ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣೆ ಅಗತ್ಯ

Last Updated 1 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಬಾಗಲಕೋಟೆ: ಈಗಿರುವ ಚುನಾವಣಾ ವ್ಯವಸ್ಥೆಯಿಂದ ಅಸ್ಪೃಶ್ಯರಿಗೆ ಅನ್ಯಾಯವಾಗುತ್ತಿದ್ದು, ಅಸ್ಪೃಶ್ಯರ ರಾಜಕೀಯ ಹಿತದೃಷ್ಟಿಯಿಂದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಜಾರಿಯಾಗುವ ಅಗತ್ಯವಿದೆ ಎಂದು ಪ್ರಸಿದ್ಧ ನೇತ್ರ ತಜ್ಞ ಡಾ. ಎಚ್.ಆರ್. ಸುರೇಂದ್ರ ಅಭಿಪ್ರಾಯಪಟ್ಟರು.

ನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕಾರಿಗಳು ಮತ್ತು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಮಟ್ಟದ 3ನೇ ಮಹಾ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.

ನಿಮ್ನ ವರ್ಗಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಾದರೆ, 1932ರಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದಂತೆ ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣೆ ಅಗತ್ಯವಿದೆ, ಅಲ್ಲಿಯವರೆಗೆ ಜಂಟಿ ಚುನಾವಣಾ ವ್ಯವಸ್ಥೆ ಬೇಡ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ಅತ್ಯಂತ ಬಲಿಷ್ಠವಾಗಿದೆ. ಅಂಬೇಡ್ಕರ್ ಅಂದು ಅಭಿಪ್ರಾಯಿಸಿದಂತೆ ಇಂದಿಗೂ ನಮ್ಮ ಸಮಾಜದ ಮಂತ್ರಿಗಳು ಸಮಾಜದ ಏಳಿಗೆಗೆ ಶ್ರಮಿಸುತ್ತಿಲ್ಲ, ಸಮಾಜದ ರಕ್ತ ಹೀರುವ ಜಿಗಳೆಯಾಗಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಸಮಾಜದಲ್ಲಿರುವ ನಿಜವಾದ ಆರು ಅಸ್ಪೃಶ್ಯ ಸಮುದಾಯಗಳನ್ನು ಗುರುತಿಸಿ ಮೀಸಲಾತಿ ಕಲ್ಪಿಸಿದ್ದರು. ಆದರೆ, ಬಳಿಕ ಬಂದ ಸರ್ಕಾರಗಳು ಮತ್ತು ಮುಖಂಡರು ಮೀಸಲಾತಿಯನ್ನು 101 ಜಾತಿಗಳಿಗೆ ವಿಸ್ತರಿಸಿ, ನೈಜ ಉದ್ದೇಶ ಹಾಳಾಗುವಂತೆ ಮಾಡಿದರು ಎಂದರು.

ಮೀಸಲಾತಿ ಸಂಬಂಧ ಇರುವ ಹಾವನೂರ ವರದಿಯನ್ನು ತಿರಸ್ಕರಿಸದಿದ್ದರೇ ಅಸ್ಪೃಶ್ಯ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದ ಅವರು, ಒಳ ಮೀಸಲಾತಿ ಸಂಬಂಧ ಇರುವ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಈಗಾಗಲೇ ನೀಡಲಾಗಿರುವ ರಸ್ತೆ ತೆರಿಗೆ ವಿನಾಯಿತಿಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ನೀಡುವ ಸಂಬಂಧ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗುತ್ತಿರುವ ಮೀಸಲಾತಿ ದುರುಪಯೋಗವಾಗದಂತೆ ಎಚ್ಚರವಹಿಸುವ ಅಗತ್ಯವಿದೆ. ಅಂಬೇಡ್ಕರ್ ಆಶಯದಂತೆ ದಲಿತರು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ,  ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಮೂರ್ತಿ, ಕಾರ್ಯಾಧ್ಯಕ್ಷ ವಿಜಯ್ ಎಂ.ನೀರಗಟ್ಟಿ, ನರಸಿಂಹ ಮೂರ್ತಿ, ಎಸ್.ರಾಜೇಂದ್ರನ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT