ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಹಂಕಾರ ಹೆಚ್ಚಿದರೆ ಸಂಬಂಧ ನಾಶ'

Last Updated 7 ಸೆಪ್ಟೆಂಬರ್ 2013, 6:07 IST
ಅಕ್ಷರ ಗಾತ್ರ

ಕಡೂರು: `ಪರಸ್ಪರ ಸಂತಸ ಹಂಚಿಕೊಂಡು ಬದುಕು ನಡೆಸಬೇಕಾದ ಮನುಷ್ಯರಲ್ಲಿ ಅಹಂಕಾರ ಹೆಚ್ಚಿದರೆ ಸಂಬಂಧಗಳು ನಶಿಸುತ್ತವೆ' ಎಂದು ಶಿವಮೊಗ್ಗ ಕಸ್ತೂರಬಾ ಕಾಲೇಜು ಉಪನ್ಯಾಸಕ ಜಿ.ಎಸ್.ನಟೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆ, ಪ್ರಥಮದರ್ಜೆ ಕಾಲೇಜು ಮತ್ತು ಐಕ್ಯುಎಸಿ ಸಹಭಾಗಿತ್ವದ 2013-14ನೇ ಸಾಲಿನ ಕಾಲೇಜು ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವೇದಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ತನಗಾಗಿ ಬದುಕುವುದನ್ನು ಬಿಟ್ಟು ಜಗತ್ತಿಗೆ ತನ್ನನ್ನು ಅರ್ಪಿಸಿಕೊಳ್ಳುವ ಮತ್ತು ಭಾವದಲ್ಲಿ ಒಳ್ಳೆಯದನ್ನೇ ಪ್ರತಿಬಿಂಬಿಸುವುದೇ ಸಂಸ್ಕೃತಿ, ಜಗತ್ತಿಗೆ ಒಳ್ಳೆಯದನ್ನು ಕೊಡಬಯಸುವವರೇ ಸಾಂಸ್ಕೃತಿಕ ಶ್ರೀಮಂತರು. ಜಗತ್ತಿಗೆ ಒಳ್ಳೆಯದನ್ನು ನೀಡಿ ಜಗತ್ತಿನ ಸಂತಸ ನಮ್ಮದಾಗಿಸಿಕೊಂಡರೆ ಬದುಕು ಸಾರ್ಥಕ, ಬದುಕನ್ನು ಸಮಾಜಕ್ಕೆ ಅರ್ಪಿಸಿದ ಹಲವು ಮಹಾನುಭಾವರು ಕಾಲಾನಂತರದಲ್ಲೂ ಬದುಕಿರುವುದೇ ಈ ಕಾರಣಕ್ಕೆ ಎಂದು ಅವರು ನುಡಿದರು.

`ನಮ್ಮ ಬದುಕಿನಲ್ಲಿ ಒಳ್ಳೆಯದನ್ನು ಯಾರಾದರೂ ಹೇಳಿದರೆ ಅದನ್ನು ಕೇಳುವ ಮತ್ತು ಅದನ್ನು ಮನನ ಮಾಡುವ ಬಳಿಕ ಬದುಕಿನಲ್ಲಿ ಅಳವಡಿಸಿಕೊಂಡರೆ ನಾವು ಉತ್ತಮರಾಗಲು ಸಾಧ್ಯ. ಉತ್ತಮ ವ್ಯಕ್ತಿತ್ವ ಹೊಂದಿದ ಪ್ರಫುಲ್ಲ ಮನಸ್ಸಿನಿಂದ ಸಾಧನೆ ಸಾಧ್ಯ, ಸೋಲನ್ನು ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡಾಸ್ಫೂರ್ತಿ ಮೆರೆದರೆ ಮುಂದೆ ಗೆಲುವು ನಮ್ಮದಾಗಲಿದೆ. ಬಾಪೂಜಿಯವರ ಕನಸಿನ ಗ್ರಾಮಗಳ ಉದ್ಧಾರದ ರಾಷ್ಟ್ರೀಯ ಸೇವಾ ಯೋಜನೆ ಸೇವಾ ಮನೋಭಾವದ ಬದುಕಿಗೆ ಪ್ರೇರಕ, ನಾವು ಕೂಡಾ ಸೇವಾ ಮನೋಭಾವದೊಂದಿಗೆ ಆದರ್ಶ ಬದುಕು ಕಟ್ಟಿಕೊಳ್ಳಬೇಕು' ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಪ್ರೊ.ಲಕ್ಷ್ಮೀಕಾಂತ, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತವೆ. ಸದೃಢ ದೇಹದಲ್ಲಿ ಶಕ್ತಿದಾಯಕ ಮನಸ್ಸಿನ ನಿರ್ಮಾಣ ಶಿಕ್ಷಣದಿಂದ ಸಾಧ್ಯ, ಯುಗಗಳಿಂದ ಮಹತ್ವ ಪಡೆಯುತ್ತ ಜೊತೆಯಲ್ಲಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ ದೇಶದ ಬದಲಾವಣೆಗೆ ಕಾರಕವಾಗಿದ್ದು ಯುವಕರು ಕೈಜೋಡಿಸಿದರೆ ಬದಲಾವಣೆ ಸಾಧ್ಯ. ಜ್ಞಾನ ಎಂಬುದು ನಮ್ಮ ಅಜ್ಞಾನವನ್ನು ತೊಲಗಿಸುವ ಸಾಧನವಾಗಿದ್ದು ಉತ್ತಮ ವಾತಾವರಣದಿಂದ ಉತ್ತಮ ಪ್ರಜೆಗಳ ನಿರ್ಮಾಣ ಮತ್ತು ಕಾಲೇಜು ದಿನಗಳಲ್ಲಿಯೇ ರಾಷ್ಟ್ರ ಕಟ್ಟುವ ಯುವ ಸಮುದಾಯವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಜಿ.ಎಂ.ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿ, `ವೇದಾ' ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕ ವೈ.ಎಸ್.ವಿ.ದತ್ತ ದೂರವಾಣಿ ಮುಖಾಂತರ ಸಂದೇಶ ನೀಡಿ ಕಡೂರು ಕಾಲೇಜು ವಿವಿ ಮಟ್ಟದಲ್ಲಿ ಮಾದರಿಯಾಗಿದ್ದು ಉದ್ಘಾಟನೆಗೊಂಡ ವೇದಿಕೆಗಳು ನಿಮ್ಮ ಸಮಗ್ರ ವ್ಯಕ್ತಿತ್ವವನ್ನು ಸಮಷ್ಟಿಯಲ್ಲಿ ರೂಪಿಸಲಿ ಎಂದು ಹಾರೈಸಿದರು.

ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಪ್ರವೀಣ್‌ಕುಮಾರ್ ಕ್ರೀಡಾ ಕಾರ್ಯಯೋಜನೆ ಮತ್ತು ಡಾ.ಪ್ರಕಾಶ್ ರಾಷ್ಟ್ರೀಯ ಸೇವಾಯೋಜನೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರೊ. ಶ್ರೀಧರ ಬಾಬು, ಅನಿತಾ ದಳವಾಯಿ, ಪ್ರೊ.ಎಸ್.ಸೋಮಶೇಖರ್, ನೂರ್ ಆಯೆಷಾ ಸುಲ್ತಾನಾ, ಗಣೇಶ್ ಸೇರಿದಂತೆ ಕಾಲೇಜು ಪ್ರಾಧ್ಯಾಪಕ ವರ್ಗ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT