ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಮಾಜಿ ಡಿಜಿಪಿ ಬರುವಾ ಆತ್ಮಹತ್ಯೆ

ಶಾರದಾ ಚಿಟ್‌ಫಂಡ್‌ ಪ್ರಕರಣ
Last Updated 17 ಸೆಪ್ಟೆಂಬರ್ 2014, 19:48 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಅಸ್ಸಾಂನ ಮಾಜಿ ಪೊಲೀಸ್‌ ಮಹಾ­ನಿರ್ದೇಶಕ ಶಂಕರ್‌ ಬರುವಾ ಬುಧವಾರ ಗುಂಡು ಹಾರಿಸಿ­ಕೊಂಡು ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾರೆ. ಶಾರದಾ ಚಿಟ್‌ ಫಂಡ್‌ನ ಬಹುಕೋಟಿ ಹಗರಣಕ್ಕೆ ಸಂಬಂಧ­ಪಟ್ಟಂತೆ ಕಳೆದ ತಿಂಗಳು ಅವರ ನಿವಾಸ­ದಲ್ಲಿ ಸಿಬಿಐ ಶೋಧ ನಡೆಸಿತ್ತು.

‘ಇಲ್ಲಿನ ತಮ್ಮ ನಿವಾಸದ ತಾರಸಿ­ಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ­ಕೊಂಡ ಬರುವಾ ಅವರನ್ನು ಕುಟುಂಬದ ಸದಸ್ಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಅವರು ಕೊನೆಯು­ಸಿರೆಳೆದರು. ತನಿಖೆ ಆರಂಭಗೊಂಡಿದೆ. ನಂತರವಷ್ಟೇ ಘಟ­ನೆಯ ಬಗ್ಗೆ ವಿವರ ನೀಡಲು ಸಾಧ್ಯ’ ಎಂದು ಗುವಾಹಟಿಯ ಹಿರಿಯ ಪೊಲೀಸ್‌ ಅಧೀಕ್ಷಕ ಎ.ಪಿ. ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶಾರದಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಖಿನ್ನತೆ­ಗೊಳ­ಗಾ­ಗಿ­ದ್ದರು. ಕಳೆದ ವಾರ ಎದೆನೋವು ಕಾಣಿಸಿ­ಕೊಂಡು ಸ್ಥಳೀಯ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬುಧ­ವಾರ ಬೆಳಿಗ್ಗೆಯಷ್ಟೇ ಮನೆಗೆ ಕರೆತರ­ಲಾಗಿತ್ತು ಎಂದು ಬರುವಾ ಕುಟುಂಬದ ಮೂಲಗಳು ತಿಳಿಸಿವೆ.

‘ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಅರ್ಧ ಗಂಟೆಯಲ್ಲಿ ಅವರು ಮನೆಯ ತಾರಸಿಗೆ ತೆರಳಿ ಪಿಸ್ತೂಲ್‌­ನಿಂದ ಗುಂಡು ಹಾರಿಸಿ­ಕೊಂಡರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಶಾರದಾ ಚಿಟ್‌ ಫಂಡ್‌ ಹಗರಣ­ದಲ್ಲಿ ಬರುವಾ ಅವರು ಶಾಮೀಲಾಗಿ­ರುವ ಬಗ್ಗೆ ಸುದ್ದಿವಾಹಿನಿಗಳಲ್ಲಿ ನಿರಂತರ­ವಾಗಿ ಪ್ರಸಾರವಾಗುತ್ತಿದ್ದ ವರದಿ­ಗಳಿಂದ ಅವರು ಬೇಸರಗೊಂಡಿ­ದ್ದರು ಎಂದು ಅವರು ಹೇಳಿದ್ದಾರೆ.

ಆದರೆ, ಶಾರದಾ ಹಗರಣಕ್ಕೆ ಸಂಬಂ­ಧಿಸಿ ಬರುವಾ ಅವರನ್ನು ವಿಚಾರಣೆ­ಗೊಳ­ಪಡಿಸಿಲ್ಲ. ಅವರ ಬಂಧನಕ್ಕೆ ಸಮನ್ಸ್‌ ಕೂಡಾ ಜಾರಿಯಾಗಿಲ್ಲ ಎಂದು ಸಿಬಿಐನ ವಕ್ತಾರರು ಹೇಳಿದ್ದಾರೆ.

ಶಾರದಾ ಚಿಟ್‌ ಫಂಡ್‌ ವ್ಯವಹಾರ­ದಲ್ಲಿ ವಂಚನೆ ಮಾಡಿದ್ದ ಅದೇ ಸಂಸ್ಥೆಯ ಸಿಬ್ಬಂದಿಯೋರ್ವನಿಗೆ ಬರುವಾ ರಕ್ಷಣೆ ನೀಡಿದ್ದರು ಎಂಬ ಆರೋಪ ಇತ್ತು.

ಹಗರಣದ ಸಂಬಂಧ ಆಗಸ್ಟ್‌ 28ರಂದು ಅಸ್ಸಾಂನ ಇಬ್ಬರು ಮಾಜಿ ಸಚಿವರ ನಿವಾಸಗಳೂ ಸೇರಿದಂತೆ 12 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT