ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಮೂಲೋತ್ಪಾಟನೆ ಮಾಡಿ

Last Updated 4 ಜನವರಿ 2012, 5:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು:ಯಾವುದೇ ದೇವಸ್ಥಾನಗಳಲ್ಲಿ ಯಾವುದೇ ಜಾತಿಗೆ ಪ್ರವೇಶ  ನಿರಾಕರಿಸಿದರೆ ತಾವೇ ಮುಂದೆ ನಿಂತು ಪ್ರವೇಶ ಅವಕಾಶ ಕಲ್ಪಿಸುವುದಾಗಿ ಉಡುಪಿ ಪೇಜಾವರ ಮಠಾಧೀಶ  ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸದ್ಭಾವನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅಪಮಾನ. ಎಲ್ಲ ಜಾತಿ ಮತ್ತು ಮತಗಳಲ್ಲಿ ಸಾಮರಸ್ಯ ಇರಬೇಕು. ಇದಕ್ಕೆ ಮೊದಲು ಎಲ್ಲ ಮತ, ಜಾತಿಯ ಮಠಾಧಿಪತಿಗಳು ಒಂದಾಗಬೇಕು. ಆಗ ಭಕ್ತರು ಒಂದುಗೂಡುತ್ತಾರೆ ಎಂದರು.

ಮಠಾಧಿಪತಿಗಳು ಬಿಂಬವಿದ್ದಂತೆ. ಭಕ್ತರು ಪ್ರತಿಬಿಂಬ. ಬಿಂಬ ಒಂದಾದರೆ ಪ್ರತಿಬಿಂಬವೂ ಒಟ್ಟಾಗುತ್ತದೆ. ಹರಿಹರರಿಬ್ಬರೂ ಸೇರಿ ಒಂದು ಶರೀರವಾಗಿ ರಾಕ್ಷಸ ಸಂಹಾರ ಮಾಡಿದಂತೆ ಮಠಗಳೆಲ್ಲವೂ ಒಗ್ಗೂಟಿ ಅಸ್ಪೃಶ್ಯತೆ ಮೂಲೋತ್ಪಾಟನೆ ಮಾಡಬೇಕು. ಅಸ್ಪೃಶ್ಯತೆ ನಿರ್ಮೂಲನೆ ಮಾಡುವ ಮೂಲಕ ಹಿಂದೂ ಧರ್ಮ ಮತ್ತು ರಾಷ್ಟ್ರವನ್ನು ಬಲಿಷ್ಠವಾಗಿ ಕಟ್ಟಬೇಕು. ಸಮಾಜ ಒಗ್ಗೂಡುವುದು ಮಠಾಧೀಶರು ಒಂದುಗೂಡಿದಾಗ ಮಾತ್ರ. ಸಮಾಜದಲ್ಲಿರುವವರೆಲ್ಲ ಭಿನ್ನಮತ, ಭಿನ್ನ ಸಂಪ್ರದಾಯಕ್ಕೆ ಸೇರಿದ್ದರೂ ಒಂದೇ ತಾಯಿಯ ಮಕ್ಕಳೆನ್ನುವುದನ್ನು ಮರೆಯಬಾರದು ಎಂದರು.

ಧಾರ್ಮಿಕ ಸಮಾರಂಭಗಳು ಸಮಾಜ ಒಟ್ಟು ಗೂಡಿಸಲು ಸಹಕಾರಿಯಾಗುತ್ತವೆ ಎಂದು ಬಂಜಾರ ಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಹೇಳಿದರು.ಜಯಬಸವನಾಂದ ಸ್ವಾಮೀಜಿ, ಶಾಸಕರು ಪಂಚ ಮಠಾಧೀಶರನ್ನು ಒಟ್ಟಾಗಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಆದಿಜಾಂಭವ ಮಾರ್ಕಾಂಡ ಮುನಿ ಸ್ವಾಮೀಜಿ, ದೇವಾಲಯಗಳಿಗೆ ಪ್ರವೇಶ ನೀಡದ ಪ್ರಕರಣಗಳಿವೆ. ಅಜ್ಞಾನ, ಅಂಧಕಾರದಿಂದ ಕೂಡಿದ ಮಡೆಸ್ನಾನದಂತಹ ಆಚರಣೆಗಳು ಈಗಲೂ ನಡೆಯುತ್ತಿವೆ. ಇಂತಹ ಮೌಢ್ಯ ಆಚರಣೆಗಳ ನಿರ್ಮೂಲನೆಗೆ ಪೇಜಾವರ ಸ್ವಾಮೀಜಿ ನೇತೃತ್ವ ವಹಿಸಬೇಕು ಎಂದು ಮನವಿ ಮಾಡಿದರು.

ಹಿಂದೆ ಸಮಾಜಕ್ಕೆ ಗುರುವಿದ್ದರು. ಮುಂದೆ ಗುರಿ ಇರುತ್ತಿರುತ್ತಿತ್ತು. ಆದರೆ ಇಂದು ಇವೆರಡು ಇಲ್ಲವಾ ಗುತ್ತಿದೆ ಎಂದು ಎಳನಾಡು ಮಹಾಸಂಸ್ಥಾನದ ಜ್ಞಾನ ಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ವಿಷಾದಿಸಿದರು.

ಮಡೆಸ್ನಾನ ನಿಷೇಧಿಸಿದರೆ ವಿರೋಧಿಸುವುದಿಲ್ಲ:  ಸರ್ಕಾರ ಮಡೆಸ್ನಾನ ನಿಷೇಧಿಸಿದರೆ ಅದನ್ನು ವಿರೋಧಿಸುವುದಿಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸದ್ಭಾವನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಮಂಗಳವಾರ ಆಗಮಿಸಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಡೆಸ್ನಾನ ದಿಂದ ನಿವಾರಣೆಯಾಗುವ ದೋಷಗಳು ಅದಕ್ಕಿಂತ ಇನ್ನೂ ಉತ್ತಮ ಮಾರ್ಗಗಳಿಂದ ಪರಿಹಾರ ವಾಗುತ್ತವೆ. ಅದನ್ನು ಸಮಾಜಕ್ಕೆ ತಿಳಿಸುತ್ತೇನೆ ಬೆಂಗ ಳೂರಿನಲ್ಲಿ ಜ.8 ರಂದು ನೀಡುಮಾಮಿಡಿ ಮಠದ ಚನ್ನಮಲ್ಲಸ್ವಾಮೀಜಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ನಡೆಯು ತ್ತಿರುವ ಬಗ್ಗೆ ಸ್ವಾಮೀಜಿ ಗಮನ ಸೆಳೆದಾಗ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಕ್ರಮಗಳ ಅನಾವರಣ ಏಪ್ರಿಲ್‌ನಲ್ಲಿ ಆಗಲಿದೆ. ನಕ್ಸಲರು ಶರಣಾಗಲು ಮಾತುಕತೆಗೆ ಮುಂದಾದರೆ ಸರ್ಕಾರ ಮತ್ತು ಅವರ ನಡುವೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧನಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT