಪಂಗಿಯವರಿಗೇ ಟಿಕೆಟ್ ನೀಡಬೇಕು ಮತ್ತು ಅವರಿಗೆ ಟಿಕೆಟ್ ನೀಡಬಾರದು ಎನ್ನುವ ಬಣಗಳ ನಡುವೆ ಬಿಜೆಪಿ ಇದ್ದರೆ, ಈ ಬಾರಿಯಾದರೂ ಅಸ್ತಿತ್ವ ಸ್ಥಾಪನೆಯಾಗಲೇಬೇಕು ಎಂಬ `ಹೋರಾಟ'ದ ಪ್ರಯತ್ನದಲ್ಲಿ ಕಾಂಗ್ರೆಸ್, ಜೆಡಿಎಸ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT